ವಿಧವಾ ವಿವಾಹ ಹೆಸರಲ್ಲಿ ಹಣ ಗುಳುಂ; ಪೋಟೊ ನೋಡಿ ಅಧಿಕಾರಿಗಳು ಗಾಬರಿ

By Kannadaprabha NewsFirst Published Sep 26, 2022, 10:19 AM IST
Highlights
  • ವಿಧವಾ ವಿವಾಹ ಹೆಸರಲ್ಲಿ ಹಣ ಗುಳುಂ!
  • ಪರಸ್ತ್ರೀಯರ ಜತೆ ಪೋಟೋ ತೆಗೆಸಿ ವಂಚನೆ
  • ಸಬ್‌ ರಿಜಿಸ್ಟ್ರಾರ್‌ ಕಚೇರಿ, ಸಮಾಜ ಕಲ್ಯಾಣ ಇಲಾಖೆಯಲ್ಲಿ ಅಕ್ರಮ

ಕಾಗತಿ ನಾಗರಾಜಪ್ಪ.

ಚಿಕ್ಕಬಳ್ಳಾಪುರ (ಸೆ.26) : ಸಾಲ, ಸೌಲಭ್ಯಕ್ಕಾಗಿ ಸಮಾಜ ಕಲ್ಯಾಣ ಇಲಾಖೆಗೆ ಅರ್ಜಿ ಸಲ್ಲಿಸುವ ವ್ಯಕ್ತಿಗಳ ಜೊತೆ ವಿಧವೆಯರನ್ನು ನಿಲ್ಲಿಸಿ ಪೋಟೋ ತೆಗೆದು ಆ ಮೂಲಕ ಸಮಾಜ ಕಲ್ಯಾಣ ಇಲಾಖೆಯಲ್ಲಿ ವಿಧವಾ ನೋಂದಣಿ ವಿವಾಹಕ್ಕೆ ನೀಡುವ ಲಕ್ಷಾಂತರ ರು, ಪ್ರೋತ್ಸಾಹ ಹಣವನ್ನು ಅಕ್ರಮವಾಗಿ ಗುಳಂ ಮಾಡುತ್ತಿರುವ ಜಾಲವೊಂದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಈ ರೀತಿಯ ಅಕ್ರಮಗಳಿಗೆ ಉಪ ನೋಂದಣಿ ಅಧಿಕಾರಿಗಳ ಕಚೇರಿಗಳೇ ಅಡ್ಡೆ ಆಗಿದ್ದು ಈ ರೀತಿ ನಕಲಿ ವಿಧವಾ ನೋಂದಣಿ ವಿವಾಹ ಪತ್ರಗಳನ್ನು ಸಬ್‌ ರಿಜಿಸ್ಟ್ರಾರ್‌ ಕಚೇರಿಗಳ ಮೂಲಕ ಪಡೆದು ಸಮಾಜ ಕಲ್ಯಾಣ ಇಲಾಖೆಗೆ ಸಲ್ಲಿಸಿ ಲಕ್ಷಾಂತರ ರು.ಗಳ ಪ್ರೋತ್ಸಾಹ ಧನವನ್ನು ನುಂಗಿ ನೀರು ಕುಡಿದಿರುವ ಸಾಕಷ್ಟುಪ್ರಕರಣಗಳು ನಡೆದಿರುವ ಶಂಕೆ ವ್ಯಕ್ತವಾಗಿದೆ.

ಟಿಕ್‌ಟಾಕ್‌ನಲ್ಲಿ ಅರಳಿದ ಪ್ರೇಮ: ಪ್ರೀತಿಸಿದಾಕೆಯ ಜೊತೆ ಪತಿಗೆ ಮದುವೆ ಮಾಡಿಸಿದ ಪತ್ನಿ

ಪರಿಶಿಷ್ಟಜಾತಿ ಹಾಗೂ ಪರಿಶಿಷ್ಟಪಗಂಡದ ಯಾವುದೇ ಮಹಿಳೆ ಮದುವೆಯಾಗಿ ಗಂಡ ಸತ್ತು ವಿಧವೆ ಆಗಿದ್ದರೆ ಆಕೆಯನ್ನು ಯಾವುದೇ ವ್ಯಕ್ತಿ ಮರು ವಿವಾಹವಾದರೆ ಸಮಾಜ ಕಲ್ಯಾಣ ಇಲಾಖೆಯಿಂದ 2.50 ಲಕ್ಷ ರು, ಪ್ರೋತ್ಸಾಹಧನ ನೀಡಲಾಗುತ್ತದೆ. ಆದರೆ ಇದನ್ನೆ ಬಂಡವಾಳ ಮಾಡಿಕೊಂಡ ಕೆಲ ಮಧ್ಯವರ್ತಿಗಳು ಸಮಾಜ ಕಲ್ಯಾಣ ಇಲಾಖೆಗೆ ಸಾಲ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸುವ ಅಮಾಯಕ ಯುವಕರನ್ನು ಅವರಿಗೆ ಗೊತ್ತಿಲ್ಲದಂತೆ ವಿಧವೆಯೊಂದಿಗೆ ಪೊಟೋ ತೆಗೆಸಿ ಅವರ ವಿವಾಹ ನೋಂದಣಿಯನ್ನು ಸಬ್‌ ರಿಜಿಸ್ಟ್ರಾರ್‌ ಕಚೇರಿ ಮೂಲಕ ಮಾಡಿಸಿ ವಿವಾಹ ನೋಂದಣಿ ಪತ್ರಗಳನ್ನು ಸಮಾಜ ಕಲ್ಯಾಣ ಇಲಾಖೆಗೆ ಸಲ್ಲಿಸಿ ಮಧ್ಯವರ್ತಿಗಳು ಪ್ರೋತ್ಸಾಹ ಧನ ಪಡೆಯುತ್ತಿರುವುದು ಕಂಡು ಬಂದಿದೆ. ಈ ರೀತಿಯ ವಂಚನೆ ಜಾಲಕ್ಕೆ ಸಿಲುಕಿದ ವ್ಯಕ್ತಿ ಇದೀಗ ಚಿಂತಾಮಣಿ ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾನೆ.

