
ಮೂಡಿಗೆರೆ (ಡಿ.16): ಮನೆ ಭೋಗ್ಯದ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬೀಜುವಳ್ಳಿ ಗ್ರಾಮದಲ್ಲಿ ನಡೆದಿದೆ. ಮಾತಿಗೆ ಮಾತು ಬೆಳೆದು ಪರಸ್ಪರ ಹಲ್ಲೆ ನಡೆಸಿದ ಸಂದರ್ಭದಲ್ಲಿ ಯುವಕನೊಬ್ಬ ಮಹಿಳೆಯೊಬ್ಬರ ಜಡೆ ಹಿಡಿದು ಧರಧರನೆ ಎಳೆದು ನೆಲಕ್ಕೆ ಬಿಸಾಕಿ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ರತ್ನ ಎಂಬುವವರಿಗೆ ಸಾಲವಿದ್ದ ಕಾರಣ, ಅವರು ತಮ್ಮ ಮನೆಯನ್ನು ₹8 ಲಕ್ಷ ಕೈ ಸಾಲ ಪಡೆದು ಸಾಬಿರಾ ಎಂಬುವವರಿಗೆ ಲೀಸ್‌ಗೆ (ಭೋಗ್ಯಕ್ಕೆ) ನೀಡಿದ್ದರು. ಈ ಮನೆಯಲ್ಲಿ ಮೊದಲು ಭೋಗ್ಯಕ್ಕಿದ್ದ ಸಾಬಿರಾ, ಮನೆ ಬಿಡುವಂತೆ ರತ್ನ ಅವರು ಕೇಳಿದಾಗ ವಿವಾದ ಶುರುವಾಗಿದೆ. 'ಬ್ಯಾಂಕಿನಲ್ಲಿ ಫ್ರೀ ಕೊಡಲ್ಲ, ಮನೆ ರೀಪೇರಿ ಮಾಡಿಸಿದ್ದೇನೆ, ಟೈಲ್ಸ್ ಹಾಕಿಸಿದ್ದೇನೆ' ಎಂದು ಹೇಳಿ, ಮನೆ ಬಿಡಲು ₹8 ಲಕ್ಷದ ಬದಲಾಗಿ ₹18 ಲಕ್ಷ ನೀಡುವಂತೆ ಸಾಬಿರಾ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ. ಈ ನಡುವೆ, ಸಾಬಿರಾ ಅವರು ಭೋಗ್ಯಕ್ಕೆ ಪಡೆದಿದ್ದ ಮನೆಯನ್ನು ಮತ್ತೊಬ್ಬರಿಗೆ ಬಾಡಿಗೆಗೆ ಸಹ ನೀಡಿದ್ದರು ಎಂಬ ಅಂಶ ಬಯಲಾಗಿದೆ.
ಮನೆ ಬಿಡುವ ವಿಚಾರವಾಗಿ ರತ್ನ ಮತ್ತು ಸಾಬಿರಾ ಕುಟುಂಬಗಳ ಮಾತಿನಚಕಮಕಿ ನಡೆದು, ಅದು ತೀವ್ರ ಗಲಾಟೆಗೆ ತಿರುಗಿದೆ. ಈ ಘಟನೆಯ ರತ್ನ ಮಗ ಮತ್ತು ಸ್ನೇಹಿತರಿಂದ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ. ಜಡೆ ಹಿಡಿದು ಎಳೆದು ಬಿಸಾಕುತ್ತಿರುವ ದೃಶ್ಯವೂ ಮೊಬೈಲ್‌ನಲ್ಲಿ ಸೆರೆಯಾಗಿದೆ. ಈ ಮಾರಾಮಾರಿಯ ಘಟನೆ ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