Crime News: ವಿಷದ ಇಂಜೆಕ್ಷನ್‌ ನೀಡಿ ವ್ಯಕ್ತಿಯ ಕೊಲೆ: ಆಗಂತುಕರಿಗೆ ಡ್ರಾಪ್‌ ನೀಡುವ ಮುನ್ನ ಎಚ್ಚರ

By Sharath Sharma KalagaruFirst Published Sep 21, 2022, 4:24 PM IST
Highlights

Crime News today: ಡ್ರಾಪ್‌ ಕೇಳುವ ನೆಪದಲ್ಲಿ ವಿಷದ ಇಂಜೆಕ್ಷನ್‌ ಚುಚ್ಚಿ ಬೈಕ್‌ ಸವಾರನನ್ನು ಕೊಲೆ ಮಾಡಿದ ಘಟನೆ ಪಕ್ಕದ ತೆಲಂಗಾಣದಲ್ಲಿ ನಡೆದಿತ್ತು. ಈ ಘಟನೆಗೆ ಸಂಬಂಧಿಸದಂತೆ ತನಿಖೆ ನಡೆಸಿದ ಪೊಲೀಸರು ಮೃತನ ಹೆಂಡತಿಯನ್ನು ಬಂಧಿಸಿದ್ದಾರೆ. ಅನೈತಿಕ ಸಂಬಂಧವೇ ಕೊಲೆಗೆ ಕಾರಣ ಎಂದು ತಿಳಿದುಬಂದಿದೆ. 

ತೆಲಂಗಾಣ: ಇತ್ತೀಚೆಗಷ್ಟೇ 55 ವರ್ಷದ ವ್ಯಕ್ತಿಯೊಬ್ಬನನ್ನು ಡ್ರಾಪ್‌ ಕೇಳುವ ನೆಪದಲ್ಲಿ ವಿಷಪೂರಿತ ಇಂಜೆಕ್ಷನ್‌ ನೀಡಿ ಕೊಲೆ ಮಾಡಲಾಗಿತ್ತು. ಇಡೀ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಈ ಪ್ರಕರಣ ಭಾರೀ ಸದ್ದು ಮಾಡಿತ್ತು. ಆಗಂತುಕರಿಗೆ ಡ್ರಾಪ್‌ ಕೊಡಲು ಜನ ಭಯಪಟ್ಟುಕೊಳ್ಳುತ್ತಿದ್ದರು. ಈ ಪ್ರಕರಣವನ್ನು ವಿಶೇಷ ತನಿಖಾ ತಂಡ ಬೇಧಿಸಿದೆ. ಘಟನೆ ನಡೆದ ನಂತರ ಕಮ್ಮಮ್‌ ಪೊಲೀಸರು ಪ್ರಕರಣದ ವಿಚಾರಣೆ ಆರಂಭಿಸಿದ್ದರು. ಡ್ರಾಪ್‌ ಕೇಳುವ ನೆಪದಲ್ಲಿ ಕೊಲೆ ಮಾಡಿರುವುದು ಹೊಸ ಮಾಡಸ್‌ ಆಪರೆಂಡಿಯಾದ ಕಾರಣ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದರು. ಜತೆಗೆ ವಿಷಪೂರಿತ ಇಂಜೆಕ್ಷನ್‌ ಹಂತಕನಿಗೆ ಹೇಗೆ ಲಭ್ಯವಾಯಿತು ಎಂಬ ಪ್ರಶ್ನೆಯೂ ಕಾಡತೊಡಗಿತ್ತು. ಇದೀಗ ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಕ್ಕಿದ್ದು, ಕೊಲೆಯಾದ ವ್ಯಕ್ತಿಯ ಹೆಂಡತಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಸಾವನ್ನಪ್ಪಿದ ವ್ಯಕ್ತಿಯ ಹೆಂಡತಿ, ಆರ್‌ಎಂಪಿ ವೈದ್ಯ, ಒಬ್ಬ ಟ್ರ್ಯಾಕ್ಟರ್‌ ಚಾಲಕ, ಆಟೋ ಚಾಲಕ ಸೇರಿ ಒಟ್ಟೂ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. 

