
ಸರ್ಕಾರಿ ಅಧಿಕಾರಿಗಳೇ ಈಕೆಯ ಟಾರ್ಗೆಟ್. ತನ್ನ ಸುಂದರ ರೂಪದಿಂದ ಸರ್ಕಾರಿ ನೌಕರರನ್ನು ಮರುಳು ಮಾಡಿ ಮಂಚಕ್ಕೆ ಕರೆದು ಬಳಿಕ ತನ್ನ ನಿಜ ರೂಪ ತೋರಿಸೋ ಈ ಖತರ್ನಾಕ್ ಲೇಡಿ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾಳೆ. ಇದಾಗಲೇ ಕೆಲವು ಬ್ಯಾಂಕ್ ಮ್ಯಾನೇಜರ್ ಮತ್ತು ಪೊಲೀಸ್ ಅಧಿಕಾರಿಗಳ ಪತ್ನಿಯೂ ಆಗಿರೋ ಈಕೆ, ಇದಾಗಲೇ ಹಲವರನ್ನು ಬುಟ್ಟಿಗೆ ಹಾಕಿಕೊಂಡು ಹನಿಟ್ರ್ಯಾಪ್ ಕೂಡ ಮಾಡಿರುವ ಭಯಾನಕ ಘಟನೆಗಳೂ ಒಂದೊಂದಾಗಿ ಹೊರಕ್ಕೆ ಬಂದಿವೆ. 15ಕ್ಕೂ ಅಧಿಕ ಪುರುಷರು ಈಕೆಯ ಹನಿಟ್ರ್ಯಾಪ್ಗೆ ಒಳಗಾಗಿ ಹೇಳಿಕೊಳ್ಳಲೂ ಆಗದೇ ಕೋಟಿ ಕೋಟಿ ಹಣವನ್ನು ಕಳೆದುಕೊಂಡಿರುವುದು ಇದೀಗ ಬೆಳಕಿಗೆ ಬಂದಿದೆ!
ಉತ್ತರ ಪ್ರದೇಶದ ಕಾನ್ಪುರದ ನಿವಾಸಿಯಾಗಿರೋ ದಿವ್ಯಾಂಶಿಯ ಸ್ಟೋರಿ ಇದು. ಈಕೆಯ ಇತಿಹಾಸವೇ ಭಯಾನಕವಾಗಿದೆ. ಸರ್ಕಾರಿ ಅಧಿಕಾರಿಗಳೊಂದಿಗೆ ಸಂಬಂಧ ಬೆಳೆಸುವ ಮೂಲಕ ಅವರನ್ನು ಬಲೆಗೆ ಬೀಳಿಸುವುದು, ಅವರಲ್ಲಿ ಕೆಲವರನ್ನು ಮದುವೆಯಾಗುವುದು ಬಳಿಕ ಸುಳ್ಳು ಅ*ತ್ಯಾಚಾರ ಅಥವಾ ಕಿರುಕುಳ ಪ್ರಕರಣಗಳನ್ನು ದಾಖಲಿಸಿ ಹಣ ವಸೂಲಿ ಮಾಡುತ್ತಿದ್ದಳೀಕೆ. ಹೇಳಿ ಕೇಳಿ ಸರ್ಕಾರಿ ಅಧಿಕಾರಿಗಳಲ್ವಾ? ಇಂಥ ಮೋಸಕ್ಕೆ ತಾವು ಒಳಗಾಗಿರುವುದನ್ನು ಅವರು ಸುಲಭದಲ್ಲಿ ಬಾಯಿ ಬಿಡುತ್ತಿರಲಿಲ್ಲ, ಅಚಾನಕ್ ಬಾಯಿ ಬಿಟ್ಟರೆ ಅವರು ಮೊದಲೇ ವಿವಾಹಿತರಾಗಿದ್ದರೆ ಮುಗೀತಲ್ಲ ಅವರ ಕಥೆ? ಇಂಥವರನ್ನೇ ಮಂಚಕ್ಕೆ ಕರೆಯುತ್ತಿದ್ದಳು ಈ ಸುಂದರಿ!
