ಮಂಗಳೂರು: ಖಾಸಗಿ ಭದ್ರತಾ ಏಜೆನ್ಸಿಯಲ್ಲಿ ಬಾಂಗ್ಲಾ ವಲಸಿಗರು..!

By Kannadaprabha NewsFirst Published Nov 8, 2019, 9:50 AM IST
Highlights

ಬಾಂಗ್ಲಾ ವಲಸಿಗರ ಸಮಸ್ಯೆ ಹೆಚ್ಚಾಗುತ್ತಿದ್ದು, ಮಂಗಳೂರಿನ ಖಾಸಗಿ ಭದ್ರತಾ ಏಜೆನ್ಸಿಯಲ್ಲಿ ಬಾಂಗ್ಲಾ ವಲಸಿಗರು ಸೇರಿಕೊಂಡಿರುವುದು ಬೆಳಕಿಗೆ ಬಂದಿದೆ. ದಾಖಲೆಗಳಿಲ್ಲದೆಯೇ ಮೊಬೈಲ್‌ಗಳನ್ನೂ ಬಳಸುತ್ತಿದ್ದು, ಮಧ್ಯವರ್ತಿ ಮೂಲಕ ಹಣವನ್ನೂ ತಮ್ಮ ದೇಶಕ್ಕೆ ಕಳುಹಿಸುತ್ತಿದ್ದಾರೆ. ಬಂಗಾಳಿ ಭಾಷೆಯಂತೆಯೇ ಮಾತನಾಡುವುದರಿಂದ ಬಾಂಗ್ಲಾ ವಲಸಿಗರನ್ನು ಪತ್ತೆ ಹಚ್ಚುವುದೇ ಪೊಲೀಸರಿಗೆ ತಲೆ ನೋವಾಗಿದೆ.

ಮಂಗಳೂರು(ನ.08): ಒಂದೆಡೆ ದೇಶದ ಆಂತರಿಕ ಭದ್ರತೆ ವಿಚಾರದಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಬೇಟೆಗೆ ಕೇಂದ್ರ ಸರ್ಕಾರ ಮುಂದಾಗಿದ್ದರೆ, ಮತ್ತೊಂದೆಡೆ ಮಂಗಳೂರಲ್ಲಿ ಖಾಸಗಿ ಭದ್ರತಾ ಏಜೆನ್ಸಿಯೊಳಗೆ ಬಾಂಗ್ಲಾ ವಲಸಿಗರು ನುಸುಳಿಕೊಂಡಿದ್ದಾರೆ.

ಖಾಸಗಿ ಭದ್ರತಾ ಏಜೆನ್ಸಿಗಳಿಗೆ ಪಂಗನಾಮ ಹಾಕಿ ಭದ್ರತಾ ಸಿಬ್ಬಂದಿಯಾಗಿ ಬಾಂಗ್ಲಾದೇಶಿಗರು ಕಾರ್ಯ ನಿರ್ವಹಿಸುತ್ತಿರುವ ಆಘಾತಕಾರಿ ಮಾಹಿತಿಯೊಂದು ಲಭ್ಯವಾಗಿದೆ. ಮಂಗಳೂರು ನಗರದಲ್ಲಿ ಬಾಂಗ್ಲಾ ವಲಸಿಗರು ಭದ್ರತಾ ಏಜೆನ್ಸಿ ಅಡಿಯ ನೇಮಕಗೊಂಡು ಸೆಕ್ಯುರಿಟಿ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿರುವ ಕಳವಳಕಾರಿ ಸಂಗತಿ ಬೆಳಕಿಗೆ ಬಂದಿದೆ.

ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಬಾಂಗ್ಲಾ ಅಕ್ರಮ ವಲಸಿಗ ಮಹಿಳೆ ಅರೆಸ್ಟ್

