'ಡ್ರಗ್ ಅಡಿಕ್ಟ್' ಹೆಸರಲ್ಲಿ ಮಾನಸಿಕ ಸಮಸ್ಯೆಯ ಯುವತಿಯೊಬ್ಬಳ ವಿಡಿಯೋ ವೈರಲ್ ಮಾಡಲಾಗಿದೆ. ಮಂಗಳೂರಿನ ಕದ್ರಿ ಠಾಣೆಯಲ್ಲಿ ಯುವತಿ ಪೊಲೀಸರ ಮೇಲೆಯೇ ದಾಳಿ ನಡೆಸುವ ವಿಡಿಯೋ ಇದಾಗಿದ್ದು, ಸೆ.1ರಂದು ಮಂಗಳೂರಿನ ಕದ್ರಿ ಪೊಲೀಸ್ ಠಾಣೆಯಲ್ಲಿ ನಡೆದಿದ್ದ ಘಟನೆ ಎನ್ನಲಾಗಿದೆ.
ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು
ಮಂಗಳೂರು(ಸೆ.09): ಯುವತಿಯೊಬ್ಬಳು ಮಹಿಳಾ ಪೊಲೀಸ್ ಸಿಬ್ಬಂದಿ ಜೊತೆ ಆಕ್ರಮಣಕಾರಿಯಾಗಿ ವರ್ತಿಸುವ ಮತ್ತು ಪೊಲೀಸರ ಮೇಲೆಯೇ ಹಲ್ಲೆ ನಡೆಸುವ ವಿಡಿಯೋವೊಂದು ಸದ್ಯ ಕರಾವಳಿಯಲ್ಲಿ ಸಾಮಾಜಿಕ ತಾಣಗಳಲ್ಲಿ ಭಾರೀ ವೈರಲ್ ಆಗ್ತಿದೆ. ಡ್ರಗ್ ಅಡಿಕ್ಟ್ ಯುವತಿಯ ಗೂಂಡಾ ವರ್ತನೆ ಅನ್ನೋ ಹೆಸರಿನಲ್ಲಿ ಈ ವಿಡಿಯೋ ವೈರಲ್ ಆಗ್ತಿದ್ದು, ಆದರೆ ಆಕೆ ಡ್ರಗ್ ಅಡಿಕ್ಟ್ ಅಲ್ಲ ಅನ್ನೋದನ್ನು ಸ್ವತಃ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಸ್ಪಷ್ಟ ಪಡಿಸಿದ್ದಾರೆ.
'ಡ್ರಗ್ ಅಡಿಕ್ಟ್' ಹೆಸರಲ್ಲಿ ಮಾನಸಿಕ ಸಮಸ್ಯೆಯ ಯುವತಿಯೊಬ್ಬಳ ವಿಡಿಯೋ ವೈರಲ್ ಮಾಡಲಾಗಿದೆ. ಮಂಗಳೂರಿನ ಕದ್ರಿ ಠಾಣೆಯಲ್ಲಿ ಯುವತಿ ಪೊಲೀಸರ ಮೇಲೆಯೇ ದಾಳಿ ನಡೆಸುವ ವಿಡಿಯೋ ಇದಾಗಿದ್ದು, ಸೆ.1ರಂದು ಮಂಗಳೂರಿನ ಕದ್ರಿ ಪೊಲೀಸ್ ಠಾಣೆಯಲ್ಲಿ ನಡೆದಿದ್ದ ಘಟನೆ ಎನ್ನಲಾಗಿದೆ.
