ಪ್ರೆಸ್​ ಕ್ಲಬ್​ ಕೌನ್ಸಿಲ್ ರಾಜ್ಯಾಧ್ಯಕ್ಷೆ ಹುದ್ದೆ ಆಮಿಷವೊಡ್ಡಿ ಮಹಿಳೆಗೆ ₹20 ಲಕ್ಷ ವಂಚನೆ

Kannadaprabha News   | Kannada Prabha
Published : Nov 30, 2025, 09:03 AM IST
Money

ಸಾರಾಂಶ

ಕರ್ನಾಟಕ ಪ್ರೆಸ್​ ಕ್ಲಬ್​ ಕೌನ್ಸಿಲ್​ನ ಮಹಿಳಾ ರಾಜ್ಯಾಧ್ಯಕ್ಷೆ ಮತ್ತು ವಿಶ್ವ ಕನ್ನಡ ಹಬ್ಬಕ್ಕೆ ನಿರ್ದೇಶಕಿಯನ್ನಾಗಿ ಮಾಡುವುದಾಗಿ ಮಹಿಳೆಗೆ ನಂಬಿಸಿ ಲಕ್ಷಾಂತರ ರು. ವಂಚಿಸಿದ್ದ ಆರೋಪಿಯನ್ನು ಗೋವಿಂದರಾಜ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

  ಬೆಂಗಳೂರು :  ಕರ್ನಾಟಕ ಪ್ರೆಸ್​ ಕ್ಲಬ್​ ಕೌನ್ಸಿಲ್​ನ ಮಹಿಳಾ ರಾಜ್ಯಾಧ್ಯಕ್ಷೆ ಮತ್ತು ವಿಶ್ವ ಕನ್ನಡ ಹಬ್ಬಕ್ಕೆ ನಿರ್ದೇಶಕಿಯನ್ನಾಗಿ ಮಾಡುವುದಾಗಿ ಮಹಿಳೆಗೆ ನಂಬಿಸಿ ಲಕ್ಷಾಂತರ ರು. ವಂಚಿಸಿದ್ದ ಆರೋಪಿಯನ್ನು ಗೋವಿಂದರಾಜ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವಿಜಯನಗರದ ಅಮರಜ್ಯೋತಿನಗರದ ನಿವಾಸಿ, ಕಣ್ಣು ಪತ್ರಿಕೆ ಸಂಪಾದಕ ಹಾಗೂ ಕರ್ನಾಟಕ ಪ್ರೆಸ್‌ ಕ್ಲಬ್‌ ಕೌನ್ಸಿಲ್‌ ಅಧ್ಯಕ್ಷ ಶಿವಕುಮಾರ್ ನಾಗರನವಿಲೆ ಬಂಧಿತ ಆರೋಪಿ.

ಹೊಂಗಸಂದ್ರ ಮುಖ್ಯ ರಸ್ತೆಯಲ್ಲಿನ ನ್ಯೂ ಮೈಕೋ ಲೇಔಟ್‌ ನಿವಾಸಿ ಬಿ. ಮೀನಾಕ್ಷಿ ಎಂಬುವರು ನೀಡಿದ ದೂರಿನನ್ವಯ ಆರೋಪಿಯನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿ ಶಿವಕುಮಾರ್ ವಿರುದ್ಧ ನ.13 ರಂದು ಮಹಿಳೆ ದೂರು

