
ಯಾದಗಿರಿ (ಅ.2): ಗೃಹಿಣಿಯೊಬ್ಬಳ ಮೇಲೆ ಅನೈತಿಕ ಸಂಬಂಧದ ಆರೋಪ ಹೊರಿಸಿದ ಆಕೆಯ ಸಂಬಂಧಿಕರು, ತಲೆಗೂದಲು ಕತ್ತರಿಸಿ, ಸುಣ್ಣ ಹಚ್ಚಿ, ಕಾರದ ಪುಡಿ ಎರಚಿದ್ದಲ್ಲದೆ, ಬಟ್ಟೆ ಹರಿದು ಅರೆನಗ್ನವಾಗಿಸಿ ಕೊಲೆಗೆ ಯತ್ನಿಸಿದ ಅಮಾನವೀಯ ಕೃತ್ಯ ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ತಾಂಡಾವೊಂದರಲ್ಲಿ ನಡೆದಿದ್ದು, ಈ ಬಗ್ಗೆ ಕೆಂಭಾವಿ ಠಾಣೆಯಲ್ಲಿ ದೂರು ದಾಖಲಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.
ತಾಂಡಾದ 35 ವರ್ಷದ ಗೃಹಿಣಿ ನೀಡಿದ ದೂರಿನಂತೆ, ಮೊದಲ ಪತ್ನಿ ತೀರಿಕೊಂಡಿದ್ದರಿಂದ ಇಲ್ಲಿನ ವ್ಯಕ್ತಿಯೊಬ್ಬರ ಜೊತೆ ಆಕೆಗೆ ಮದುವೆ ಮಾಡಲಾಗಿತ್ತು. ಗೃಹಿಣಿಗೆ ಇಬ್ಬರು ಮಕ್ಕಳ್ಳಿದ್ದು, ಅನಾರೋಗ್ಯ ಕಾರಣದಿಂದ ಆಕೆ ತನ್ನ ಚಿಕ್ಕಮ್ಮಳ ಕಲಬುರಗಿ ಮನೆಗೆ ಆಗಾಗ ತೆರಳುತ್ತಿದ್ದಳು. ಗ್ರಾಮಕ್ಕೆ ವಾಪಸ್ ಆಗುತ್ತಿದ್ದಾಗ ಗೃಹಿಣಿಯ ಅಳಿಯ ಕರೆದುಕೊಂಡು ಬರುತ್ತಿದ್ದ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಈಕೆಯ ಸಂಬಂಧಿಕರು ಹಾಗೂ ಗ್ರಾಮದ ಕೆಲವರು, ಅಳಿಯನೊಂದಿಗೆ ಅನೈತಿಕ ಸಂಬಂಧದ ಆರೋಪ ಹೊರೆಸಿದ್ದರಲ್ಲದೆ, ಕಲಬುರಗಿಗೆ ತೆರಳದಂತೆ ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಡುಮ್ಮಿ ಎಂದು ಮಾಜಿ ಪತ್ನಿ ಫೋನ್ ನಂಬರ್ ಸೇವ್ ಮಾಡಿದ ಪತಿಗೆ ದಂಡ ವಿಧಿಸಿದ ಕೋರ್ಟ್
ಅ.16ರಂದು ರಾತ್ರಿ 8 ಗಂಟೆಗೆ ಪತಿ ಹಾಗೂ ಅಳಿಯನ ಜೊತೆ ಮನೆಯಲ್ಲಿದ್ದಾಗ, ಕಬ್ಬಿಣದ ರಾಡು ಹಿಡಿದು ಮನೆಗೆ ಬಂದ ಸಂಬಂಧಿಕರು ಹಾಗೂ ಗ್ರಾಮದ ಕೆಲವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಹಲ್ಲೆ ನಡೆಸಿದ್ದಾರೆ. ಕತ್ತರಿಯಿಂದ ತಲೆಗೂದಲು ಕತ್ತರಿಸಿ, ಸುಣ್ಣ ಹಚ್ಚಿ, ಬಟ್ಟೆ ಹರಿದು ದೌರ್ಜನ್ಯ ಎಸಗಿದರು. ‘ಪಾರಾಗಲು ಯತ್ನಿಸಿದ ತನಗೆ ಕಾರದ ಪುಡಿ ಎರಚಲಾಯಿತು. ಆಗ ಪತಿ ಹಾಗೂ ಅಳಿಯ ಜನರನ್ನು ಕೂಗಿ ಕರೆದಿದ್ದು, ಸ್ಥಳೀಯರು ನೆರವಿನಿಂದ ಪಾರಾಗಬೇಕಾಯಿತು. ನನಗೆ ಜೀವಬೆದರಿಕೆ ಹಾಕಲಾಗಿದೆ’ ಎಂದು ಸಂತ್ರಸ್ತೆ 6 ಮಹಿಳೆಯರು ಸೇರಿದಂತೆ 11 ಜನರ ವಿರುದ್ಧ ದೂರಿದ್ದಾಳೆ.
ಇದನ್ನೂ ಓದಿ: ಇನ್‌ಸ್ಟಾಗ್ರಾಂ ಮೂಲಕ ಪರಿಚಯ,ಹಾವೇರಿಯಲ್ಲಿ ನಾಲ್ವರಿಂದ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ
ಅ.17 ರಂದು ಕೆಂಭಾವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ, ಉಳಿದವರ ಬಂಧನಕ್ಕೆ ಜಾಲ ಬೀಸಲಾಗಿದೆ ಎಂದು ಎಸ್ಪಿ ಪೃಥ್ವಿಕ್ ಶಂಕರ್ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