ಇದುವರೆಗೆ ಬಾಂಗ್ಲಾ ವಲಸಿಗರು ಕೇವಲ ಕಾರ್ಮಿಕರಾಗಿ ಮಾತ್ರ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿತ್ತು. ಇದೀಗ ಅದಕ್ಕೂ ಮಿಗಿಲಾಗಿ ಸೆಕ್ಯುರಿಟಿ ಕೆಲಸಕ್ಕೆ ಸೇರ್ಪಡೆಯಾಗುವ ಮೂಲಕ ಮತ್ತಷ್ಟು ಆತಂಕಕ್ಕೆ ಕಾರಣರಾಗಿದ್ದಾರೆ. ಸೆಕ್ಯುರಿಟಿಗೆ ನೇಮಕವಾಗಬೇಕಾದರೆ ಖಾಸಗಿ ಭದ್ರತಾ ಏಜೆನ್ಸಿಗಳು ಸಾಕಷ್ಟು ನಿಯಮಗಳನ್ನು ಪಾಲಿಸಬೇಕು. ಮುಖ್ಯವಾಗಿ ಖಾಸಗಿ ಸೆಕ್ಯುರಿಟಿ ಏಜೆನ್ಸಿಗಳಲ್ಲಿ ಸ್ಥಳೀಯರಿಗಿಂತ ಹೊರಗಿನವರೇ ಅಧಿಕ ಸಂಖ್ಯೆಯಲ್ಲಿ ಇದ್ದಾರೆ. ಅಂದರೆ ಹಿಂದಿ ಭಾಷಿಕರನ್ನು ಸೆಕ್ಯುರಿಟಿ ಸಂಸ್ಥೆಗಳು ನೇಮಕ ಮಾಡಿಕೊಂಡಿವೆ.

ದಾಖಲೆ ಇಲ್ಲದೆ ಮೊಬೈಲ್:

ಇಲ್ಲಿರುವ ಬಾಂಗ್ಲಾ ವಲಸಿಗರು ಮೊಬೈಲ್ ಫೋನ್ ಸಂಪರ್ಕ ಹೊಂದುವಲ್ಲಿ ಸಫಲರಾಗಿದ್ದಾರೆ. ಲಭ್ಯ ಮಾಹಿತಿ ಪ್ರಕಾರ ಸುಮಾರು ಮೂರು ಮಂದಿ ಬಾಂಗ್ಲಾ ವಲಸಿಗರು ಸೆಕ್ಯುರಿಟಿ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಅಚ್ಚರಿಯ ಸಂಗತಿ ಎಂದರೆ, ಇವರು ಮೊಬೈಲ್ ಫೋನ್ ಸಂಪರ್ಕ ಹೊಂದಿದ್ದಾರೆ. ಇವರಲ್ಲಿ ಬ್ಯಾಂಕ್ ಖಾತೆ ಸೇರಿದಂತೆ ಯಾವುದೇ ಅಧಿಕೃತ ದಾಖಲೆಪತ್ರ ಇಲ್ಲ, ಹಾಗಿದ್ದರೂ ಇವರು ಮೊಬೈಲ್ ಹೊಂದಿರುವುದು ಹೇಗೆ ಎನ್ನುವ ಪ್ರಶ್ನೆ ಉದ್ಭವವಾಗಿದೆ.

ಬಾಂಗ್ಲಾಗೆ ಹಣ ವರ್ಗ ಹೇಗೆ..?

ಇಲ್ಲಿರುವ ಬಾಂಗ್ಲಾ ವಲಸಿಗರು ದುಡಿದ ಮೊತ್ತವನ್ನು ಬಾಂಗ್ಲಾ ದೇಶದಲ್ಲಿರುವ ತಮ್ಮ ಕುಟುಂಬಕ್ಕೆ ನಿರಾತಂಕವಾಗಿ ವರ್ಗಾವಣೆ ಮಾಡಲು ಸುಲಭದ ದಾರಿಕೊಂಡಿರುವ ಅಂಶ ಬೆಳಕಿಗೆ ಬಂದಿದೆ. ಸೂಕ್ತ ದಾಖಲೆ ಪತ್ರ ಹೊಂದಿಲ್ಲದಿದ್ದರೆ ಬ್ಯಾಂಕ್ ಖಾತೆ ತೆರೆಯಲು ಆಗುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಇಲ್ಲಿ ದುಡಿಯುತ್ತಿರುವ ಬಾಂಗ್ಲಾ ಕಾರ್ಮಿಕರು ದುಡಿದ ಮೊತ್ತವನ್ನು ಬ್ಯಾಂಕ್‌ಗಳಲ್ಲಿ ಇರಿಸಲು ಪ್ರಯತ್ನಿಸಿಲ್ಲ. ಇದಕ್ಕಾಗಿಯೇ ಬಾಂಗ್ಲಾ ಕಾರ್ಮಿಕರು ಹವಾಲ ಜಾಲವನ್ನು ನೆಚ್ಚಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

