ಹಣ ಸುಲಿಗೆ ಮಾಡ್ತಿದ್ದ ನಕಲಿ ಪಿಎಸ್ಐ ಬಂಧನ: ಪೊಲೀಸ್‌ ಕನಸು ಈಡೇರದಾಗ ಸುಲಿಗೆ ಕೃತ್ಯ

Published : Dec 15, 2025, 10:39 AM IST
Fake PSI arrest

ಸಾರಾಂಶ

ಅಕ್ರಮ ಚಟುವಟಿಕೆ ಆರೋಪ ಹೊರಿಸಿ ಖಾಸಗಿ ಕಂಪನಿ ಉದ್ಯೋಗಿ ಮನೆಗೆ ನುಗ್ಗಿ ತಪಾಸಣೆ ನೆಪದಲ್ಲಿ ದರೋಡೆ ಮಾಡಿದ್ದ ನಕಲಿ ಸಬ್ ಇನ್ಸ್‌ಪೆಕ್ಟರ್ ಹಾಗೂ ಆತನ ಮೂವರು ಸಹಚರರನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು (ಡಿ.15): ಅಕ್ರಮ ಚಟುವಟಿಕೆ ಆರೋಪ ಹೊರಿಸಿ ಖಾಸಗಿ ಕಂಪನಿ ಉದ್ಯೋಗಿ ಮನೆಗೆ ನುಗ್ಗಿ ತಪಾಸಣೆ ನೆಪದಲ್ಲಿ ದರೋಡೆ ಮಾಡಿದ್ದ ನಕಲಿ ಸಬ್ ಇನ್ಸ್‌ಪೆಕ್ಟರ್ ಹಾಗೂ ಆತನ ಮೂವರು ಸಹಚರರನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಯಶವಂತಪುರದ ಮತ್ತಿಕೆರೆ ನಿವಾಸಿ ಎಚ್.ಮಲ್ಲಿಕಾರ್ಜುನ್‌ ನಾಯಕ್ ಅಲಿಯಾಸ್ ಪಿಎಸ್‌ಐ ಮಲ್ಲಣ್ಣ, ಆತನ ಸಹಚರರಾದ ವಿ.ಪ್ರಮೋದ್, ಎಚ್‌.ಟಿ.ವಿನಯ್‌ ಹಾಗೂ ಬಾಗಲಗುಂಟೆಯ ಪಿ.ಹೃತ್ವಿಕ್ ಅಲಿಯಾಸ್ ಮೋಟಾ ಬಂಧಿತರಾಗಿದ್ದು, ಆರೋಪಿಗಳಿಂದ ₹45 ಸಾವಿರ ನಗದು, ಕಾರು ಹಾಗೂ ಬೈಕ್ ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ನರಸೀಪುರ ಲೇಔಟ್‌ನ ಕೆ.ಎ.ನವೀನ್ ಎಂಬುವರ ಮನೆಗೆ ನಕಲಿ ಪೊಲೀಸರು ದಾಳಿ ನಡೆಸಿ ಸುಲಿಗೆ ಮಾಡಿದ್ದರು. ಈ ಬಗ್ಗೆ ಸಂತ್ರಸ್ತ ನೀಡಿದ ದೂರಿನ ಮೇರೆಗೆ ತನಿಖೆಗಿಳಿದ ಇನ್ಸ್‌ಪೆಕ್ಟರ್ ಸಿ.ಬಿ.ಶಿವಸ್ವಾಮಿ ನೇತೃತ್ವದ ತಂಡವು, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಹಾಗೂ ಮೊಬೈಲ್ ಕರೆಗಳ ಮಾಹಿತಿ ಆಧರಿಸಿ ನಕಲಿ ಪೊಲೀಸರನ್ನು ಬಂಧಿಸಿ ಜೈಲಿಗೆ ಕಳುಹಿಸಿದೆ.

