ಕನ್ನಡ ಕಟ್ಟಿದವರು: ಯಕ್ಷ ರಂಗದ ಜನಪ್ರಿಯ ತಾರೆ ಪಟ್ಲ ಸತೀಶ್ ಶೆಟ್ಟಿ!

By Kannadaprabha News  |  First Published Nov 9, 2019, 10:47 AM IST

ಒಂದು ಹಂತದಲ್ಲಿ ಯಕ್ಷಗಾನದಿಂದ ವಿಮುಖರಾಗುತ್ತಿದ್ದ ಯುವಜನತೆಯನ್ನು ಮತ್ತೆ ಯಕ್ಷಗಾನದ ಕಡೆಗೆ ಸೆಳೆದ ಕೀರ್ತಿ ಪಟ್ಲ ಸತೀಶ್ ಶೆಟ್ಟಿ ಅವರಿಗೆ ಸಲ್ಲಬೇಕು. ಇವತ್ತು ವಾಟ್ಸಪ್, ಫೇಸ್‌ಬುಕ್‌ನಲ್ಲಿ ಯಕ್ಷಗಾನದ ಪದ್ಯಗಳನ್ನು ಆಸ್ವಾದಿಸುವ ಹುಡುಗ, ಹುಡುಗರಿದ್ದಾರೆ. ಪಟ್ಲ ಸತೀಶ್ ಶೆಟ್ಟಿ ಎಲ್ಲಿ ಹೋದರೂ ಅವರನ್ನು ಮುತ್ತಿಕೊಳ್ಳುವ ಅಭಿಮಾನಿಗಳಿದ್ದಾರೆ. ಸತೀಶ್ ಶೆಟ್ಟರಿಂದ ತರಬೇತಿ ಪಡೆದ ಮಹಿಳಾ ಭಾಗವತರೂ ಯಕ್ಷಗಾನದ ಪದ್ಯಗಳನ್ನು ಜನಪ್ರಿಯಗೊಳಿಸುತ್ತಿದ್ದಾರೆ. ಯಕ್ಷಗಾನಕ್ಕೆ ಮತ್ತೆ ಸ್ಟಾರ್‌ಗಿರಿ ತಂದುಕೊಟ್ಟು ತನ್ನ ಪದ್ಯಗಳ ಕನ್ನಡ ಭಾಷೆಯನ್ನು ಹೊಸ ಜನಾಂಗಕ್ಕೆ ತಲುಪಿಸಿದ ಕನ್ನಡದ ಕೀರ್ತಿ ಈ ಸತೀಶ್ ಶೆಟಿ.


ಆತ್ಮಭೂಷಣ್ ಮಂಗಳೂರು 

ಯಕ್ಷಗಾನದಿಂದ ವಿಮುಖರಾಗುತ್ತಿದ್ದ ಯುವಜನತೆಯನ್ನು ತಂಡೋಪತಂಡವಾಗಿ ಸೆಳೆದ ಧೀಮಂತ ವ್ಯಕ್ತಿತ್ವ ಇದು. ಕನ್ನಡದ ವ್ಯಾಕರಣ ಶುದ್ಧತೆಗೆ ಹೆಸರಾಗಿರುವ ಯಕ್ಷಗಾನವನ್ನು ಮತ್ತಷ್ಟು ಪ್ರೇಕ್ಷಕರ ಸಮೀಪಕ್ಕೆ ತಂದವರು. ಯಕ್ಷಗಾನ ರಂಗದ ತೆಂಕುತಿಟ್ಟು ಮಾತ್ರವಲ್ಲ ಬಡಗುತಿಟ್ಟು ಪ್ರದೇಶಗಳಲ್ಲೂ ಜನಪ್ರಿಯತೆ ಗಳಿಸಿಕೊಂಡ ಅಪರೂಪದ ಯುವ ಭಾಗವತ ಇವರು. ದೇಶ, ವಿದೇಶಗಳಲ್ಲೂ ಇಂದು ಯಕ್ಷಗಾನದ ಕಂಪು ಪಸರಿಸುತ್ತಿರುವ ಈ 39ರ ಯುವಕನ ಕಂಠ ಸಿರಿಗೆ ತಲೆದೂಗದವರಿಲ್ಲ.