ಇದೇ ರೀತಿ ಈಕೆಯ ಮೋಸಕ್ಕೆ ಒಳಗಾದವರಲ್ಲಿ ಒಬ್ಬರು ಆದಿತ್ಯ ಕುಮಾರ್ ಲೊವಾಚ್. ಇವರು ಉತ್ತರ ಪ್ರದೇಶದ ಗ್ವಾಲ್ಟೋಲಿ ಪೊಲೀಸ್ ಠಾಣೆಯಲ್ಲಿ ಸಬ್-ಇನ್ಸ್‌ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದಿವ್ಯಾಂಶಿ ಇವರನ್ನು ಮೋಸದಿಂದ ಮದುವೆಯಾಗಿದ್ದು ಇವರಿಗೆ ಅರಿವೇ ಇರಲಿಲ್ಲ. ಆದರೆ ಇಷ್ಟು ವರ್ಷ ಮಾಡಿಕೊಂಡು ಬಂದಿದ್ದ ತನ್ನ ಮೋಸದ ಗಾಳವನ್ನು ಇವರ ಮೇಲೂ ಬೀಸಿದ್ದಾಳೆ ದಿವ್ಯಾಂಶಿ. ಅದೇ ಅವಳಿಗೆ ಉರುಳಾಗಿ ಪರಿಣಮಿಸಿದೆ. ಫೆಬ್ರವರಿ 17, 2024ರಲ್ಲಿ ಇವರಿಬ್ಬರ ಮದುವೆಯಾಗಿದೆ. ಮದುವೆಯಾದಾಗಿನಿಂದಲೂ ಪದೇ ಪದೇ ಹಣಕ್ಕೆ ಬೇಡಿಕೆ ಇಡುತ್ತಿದ್ದುದು ಆದಿತ್ಯ ಕುಮಾರ್ ಅವರಿಗೆ ನುಂಗಲಾಗದ ತುತ್ತಾಗಿ ಪರಿಣಮಿಸಿತ್ತು. ತಮ್ಮ ಬ್ಯಾಂಕ್ನ ಹಣ ಕೂಡ ಖಾಲಿಯಾಗುತ್ತಿರುವುದು ಅವರ ಗಮನಕ್ಕೆ ಬಂದಿತ್ತು.
ತನ್ನ ಮೇಲೆ ಸಂಶಯ ಬಂದಿದೆ ಎಂದು ತಿಳಿಯುತ್ತಲೇ ದಿವ್ಯಾಂಶಿ ಟಾರ್ಚರ್ ಕೊಡಲು ಶುರು ಮಾಡಿದ್ದಳು. ಕಿರುಕುಳದ ಕೇಸ್ ಹಾಕುವುದಾಗಿ ಹೇಳುತ್ತಿದ್ದಳು. ಈಕೆಯ ಜೊತೆ ದೊಡ್ಡ ತಂಡವೇ ಕೆಲಸ ಮಾಡುತ್ತಿದೆ. ಅವರೆಲ್ಲರೂ ಸೇರಿ ಆದಿತ್ಯ ಕುಮಾರ್ ಅವರಿಗೆ ಪದೇ ಪದೇ ಹಣಕ್ಕೆ ಬೇಡಿಕೆ ಇಡುತ್ತಿದ್ದರಂತೆ. ದಿವ್ಯಾಂಶಿ ಮತ್ತು ಆಕೆಯ ಸಹಚರರ ಒತ್ತಡ ಮತ್ತು ಬೆದರಿಕೆಗಳಿಂದಾಗಿ ಎರಡು ಬಾರಿ ಆ*ತ್ಮಹತ್ಯೆಗೂ ಯತ್ನಿಸಿದ್ದರಂತೆ ಈ ಪೊಲೀಸ್ ಅಧಿಕಾರಿ. ಸಾಲದು ಎನ್ನುವುದಕ್ಕೆ ಈಕೆ, ಪತಿಯ ವಿರುದ್ಧವೇ ಕಿರುಕುಳ, ದಾಂಪತ್ಯ ದ್ರೋಹ ಮತ್ತು ₹14.5 ಲಕ್ಷ ದುರುಪಯೋಗ ಆರೋಪ ಹೊರಿಸಿ ದೂರು ದಾಖಲಿಸಿದ್ದರು. ಪ್ರತಿಯಾಗಿ ಆದಿತ್ಯ ಕುಮಾರ್ ದೂರು ದಾಖಲು ಮಾಡದೇ ವಿಧಿ ಇರಲಿಲ್ಲ. ಕಿರುಕುಳ, ವಂಚನೆ ಮತ್ತು ಸುಲಿಗೆ ಆರೋಪ ಹೊರಿಸಿ ದೂರು ದಾಖಲಿಸಿದರು.
