ಮಂಗಳೂರು: ಸನ್ಯಾಸಿಗಳಿಂದ ಮಗು ಅಪಹರಣ...?

By Kannadaprabha NewsFirst Published Oct 13, 2019, 11:06 AM IST
Highlights

ಕಾವಿಧಾರಿ ಸನ್ಯಾಸಿಗಳು ಮಕ್ಕಳನ್ನು ಅಪರಿಸುತ್ತಿದ್ದಾರೆ ಎಂಬ ಸುದ್ದಿಯೊಂದು ಮಂಗಳೂರಿನ ಕಡಬ ಭಾಗದಲ್ಲಿ ಆತಂಕ ಸೃಸ್ಟಿಸಿದೆ. ಮಕ್ಕಳನ್ನು ಅಪಹರಿಸಿ ಕರೆದುಕೊಂಡು ಹೋಗುತ್ತಿದ್ದಾರೆ ಎಂಬ ಸುದ್ದಿ ಕಡಬ ಭಾಗದಲ್ಲಿ ಹರಿದಾಡಿದೆ. ಈ ಬಗ್ಗೆ ತಿಳಿಯಲು ಸುದ್ದಿ ಓದಿ.

ಮಂಗಳೂರು(ಅ.13): ಭವಿಷ್ಯ ನುಡಿಯುವ ಖಾವಿಧಾರಿ ಸನ್ಯಾಸಿಗಳಿಬ್ಬರು ಪಂಜದಿಂದ ಮಗು ಅಪಹರಿಸಿ ಸರ್ಕಾರಿ ಬಸ್ಸಿನಲ್ಲಿ ಕೊಂಡೊಯ್ಯುತ್ತಿದ್ದಾರೆ ಎಂಬ ವದಂತಿಯಿಂದ ಕಡಬದ ಆಲಂಕಾರಿನಲ್ಲಿ ಶುಕ್ರವಾರ ಆತಂಕ ಸೃಷ್ಟಿಯಾಗಿತ್ತು.

ಪಂಜ ಪೇಟೆಯಿಂದ ಮಗು ಅಪಹರಿಸಿ ಸರ್ಕಾರಿ ಬಸ್ಸಿನ ಮೂಲಕ ಕಡಬಕ್ಕೆ ಬಂದು ಉಪ್ಪಿನಂಗಡಿ ಕಡೆಗೆ ಪ್ರಯಾಣ ಬೆಳೆಸಿದ್ದಾರೆ. ತಕ್ಷಣ ಆಲಂಕಾರಿನ ಯುವಕರಿಗೆ ಮಾಹಿತಿ ರವಾನಿಸಿ ಬಸ್‌ ತಡೆಯುವಂತೆ ತಿಳಿಸಲಾಯಿತು. ಆಲಂಕಾರಿನಲ್ಲಿ ಯುವಕರು ಬಸ್‌ ಜಾಲಾಡಿದಾಗ ಖಾವಿಧಾರಿ ಸನ್ಯಾಸಿಗಳಿಬ್ಬರು ಬಸ್ಸಿನಲ್ಲಿರುವುದು ಗಮನಕ್ಕೆ ಬಂದು ಅವರಿಬ್ಬರನ್ನು ಕೆಳಗಿಳಿಸಿದರು.