ಪೋಟೋ ನೋಡಿ ಗಾಬರಿ:

ಜಿಲ್ಲೆಯ ಚಿಂತಾಮಣಿ ತಾಲೂಕಿನ ಕಾಗತಿ ಗ್ರಾಮದ ನರಸಿಂಹಮೂರ್ತಿ ಬಿನ್‌ ಮುನಿಯಪ್ಪ (30) ಎಂಬಾತನಿಗೆ ಹಸು ಸಾಲ ಮಾಡಿಕೊಡುವುದಾಗಿ ನಂಬಿಸಿ ಆತನಿಗೆ ಪರಿಚಯ ಇದ್ದ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಉನಿಕಿಲಿ ಗ್ರಾಮದ ನಾರಾಯಣಸ್ವಾಮಿ ಮತ್ತು ಎಂ ರವಿಕುಮಾರ್‌ ಎಂಬುವರು ಆತನಿಂದ ಆಧಾರ್‌ ಕಾರ್ಡ್‌, ಎಸ್ಸೆಸ್ಸೆಲ್ಸಿ ಅಂಕ ಪಟ್ಟಿ, ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ. ಬಳಿಕ ಚಿಂತಾಮಣಿ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ಅಪರಿಚಿತ ಮಹಿಳೆ ಜೊತೆ ಪೋಟೋ ತೆಗೆಸಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿದ ನರಸಿಂಹಮೂರ್ತಿಗೆ ಸಾಕ್ಷಿಗಾಗಿ ನಾವು ಆಕೆಯ ಪೋಟೋ ತೆಗೆಸಿದ್ದೇವೆಂದು ಹೇಳಿ ಏಮಾರಿಸಿದ್ದಾರೆ.

ಹಲವು ದಿನಗಳ ನಂತರ ಸಮಾಜ ಕಲ್ಯಾಣ ಇಲಾಖೆ ಕಚೇರಿಗೆ ತೆರಳಿ ನರಸಿಂಹಮೂರ್ತಿ ಹಸು ಸಾಲ ಏನಾಯಿತು ಎಂಬ ಬಗ್ಗೆ ವಿಚಾರಿಸಿದಾಗ, ತಾನು ಅಪರಿಚಿತ ಮಹಿಳೆ ಜೊತೆ ನರಸಿಂಹಮೂರ್ತಿಗೆ ವಿಧವಾ ನೋಂದಣಿ ವಿವಾಹವಾಗಿರುವ ಬಗ್ಗೆ ಸಬ್‌ ರಿಜಿಸ್ಟ್ರಾರ್‌ ಕಚೇರಿಯಿಂದ ಕೊಟ್ಟಿರುವ ನಕಲಿ ದಾಖಲೆ ಕಣ್ಣಿಗೆ ಬಿದ್ದಿದೆ. ಪ್ರಮಾಣ ಪತ್ರಕ್ಕೆ ಸಾಕ್ಷಿದಾರರಾಗಿ ನಾರಾಯಣಸ್ವಾಮಿ ರವಿಕುಮಾರ್‌ ನಾಗೇಶ ಮತ್ತು ದ್ಯಾವಮ್ಮ ಎಂಬುವರ ಸಹಿ ಮಾಡಿರುವುದು ಕಂಡು ಬಂದಿದೆ.

ನಾಲ್ಕು ಮದುವೆ ಆದರೂ ಮತ್ತೆ ಅನೈತಿಕ ಸಂಬಂಧ: ಹೆಂಡತಿ ಕೊಲೆ ಮಾಡಿದ ನಾಲ್ಕನೇ ಗಂಡ!

ಪೊಲೀಸರಿಗೆ ದೂರು:

ತನ್ನ ಅರಿವಿಗೆ ಬಾರದಂತೆ ವಿಧವಾ ನೋಂದಣಿ ವಿವಾಹ ಪ್ರಮಾಣ ಪತ್ರದಲ್ಲಿ ತನ್ನ ಹೆಸರನ್ನು ಸೇರಿಸಿ ಪ್ರೋತ್ಸಾಹ ಧನವನ್ನು ದುರ್ಬಳಕೆ ಮಾಡಿಕೊಳ್ಳಲು ದಾಖಲೆಗಳನ್ನು ಪಡೆದು ಮೋಸ ಮಾಡಿರುವ ರವಿ ಕುಮಾರ್‌ ನಾರಾಯಣಸ್ವಾಮಿ ಹಾಗೂ ಈ ಕೃತ್ಯಕ್ಕೆ ಸಾಕ್ಷಿದಾರರಾಗಿ ದ್ಯಾವಮ್ಮ ಮತ್ತು ನಾಗೇಶ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ನರಸಿಂಹಮೂರ್ತಿ ಚಿಂತಾಮಣಿ ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

click me!