
ಕಾನೂನಿನ ದೃಷ್ಟಿಗೆ ಬಂದರೆ ಆರೋಪ ಸಾಬೀತಾಗುವವರೆಗೂ ಎಲ್ಲರೂ ಆರೋಪಿಗಳೇ. ಕಣ್ಣೆದುರೇ ಕೊಲೆ ನಡೆದಿದ್ದರೂ, ಕೋರ್ಟ್ ಹೇಳಿದರಷ್ಟೇ ಅವರು ಅಪರಾಧಿಗಳು. ಅವರು ಕೊಲೆ ಮಾಡಿದ್ದಾರೆ ಎನ್ನುವುದಕ್ಕೆ ಪ್ರಾಸಿಕ್ಯೂಷನ್ ತಕ್ಕ ಸಾಕ್ಷ್ಯಾಧಾರ ಒದಗಿಸಬೇಕು. ಇಲ್ಲದಿದ್ದರೆ ಯಾರೂ ಅಪರಾಧಿಗಳಲ್ಲ. ಅದೆಷ್ಟೋ ಕೇಸ್ಗಳಲ್ಲಿ ಸಾಕ್ಷ್ಯಾಧಾರಗಳು ಸಿಗದೇ ಆರೋಪಿಗಳು ನಿರಪರಾಧಿಯಾಗಿ ಹೊರಬರುವುದು ಇದೆ. ಅಂಥ ಸಂದರ್ಭಗಳಲ್ಲಿ ಕೊಲೆ ನಡೆದದ್ದು ಸತ್ಯ. ಇವರು ಕೊಲೆ ಮಾಡದಿದ್ದರೆ, ಇನ್ನಾರೋ ಮಾಡಿರಲೇಬೇಕಲ್ವಾ? ಆದರೆ ಅದು ಅಲ್ಲಿ ಮುಖ್ಯವಾಗುವುದಿಲ್ಲ. ಈತ ನಿರಪರಾಧಿ ಎಂದು ಬಿಡುಗಡೆಯಾದಾಗ, ಕೊಲೆಯಾದ ಕುಟುಂಬಸ್ಥರ ನೋವು, ಅವರಿಗೆ ಆಗುವ ದುಃಖ ಆ ದೇವರಿಗೇ ಪ್ರೀತಿ ಎನ್ನುವುದು ಉಂಟು. ಎಷ್ಟೋ ಪ್ರಕರಣಗಳಲ್ಲಿ ಹೀಗೆ ಆಗುವುದು ಇದ್ದೇ ಇದೆ.
ಬಾ ನಲ್ಲೆ ಮಧುಚಂದ್ರಕೆ ಸಿನಿಮಾವನ್ನು ನೆನಪಿಸುವ ರೀತಿಯಲ್ಲಿಯೇ ಹನಿಮೂನ್ಗೆ ಕರೆದುಕೊಂಡು ಹೋಗಿ ಲವರ್ ಜೊತೆಗೂಡಿ ಅಮಾಯಕ ಪತಿಯನ್ನು ಕೊಲೆ ಮಾಡಿರುವ ಆರೊಪ ಹೊತ್ತ ಸೋನಮ್ ರಘುವಂಶಿ ನೆನಪಿರಬೇಕಲ್ಲವೆ? ಕಳೆದ ಜೂನ್ನಲ್ಲಷ್ಟೇ ಈ ಘಟನೆ ನಡೆದಿತ್ತು. ಮೇಘಾಲಯ ಹನಿಮೂನ್ ಕೊಲೆ ಪ್ರಕರಣವೆಂದೇ ಇದು ಫೇಮಸ್ ಆಗಿದೆ. ತನ್ನ ಪ್ರಿಯಕರ ಕಳುಹಿಸಿದ ಸುಪಾರಿ ಹಂತಕರ ನೆರವಿನಿಂದ ಪತಿ ರಾಜಾ ರಘುವಂಶಿಯನ್ನೇ ಕೊಲೆ ಮಾಡಿರುವ ಆರೋಪ ಸೋನಮ್ ರಘುವಂಶಿ ಜೊತೆಗಿದೆ. ಆದರೆ ಆಕೆ ಇನ್ನೂ ಕಾನೂನಿನ ದೃಷ್ಟಿಯಲ್ಲಿ ಆರೋಪಿಯಷ್ಟೇ. ಅವಳೇ ಕೊಲೆ ಮಾಡಿರುವ ಬಗ್ಗೆ ಸಾಕಷ್ಟು ಸಾಕ್ಷ್ಯಾಧಾರಗಳು ಇದ್ದರೂ, ಅದನ್ನುಕೋರ್ಟ್ ಮುಂದೆ ಸಾಬೀತುಪಡಿಸಿ ಕೋರ್ಟ್ ಆದೇಶ ಹೊರಡಿಸುವವರೆಗೂ ಅವಳು ಆರೋಪಿಯಷ್ಟೇ. ಸದ್ಯ ಸೋನಮ್ ರಘುವಂಶಿ ಜಾಮೀನಿನ ಮೇಲೆ ಹೊರಗಡೆ ಇದ್ದಾಳೆ. ನನಗೆ ಜಾಮೀನು ನೀಡುವಾಗ ಕೋರ್ಟ್ ಹೇಳಿದ್ದನ್ನು ಪಾಲಿಸುತ್ತೇನೆ. ಊರು ಬಿಟ್ಟು ಹೋಗುವುದಿಲ್ಲ. ನಾನು ಎಲ್ಲಿ ಇದ್ದೇನೆ ಎಂದು ಯಾರಿಗೂ ಹೇಳುವುದಿಲ್ಲ... ಎಂಬಿತ್ಯಾದಿಯಾಗಿ ಪಾಪದವಳಂತೆ ಪೋಸ್ ಕೊಟ್ಟು ಮಾಧ್ಯಮಗಳ ಎದುರು ಸೋನಮ್ ಮಾತನಾಡಿದ್ದಾಳೆ. ಒಂದಿಷ್ಟು ವರ್ಷ ಪ್ರಕರಣ ನಡೆದು ಆಕೆ ಅಪರಾಧಿ ಎಂದು ಸಾಬೀತಾದರೆ, ಅದನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ಸಫಲವಾದರೆ, ಅವಳಿಗೆ ಶಿಕ್ಷೆ ಆಗಬಹುದು. ಆದರೆ ಅಲ್ಲಿಯವರೆಗೆ ಒಂದಿಷ್ಟು ಷರತ್ತು ಹೊರತುಪಡಿಸಿ ಆರಾಮಾಗಿ ಓಡಾಡಿಕೊಂಡು ಇರುವ ಸ್ವಾತಂತ್ರ್ಯ ಅವಳಿಗೆ ಕಾನೂನು ನೀಡಿದೆ.