ಮಂಗಳೂರು: ಕಂಬಳ ವೇಳಾಪಟ್ಟಿ ಪ್ರಕಟ

ಈ ಸಂದರ್ಭ ಕಡಬ ಠಾಣೆಯ ಹೋಂಗಾರ್ಡ್‌ ಸಿಬ್ಬಂದಿ ಚೇತನ್‌ ವಿಚಾರಿಸಿದಾಗ ಹಾಸನ ಜಿಲ್ಲೆಯ ಅರಸಿಕೆರೆ ತಾಲೂಕು ಬಕಪ್ಪನಕೊಪ್ಪಲು ಸುಡುಗಾಡು ಸತೀಶ ಮತ್ತು ಪ್ರದೀಪ ಎಂದು ಪರಿಚಯಿಸಿಕೊಂಡಿದ್ದಾರೆ. ಬೆಳಗ್ಗೆ ಬೆಳ್ಳಾರೆಯಿಂದ ಕಡಬ ತನಕ ಮನೆ ಮನೆಗೆ ಭವಿಷ್ಯ ಹೇಳಲು ತೆರಳಿ ಇದೀಗ ಕಡಬ ಪೇಟೆಯಿಂದ ಉಪ್ಪಿನಂಗಡಿಗೆ ತೆರಳುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ. ಇದೇ ವೇಳೆ ಬೆಳ್ಳಾರೆ ಠಾಣಾ ವ್ಯಾಪ್ತಿಯಲ್ಲಿ ಮಗು ಅಪಹರಣವಾದ ಬಗ್ಗೆ ಯಾವುದೇ ಮಾಹಿತಿ ಇಲ್ಲದ ಕಾರಣ ಇದೊಂದು ವದಂತಿ ಎಂದು ತಿಳಿದು ಸನ್ಯಾಸಿಗಳಿಗೆ ಪ್ರಯಾಣ ಮುಂದುವರಿಸಲು ತಿಳಿಸಲಾಯಿತು.

ಕಳ್ಳ ಖಾವಿಧಾರಿಗಳು ವಶಕ್ಕೆ

ಬೆಳ್ಳಾರೆ ಸಮೀಪ ಮನೆಯಿಂದ ಬೆಲೆ ಬಾಳುವ ಮೊಬೈಲ್‌, ಬಂಗಾರ ಹಾಗೂ ಹಣ ಕಳವುಗೈದು ಪರಾರಿಯಾದ ಘಟನೆಗೆ ಸಂಬಂಧಿಸಿ ಈಗಾಗಲೇ ಓರ್ವನನ್ನು ಬಂಧಿಸಲಾಗಿದೆ. ಇತರೆ ಕಳ್ಳರಿಗೆ ಪೊಲೀಸರು ಬಲೆ ಬೀಸಿದ್ದಾರೆ ಎಂದು ಆಲಂಕಾರಿನ ಜನತೆಗೆ ತಿಳಿದುಬಂತು. ಬೆಳ್ಳಾರೆ ಠಾಣಾ ಸಿಬ್ಬಂದಿ ಆಲಂಕಾರಿಗೆ ಆಗಮಿಸಿದಾಗ ಉಪ್ಪಿನಂಗಡಿಯತ್ತ ಖಾವಿಧಾರಿಗಳು ಪ್ರಯಾಣ ಬೆಳೆಸಿದ್ದರು.

ಗಡಿ ಶಾಲೆಗಳಿಗೆ ಕನ್ನಡ ಶಿಕ್ಷಕರನ್ನೇ ನೇಮಿಸಿ: ಕೇರಳ ಸರ್ಕಾರಕ್ಕೆ ಪತ್ರ

ಸಾರ್ವಜನಿಕರಲಿದ್ದ ಖಾವಿಧಾರಿಗಳ ಭಾವಚಿತ್ರ ಪರಿಶೀಲಿಸಿದ ಪೊಲೀಸರು ಬೆಳ್ಳಾರೆಯಲ್ಲಿ ಕಳವು ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಲ್ಲಿ ಇವರಿಬ್ಬರಲ್ಲಿ ಒಬ್ಬ ಎಂದು ಸ್ಪಷ್ಟಪಡಿಸಿದರು. ತಕ್ಷಣ ಉಪ್ಪಿನಂಗಡಿ ಪೊಲೀಸರಿಗೆ ಮಾಹಿತಿ ನೀಡಿ ಆರೋಪಿಗಳನ್ನು ಉಪ್ಪಿನಂಗಡಿ ಬಸ್‌ ತಂಗುದಾಣದಲ್ಲಿ ವಶಕ್ಕೆ ಪಡೆಯಲಾಗಿದೆ.

ದೀಪಾವಳಿಗೂ ಬೆಂಗಳೂರು-ಕಾರವಾರ ಮಧ್ಯೆ ಸುವಿಧ ವಿಶೇಷ ರೈಲು

click me!