Tap to resize

Latest Videos

undefined

ಪ್ರಸಿದ್ಧ ಕಟೀಲು ಶ್ರೀದುರ್ಗಾಪರಮೇಶ್ವರಿ ಯಕ್ಷಗಾನ ಬಯಲಾಟ ಮೇಳದಲ್ಲಿ 20 ವರ್ಷಗಳಿಂದ ಭಾಗವತರಾಗಿ ವೃತ್ತಿ ತಿರುಗಾಟ ನಡೆಸುತ್ತಿರುವ ಇವರು, ತನ್ನದೇ ಶೈಲಿಯ ಭಾಗವತಿಕೆಯಿಂದ ಮಿಂಚುತ್ತಿದ್ದಾರೆ. ಭಾಗವತಿಕೆಗೆ ಹೋದಲ್ಲೆಲ್ಲ ಮುತ್ತಿ ಕೊಳ್ಳುವ ಅಭಿಮಾನಿ ಬಳಗವನ್ನು ಹೊಂದಿರುವ ಇವರು ಕಲಾವಿದರ ಏಳಿಗೆಗಾಗಿ ಪ್ರತ್ಯೇಕ ಟ್ರಸ್ಟ್‌ನ್ನು ರಚಿಸಿ ಸಮಾಜ ಸೇವೆ ನಡೆಸುತ್ತಿದ್ದಾರೆ. ಇವರೇ ‘ಪಟ್ಲ ಶೈಲಿ’ ಖ್ಯಾತಿಯ ಪಟ್ಲ ಸತೀಶ್ ಶೆಟ್ಟಿ. ಈಗ ಬಹುಬೇಡಿಕೆಯ ಭಾಗವತ. ಬಡಗಿನಲ್ಲಿ ದಿ.ಕಾಳಿಂಗ ನಾವಡರಂತೆ ತೆಂಕಿನಲ್ಲಿ ತಾರುಣ್ಯದಲ್ಲೇ ಬೇಗನೆ ಪ್ರಸಿದ್ಧಿಗೆ ಬಂದ ಭಾಗವತ ಇವರು. ಅನೇಕ ಬಿರುದು, ಟೀಕೆ, ಟಿಪ್ಪಣಿಗಳು ಬಂದರೂ ಎಲ್ಲವನ್ನೂ ಸಮಾನಾಗಿ ಸ್ವೀಕರಿಸುವ ವಿನೀತ ಭಾವ ಪಟ್ಲ ಸತೀಶ್ ಶೆಟ್ಟಿ ಅವರದು. ತನ್ನ ಅಪೂರ್ವ ಭಾಗವತಿಕೆ ಮೂಲಕ ಪ್ರೇಕ್ಷಕರಿಗೆ ಸಂಮ್ಮೋಹಿನಿ ಅಸ್ತ್ರವನ್ನು ಪ್ರಯೋಗಿಸುವ ತಂತ್ರಗಾರಿಕೆ ಪಟ್ಲ ಸತೀಶ್ ಶೆಟ್ಟಿಯವರಿಗೆ ಕರಗತ!

ಕಲಾವಿದರಿಗೆ ಪ್ರೇಕ್ಷಕರ ಅಪೂರ್ವ ಸ್ಪಂದನ ನೋಡುವಾಗ ಸಂತೋಷವಾಗುತ್ತದೆ. ಯಕ್ಷಗಾನವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಒಂದಾಗಿ ಸಾಗೋಣ. ಯಕ್ಷಗಾನವನ್ನು ವಿಶ್ವಮಟ್ಟಕ್ಕೆ ಇನ್ನಷ್ಟು ವಿಸ್ತರಿಸೋಣ. ಪಟ್ಲ ಟ್ರಸ್ಟ್ ಮೂಲಕ 100 ಮಂದಿ ಬಡ ಕಲಾವಿದರಿಗೆ ಉಚಿತವಾಗಿ ಮನೆ ನಿರ್ಮಿಸಿಕೊಡುವ ಯೋಜನೆ ಹಾಕಿಕೊಳ್ಳಲಾಗಿದೆ.- ಪಟ್ಲ ಸತೀಶ್ ಶೆಟ್ಟಿ,
ಯುವ ಭಾಗವತ

