
ನಿನ್ನೆ ಧನುರ್ಮಾಸದ ಕೊನೆಯ ಪೂಜೆಗೆಂದು ಹೋಗಿದ್ದ ಬಾಲಕ ನಂತರ ನಿಗೂಢವಾಗಿ ನಾಪತ್ತೆಯಾದ ಘಟನೆ ಬೆಳ್ತಂಗಡಿ ತಾಲ್ಲೂಕಿನ ಕುವೆಟ್ಟು ಗ್ರಾಮದ ಸಂಬೋಳ್ಯ ಸಮೀಪದ ಬರಮೇಲು ಪ್ರದೇಶದಲ್ಲಿ ನಡೆದಿತ್ತು. ನಂತರ ಬಾಲಕನ ಶವ ತೋಟದ ಕೆರೆಯಲ್ಲಿ ಪತ್ತೆಯಾಗಿದ್ದು, ಈ ಬಾಲಕನ ಸಾವಿನ ಬಗ್ಗೆ ಈಗ ತೀವ್ರ ಅನುಮಾನಗಳು ಮೂಡಿವೆ. ಜೊತೆಗೆ ಬಾಲಕನ ಶವ ಪತ್ತೆಯಾದ ಕೆರೆಯಲ್ಲಿ ಕತ್ತಿ ಹಾಗೂ ಟಾರ್ಚ್ ಪತ್ತೆಯಾಗಿದೆ. ತಲೆಯಲ್ಲಿ ಬಲವಾಗಿ ಹೊಡೆದ ಗಾಯದ ಗುರುತುಗಳಿದ್ದು, ಇದು ಆಕಸ್ಮಿಕವಾಗಿ ಸಂಭವಿಸಿದ ಸಾವು ಅಲ್ಲ, ಇದೊಂದು ಕೊಲೆ ಎಂಬ ನಿರ್ಧಾರಕ್ಕೆ ಪೊಲೀಸರು ಬಂದಿದ್ದಾರೆ.
ಗೇರುಕಟ್ಟೆಯ ಬರಮೇಲು ನಿವಾಸಿ ಸುಬ್ರಹ್ಮಣ್ಯ ನಾಯಕ್ ಅವರ ಪುತ್ರ 16 ವರ್ಷದ ಸುಮಂತ್ ಮೃತಪಟ್ಟ ಬಾಲಕ, ಸುಮಂತ್ ಗೇರುಕಟ್ಟೆಯ ಸರ್ಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ನಿನ್ನೆ ಧನುರ್ಮಾಸದ ಪೂಜೆಗಾಗಿ ಮುಂಜಾನೆ ಸುಮಾರು 5 ಗಂಟೆಗೆ ಮನೆ ಸಮೀಪದ ಕಳಿಯ ಗ್ರಾಮದ ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಹೋಗಿದ್ದ ಅತ್ತ ದೇವಸ್ಥಾನವನ್ನೂ ತಲುಪಿರಲಿಲ್ಲ, ಇತ್ತ ಮರಳಿ ಮನೆಗೂ ಬಂದಿರಲಿಲ್ಲ. ಆತನ ಜೊತೆ ನಿತ್ಯವೂ ಧನುಪೂಜೆಯಲ್ಲಿ ಭಾಗವಹಿಸುತ್ತಿದ್ದ ಆತನ ಗೆಳೆಯರು ಆತ ದೇವಸ್ಥಾನಕ್ಕೆ ಬಾರದೇ ಇರುವ ಹಿನ್ನೆಲೆಯಲ್ಲಿ ಮನೆಗೆ ಕರೆ ಮಾಡಿ ಕೇಳಿದಾಗ ಘಟನೆ ಬೆಳಕಿಗೆ ಬಂದಿತ್ತು. ಹೀಗಾಗಿ ಪೋಷಕರು ಬಾಲಕನಿಗಾಗಿ ಹುಡುಕಾಟ ನಡೆಸಿದಾಗ ಬುಧವಾರ ಬೆಳಗ್ಗೆ 11.30ರ ಸುಮಾರಿಗೆ ಸುಮಂತ್ ಶವ ಕೆರೆಯಲ್ಲಿ ಪತ್ತೆಯಾಗಿತ್ತು.
ಆರಂಭದಲ್ಲಿ ಬಾಲಕ ಚಿರತೆ ದಾಳಿಗೆ ಬಲಿಯಾಗಿರಬಹುದು ಎಂಬ ಅನುಮಾನ ಶುರುವಾಗಿತ್ತು. ಆದರೆ ಬೆಳ್ತಂಗಡಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ಶ್ವಾನದಳ ಕೆರೆಯಲ್ಲಿ ಹುಡುಕಾಟ ನಡೆಸಿದಾಗ ಬಾಲಕನ ಶವ ಕೆರೆಯಲ್ಲಿ ಪತ್ತೆಯಾಗಿತ್ತು. ಬಾಲಕನ ಶವ ಪತ್ತೆಯಾದ ಕೆರೆ ಸುಮಂತ್‌ನ ಮನೆಯಿಂದ ಸುಮಾರು 500 ಮೀಟರ್ ದೂರದಲ್ಲಿದೆ.