ಮಂಗಳೂರು ವಿವಿಯಲ್ಲಿ ಡಾ.ಶಂಸುಲ್ ಇಸ್ಲಾಂ ಉಪನ್ಯಾಸ: ವಿರೋಧಿಸಿ ಎಬಿವಿಪಿ ಪ್ರತಿಭಟನೆ
ಯುವತಿಯೊಬ್ಬಳನ್ನ ನಾಲ್ಕೈದು ಮಹಿಳಾ ಪೊಲೀಸ್ ಸಿಬ್ಬಂದಿ ನಿಯಂತ್ರಿಸುತ್ತಿರುವ ಈ ವಿಡಿಯೋದಲ್ಲಿ ಆಕೆ ಪೊಲೀಸ್ ಸಿಬ್ಬಂದಿಗೆ ತುಳಿದು ಹಲ್ಲೆಗೆ ಯತ್ನಿಸುತ್ತಿರುವ ದೃಶ್ಯಗಳಿವೆ. ಈ ವೇಳೆ ಯುವತಿಯನ್ನು ನಿಯಂತ್ರಿಸಲು ಕೈ ಕೋಳ ತೊಡಿಸುವ ಪೊಲೀಸರು, ಆಕೆಗೂ ಎರಡೇಟು ಬಿಗಿದಿದ್ದಾರೆ. ಸದ್ಯ ಯುವತಿ ಡ್ರಗ್ ಅಡಿಕ್ಟ್ ಎಂದು ಕದ್ರಿ ಠಾಣೆಯಲ್ಲಿ ನಡೆದ ಘಟನೆಯ ವಿಡಿಯೋವನ್ನು ಸಾಮಾಜಿಕ ತಾಣಗಳಲ್ಲಿ ಹರಿ ಬಿಡಲಾಗಿದೆ. ಆದರೆ ಈ ವೈರಲ್ ವಿಡಿಯೋ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಸ್ಪಷ್ಟನೆ ನೀಡಿದ್ದಾರೆ.
ಸೆ.1 ರ ಬೆಳಿಗ್ಗೆ 06.50ಕ್ಕೆ ಪಂಪವೆಲ್ ಗಣೇಶ್ ಮೆಡಿಕಲ್ ನಲ್ಲಿ ಈ ಯುವತಿ ಸಿಕ್ಕಿದ್ದಾಳೆ. ಅಸಾಮಾನ್ಯವಾಗಿ ಹಾಗೂ ಆಕ್ರಮಣಕಾರಿ ರೀತಿಯಲ್ಲಿ ವರ್ತಿಸುತ್ತಿದ್ದಳು. ಇದನ್ನು ಅಬಕಾರಿ ಇಲಾಖೆಯ ಅಧಿಕಾರಿಯೊಬ್ಬರು ಗಮನಿಸಿ ಮಾದಕ ದ್ರವ್ಯ ಸೇವನೆ ಅನುಮಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಆಕೆಯನ್ನು ವೈದ್ಯಕೀಯ ತಪಾಸಣೆಗೆ ಕರೆದುಕೊಂಡು ಹೋಗಲು ಪ್ರಯತ್ನಿಸಿದಾಗ ಅವರ ಮೇಲೆಯೇ ಹಲ್ಲೆಗೆ ಯತ್ನಿಸಿದ್ದಾಳೆ. ಬಳಿಕ ಕದ್ರಿ ಪೊಲಿಸರ ಸಹಾಯದಿಂದ ಠಾಣೆಗೆ ಕರೆ ತಂದ ಅಬಕಾರಿ ಅಧಿಕಾರಿ ಹಾಗೂ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿ ವಿಚಿತ್ರ ವರ್ತನೆ ತೋರಿದ್ದಾಳೆ. ಬಳಿಕ ಮಹಿಳಾ ಸಿಬ್ಬಂದಿ ಬಲದೊಂದಿಗೆ ಯುವತಿ ವೈದ್ಯಕೀಯ ತಪಾಸಣೆ ನಡೆಸಲಾಗಿದ್ದು, ಆದರೆ ವೈದ್ಯಕೀಯ ತಪಾಸಣೆಯಲ್ಲಿ ಮಾದಕ ದ್ರವ್ಯ ಪರೀಕ್ಷೆ ನೆಗೆಟಿವ್ ಬಂದಿದೆ. ನಂತರ ಅಕೆಯನ್ನು ಆಕೆಯ ಪೋಷಕರ ವಶಕ್ಕೆ ವಹಿಸಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಮಾನಸಿಕ ಸಮಸ್ಯೆಯಿಂದ ಯುವತಿ ಬಳಲುತ್ತಿರೋ ಬಗ್ಗೆ ಮಾಹಿತಿ ಇದೆ ಎಂದು ಕಮಿಷನರ್ ಅಗರ್ವಾಲ್ ತಿಳಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಕದ್ರಿ ಠಾಣೆಯಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ವಿಡಿಯೋ ಮಾಡಿದ್ದಾರೆ ಎನ್ನಲಾಗಿದ್ದು, ಆದರೆ ವಿಡಿಯೋ ವೈರಲ್ ಆಗಿ ಸದ್ಯ ಭಾರೀ ಅವಾಂತರ ಸೃಷ್ಟಿಸಿದೆ. ವಿಡಿಯೋ ವೈರಲ್ ಮಾಡಿದವರ ಬಗ್ಗೆಯೂ ಮಂಗಳೂರು ಪೊಲೀಸರ ತನಿಖೆ ನಡೆಸುತ್ತಿದ್ದಾರೆ.
