Weekend Trip: ಸಮುದ್ರದಲ್ಲಿ ಮುಳುಗಿ ನಾಲ್ವರು ವಿದ್ಯಾರ್ಥಿಗಳು ಸಾವು

By Suvarna News  |  First Published Jun 25, 2022, 8:57 PM IST

* ಸಮುದ್ರದಲ್ಲಿ ಮುಳುಗಿ ನಾಲ್ವರು ಬೆಂಗಳೂರಿನ ವಿದ್ಯಾರ್ಥಿಗಳು ಸಾವು
* 2 ಮೃತ ದೇಹಕ್ಕಾಗಿ ಶೋಧ ಕಾರ್ಯ
* ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬಾಡದ ಕಡಲತೀರದಲ್ಲಿ ಘಟನೆ


ಕುಮಟಾ, (ಜೂನ್.25): ಮಳೆಗಾಲ‌ ಪ್ರಾರಂಭವಾಗುತ್ತಿದ್ದಂತೇ ಉತ್ತರಕನ್ನಡ ಜಿಲ್ಲೆಯಲ್ಲಿ ಸಮುದ್ರದ ಅಬ್ಬರ ಹೆಚ್ಚಾಗಿದೆ. ಜಿಲ್ಲಾಡಳಿತ ಕೂಡಾ ಈ ಬಗ್ಗೆ ಜನರಿಗೆ ಎಚ್ಚರಿಕೆ ನೀಡಿದ್ದು, ಯಾರೂ ಸಮುದ್ರ ಬದಿಗೆ ತೆರಳದಂತೆ ಆದೇಶ ಹೊರಡಿಸಿ ಅಲ್ಲಲ್ಲಿ ಕೆಂಪು ಬಾವುಟ ಕೂಡಾ ನೆಟ್ಟಿದೆ. ಇಷ್ಟಾದರೂ ಪ್ರವಾಸಿಗರ ನಿರ್ಲಕ್ಷ್ಯ ಮಾತ್ರ ಮುಂದುವರಿದಿದ್ದು, ಇದು ಜನರ ಸಾವಿವೂ ಕಾರಣವಾಗುತ್ತಿದೆ. 

ಇಂದು(ಶನಿವಾರ) ಕೂಡಾ ಪ್ರವಾಸಕ್ಕೆ ಬಂದು ಸಮುದ್ರಕ್ಕಿಳಿದ ಸಿ.ಎ. ಇಂಟರ್ನ್‌ಶಿಪ್‌ನ ನಾಲ್ಕು ಜನ  ವಿದ್ಯಾರ್ಥಿಗಳು  ನೀರುಪಾಲಾಗಿ ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬಾಡದ ಕಡಲತೀರದಲ್ಲಿ ನಡೆದಿದೆ. ಬೆಂಗಳೂರಿನಿಂದ ಬಂದ 85 ಜನ ವಿದ್ಯಾರ್ಥಿಗಳ ತಂಡ ಕುಮಟಾದ ಸಿಲ್ವರ್ ಸ್ಯಾಂಡ್ ರೆಸಾರ್ಟ್‌ ನಲ್ಲಿ ಬಂದಿಳಿದಿದ್ದರು. 

Latest Videos

undefined

ಸಾವನ್ನಪ್ಪಿದ ವರ, ವಧುವಿನ ಸ್ಥಿತಿ ಗಂಭೀರ, ತಿಂಗಳು ತುಂಬುವ ಮೊದಲೇ ಸಂಸಾರ ಛಿದ್ರ

ಸಮುದ್ರಕ್ಕಿಳಿದು ಆಟವಾಡುವಾಗ ಭಾರೀ ಅಲೆಗೆ ಬೆಂಗಳೂರು ಮೂಲದ ಸಿ.ಎ. ಇಂಟರ್ನ್‌ಶಿಪ್ ವಿದ್ಯಾರ್ಥಿಗಳಾದ ಅರ್ಜುನ್, ಚೈತ್ರಶ್ರೀ, ಕಿರಣ್ ಹಾಗೂ ತೇಜಸ್ ಕೊಚ್ಚಿಕೊಂಡು ಹೋಗಿದ್ದಾರೆ. ಕೂಡಲೇ ಕುಮಟಾ ಪೊಲೀಸ್, ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಸ್ಥಳೀಯರು ಕಾರ್ಯಾಚರಣೆ ನಡೆಸಿದ್ದು, ಪ್ರಾರಂಭದಲ್ಲಿ ಅರ್ಜುನ್, ಚೈತ್ರಶ್ರೀ ಮೃತದೇಹ ದೊರಕಿದೆ. 

ಆದರೆ, ನೀರಿನಲ್ಲಿ ಮುಳುಗಿರುವ ಕಿರಣ್ ಹಾಗೂ ತೇಜಸ್‌ಗಾಗಿ ಇನ್ನೂ ಪತ್ತೆಯಾಗಿಲ್ಲ. ಸದ್ಯ ಪೊಲೀಸ್ ಮೂಲದಿಂದ ಇವರು ಕೂಡಾ ಮೃತರಾಗಿದ್ದಾರೆ ಎಂಬ ಮಾಹಿತಿ ದೊರಕಿದ್ದು, ದೇಹದ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ. ಸ್ಥಳದಲ್ಲಿ ಕುಮಟಾ ಠಾಣೆ ಪೊಲೀಸರು ಮೊಕ್ಕಾಂ ಹೂಡಿದ್ದು, ಘಟನೆ ಸಂಬಂಧ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!