ಪಟ್ಲ ಸತೀಶ್ ಶೆಟ್ಟಿ ಬಗ್ಗೆ...

ಸತೀಶ್ ಶೆಟ್ಟಿ ಅವರ ತವರು ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ವಗೆನಾಡು. ಪಟ್ಲಗುತ್ತು ಮಹಾಬಲ ಶೆಟ್ಟಿ ಅವರ ಪುತ್ರನಾಗಿ 1980 ಆ.1ರಂದು ಸತೀಶ್ ಶೆಟ್ಟಿ ಅವರು ಕನ್ಯಾನದಲ್ಲಿ ಜನಿಸಿದರು. ಕನ್ಯಾನದಲ್ಲಿ ೫ನೇ ತರಗತಿಯಲ್ಲಿದ್ದಾಗ ಶಾಲೆಯಲ್ಲಿ ಸುಶ್ರಾವ್ಯವಾಗಿ ದೇಶಭಕ್ತಿ ಗೀತೆಗಳನ್ನು ಹಾಡುತ್ತಿದ್ದರು. ಪಿಯುಸಿ ಬಳಿಕ ಉದ್ಯೋಗಕ್ಕೆ ಮುಂಬಯಿಗೆ ತೆರಳಿದರು. ನಂತರ ವಾಪಸ್ ಬಂದ ಸತೀಶ್ ಶೆಟ್ಟಿ ಅವರಿಗೆ ಮೆಕ್ಯಾನಿಕ್ ಕೆಲಸವೂ ಗೊತ್ತು. ಪಟ್ಲ ಮತ್ತು ನಿರ್ಮಿತಾ ದಂಪತಿಯ ಪುತ್ರ ಹೃದಾನ್‌ಗೆ ಈಗ 7 ವರ್ಷ. ಈತನೂ ಯಕ್ಷಗಾನದಲ್ಲಿ ಗೆಜ್ಜೆ ಹಾಕುತ್ತಾನೆ. ಎರಡು ವರ್ಷದ ಪುತ್ರಿ ಋತ್ವಿಕ್ ಜೊತೆ ಈ ಸಂಸಾರ ಮಂಗಳೂರಿನಲ್ಲಿ ವಾಸವಿದೆ. ಕಲಾವಿದರಿಗೆ ಕಾಮಧೇನುವಾದ ಪಟ್ಲ ಟ್ರಸ್ಟ್ ಪಟ್ಲ ಫೌಂಡೇಷನ್ ಟ್ರಸ್ಟ್(ರಿ) ಸ್ಥಾಪಿಸಿ ಬಡ ಕಲಾವಿದರ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಾರೆ.

ದೇಶ ವಿದೇಶಗಳಿಗೂ ಈ ಟ್ರಸ್ಟ್ ವಿಸ್ತರಿಸಿದೆ. ಬಡ ಕಲಾವಿದರಿಗೆ ಮನೆ ನಿರ್ಮಾಣ, ವೈದ್ಯಕೀಯ ಸವಲತ್ತು, ಅಶಕ್ತರಿಗೆ ಸಹಾಯ, ಕಲಾವಿದರ ಮಕ್ಕಳಿಗೆ ವಿದ್ಯಾಭ್ಯಾಸ ನೆರವು ಸೇರಿದಂತೆ ಹಲವು  ಜನೋಪಯೋಗಿ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದೆ. ಇದುವರೆಗೆ ಸುಮಾರು 5 ಕೋಟಿ ರು.ಗೂ ಮಿಕ್ಕಿದ ನೆರವನ್ನು ಕಲಾವಿದರಿಗೆ ನೀಡಲಾಗಿದೆ.