ದೂರು ದಾಖಲಾದ ಬಳಿಕ ತನಿಖೆ ಆರಂಭಿಸಿದಾಗ ದಿವ್ಯಾಂಶಿಯ ಬಣ್ಣ ಬಯಲಾಗಿದೆ. ಇದಾಗಲೇ ಈಕೆ ಬ್ಯಾಂಕ್ ಮ್ಯಾನೇಜರ್‌ಗಳು ಮತ್ತು ಕೆಲವು ಪೊಲೀಸರನ್ನು ಮದುವೆಯಾಗಿದ್ದು, ಡಜನ್‌ಗೂ ಹೆಚ್ಚು ಜನರನ್ನು ಶೋಷಿಸಿದ್ದಾರೆ ಎನ್ನುವುದು ತನಿಖೆಯಿಂದ ತಿಳಿದಿದೆ. ಹನಿಟ್ರ್ಯಾಪ್ ಮಾಡಿ ಸರ್ಕಾರಿ ಅಧಿಕಾರಿಗಳನ್ನು ಮೋಸದ ಜಾಲದಲ್ಲಿ ಬೀಳಿಸಿಕೊಳ್ಳುವುದು ತಿಳಿದಿದೆ. ಕೊನೆಗೆ ಆಕೆಯ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದಾಗ 10 ಕ್ಕೂ ಹೆಚ್ಚು ವಿಭಿನ್ನ ಖಾತೆಗಳಿಗೆ 8 ಕೋಟಿ ರೂಪಾಯಿಗಳೂ ಹೆಚ್ಚು ವಹಿವಾಟುಗಳು ನಡೆದಿರುವುದು ಕಂಡುಬಂದಿದೆ. ಅವುಗಳಲ್ಲಿ ಕೆಲವು ಮೀರತ್ ವ್ಯಾಪ್ತಿಯಲ್ಲಿ ನಿಯೋಜನೆಗೊಂಡಿರುವ ಪೊಲೀಸ್ ಅಧಿಕಾರಿಗಳಿಗೆ ಸಂಬಂಧಿಸಿವೆ.
ಆಕೆ ಈ ಹಿಂದೆ ನೀಡಿರುವ ದೂರುಗಳ ಬೆನ್ನತ್ತಿ ಹೋದಾಗ ಈ ಹಿಂದೆ ಸರ್ಕಾರಿ ನೌಕರರ ವಿರುದ್ಧ ಮೂರು ಅ*ತ್ಯಾಚಾರ ಪ್ರಕರಣಗಳನ್ನು ದಾಖಲಿಸಿದ್ದರು, ಎಲ್ಲವೂ ರಾಜಿಯಲ್ಲಿ ಕೊನೆಗೊಂಡಿತು ಮತ್ತು ನಂತರ ಹಲವಾರು ಇತರ ಎಫ್‌ಐಆರ್‌ಗಳನ್ನು ದಾಖಲಿಸಿರುವುದು ತಿಳಿದಿದೆ. ತನಿಖೆಯು ಕೆಲವು ಸಿಬ್ಬಂದಿ ಆಕೆಗೆ ಸಹಾಯ ಮಾಡಿರುವುದು ಹಾಗೂ ಸಂತ್ರಸ್ತರ ಮೇಲೆ ಒತ್ತಡ ಹೇರಿರುವುದೂ ತಿಳಿದಿದೆ. ಸದ್ಯ ಈ ಪ್ರಕರಣದ ತನಿಖೆ ನಡೆಯುತ್ತಿದೆ. ಒಟ್ಟಿನಲ್ಲಿ ಯಾವುದೋ ಒಬ್ಬಳು ಸುಂದರಿ ಕಂಡಳೆಂದು ಆಕೆಯ ಹಿಂದೆ ಹೋದವರಿಗೆ ಯಾವ ಮಟ್ಟಿನ ಗ್ರಹಚಾರ ಕಾದಿರುತ್ತದೆ ಎನ್ನುವುದಕ್ಕೆ ಇವಳೇ ಸಾಕ್ಷಿಯಾಗಿದ್ದಾಳೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