ತನ್ನ ಗೆಳತಿ ಆತ್ಮಹತ್ಯೆ ಪ್ರಕರಣದ ವಿಚಾರಣೆಗೆ ಬಂದಿದ್ದಾಗ ಪೊಲೀಸ್ ಠಾಣೆಯ ಆವರಣದ ಮರಕ್ಕೆ ನೇಣು ಬಿಗಿದುಕೊಂಡು ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದಲ್ಲಿ ಮಂಗಳವಾರ ನಡೆದಿದೆ.
ಬೆಂಗಳೂರು (ಜು.19): ತನ್ನ ಗೆಳತಿ ಆತ್ಮಹತ್ಯೆ ಪ್ರಕರಣದ ವಿಚಾರಣೆಗೆ ಬಂದಿದ್ದಾಗ ಪೊಲೀಸ್ ಠಾಣೆಯ ಆವರಣದ ಮರಕ್ಕೆ ನೇಣು ಬಿಗಿದುಕೊಂಡು ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದಲ್ಲಿ ಮಂಗಳವಾರ ನಡೆದಿದೆ. ಕೇರಳ ಮೂಲದ ನಂದಕುಮಾರ್ (21) ಮೃತ ದುರ್ದೈವಿ. ಆತ್ಮಹತ್ಯೆ ಪ್ರಕರಣದ ವಿಚಾರಣೆಗೆ ಮಂಗಳವಾರ ಬೆಳಗ್ಗೆ 8.30 ರಾಜಗೋಪಾಲನಗರ ಠಾಣೆಗೆ ಆತ ಬಂದಿದ್ದಾಗ ಈ ಘಟನೆ ನಡೆದಿದೆ ಎಂದು ಉತ್ತರ ವಿಭಾಗದ ಡಿಸಿಪಿ ಶಿವಪ್ರಕಾಶ್ ದೇವರಾಜ್ ತಿಳಿಸಿದ್ದಾರೆ.
ರಾಜಗೋಪಾಲ ನಗರ ಸಮೀಪ ಲಿವ್ ಇನ್ ರಿಲೇಷನ್‌ನಲ್ಲಿ ಕೇರಳ ಮೂಲದ ನಂದಕುಮಾರ್ ಹಾಗೂ ಅಕ್ಷಯಾ ನೆಲೆಸಿದ್ದರು. ನಗರದ ಖಾಸಗಿ ಕಾಲೇಜಿನಲ್ಲಿ ಅಕ್ಷಯಾ ಪ್ಯಾರಾ ಮೆಡಿಕಲ್ ಓದುತ್ತಿದ್ದಳು. ಆದರೆ ನಂದಕುಮಾರ್ ನಿರುದ್ಯೋಗಿಯಾಗಿದ್ದ. ವೈಯಕ್ತಿಕ ವಿಚಾರವಾಗಿ ಇಬ್ಬರ ಮಧ್ಯೆ ಮನಸ್ತಾಪವಾಗಿದ್ದು, ಆಗಾಗ್ಗೆ ಪರಸ್ಪರ ಜಗಳವಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಬೇಸರಗೊಂಡು ಜು.14ರಂದು ಅಕ್ಷಯಾ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಸಂಬಂಧ ನಂದಕುಮಾರ್ ಮೇಲೆ ಮೃತಳ ಪೋಷಕರು ದೂರು ನೀಡಿದ್ದರು.
ಮನೆಗೆ ಬರಲು ನಿರಾಕರಣೆ: ಪತ್ನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಪತಿ
ಈ ಬಗ್ಗೆ ತನಿಖೆ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಹಿನ್ನೆಲೆಯಲ್ಲಿ ರಾಜಗೋಪಾಲ ನಗರ ಠಾಣೆ ಪೊಲೀಸರ ಮುಂದೆ ಸೋಮವಾರ ಆತ ವಿಚಾರಣೆಗೆ ಹಾಜರಾಗಿದ್ದ. ವಿಚಾರಣೆ ನಡೆಸಿದ ಬಳಿಕ ಪೊಲೀಸರು ಮತ್ತೆ ವಿಚಾರಣೆಗೆ ಹಾಜರಾಗುವಂತೆ ಆತನಿಗೆ ಪೊಲೀಸರು ಸೂಚಿಸಿದ್ದರು. ಅದರಂತೆ ಮಂಗಳವಾರ ಬೆಳಗ್ಗೆ 8ಕ್ಕೆ ಠಾಣೆಗೆ ಬಂದ ನಂದಕುಮಾರ್, ಆನಂತರ ಠಾಣೆ ಹಿಂಭಾಗಕಕ್ಕೆ ತೆರಳಿದ್ದಾನೆ. ಅಲ್ಲಿ ತಾನು ಧರಿಸಿದ್ದ ಪೈಜಾಮ ಪ್ಯಾಂಟ್‌ನ ಲಾಡಿ ದಾರದಿಂದ ಮರಕ್ಕೆ ನೇಣು ಬಿಗಿದುಕೊಂಡು ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೆಲ ಹೊತ್ತಿನ ಬಳಿಕ ಠಾಣೆ ಹಿಂಭಾಗಕ್ಕೆ ಮೂತ್ರ ವಿರ್ಸಜನೆಗೆ ಸಿಬ್ಬಂದಿ ತೆರಳಿದ್ದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
35ರ ಆಂಟಿಯ ಸುಳ್ಳು ಪ್ರೀತಿಗೆ ಬಿದ್ದು ಲಕ್ಷ ಲಕ್ಷ ಹಣ ಕಳೆದುಕೊಂಡ ಯುವಕ ಆತ್ಮಹತ್ಯೆ
ತನ್ನ ಗೆಳತಿ ಆತ್ಮಹತ್ಯೆಯಿಂದ ಬೇಸರಗೊಂಡು ರಾಜಗೋಪಾಲ ಠಾಣೆ ಆವರಣದಲ್ಲಿ ಕೇರಳ ಮೂಲದ ನಂದಕುಮಾರ್ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಪೊಲೀಸರ ಮೇಲೆ ದೌರ್ಜನ್ಯ ಅಥವಾ ಕಿರುಕುಳದ ದೂರು ಬಂದಿಲ್ಲ.
-ಶಿವಪ್ರಕಾಶ್ ದೇವರಾಜ್, ಡಿಸಿಪಿ, ಉತ್ತರ ವಿಭಾಗ.