
ವಿಜಯಪುರ (ನ.3) : ಹೊಟ್ಟೆಪಾಡಿಗಾಗಿ ಕಬ್ಬು ಕಟಾವು ಕಾರ್ಮಿಕಳಾಗಿ ದುಡಿಯಲು ಕುಟುಂಬ ಸಮೇತ ಬಂದಿದ್ದ ವಿವಾಹಿತೆಯೊಬ್ಬಳು ಅಡುಗೆಯಲ್ಲಿ ಬಳಸಲು ಮರದಲ್ಲಿದ್ದ ಹುಣಸೆ ಹಣ್ಣು ಕೀಳುವಾಗ ಆಯತಪ್ಪಿ ಬಿದ್ದು ಪ್ರಾಣವನ್ನೇ ಬಲಿಕೊಟ್ಟು ಇಬ್ಬರು ಪುಟ್ಟ ಕಂದಮ್ಮಗಳನ್ನು ಅನಾಥರನ್ನಾಗಿ ಮಾಡಿ ಹೋದ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ಢವಳಗಿಯಲ್ಲಿ ಬುಧವಾರ ನಡೆದಿದೆ. ಮೃತಳನ್ನು ಯಾದಗಿರಿ ಜಿಲ್ಲೆ ಹುಣಚಗಿ ತಾಲೂಕು ಗೆದ್ದಲಮರಿ ಗ್ರಾಮದ ಪರಮವ್ವ ಮಲ್ಲಪ್ಪ ಕುರಿ (24) ಎಂದು ಗುರ್ತಿಸಲಾಗಿದೆ. ಈಕೆಗೆ ಪತಿ, ಇಬ್ಬರು ಪುಟ್ಟ ಮಕ್ಕಳು ಇದ್ದಾರೆ. ಢವಳಗಿ ಭಾಗದ ಹೊಲಗಳಲ್ಲಿ ಕಬ್ಬು ಕಟಾವು ಮಾಡಲು ಬಂದಿರುವ ತಂಡದಲ್ಲಿ ಇವಳ ಕುಟುಂಬ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಢವಳಗಿಯಲ್ಲಿ ಕಟಾವು ಮುಗಿಸಿ ಬಸವನ ಬಾಗೇವಾಡಿ ತಾಲೂಕು ಕಾನ್ಯಾಳದ ಜಮೀನಿಗೆ ಕಬ್ಬು ಕಟಾವು ಮಾಡಲು ಡಬಲ್ ಟ್ರ್ಯಾಲಿ ಟ್ರ್ಯಾಕ್ಟರಿನಲ್ಲಿ ಸಹ ಕಾರ್ಮಿಕರು, ಕುರಿಗಳು, ಮಕ್ಕಳ ಸಮೇತ ಹೊರಟಿದ್ದರು. ಗ್ರಾಮದ ಸರ್ಕಾರಿ ಹಾಸ್ಟೇಲ್ ಪಕ್ಕದ ರಸ್ತೆಯಲ್ಲಿ ಹುಣಸೆ ಮರ ಕಂಡು ಅದರಲ್ಲಿ ಬೆಳೆದಿದ್ದ ಹುಣಸೆ ಹಣ್ಣು ಕಿತ್ತಿಕೊಳ್ಳಲು ಪರಮವ್ವ ಮುಂದಾಗಿದ್ದಾಳೆ.
9 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದ 92ರ ಮುದುಕನಿಗೆ 3 ವರ್ಷ ಜೈಲು!
ಟ್ರ್ಯಾಲಿಯಲ್ಲಿ ಉರುವಲು ಕಟ್ಟಿಗೆ ಮುಂತಾದ ಸಾಮಗ್ರಿ ತುಂಬಿದ್ದರಿಂದ ಆಕೆಗೆ ಹಣ್ಣು ಕೀಲುವುದು ಸುಲಭವಾಗಿತ್ತು. ಮರದ ಟೊಂಗೆಯಲ್ಲಿದ್ದ ಹುಣಸೆ ಹಣ್ಣನ್ನು ಕೈಯಲ್ಲಿ ಹಿಡಿದು ಕಿತ್ತಬೇಕೆನ್ನುವಷ್ಟರಲ್ಲಿ ವಾಹನ ಮುಂದಕ್ಕೆ ಚಲಿಸಿದೆ. ಏಕಾಏಕಿ ಆಯತಪ್ಪಿ ನೆಲಕ್ಕೆ ಬಿದ್ದಾಗ ಹಿಂದಿನ ಟ್ರ್ಯಾಲಿಯ ಚಕ್ರದ ಕೆಳಗೆ ಸಿಕ್ಕು ಸ್ಥಳದಲ್ಲೇ ದುರ್ಮರಣವನ್ನಪ್ಪಿದಳು. ತಮ್ಮೆದುರು ನಡೆದ ಘಟನೆಯಿಂದ ಮೃತಳ ಪತಿ, ಪತಿಯ ಸಹೋದರ, ಮಕ್ಕಳು, ಸಹ ಕಾರ್ಮಿಕರು ಆಘಾತಕ್ಕೊಳಗಾಗಿ ಆಕ್ರಂದನ ನಡೆಸಿದ್ದು ಕರುಳು ಕಿವುಚುವಂತಿತ್ತು.
ಬೆಚ್ಚಿ ಬೀಳಿಸುತ್ತಿದೆ ಹಾವೇರಿ ರೈತರ ಆತ್ಮಹತ್ಯೆ, 10 ತಿಂಗಳಲ್ಲಿ 112 ಆತ್ಮಹತ್ಯೆ ಕೇಸ್!
ಘಟನೆ ಕುರಿತು ಮೃತಳ ಪತಿ ಮಲ್ಲಪ್ಪ ಕುರಿ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಟ್ರ್ಯಾಕ್ಟರ್ ಚಾಲಕ ಪರಶುರಾಮ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿದ್ದಾನೆ. ಪಿಎಸೈ ಆರೀಫ ಮುಷಾಪುರೆ, ಹಣಮಂತ ಸುತಗುಂಡಾರ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಕೊಂಡಿದ್ದಾರೆ. ಮಲ್ಲಮ್ಮಳ ದುರಾದೃಷ್ಟಕ್ಕೆ ಅಲ್ಲಿ ಸೇರಿದ್ದವರೆಲ್ಲ ಮಮ್ಮಲ ಮರುಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