ಇಂಥವರಿಗೆ ಜಾಮೀನು ಸಿಕ್ಕು ಆರಾಮಾಗಿ ಕಣ್ಮುಂದೆ ಓಡಾಡಿಕೊಂಡು ಇರುವಾಗ, ಸಂತ್ರಸ್ತ ಕುಟುಂಬಗಳ ಕಣ್ಣೀರು ಕಾನೂನಿನ ದೃಷ್ಟಿಯಲ್ಲಿ ಮುಖ್ಯವಲ್ಲ. ಏಕೆಂದರೆ ಅದು ಕಾನೂನು ಅಷ್ಟೇ. ಇದೀಗ ಉದ್ಯಮಿ ಕೇತನ್ ಅಗರ್ವಾಲ್ (Ketan Agarwal Murder case) ಅವರನ್ನು ಕೊಲೆ ಮಾಡಿರುವ ಆರೋಪ ಹೊತ್ತ ಭಾವಿ ಪತ್ನಿ ಸಿಯಾ ಎಲ್ಲರ ದೃಷ್ಟಿಯಲ್ಲಿ ಅಪರಾಧಿಯಾಗಿದ್ದರೂ, ಕಾನೂನಿನ ದೃಷ್ಟಿಯಲ್ಲಿ ಆಕೆ ಆರೋಪಿಯಷ್ಟೇ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಯಾ ವಿರುದ್ಧ ದೇಶಾದ್ಯಂತ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಅಮಾಯಕ ಕೇತನ್ ಅವರನ್ನು ಪ್ರಿಯಕರ ಚೇತನ್ ಜೊತೆಗೂಡಿ ಸಾಯಿಸಿದ ಕೊಲೆಪಾತಕಿ ಎಂದೇ ಈಕೆಯನ್ನು ಬಣ್ಣಿಸಲಾಗುತ್ತಿವೆ. ಮದುವೆಯೆಂದರೆ ಹುಡುಗರು ಬೆಚ್ಚಿಬೀಳಿಸೋ ಇನ್ನೊಂದು ಘಟನೆಗೆ ಇದು ಸಾಕ್ಷಿಯಾಗಿದೆ.
ಈ ಕೇಸ್ನಲ್ಲಿಯೂ ಸೋನಮ್ ಕೇಸ್ನಂತೆಯೇ ಸುಲಭದಲ್ಲಿ ಸಿಯಾಗೆ ಜಾಮೀನು ಸಿಗುವ ಎಲ್ಲಾ ಸಾಧ್ಯತೆಗಳೂ ಇವೆ. ಈ ಹೈ ಪ್ರೊಫೈಲ್ ಕೇಸ್ಗಳು ಮೀಡಿಯಾ ಅಟೆನ್ಷನ್ ಪಡೆದಿರುವ ಹಿನ್ನೆಲೆಯಲ್ಲಿ, ಮುನ್ನೆಲೆಗೆ ಬರುತ್ತವೆಯಷ್ಟೇ. ಆದರೆ ನಮ್ಮ ಕಾನೂನಿನ ವ್ಯವಸ್ಥೆ ಇರೋದೇ ಹೀಗೆ. ಆರೋಪಿಯಾಗಿ ಒಂದಿಷ್ಟು ತಿಂಗಳು ಜೈಲಿನಲ್ಲಿ (ಕೆಲವೊಮ್ಮೆ ಅಲ್ಲಿಯೂ ರಾಜಾತಿಥ್ಯ ಅವರಿಗೆ ) ಇದ್ದು, ಆಮೇಲೆ ಜಾಮೀನು ಪಡೆದು ಬರುತ್ತಾರೆ. ಸಿಯಾ ಕೇಸ್ನಲ್ಲಿಯೂ ಹೀಗೆಯೇ ಆಗುವ ಸಾಧ್ಯತೆ ಇದೆ ಎಂದು ಹಲವರು ಸೋನಮ್ ಪ್ರಕರಣವನ್ನು ಉದಾಹರಿಸುತ್ತಿದ್ದಾರೆ. ಇವಳಿಗೂ ಜಾಮೀನು ಸಿಕ್ಕು ಅರಾಮಾಗಿ ಓಡಾಡಿಕೊಂಡು ಇರುತ್ತಾಳೆ. ಒಂದಷ್ಟು ವರ್ಷ ಜನರೂ ಎಲ್ಲವನ್ನೂ ಮರೆತು ಬಿಡುತ್ತಾರೆ. ಆದರೆ ತಮ್ಮ ಮಗನನ್ನು ಕಳೆದುಕೊಂಡ ಆ ಕುಟುಂಬದವರ ಆಕ್ರಂದನ ಮಾತ್ರ ಅರಣ್ಯರೋದನವೇ ಆಗಿ ಬಿಡುತ್ತದೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