ಮಂಗಳೂರು ಪಾಲಿಕೆ ಮೇಯರ್ ಆಗಿ ಸುಧೀರ್ ಶೆಟ್ಟಿ, ಉಪ ಮೇಯರ್ ಸುನಿತಾ ಆಯ್ಕೆ
ವಿಡಿಯೋ ವೈರಲ್ ಮಾಡಿದ್ದು ಯಾರು?
ಈಗಾಗಲೇ ಮಂಗಳೂರು ಡ್ರಗ್ ಹೆಸರಿನಲ್ಲಿ ಭಾರೀ ಸುದ್ದಿಯಲ್ಲಿದೆ. ಈ ನಡುವೆ ಯುವತಿಯ ಈ ವಿಡಿಯೋ ಡ್ರಗ್ ಅಡಿಕ್ಟ್ ಶೀರ್ಷಿಕೆಯಡಿ ವೈರಲ್ ಆಗುವ ಮೂಲಕ ಮತ್ತಷ್ಟು ಗಂಭೀರತೆ ಪಡೆದಿದೆ. ಸದ್ಯ ಯುವತಿಯ ಡ್ರಗ್ ಟೆಸ್ಟ್ ನೆಗೆಟಿವ್ ಆಗಿದ್ದು, ಆಕೆ ಡ್ರಗ್ ಸೇವನೆ ಮಾಡಿರಲಿಲ್ಲ ಎನ್ನುವುದು ವೈದ್ಯಕೀಯ ತಪಾಸಣೆ ವೇಳೆ ಹೊರಬಂದ ಸತ್ಯ. ಆದರೆ ಇದೀಗ ವಿಡಿಯೋ ವೈರಲ್ ಆಗಿರೋ ಕಾರಣ ಅವಾಂತರ ಸೃಷ್ಟಿಯಾಗಿದೆ. ಅಸಲಿಗೆ ಈ ಘಟನೆ ಕದ್ರಿ ಪೊಲೀಸ್ ಠಾಣೆಯ ಒಳಭಾಗದಲ್ಲಿ ನಡೆದಿದ್ದು, ಪೊಲೀಸ್ ಸಿಬ್ಬಂದಿ ಹಾಗೂ ಅಬಕಾರಿ ಅಧಿಕಾರಿಗಳನ್ನು ಬಿಟ್ಟರೆ ಮತ್ಯಾರೂ ಇರಲಿಲ್ಲ. ಮಾಹಿತಿ ಪ್ರಕಾರ ಅಬಕಾರಿ ಇಲಾಖೆಯ ಸಿಬ್ಬಂದಿಯೇ ಮುನ್ನೆಚ್ಚರಿಕಾ ಕ್ರಮವಾಗಿ ವಿಡಿಯೋ ಮಾಡಿ ಇಟ್ಟುಕೊಂಡಿದ್ದರು ಎನ್ನಲಾಗಿದೆ. ಆದರೆ ಅದನ್ನ ಈ ರೀತಿ ಸಾಮಾಜಿಕ ತಾಣಗಳಲ್ಲಿ ಹರಿ ಬಿಟ್ಟಿದ್ದು ಯಾಕೆ ಎನ್ನುವುದೇ ಈಗ ಎದ್ದಿರುವ ಪ್ರಶ್ನೆ. ಸದ್ಯ ಆಕೆಯ ಮಾದಕ ದ್ರವ್ಯ ಸೇವಿಸಿರಲ್ಲ, ಬದಲಾಗಿ ಆಕೆ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ಯುವತಿ ಅಂತ ಮಂಗಳೂರು ಕಮಿಷನರ್ ಅನುಪಮ್ ಅಗರ್ವಾಲ್ ಸ್ಪಷ್ಟನೆ ನೀಡಿದ್ದಾರೆ.
ಹೀಗಿರುವಾಗ ಯುವತಿಯೊಬ್ಬಳ ವಿಡಿಯೋ ವೈರಲ್ ಮಾಡಿದ ಸರ್ಕಾರಿ ಅಧಿಕಾರಿಗಳ ವಿರುದ್ದವೂ ಕ್ರಮ ಕೈಗೊಳ್ಳುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಕಮಿಷನರ್ ಅಗರ್ವಾಲ್ ತಿಳಿಸಿದ್ದಾರೆ.