ಫಿನಾಯಿಲ್ ಮಾರೋ ನೆಪದಲ್ಲಿ ಮನೆಮಂದಿ ಮೂರ್ಛೆಗೊಳಿಸಿ ಲೂಟಿ| ವಿಜಯಪುರದಲ್ಲಿ 2.20 ಲಕ್ಷ ಮೌಲ್ಯದ ಚಿನ್ನಾಭರಣ ಕಳವು
ವಿಜಯಪುರ(ಆ.04): ಇಲ್ಲಿನ ಶಾಂತಿನಗರ ಬಡಾವಣೆಯಲ್ಲೊಂದು ಬೆಚ್ಚಿಬೀಳಿಸುವ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಫಿನಾಯಿಲ್ ಮಾರುವ ನೆಪದಲ್ಲಿ ಮನೆಗೆ ಬಂದ ಯುವತಿಯೊಬ್ಬಳು ಮನೆಮಂದಿಯ ಪ್ರಜ್ಞೆ ತಪ್ಪಿಸಿ .2.20 ಲಕ್ಷ ಮೌಲ್ಯದ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದಾಳೆ.
ಉಜ್ವಲಾ ಎಂಬ ಸಂಸ್ಥೆಯ ಮುಖ್ಯಸ್ಥ ವಾಸುದೇವ ತೋಳಬಂದಿ ಹಾಗೂ ಮಕ್ಕಳ ಸಹಾಯವಾಣಿ ಕೇಂದ್ರದ ಮುಖ್ಯಸ್ಥೆ ಸುನಂದಾ ತೋಳಬಂದಿ ಮನೆಯಲ್ಲಿ ಭಾನುವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಫಿನಾಯಿಲ್ ಕಂಪನಿಯ ಸೇಲ್ಸ್ಗಲ್ರ್ ಎಂದು ಹೇಳಿಕೊಂಡು ಯುವತಿಯೊಬ್ಬಳು ಮನೆ ಬಳಿ ಬಂದಿದ್ದಾಳೆ. ಆಗ ತೋಳಬಂದಿ ದಂಪತಿ ಪುತ್ರ ಕೇಶವ ಅವರು ತಾವು ಈಗಾಗಲೇ ಬೇರೆ ಕಂಪನಿಯ ನೆಲಶುಚಿಗೊಳಿಸುವ ರಾಸಾಯನಿಕ ಬಳಲುತ್ತಿರುವುದಾಗಿ ತಿಳಿಸಿದ್ದಾರೆ. ಈ ವೇಳೆ ಯುವತಿಯು ಫಿನಾಯಿಲ್ ವಾಸನೆ ವಿಶೇಷವಾಗಿದೆ ಎಂದು ಹೇಳಿ ಬಾಟಲಿಯನ್ನು ಆತನ
ಮೂಗಿಗೆ ಹಿಡಿದಿದ್ದಾಳೆ. ಆಗ ಕೇಶವ ಮೂರ್ಛೆ ಹೋಗಿ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಮನೆಯೊಳಗೆ ನುಗ್ಗಿದ ಯುವತಿ ಆ ವೇಳೆ ನಿದ್ದೆಯಲ್ಲಿದ್ದ ಸುನಂದಾ, ವಾಸುದೇವ ಅವರಿಗೂ ಮಂಪರು ಬರುವ ಔಷಧ ಮೂಗಿಗೆ ಹಿಡಿದು ಮೂರ್ಛೆ ಹೋಗುವಂತೆ ಮಾಡಿದ್ದಾಳೆ. ಬಳಿಕ ತಿಜೋರಿಯಲ್ಲಿದ್ದ 40 ಗ್ರಾಂ. ಚಿನ್ನಾಭರಣ, 220 ಗ್ರಾಂ ಬೆಳ್ಳಿ ಆಭರಣ ಮತ್ತು ಎರಡು ಮೊಬೈಲ್ ದೋಚಿಕೊಂಡು ಪರಾರಿಯಾಗಿದ್ದಾಳೆ.
ಮನೆಯ ನಾಯಿಗೂ ಯುವತಿ ವಿಷವಿಕ್ಕಿದ್ದು, ರಾತ್ರಿ ಮೃತಪಟ್ಟಿದೆ. ಯುವತಿ ಒಬ್ಬಳೇ ಮನೆಯೊಳಗೆ ನುಗ್ಗಿ ಈ ಕೃತ್ಯ ಎಸಗಿದಳೇ ಅಥವಾ ಆಕೆಯೊಂದಿಗೆ ಖದೀಮರ ತಂಡವೇ ಇತ್ತೇ ಎಂಬುದು ತನಿಖೆಯ ಬಳಿಕವಷ್ಟೇ ಗೊತ್ತಾಗಬೇಕಿದೆ.