ಸಂಗೀತ-ಯಕ್ಷಗಾನದ ಸವ್ಯಸಾಚಿ

ಪಟ್ಲ ಸತೀಶ್ ಶೆಟ್ಟಿ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಸಂಗೀತ ಕೂಡ ಕಲಿತಿದ್ದಾರೆ. ಬಳ್ಳಮಜಲು ಯೋಗೀಶ್ ಶರ್ಮರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿತರೆ, ಭಜಕಳ ಗೋವಿಂದ ಭಟ್ಟರ ಶಿಷ್ಯನಾಗಿ ಹಿಂದೂಸ್ತಾನಿ ಸಂಗೀತಾಭ್ಯಾಸ ಮಾಡಿದ್ದಾರೆ. ಇವೆರಡರ ಸಮ್ಮಿಲನವನ್ನು ಭಾಗವತಿಕೆ ಮೂಲಕ ಹೊರಹೊಮ್ಮಿಸುವ ಮೂಲಕ ಪ್ರೇಕ್ಷಕರಿಗೆ ಹೊಸತನ್ನು ಕೊಡುವ  ಪ್ರಯತ್ನ ಮಾಡಿದ್ದಾರೆ. ಸೀಮಂತೂರು ನಾರಾಯಣ ಶೆಟ್ಟಿ ಅವರಿಂದ ಯಕ್ಷಗಾನ ಸಾಹಿತ್ಯದ ಛಂದಸ್ಸುಗಳನ್ನು ಅಭ್ಯಾಸ ಮಾಡಿದ್ದಾರೆ. ಹೀಗಾಗಿ ಭಾಗವತಿಕೆಯಲ್ಲಿ ಶುದ್ಧವಾದ ಉಚ್ಛಾರ, ತಾಳ, ಲಯಗಳ ಮೂಲಕ ಸುಲಭದಲ್ಲಿ ಪ್ರೇಕ್ಷಕರ ಹೃದಯಕ್ಕೆ ಲಗ್ಗೆ ಹಾಕಲು ಪಟ್ಲರಿಂದ ಸಾಧ್ಯವಾಗಿದೆ.

ಗುರು ಮಾಂಬಾಡಿ-ಬಲಿಪರ ಶಿಷ್ಯ!

ಪಟ್ಲ ಸತೀಶ್ ಶೆಟ್ಟಿ ಅವರು ಭಾಗವತಿಕೆಯನ್ನು ಕಲಿತದ್ದು ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರಿಂದ. ಯುವಕನಾಗಿದ್ದಾಗ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರಲ್ಲಿಗೆ ಆಗಾಗ ಹೋಗುತ್ತಿದ್ದ ಪಟ್ಲರು ರಾಗ-ಜ್ಞಾನದ ಸ್ಪರ್ಶಕ್ಕಾಗಿ ಹಿಮ್ಮೇಳವನ್ನು ಕಲಿತರು. ಮೊದಲೇ ಚೆಂಡೆ, ಮದ್ದಲೆಯನ್ನು ಬಾರಿಸುತ್ತಿದ್ದ ಪಟ್ಲರಿಗೆ ಗುರಿವಿನ ಆಶ್ರಯ ಮುಂದಿನ ಭವಿಷ್ಯಕ್ಕೆ ಭದ್ರ ಬುನಾದಿಯ್ನು ಹಾಕಿತ್ತು. ಕಟೀಲು ಯಕ್ಷಗಾನ ಮೇಳಕ್ಕೆ ಸೇರ್ಪಡೆಯಾದ ನಂತರದ ದಿನಗಳಲ್ಲಿ ಪಟ್ಲರ ಭಾಗವತಿಕೆಯನ್ನು ತಿದ್ದಿ ತೀಡುತ್ತಿದ್ದುದು ಹಿರಿಯರಾದ ಬಲಿಪ ನಾರಾಯಣ ಭಾಗವತರು. ಕಟೀಲಿನ ಎರಡನೇ ಮೇಳದಲ್ಲಿ ಆರಂಭದಲ್ಲಿ ಕುಳಿತುಕೊಳ್ಳುತ್ತಿದ್ದ ಪಟ್ಲರು ಹಗಲಿನಲ್ಲಿ ಯಕ್ಷಗಾನ ಆಸಕ್ತರಿಗೆ ತರಬೇತಿ ನೀಡುತ್ತಿದ್ದರು. ಆಗ ಪಟ್ಲರ ಭಾಗವತಿಕೆಯನ್ನು ಆಲಿಸುತ್ತಿದ್ದ ಹಿರಿಯ ಭಾಗವತ ಬಲಿಪರು, ಪಟ್ಲರ ತಪ್ಪು ಒಪ್ಪುಗಳನ್ನು ಹೇಳುತ್ತಿದ್ದರು. ಇದುವೇ ಪಟ್ಲರಿಗೆ ಭಾಗವತಿಕೆಯಲ್ಲಿ ಉತ್ತಂಗಕ್ಕೆ ಏರಲು ಮೆಟ್ಟಿಲಾಯಿತು.

ಯುವಜನತೆ ಯಕ್ಷಗಾನದತ್ತ ಹೊರಳುವಂತೆ ಮಾಡಿದ್ದು ಪಟ್ಲ ಸತೀಶ್ ಶೆಟ್ಟಿ. ರಂಗದಲ್ಲಿ ಪಾತ್ರಗಳ ಮನೋಧರ್ಮವನ್ನು ಅರಿತುಕೊಂಡು ಭಾಗವತಿಕೆ ನಡೆಸುತ್ತಾರೆ. ಕಾಳಿಂಗ ನಾವಡರನ್ನು ಬಿಟ್ಟರೆ, ಇಷ್ಟು ಸಣ್ಣ ಪ್ರಾಯದಲ್ಲಿ ಪ್ರಸಿದ್ಧಿಗೆ ಬಂದವರು ವಿರಳ. ಇವರೊಬ್ಬ ಪ್ರೇಕ್ಷಕರನ್ನು ಹಿಡಿದಿಡುವ ಅತ್ಯುತ್ತಮ ಭಾಗವತ.- ಎಂ. ಶಾಂತರಾಮ ಕುಡ್ವ, ಯಕ್ಷಗಾನ ವಿಮರ್ಶಕರು, ಮೂಡುಬಿದಿರೆ

ಹುಚ್ಚೆಬ್ಬಿಸಿದ ‘ಪಟ್ಲ ಶೈಲಿ’