ಹೆಂಡತಿಯ ಅನೈತಿಕ ಸಂಬಂಧವೇ ಕೊಲೆಗೆ ಕಾರಣ:
ಮೃತಪಟ್ಟ ವ್ಯಕ್ತಿಯ ಹೆಂಡತಿ ಅನೈತಿಕ ಸಂಬಂಧ ಹೊಂದಿದ್ದಳು. ಪ್ರಿಯಕರನೊಟ್ಟಿಗಿರಲು ಗಂಡ ಬಿಡುವುದಿಲ್ಲ ಎಂಬ ಕಾರಣಕ್ಕೆ ದಾರಿಯಿಂದ ಆತನನ್ನು ಸರಿಸಲು ಹೆಂಡತಿ ಮಾಸ್ಟರ್‌ ಪ್ಲಾನ್‌ ಮಾಡಿದ್ದಳು. ಮೃತಪಟ್ಟ ಜಮಾಲ್‌ ಸಾಹೇಬ್‌ ಹೆಂಡತಿ ಇಮಾಮ್‌ ಬಿ ಮೋಹನ್‌ ರಾವ್‌ ಎಂಬಾತನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಮೋಹನ್‌ ರಾವ್‌ ಆಟೋ ಚಾಲಕನಾಗಿದ್ದ. ಗಂಡನನ್ನು ಕೊಂದರೆ ಮಾತ್ರ ಪ್ರಿಯಕರನ ಜೊತೆ ಜೀವನ ಸಾಧ್ಯ ಎಂದು ಗಂಡನ ಕೊಲೆಗೆ ಇಮಾಮ್‌ ಬಿ ಸಂಚು ರೂಪಿಸಿದಳು. 

ಆರ್‌ಎಂಪಿ ವೈದ್ಯ ವೆಂಕಟ್‌ ಎಂಬಾತನಿಗೆ ಹಣ ನೀಡಿ ವಿಷಪೂರಿತ ಇಂಜೆಕ್ಷನ್‌ ಖರೀದಿಸಿದಳು. ಎರಡು ತಿಂಗಳ ಹಿಂದೆಯೇ ಈ ಇಂಜೆಕ್ಷನ್‌ ಖರೀದಿಸಿದ್ದಳು. ಆದರೆ ಸೂಕ್ತ ಸಮಯ ನೋಡಿ ಆತನನ್ನು ಸಾಯಿಸಬೇಕು ಎಂದು ಆಕೆ ಕಾಯುತ್ತಿದ್ದಳು. ಆದರೆ ಕೊನೆಗೆ ಮನೆಯಲ್ಲಿ ಕೊಲೆ ಮಾಡಿದರೆ ಆರೋಪ ತನ್ನ ತಲೆಗೇ ಸುತ್ತಿಕೊಳ್ಳುತ್ತದೆ ಎಂಬ ಭಯದಿಂದ ಪ್ರಿಯಕರ ಮೋಹನ್‌ ರಾವ್‌ಗೆ ಇಂಜೆಕ್ಷನ್‌ ನೀಡಿ, ಗಂಡನ ಮೇಲೆ ಪ್ರಯೋಗಿಸುವಂತೆ ಹೇಳಿದಳು. ಅದರಂತೆ ಸೆಪ್ಟೆಂಬರ್‌ 19ರಂದು ಪಕ್ಕದ ರಾಜ್ಯ ಆಂಧ್ರ ಪ್ರದೇಶದ ಗುಂಡ್ರಾಲ್‌ ಎಂಬ ಹಳ್ಳಿಗೆ ಸಂಬಂಧಿಯೊಬ್ಬರ ಮನೆಗೆ ಬೈಕಿನಲ್ಲಿ ಜಮಾಲ್‌ ಹೋಗುತ್ತಿದ್ದ. ಮಂಕಿ ಕ್ಯಾಪ್‌ ಹಾಕಿಕೊಂಡಿದ್ದ ವ್ಯಕ್ತಿಯೊಬ್ಬ ಡ್ರಾಪ್‌ ನೀಡುವಂತೆ ಕೈ ಅಡ್ಡಗಟ್ಟಿದ್ದಾನೆ. ಒಬ್ಬನೇ ಹೋಗುತ್ತಿದ್ದರಿಂದ ಜಮಾಲ್‌ ಬೈಕ್‌ ಹತ್ತಿಸಿಕೊಂಡಿದ್ದಾನೆ. ವಲ್ಲಭಿ ಎಂಬ ಹಳ್ಳು ದಾಟಿ ಸ್ವಲ್ಪ ಮುಂದೆ ಹೋದ ನಂತರ ಮೋಹನ್‌ ರಾವ್‌ ಜಮಾಲ್‌ ತೊಡೆಗೆ ಇಂಜೆಕ್ಷನ್‌ ನೀಡಿದ್ದಾನೆ. 

ಇದನ್ನೂ ಓದಿ: ನಾಲ್ಕು ಮದುವೆ ಆದರೂ ಮತ್ತೆ ಅನೈತಿಕ ಸಂಬಂಧ: ಹೆಂಡತಿ ಕೊಲೆ ಮಾಡಿದ ನಾಲ್ಕನೇ ಗಂಡ!