ಆರೋಪಿ ಶಿವಕುಮಾರ್ ವಿರುದ್ಧ ನ.13 ರಂದು ಮಹಿಳೆ ದೂರು ನೀಡಿದ್ದರು. ಪೊಲೀಸರು ಆರೋಪಿಗೆ ಲುಕ್‌ಔಟ್‌ ನೋಟಿಸ್‌ ಜಾರಿ ಮಾಡಿದ್ದರು. ಗುರುವಾರ ರಾತ್ರಿ ವಿದೇಶಕ್ಕೆ ಪರಾರಿಯಾಗಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ ಆರೋಪಿ ಶಿವಕುಮಾರ್‌ನನ್ನು ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಪ್ರಕರಣದ ವಿವರ: ತನ್ನನ್ನು ತಾನು ಕರ್ನಾಟಕ ಪ್ರೆಸ್ ಕ್ಲಬ್ ಅಧ್ಯಕ್ಷನೆಂದು ಮೀನಾಕ್ಷಿ ಅವರಿಗೆ ಪರಿಚಯಿಸಿಕೊಂಡಿದ್ದ ಆರೋಪಿಯು, ನಾನು ವಿದೇಶಗಳಲ್ಲಿ ವಿಶ್ವ ಕನ್ನಡ ಹಬ್ಬ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುತ್ತೇನೆ ಎಂದು ಹೇಳಿಕೊಂಡಿದ್ದ. ನಿಮ್ಮನ್ನು ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್‌ನ ಮಹಿಳಾ ರಾಜ್ಯಾಧ್ಯಕ್ಷೆ ಹಾಗೂ ಸಿಂಗಾಪುರದಲ್ಲಿ ಆಯೋಜಿಸುವ 2024 ರ 2ನೇ ಆವೃತ್ತಿಯ ವಿಶ್ವ ಕನ್ನಡ ಹಬ್ಬಕ್ಕೆ ನಿಮ್ಮನ್ನು ನಿರ್ದೇಶಕಿಯನ್ನಾಗಿ ಮಾಡುತ್ತೇನೆ ಎಂದು ನಂಬಿಸಿದ್ದ. ಇದಕ್ಕಾಗಿ ಆರಂಭದಲ್ಲಿ 11 ಸಾವಿರ ರು. ಪಡೆದಿದ್ದ ಆರೋಪಿ ನಂತರ ಸಚಿವ ಶಿವರಾಜ್‌ ತಂಗಡಗಿ ಅವರಿಂದ ಆದೇಶ ಪತ್ರ ಕೊಡಿಸುವುದಾಗಿ 20 ಸಾವಿರ ರು. ಪಡೆದುಕೊಂಡಿದ್ದ. ಬಳಿಕ ವಿಶ್ವ ಕನ್ನಡ ಹಬ್ಬದ ಖರ್ಚುಗಳಿಗಾಗಿ ಹಂತಹಂತವಾಗಿ ಮಹಿಳೆ ಹಾಗೂ ಇತರರಿಂದ ಒಟ್ಟು 20 ಲಕ್ಷಕ್ಕೂ ಹೆಚ್ಚು ಹಣ ಪಡೆದಿದ್ದ. ಅದನ್ನು ಹಿಂದಿರುಗಿಸುವುದಾಗಿಯೂ ನಂಬಿಸಿದ್ದ. ನನ್ನ ಮಾವನ ಚಿಕಿತ್ಸೆಗೆ ಕೂಡಿಟ್ಟಿದ್ದ ಹಣ ಮಾತ್ರವಲ್ಲದೆ, ಮಾಂಗಲ್ಯಸರ ಮತ್ತು ಇತರೆ ಚಿನ್ನಾಭರಣ ಅಡವಿಟ್ಟು ಶಿವಕುಮಾರ್‌ಗೆ ಹಣ ನೀಡಿದ್ದೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ‌.

ಸಿಂಗಾಪುರದಲ್ಲಿ ನಡೆದ ವಿಶ್ವ ಕನ್ನಡ ಹಬ್ಬದಲ್ಲಿ ಭಾಗವಹಿಸಿದ್ದ ಮಹಿಳೆಯು ಹಣ ವಾಪಸ್‌ ನೀಡುವಂತೆ ಕೇಳಿದ್ದು, ಆರೋಪಿ ಅವರಿಗೆ ಬೆದರಿಕೆ ಹಾಕಿದ್ದ. ಜತೆಗೆ ನಿಮ್ಮನ್ನು ಸಿಂಗಾಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಕೂರಿಸಿದ್ದೇನೆ. ಅದಕ್ಕೆ ನೀವೇ 25 ಲಕ್ಷ ರು. ನೀಡಬೇಕು ಅಲ್ಲಿಗೆ ನಿಮ್ಮ ಹಣ ಸರಿ ಹೋಗಿದೆ. ನಿಮಗೆ ನಾನು ಯಾವುದೇ ಹಣ ಕೊಡಬೇಕಾಗಿಲ್ಲ ಎಂದು ಸಬೂಬು ಹೇಳಿದ್ದ. ನೊಂದ ಮಹಿಳೆ ನ್ಯಾಯಕ್ಕಾಗಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದರು.

 ಮಸ್ಕಾಟ್‌ಗೆ ತೆರಳುತ್ತಿದ್ದ ವೇಳೆ ಸೆರೆ

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದರು. 2025 ನೇ ಸಾಲಿನ ವಿಶ್ವ ಕನ್ನಡ ಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಲು ಓಮನ್‌ ದೇಶದ ಮಸ್ಕಾಟ್‌ಗೆ ತೆರಳಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗುರುವಾರ ರಾತ್ರಿ ಬಂದಿದ್ದ ಆರೋಪಿಯನ್ನು ಬಂಧಿಸಲಾಗಿದೆ.

ಆರೋಪಿಯು ಕೃತ್ಯಕ್ಕೆ ಬಳಸಿದ ಮೊಬೈಲ್‌ ಅನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನಾಲ್ಕು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಪಡೆಯಲಾಗಿದ್ದು, ಆರೋಪಿ ಹಣಕಾಸಿನ ವ್ಯವಹಾರದ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಆರೋಪಿಯು ಇದೇ ರೀತಿ ಹಲವರಿಗೆ ವಂಚಿಸಿರುವುದು ಪ್ರಾಥಮಿಕ ತನಿಖೆ ವೇಳೆ ಕಂಡು ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!
ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