ಪಿಎಸ್‌ಐ ಕನಸು ಕಂಡಿದ್ದ ಮಲ್ಲಣ್ಣ: ಬಳ್ಳಾರಿ ಜಿಲ್ಲೆ ಸಿರಗುಪ್ಪ ತಾಲೂಕಿನ ಎಚ್.ಮಲ್ಲಿಕಾರ್ಜುನ್‌ ನಾಯಕ್ ಅಲಿಯಾಸ್ ಪಿಎಸ್‌ಐ ಮಲ್ಲಣ್ಣ ಈ ನಕಲಿ ಪೊಲೀಸರ ತಂಡ ಕ್ಯಾಪ್ಟನ್ ಆಗಿದ್ದು, ತನ್ನ ಸಬ್ ಇನ್ಸ್‌ಪೆಕ್ಟರ್‌ ಆಗುವ ಕನಸು ಈಡೇರದೆ ಹೋದಾಗ ಆತ ಸುಲಿಗೆಕೋರನಾಗಿದ್ದಾನೆ. ಇದಕ್ಕೆ ಕೋಚಿಂಗ್‌ ಸೆಂಟರ್‌ನಲ್ಲಿ ಸಹ ಆತ ತರಬೇತಿ ಪಡೆದಿದ್ದ. ಆದರೆ ಮಲ್ಲಣ್ಣನ ಅದೃಷ್ಟ ಕೈ ಕೊಟ್ಟಿತು. ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಪರೀಕ್ಷೆಯಲ್ಲಿ ಆತ ಅನುತ್ತೀರ್ಣನಾಗಿ ಕನಸು ಭಂಗವಾಯಿತು. ತಾನು ಪೊಲೀಸ್ ಇಲಾಖೆಗೆ ಸೇರದೆ ಹೋದರೂ ಖಾಕಿ ತೊಟ್ಟು ಜನರನ್ನು ಬೆದರಿಸಿ ಸುಲಿಗೆ ಮೂಲಕ ಹಣ ಸಂಪಾದನೆಗೆ ಮಲ್ಲಣ್ಣ ನಿರ್ಧರಿಸಿದ್ದ. ಈ ಸುಲಿಗೆ ಕೃತ್ಯಕ್ಕೆ ಹಣದಾಸೆಗೆ ಆತನ ಮೂವರು ಸ್ನೇಹಿತರು ಸಾಥ್ ಕೊಟ್ಟಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಂತೆಯೇ ಇದೇ ವರ್ಷದ ಸೆಪ್ಟೆಂಬರ್‌ನಲ್ಲಿ ಕಾಮಾಕ್ಷಿಪಾಳ್ಯ ಸಮೀಪದ ಪೊಲೀಸ್ ಸಮವಸ್ತ್ರ ಮಾರಾಟ ಮಳಿಗೆಯಲ್ಲಿ ಮಲ್ಲಣ್ಣ ಪೊಲೀಸರ ಖಾಕಿ ಸಮವಸ್ತ್ರ ಖರೀದಿಸಿದ್ದಾನೆ. ಬಳಿಕ ಆ ಮಳಿಗೆಯಲ್ಲಿ ತನ್ನ ಅಳತೆಗೆ ತಕ್ಕಂತೆ ಪಿಎಸ್‌ಐ ಸಮವಸ್ತ್ರವನ್ನು ಹೊಲಿಸಿಕೊಂಡಿದ್ದಾನೆ. ತರುವಾಯ ಖೊಟ್ಟಿ ಪಿಎಸ್‌ಐ ನಂತೆ ಓಡಾಡಲು ಶುರು ಮಾಡಿದ್ದ ಆತ, ಸಾರ್ವಜನಿಕರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ನರಸೀಪುರ ಲೇಔಟ್‌ನಲ್ಲಿ ನವೀನ್‌ ಬಗ್ಗೆ ಮಲ್ಲಣ್ಣನಿಗೆ ಆತನ ಸಹಚರ ಹೃತ್ವಿಕ್‌ನಿಂದ ಮಾಹಿತಿ ಸಿಕ್ಕಿತು. ಈ ಮನೆಯಲ್ಲಿ ಪೊಲೀಸರ ಸೋಗಿನಲ್ಲಿ ದರೋಡೆಗೆ ಆರೋಪಿಗಳು ಸಂಚು ರೂಪಿಸಿದ್ದರು. ಅಂತೆಯೇ ಡಿ.7 ರಂದು ರಾತ್ರಿ ನವೀನ್ ಮನೆಗೆ ಪಿಎಸ್‌ಐ ಸಮವಸ್ತ ಹಾಕಿಕೊಂಡು ಸಹಚರರ ಜತೆ ಮಲ್ಲಣ್ಣ ದಾಳಿ ನಡೆಸಿದ್ದಾನೆ. ಈ ವೇಳೆ ನೀನು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಿಗಿರುವ ಮಾಹಿತಿ ಇದೆ. ಇದಕ್ಕಾಗಿ ನಿನ್ನ ಮನೆಗೆ ಶೋಧನೆಗೆ ಬಂದಿದ್ದೇವೆ ಎಂದು ನವೀನ್‌ಗೆ ಆರೋಪಿಗಳು ಬೆದರಿಸಿದ್ದರು.