ಇದನ್ನೂ ಓದಿ: ಉದ್ಯೋಗ ಅರಸಿ ವಿದೇಶಕ್ಕೆ ತೆರಳಲು ಮುಂದಾಗಿದ್ದ ತಾಯಿ: ಶಾಲಾ ಕಟ್ಟಡದಿಂದ ಹಾರಿ ಸಾವಿಗೆ ಶರಣಾದ ವಿದ್ಯಾರ್ಥಿನಿ
ನಂತರ ಮರಣೋತ್ತರ ಪರೀಕ್ಷೆಗಾಗಿ ಬಾಲಕನ ಶವವನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿತ್ತು.
ಮರಣೋತ್ತರ ಪರೀಕ್ಷಾ ವರದಿ ಈಗ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ನೀಡಿದೆ. ವರದಿಯ ಪ್ರಕಾರ ಸುಮಂತ್‌ನ ತಲೆಯ ಹಿಂಭಾಗ ಕತ್ತಿ ಅಥವಾ ಬಲವಾದ ಆಯುಧದಿಂದ ಹೊಡೆದಂತಹ ಗುರುತು ಇರುವುದು ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆ ವರದಿಯ ನಂತರ ಪೊಲೀಸರು ತಾವು ದಾಖಲಿಸಿದ ಅಸಹಜ ಸಾವು ಪ್ರಕರಣವನ್ನು ಕೊಲೆ ಪ್ರಕರಣವೆಂದು ಬದಲಾಯಿಸಿದ್ದಾರೆ. ಮರಣೋತ್ತರ ಪರೀಕ್ಷಾ ವರದಿಯಲ್ಲಿ ಇರುವಂತೆ ಬಾಲಕ ಉಸಿರುಕಟ್ಟಿ ಸಾವನ್ನಪ್ಪಿದ್ದಾನೆ. ಆತ ಕೆರೆಗೆ ಬಿದ್ದಾಗ ಬದುಕಿದ್ದ ಎಂಬ ಮಾಹಿತಿ ಇದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಸುಮಂತ್ ದೇಹ ಪತ್ತೆಯಾದಾಗ ಕಾಲಿನಲ್ಲಿ ಚಪ್ಪಲಿಗಳಿದ್ದವು. ಹೀಗಾಗಿ ಪ್ರಜ್ಞೆ ತಪ್ಪಿದ ಸುಮಂತ್‌ನನ್ನು ಕೆರೆಯ ಬಳಿ ಎತ್ತಿಕೊಂಡು ಹೋಗಿ ಎಸೆಯಲಾಗಿದೆ ಎಂಬ ಅನುಮಾನ ಜನರಲ್ಲಿ ಮೂಡಿತ್ತು.
ಇದನ್ನೂ ಓದಿ: ಜೈಲೂಟ ತಿಂದರೂ ಬಿಡದ ಹಳೇ ಚಾಳಿ: 2 ತಿಂಗಳ ಹಿಂದಷ್ಟೇ ಬಿಡುಗಡೆ ಮತ್ತೆ ಡ್ರಗ್ ದಂಧೆಗಿಳಿದ ಶಿಲ್ಪಾ ಬಂಧನ
ಆದರೆ ಈಗ ಕೊಲೆ ಪ್ರಕರಣ ದಾಖಲಿಸಿ ತನಿಖೆಗಿಳಿದ ಪೊಲೀಸರು ಸುಮಂತ್ ಪತ್ತೆಯಾದ ಕೆರೆಯ ನೀರನ್ನು ಖಾಲಿ ಮಾಡಿಸಿದ್ದು, ಈ ವೇಳೆ ಕೆರೆಯಲ್ಲಿ ಒಂದು ಟಾರ್ಚ್ ಹಾಗೂ ಒಂದು ಕತ್ತಿ ಸಿಕ್ಕಿದ್ದು, ಇದು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ನೀಡಿದೆ. ಹೀಗಾಗಿ ಬೆಳ್ತಂಗಡಿ ಡಿಎಸ್ಪಿ ತನಿಖೆಗಿಳಿದ್ದು, ಕೊಲೆಗಾರರ ಪತ್ತೆಗೆ 4 ಪ್ರತ್ಯೇಕ ತಂಡಗಳನ್ನು ರಚಿಸಿದ್ದಾರೆ. ಸುತ್ತಮುತ್ತಲಿನ ಜನರ ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ. ಆ ಟಾರ್ಚ್ ಹಾಗೂ ಕತ್ತಿ ಯಾರಿಗೆ ಸೇರಿದಎ ಎಂಬುದರ ಮೇಲೆ ಪ್ರಕರಣಕ್ಕೆ ತಿರುವು ಸಿಗಲಿದೆ.