ಇಂಜೆಕ್ಷನ್‌ ನೀಡಿದ ನಂತರ ಏನೋ ಉರಿಯುತ್ತಿದೆ ಎಂದು ಜಮಾಲ್‌ ಬೈಕ್‌ ನಿಲ್ಲಿಸಿದ್ದಾನೆ. ಇಂಜೆಕ್ಷನ್‌ ನೀಡಿರುವುದು ತಿಳಿದಿದೆ. ಬೈಕ್‌ ನಿಲ್ಲಿಸಿದ ತಕ್ಷಣ ಮೋಹನ್‌ ರಾವ್‌ ಎದ್ದೂ ಬಿದ್ದು ಓಡಿಹೋಗಿದ್ದಾನೆ. ಅಲ್ಲೇ ಹತ್ತಿರದಲ್ಲಿದ್ದ ಹಳ್ಳಿಗರ ಬಳಿ ಯಾರೋ ಡ್ರಾಪ್‌ ಕೇಳುವ ನೆಪದಲ್ಲಿ ಏನೋ ಇಂಜೆಕ್ಷನ್‌ ನೀಡಿದ್ದಾನೆ ಎಂದು ಸಹಾಯ ಕೋರಿದ್ದಾನೆ. ಹಳ್ಳಿಗರು ಹತ್ತಿರದಲ್ಲಿದ್ದ ಆಸ್ಪತ್ರೆಗೆ ಜಮಾಲ್‌ನನ್ನು ಸೇರಿಸಿದ್ಧಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಜಮಾಲ್‌ ಅಸುನೀಗಿದ್ದಾನೆ. ಹಳ್ಳಿಗರು ಸಹ ಮಂಕಿ ಕ್ಯಾಪ್‌ ಧರಿಸಿದ್ದ ಮೋಹನ್‌ ರಾವ್‌ನನ್ನು ನೋಡಿರಲಿಲ್ಲ. ಹೆಂಡತಿಯ ಪ್ಲಾನ್‌ ಯಶಸ್ವಿಯಾಗಿತ್ತು. 

ಆದರೆ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಒಟ್ಟೂ ನಾಲ್ಕು ವಿಶೇಷ ತಂಡಗಳನ್ನು ರಚಿಸಿ ತನಿಖೆ ಆರಂಭಿಸಿದ್ದರು. ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯದಲ್ಲಿ ಈ ಪ್ರಕರಣ ಸಂಚಲನವನ್ನೇ ಮೂಡಿಸಿತ್ತು. ಸೈಕೋ ಕಿಲ್ಲರ್‌ಗಳು ಹೊಸ ಮಾಡಸ್‌ ಆಪರೆಂಡಿ ಆರಂಭಿಸಿರುವ ಶಂಕೆ ವ್ಯಕ್ತವಾಗಿತ್ತು. ಪೊಲೀಸರು ಜಮಾಲ್‌ನ ಗುರುತು ಪತ್ತೆ ಹಚ್ಚಿದ ನಂತರ ಅವನ ಹೆಂಡತಿಯನ್ನು ವಿಚಾರಣೆಗೊಳಪಡಿಸಿದ್ದಾರೆ. ಗಂಡ ಮನೆಗೆ ಬರದಿದ್ದರೂ ದೂರು ನೀಡದ ಬಗ್ಗೆ ಪ್ರಶ್ನಿಸಿದ್ದಾರೆ. ಮೊದಲು ಸುಳ್ಳು ಹೇಳಿದರೂ ಪೊಲೀಸರ ತರಾವರಿ ಪ್ರಶ್ನೆಗಳಿಗೆ ಉತ್ತರಿಸಲಾಗದೇ ಸಿಕ್ಕಿಹಾಕಿಕೊಂಡಿದ್ದಾಳೆ. 

ಇದನ್ನೂ ಓದಿ: ಪತಿ ತೊಡೆ ಮೇಲೆ ಕೂತು ನಾದಿನಿ ಮಾಡುತ್ತಿದ್ದ ಕೆಲಸ ನೋಡಿದ ಪತ್ನಿ ನಿದ್ರೆ ಹಾಳಾಗಿದೆ!

ನಂತರ ಇಡೀ ವೃತ್ತಾಂತವನ್ನು ಪೊಲೀಸರ ಮುಂದೆ ಬಿಚ್ಚಿಟ್ಟಿದ್ದಾಳೆ. ಪ್ರಿಯಕರನಿಗೋಸ್ಕರ ಗಂಡನನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಆರ್‌ಎಮ್‌ಪಿ ಡಾಕ್ಟರ್‌ ವೆಂಕಟ್‌ ಇಂಜೆಕ್ಷನ್‌ ನೀಡಿದರು. ನನಗೆ ಕೊಲೆ ಮಾಡಲು ಭಯವಾಗಿ ಬಾಯ್‌ಫ್ರೆಂಡ್‌ ಮೋಹನ್‌ ರಾವ್‌ಗೆ ಮಾಡುವಂತೆ ಹೇಳಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ವೈದ್ಯ ವೆಂಕಟ್‌, ಪ್ರಿಯಕರ ಮೋಹನ್‌ ರಾವ್‌, ಟ್ರಾಕ್ಟರ್‌ ಚಾಲಕ ವೆಂಕಟೇಶ್‌ರನ್ನು ಪೊಲೀಸರು ಬಂಧಿಸಿದ್ದಾರೆ. 

click me!