3 ರಾಜ್ಯಕ್ಕೆ ಬೆಳಗಾವಿಯೇ ಬಾಂಗ್ಲನ್ನರ ನೆಲೆ

ದುಡಿದ ಮೊತ್ತವನ್ನು ವಿಶ್ವಸನೀಯ ವ್ಯಕ್ತಿಗಳ ಮೂಲಕ ಹವಾಲ ಜಾಲಕ್ಕೆ ನೀಡುತ್ತಾರೆ. ಅಂತಹ ಜಾಲದಲ್ಲಿ ತೊಡಗಿಸಿರುವ ಮಂದಿ ಈ ಮೊತ್ತವನ್ನು ಬಾಂಗ್ಲಾದಲ್ಲಿರುವ ಅವರ ಕುಟುಂಬಕ್ಕೆ ವರ್ಗಾಯಿಸುತ್ತಾರೆ. ಇದು ದಾಖಲೆ ಪತ್ರಗಳಿಲ್ಲದೆ ನಡೆಯುವ ವ್ಯವಹಾರವಾದ್ದರಿಂದ ಸುಲಭದಲ್ಲಿ ಸಿಕ್ಕಿಬೀಳುವುದಿಲ್ಲ ಎಂದು ಭಾವಿಸಿ ಈ ದಂಧೆಯನ್ನು ನಡೆಸುತ್ತಿದ್ದಾರೆ. ಹೀಗೆ ಹವಾಲ ಮೂಲಕ ಮಂಗಳೂರಿನಿಂದ ಮಾತ್ರವಲ್ಲ ಬೇರೆ ಕಡೆಗಳಿಂದಲೂ ಇದೇ ರೀತಿ ಬಾಂಗ್ಲಾದಲ್ಲಿರುವ ತಮ್ಮ ಕುಟುಂಬಕ್ಕೆ ಹಣ ರವಾನೆ ಮಾಡುತ್ತಾರೆ ಎಂಬ ಗಂಭೀರ ಸಂಗತಿಯೂ ತಿಳಿದುಬಂದಿದೆ.

ಭಾಷೆಯಿಂದ ಪೊಲೀಸರಿಗೆ ಪತ್ತೆ ಕಷ್ಟ!

ಬಾಂಗ್ಲಾ ವಲಸಿಗರು ಇಲ್ಲಿನ ಸ್ಥಳೀಯರ ಜೊತೆಗೆ ಬೆರೆತುಕೊಂಡು ಕೆಲಸ ಮಾಡುತ್ತಾರೆ. ತಮ್ಮ ಗುರುತಿನ ಬಗ್ಗೆ ಪ್ರಶ್ನಿಸಿದರೆ, ಬಂಗಾಳಿ ಎಂದು ಹೇಳುತ್ತಾರೆ. ವಾಸ್ತವದಲ್ಲಿ ಬಂಗಾಳಿ ಭಾಷೆಗೂ ಬಾಂಗ್ಲಾ ದೇಶದ ಭಾಷೆಗೂ ಹೆಚ್ಚಿನ ವ್ಯತ್ಯಾಸ ಇಲ್ಲ. ಬಾಂಗ್ಲನ್ನರನ್ನು ಭಾಷೆಯ ವ್ಯತ್ಯಾಸ ಮೂಲಕ ಬಂಗಾಳಿಗಳು ಮಾತ್ರವೇ ಗುರುತಿಸಲು ಸಾಧ್ಯವೇ ವಿನಃ ಬೇರೆ ಯಾರಿಗೂ ಸುಲಭದಲ್ಲಿ ಗುರುತು ಪತ್ತೆ ಸಾಧ್ಯವಿಲ್ಲ ಎಂಬುದನ್ನು ಪೊಲೀಸರೇ ಹೇಳುತ್ತಾರೆ. ಹೀಗಾಗಿ ಪೊಲೀಸರಿಗೆ ಕೂಡ ಬಾಂಗ್ಲಾ ವಲಸಿಗರನ್ನು ಸುಲಭದಲ್ಲಿ ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲ. ಹಲವು ಸಂದರ್ಭಗಳಲ್ಲಿ ಬಾಂಗ್ಲಾ ವಲಸಿಗರಾದರೂ ಅಡ್ಡದಾರಿ ಹಿಡಿದು ಗುರುತಿನ ಚೀಟಿಯನ್ನು ಮಾಡಿಸಿಕೊಂಡಿರುವುದು ಇಷ್ಟೆಲ್ಲ ಗೊಂದಲ, ಸವಾಲುಗಳಿಗೆ ಕಾರಣವಾಗಿದೆ.

ಬಾಂಗ್ಲಾ ವಲಸಿಗರಿಂದ ಬೆಂಗಳೂರಲ್ಲಿ ನಡೀತಿದೆ ವೇಶ್ಯಾವಾಟಿಕೆ ದಂಧೆ!

click me!