ತೆಂಕುತಿಟ್ಟು ಯಕ್ಷಗಾನ ರಂಗದಲ್ಲಿ ಕ್ರಾಂತಿ ಎಬ್ಬಿಸಿದ ‘ಪಟ್ಲ ಶೈಲಿ’ಯನ್ನು ಹುಟ್ಟಿಹಾಕಿದವರು ಪಟ್ಲ ಸತೀಶ್ ಶೆಟ್ಟಿ. ಯಕ್ಷಗಾನ ಪ್ರದರ್ಶನಗಳಲ್ಲಿ ಪಟ್ಲರು ಭಾಗವತಿಕೆಗೆ ಬರುವುದನ್ನೇ ಕಾತರದಿಂದ ಕಾಯುವ ಪ್ರೇಕ್ಷಕರು, ಅವರು ಬಂದು ಕುಳಿತೊಡನೇ ಭಾರಿ ಕರತಾಡನದ ಸ್ವಾಗತ ಲಭಿಸುತ್ತದೆ. ಪಟ್ಲರ ಗಾನ ಶುರುವಾದ ಕೂಡಲೇ ಪ್ರೇಕ್ಷಕರು ಹುಚ್ಚೆದ್ದು ಸಿಳ್ಳೆ ಹೊಡೆಯುವುದು ಸಾಮಾನ್ಯವಾಗಿದೆ. ಅಷ್ಟರ ಮಟ್ಟಿಗೆ ಪಟ್ಲರು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಸಮರ್ಥವಾಗಿದ್ದಾರೆ. ಇದರಿಂದಾಗಿಯೇ ಪಟ್ಲರಿಗೆ ಅಪಾರ ಅಭಿಮಾನಿ ಬಳಗ ಸೃಷ್ಟಿಯಾಗಿದೆ. ಈ ಅಭಿಮಾನಿಗಳು ತಮ್ಮ ಮೊಬೈಲ್‌ಗಳ ರಿಂಗ್ ಟೋನ್‌ಗಳಲ್ಲಿ ಪಟ್ಲರ ಹಾಡುಗಳ್ನು ಮೆಲುಕು ಹಾಕುತ್ತಾರೆ. ಪಟ್ಲರ ಹಾಡುಗಾರಿಕೆಯ ನಾನಾ ಭಂಗಿಯ ಫೋಟೋಗಳು ವಾಟ್ಸ್‌ಆ್ಯಪ್ಗಳಲ್ಲಿ ಹರಿದಾಡುತ್ತಿರುತ್ತವೆ. ಪಟ್ಲರ ಅಭಿಮಾನಿಗಳೇ ಸೇರಿ ಯಕ್ಷಗಾನ ಪ್ರದರ್ಶನ ಆಯೋಜಿಸುತ್ತಾರೆ, ಪ್ರತ್ಯೇಕ ಜಾಲತಾಣಗಳನ್ನು ರಚಿಸಿಕೊಂಡಿದ್ದಾರೆ.

ಪಟ್ಲರು ಫುಲ್ ಬ್ಯುಸಿ

ಪಟ್ಲರನ್ನು ಅಭಿಮಾನಿಗಳು ಆಗಸದೆತ್ತರಕ್ಕೆ ಬೆಳೆಸಿದರೂ ಕಿಂಚಿತ್ತೂ ಅಹಂ ಇಲ್ಲದೆ ಪಟ್ಲರು ಎಲ್ಲರಿಗೂ ಸಿಗುತ್ತಾರೆ ಎನ್ನುವುದೇ ವಿಶೇಷ. ಪಟ್ಲರು ಅಪಾರ ಡಿಮ್ಯಂಡ್ ಹೊಂದಿರುವ ಭಾಗವತ. ಕಟೀಲು ಮೇಳದ ತಿರುಗಾಟ ವೇಳೆಯಲ್ಲೂ ಸಂಘಸಂಸ್ಥೆಗಳ ಆಟ ಕೂಟಕ್ಕೆ ಪಟ್ಲರನ್ನು ಕರೆಯುತ್ತಾರೆ. ಪಟ್ಲರಿಗೆ ಯಾವಾಗ ಬಿಡುವಿರುತ್ತದೋ ಆಗಲೇ ಯಕ್ಷಗಾನ ಪ್ರದರ್ಶನ ನಿಗದಿಪಡಿಸುವ ಹಂತಕ್ಕೆ ಜನಾನುರಾಗ ಹಂತ ತಲುಪಿದೆ. ಮಳೆಗಾಲದಲ್ಲಿ ಪಟ್ಲರಿಗೆ ಪುರುಸೋತ್ತು ಇರುವುದಿಲ್ಲ. ದೂರದ ದುಬೈ, ಮಸ್ಕತ್, ಕುವೈಟ್, ಅಮೆರಿಕ, ಲಂಡನ್ ಹೀಗೆ ಪಟ್ಲ ಯಾನ ಮುಂದುವರಿಯುತ್ತಿದೆ. ಪಟ್ಲರಿಗೆ ಅನೇಕ ಕಡೆ ಸನ್ಮಾನಗಳು ದೊರೆತಿವೆ.
 

click me!