ಆಗ ಕೆಲ ಹೊತ್ತು ತಸಾಪಣೆ ಮಾಡುವರಂತೆ ಪಿಎಸ್‌ಐ ತಂಡ ನಟಿಸಿತ್ತು. ಬಳಿಕ ನವೀನ್‌ ಮೇಲೆ ಹಲ್ಲೆ ನಡೆಸಿದ ಆರೋಪಿಗಳು, ಆತನಿಂದ ಆನ್‌ಲೈನ್‌ ಮೂಲಕ 87 ಸಾವಿರ ರು ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದು. ಅಲ್ಲದೆ ಮನೆಯಲ್ಲಿದ್ದ 55 ಸಾವಿರ ರು ನಗದು ದೋಚಿ ಆರೋಪಿಗಳು ತೆರಳಿದ್ದರು. ಈ ಕೃತ್ಯದ ಬಗ್ಗೆ ವಿಚಾರಿಸಿದಾಗ ನಕಲಿ ಪೊಲೀಸರು ಎಂಬುದು ನವೀನ್‌ಗೆ ಗೊತ್ತಾಗಿದೆ. ತಕ್ಷಣವೇ ವಿದ್ಯಾರಣ್ಯಪುರ ಠಾಣಗೆ ತೆರಳಿ ಅವರು ದೂರು ಸಲ್ಲಿಸಿದ್ದಾರೆ. ಈ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ನವೀನ್‌ ಖಾತೆಯಿಂದ ಹಣ ವರ್ಗಾವಣೆಯಾಗಿದ್ದ ಖಾತೆಯನ್ನು ಜಾಲಾಡಿದಾಗ ಆರೋಪಿಗಳ ಸುಲಿಗೆ ಸಿಕ್ಕಿದೆ. ಬಳಿಕ ಮಲ್ಲಣ್ಣನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ನಕಲಿ ಪೊಲೀಸರ ಕತೆ ಅನಾವರಣವಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ತನ್ನ ಗೆಳೆಯನಿಗೆ ಗುನ್ನ : ಹಲವು ವರ್ಷಗಳಿಂದ ದರೋಡೆಗೊಳಗಾಗಿದ್ದ ನವೀನ್ ಹಾಗೂ ಆರೋಪಿ ಹೃತ್ವಿಕ್ ಸ್ನೇಹಿತರಾಗಿದ್ದು, ಒಂದೇ ಕಂಪನಿಯಲ್ಲಿ ಇಬ್ಬರು ಕೆಲಸ ಮಾಡುತ್ತಿದ್ದರು. ಆದರೆ ವೈಯಕ್ತಿಕ ಕಾರಣಗಳಿಗೆ ಸ್ನೇಹಿತರ ಮಧ್ಯೆ ಬಿರುಕು ಮೂಡಿತ್ತು. ಈ ದ್ವೇಷದ ಹಿನ್ನಲೆಯಲ್ಲಿ ಪಿಎಸ್ಐ ಮಲ್ಲಣ್ಣನಿಗೆ ಹೇಳಿ ಆತ ದರೋಡೆ ಮಾಡಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ದರೋಡೆಗೆ ಕೃತ್ಯಕ್ಕೂ ಮೊದಲು ನನಗೆ ಮಲ್ಲಣ್ಣ ಪರಿಚಿಯವಿರಲಿಲ್ಲ. ನನ್ನ ಸ್ನೇಹಿತರೊಬ್ಬರಿಂದ ಆತನ ಸಂಪರ್ಕ ಬೆಳೆಯಿತು ಎಂದು ವಿಚಾರಣೆ ವೇಳೆ ಹೃತ್ವಿಕ್ ಹೇಳಿಕೆ ಕೊಟ್ಟಿರುವುದಾಗಿ ತಿಳಿದು ಬಂದಿದೆ.

ಉದ್ಯಾನ ಬಳಿ ಜನರೇ ಟಾರ್ಗೆಟ್‌

ಪಿಎಸ್‌ಐ ಸೋಗಿನಲ್ಲಿ ಹಲವು ಜನರಿಗೆ ಬೆದರಿಸಿ ಮಲ್ಲಣ್ಣ ಸುಲಿಗೆ ಮಾಡಿರುವ ಮಾಹಿತಿ ಇದೆ. ಉದ್ಯಾನಗಳ ಬಳಿ ಸುತ್ತಾಡಿ ಅಲ್ಲೇ ಅಡ್ಡಾಡುವ ಜನರಿಗೆ ಹೆದರಿಸಿ ಆತ ಹಣ ವಸೂಲಿ ಮಾಡಿದ್ದಾನೆ. ಆದರೆ ಈ ದರೋಡೆ ಹೊರತುಪಡಿಸಿ ಯಾರೊಬ್ಬರು ದೂರು ನೀಡಿಲ್ಲ. ಈತನಿಂದ ದೌರ್ಜನ್ಯಕ್ಕೊಳಗಾದವರು ದೂರು ನೀಡಿದರೆ ತನಿಖೆ ನಡೆಸುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇನ್ನು ಆರೋಪಿಗಳ ಪೈಕಿ ಜಿಮ್‌ನಲ್ಲಿ ಪ್ರಮೋದ್ ಕೆಲಸಗಾರನಾಗಿದ್ದರೆ, ವಿನಯ್ ಆಟೋ ಚಾಲಕನಾಗಿದ್ದಾನೆ. ಹಣಕ್ಕಾಗಿ ಮಲ್ಲಣ್ಣ ಜತೆ ಇಬ್ಬರು ಸೇರಿದ್ದರು ಎಂದು ಮೂಲಗಳು ಹೇಳಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ತುರುವೇಕೆರೆ: ದೇವರ ಮೇಲೆ ಹಾಕಿದ್ದ 500 ಗ್ರಾಂ ಸರ, 10 ಸಾವಿರ ರೂ. ನಗದು ಕದ್ದ ಕಳ್ಳರು!
ಶಾಕಿಂಗ್: ರಾತ್ರಿಯಾದ್ರೆ ಬೆಡ್‌ರೂಂ ಬಳಿ ಬರ್ತಾನೆ ಸೈಕೋ! ಅಪರಿಚಿತನ ಕಾಟಕ್ಕೆ ಬೇಸತ್ತ ವೈದ್ಯೆ!