Vastu Expert Chandrashekhar Guruji Murder Updates: ಸರಳ ವಾಸ್ತು ಮೂಲಕ ಜನಪ್ರಿಯರಾಗಿದ್ದ ಚಂದ್ರಶೇಖರ್ ಗುರೂಜಿ ಅವರನ್ನು ಹುಬ್ಬಳ್ಳಿಯ ಹೋಟೆಲ್‌ನಲ್ಲಿ ದಾರುಣವಾಗಿ ಹತ್ಯೆ ಮಾಡಲಾಗಿದೆ. ಈಗಷ್ಟೇ ಸಿಸಿಟಿವಿ ದೃಶ್ಯಾವಳಿಗಳು ಏಷ್ಯಾನೆಟ್ ನ್ಯೂಸ್‌ಗೆ ಲಭ್ಯವಾಗಿದ್ದು, ಘೋರ ಕೃತ್ಯದ ದೃಶ್ಯ ಸೆರೆಯಾಗಿದೆ. ಇಬ್ಬರು ಹಂತಕರು ಚಾಕುವಿನಿಂದ ಮತ್ತೆ ಮತ್ತೆ ಇರಿದು ಗುರೂಜಿಯನ್ನು ಕೊಲೆ ಮಾಡಿದ್ದಾರೆ.
ಹುಬ್ಬಳ್ಳಿ: ಸರಳ ವಾಸ್ತು (Sarala Vastu) ಖ್ಯಾತಿಯ ಗುರೂಜಿ ಚಂದ್ರಶೇಖರ್ (Chandrasekhar Guruji), ಹುಬ್ಬಳ್ಳಿಯ ಉಣಕಲ್ ಕೆರೆ ಬಳಿಯ ಪ್ರೆಸಿಡೆಂಟ್ ಹೋಟೆಲ್‌ನಲ್ಲಿ ಕೊಲೆಯಾಗಿದ್ದಾರೆ. ಭಕ್ತರ ಸೋಗಿನಲ್ಲಿ ಬಂದು, ಚಾಕು ಇರಿದು ಕೊಲೆ ಮಾಡಿ ಹಂತಕರು ಪರಾರಿಯಾಗಿದ್ದಾರೆ. ಈಗ ಕೃತ್ಯದ ಸಿಸಿಟಿವಿ ದೃಶ್ಯ ಲಭ್ಯವಾಗಿದ್ದು ಕೊಲೆಯ ಘೋರತೆ ಅನಾವರಣಗೊಂಡಿದೆ. ಇಬ್ಬರು ವ್ಯಕ್ತಿಗಳು ಹೋಟೆಲ್ ಲಾಬಿಯಲ್ಲಿ ಕುಳಿತಿದ್ದ ಚಂದ್ರಶೇಖರ್ ಗುರೂಜಿಯ ಆಶಿರ್ವಾದ ಪಡೆಯುವಂತೆ ಬರುತ್ತಾರೆ. ಇದ್ದಕ್ಕಿದ್ದಂತೆ ಇಬ್ಬರೂ ಚಾಕುವಿನಿಂದ ಬರ್ಬರವಾಗಿ ಹಲ್ಲೆ ಮಾಡಿ ಕೊನೆ ಉಸಿರಿರುವವರೆಗೂ ಚುಚ್ಚಿ ಸಾಯಿಸುತ್ತಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
40 ಸೆಕೆಂಡ್‌ಳಲ್ಲಿ 60 ಬಾರಿ ಚುಚ್ಚಿ ಕೊಲೆ:
ಏಷ್ಯಾನೆಟ್ ನ್ಯೂಸ್‌ಗೆ ಘಟನೆಯ ಸಿಸಿಟಿವಿ ದೃಶ್ಯ ಸಿಕ್ಕಿದ್ದು, ಚಂದ್ರಶೇಖರ್ ಗುರೂಜಿಗೆ 60ಕ್ಕೂ ಹೆಚ್ಚು ಬಾರಿ ಚುಚ್ಚಿ ಕೊಲೆ ಮಾಡಲಾಗಿದೆ. ಕೊಲೆ ಮಾಡಿರುವ ತೀವ್ರತೆಯನ್ನು ನೋಡಿದರೆ, ವೈಯಕ್ತಿಕ ವೈಷಮ್ಯದಿಂದಲೇ ಈ ಕೊಲೆ ಮಾಡಿರುವ ಸಾಧ್ಯತೆಯಿದೆ ಎನ್ನಲಾಗಿದೆ. ವೈಯಕ್ತಿಕ ದ್ವೇಷವಿದ್ದಾಗ ವ್ಯಕ್ತಿ ಒಳಗಿರುವ ಎಲ್ಲಾ ಸಿಟ್ಟನ್ನು ಈ ರೀತಿ ಹೊರ ಹಾಕಿರುವ ಸಾವಿರಾರುಪ ಪ್ರಕರಣಗಳು ನಮ್ಮ ಕಣ್ಣಮುಂದಿದೆ. ನಲವತ್ತು ಸೆಕೆಂಡ್‌ಗಳಲ್ಲಿ ಅರವತ್ತು ಬಾರಿ ಚುಚ್ಚಿ ಚಂದ್ರಶೇಖರ್ ಗುರೂಜಿಯನ್ನು ಕೊಲೆ ಮಾಡಲಾಗಿದೆ. ಇಬ್ಬರು ಹಂತಕರು ಈ ಕೆಲಸದಲ್ಲಿ ಭಾಗಿಯಾಗಿದ್ದಾರೆ. ಸುಮಾರು ಒಂದು ನಿಮಿಷಗಳ ಅಂತರದೊಳಗೆ ಚಂದ್ರಶೇಖರ್ ಗುರೂಜಿಯನ್ನು ಹಂತಕರು ಕೊಲೆ ಮಾಡಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಪ್ರಕರಣದ ಆರೋಪಿಗಳು ಹೋಟೆಲ್‌ನಿಂದ ಅಚೆ ಓಡಿ ಹೋಗುತ್ತಿರುವ ದೃಶ್ಯ ಕೂಡ ಸೆರೆಯಾಗಿದೆ. ಸಾಮಾನ್ಯವಾಗಿ ಬಾಡಿಗೆ ಹಂತಕರು ಈ ರೀತಿಯಾಗಿ ಹತ್ಯೆ ಮಾಡುವುದಿಲ್ಲ. ಬಾಡಿಗೆ ಹಂತಕರು ಕೊಲೆ ಮಾಡುವ ಸುಪಾರಿ ಪಡೆದ ನಂತರ ಸಾಯಿಸುವದಷ್ಟೇ ಮುಖ್ಯವಾಗಿರುತ್ತದೆ. ಈ ರೀತಿ ಕೋಪವನ್ನು ಹೊರ ಹಾಕುವವರಲ್ಲ. ಜತೆಗೆ ಸಾರ್ವಜನಿಕವಾಗಿಯೂ ಈ ರೀತಿಯ ಕೃತ್ಯಕ್ಕೆ ಕೈ ಹಾಕುವುದಿಲ್ಲ. ಈ ಎಲ್ಲವನ್ನೂ ಗಮನಿಸಿದರೆ ಯಾವುದೋ ಹಳೇ ದ್ವೇಷದಿಂದಲೇ ಈ ಕೃತ್ಯ ಮಾಡಿರುವ ಸಾಧ್ಯತೆಯಿದೆ ಎಂದು ಪೊಲೀಸರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಹುಬ್ಬಳ್ಳಿ-ಧಾರವಾಡ ಕಮೀಷನರ್ ಲಾಬೂರಾಮ್ ಆಗಮಿಸಿದ್ದು, ಸ್ಥಳದ ಪರಿಶೀಲನೆ ನಡೆಸುತ್ತಿದ್ದಾರೆ. ಯಾವ ಕಾರಣಕ್ಕಾಗಿ ಇವರ ಹತ್ಯೆ ಮಾಡಲಾಗಿದೆ ಎನ್ನುವುದರ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಹೋಟೆಲ್ ನಲ್ಲಿ ರಿಸಪ್ಶನ್‌ನಲ್ಲಿಯೇ ಚಾಕು ಇರಿದು ಹಂತಕರು ಪರಾರಿಯಾಗಿದ್ದಾರೆ.
ಇದನ್ನೂ ಓದಿ: Vastu Expert Chandrashekhar Murder: ಚಂದ್ರಶೇಖರ್ ಗುರೂಜಿಗೆ 60 ಬಾರಿ ಚುಚ್ಚಿ ಕೊಲೆ!
ಇಬ್ಬರು ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. "ಜುಲೈ 2 ರಂದು ಹೋಟೆಲ್‌ಗೆ ಆಗಮಿಸಿದ್ದ ಚಂದ್ರಶೇಖರ್ ಗುರೂಜಿ ನಾಳೆ ಹೋಟೆಲ್ ರೂಮ್ ಖಾಲಿ ಮಾಡಬೇಕಿತ್ತು. ಇಂದು ಬೆಳಗ್ಗೆ ರಿಶಪ್ಶನ್‌ನಲ್ಲಿ ಕುಳಿತಿದ್ದ ವೇಳೆ ಬಂದ ದುಷ್ಕರ್ಮಿಗಳು ಕಾಲಿಗೆ ನಮಸ್ಕಾರ ಮಾಡುವಂತೆ ನಟಿಸಿ ಅವರಿಗೆ ಚಾಕು ಇರಿದಿದ್ದಾರೆ' ಎಂದು ಹೋಟೆಲ್ ಸಿಬ್ಬಂದಿ ತಿಳಿಸಿದ್ದಾರೆ.
ಸರಳ ಜೀವನ, ಸರಳ ವಾಸ್ತು, ಸರಳ ಅಕಾಡೆಮಿ, ಮನೆಗಾಗಿ ವಾಸ್ತು, ವಾಸ್ತು ಪರಿಹಾರದ ಮೂಲಕ ಅವರು ಕರ್ನಾಟಕದ ಮನೆಮಾತಾಗಿದ್ದರು. ಈವರೆಗೂ 2 ಸಾವಿರಕ್ಕೂ ಅಧಿಕ ಸೆಮಿನಾರ್‌ಗಳಲ್ಲಿ ಮಾತನಾಡಿರುವ ಚಂದ್ರಶೇಖರ್, ಈವರೆಗೂ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ 16 ಪ್ರಶಸ್ತಿಗಳನ್ನು ಸಂಪಾದಿಸಿದ್ದಾರೆ. ಸಿವಿಲ್ ಇಂಜಿನಿಯರಿಂಗ್ ಜೊತೆಗೆ ಕಾಸ್ಮಿಕ್ ಆರ್ಕಿಟೆಕ್ಚರ್ ನಲ್ಲಿ ಡಾಕ್ಟರೇಟ್ ಪದವಿಯನ್ನೂ ಅವರು ಸಂಪಾದಿಸಿದ್ದರು.
ಇದನ್ನೂ ಓದಿ: ದಾವಣಗೆರೆ: 20 ಲಕ್ಷ ಮೌಲ್ಯದ 102 ಕೆಜಿ ಬೆಳ್ಳಿ ಜಪ್ತಿ, ಇಬ್ಬರ ಬಂಧನ
ಸಿಜಿ ಪರಿವಾರ್ ಗ್ಲೋಬಲ್ ವಿಷನ್‌ನ ಚೇರ್ಮನ್ ಕೂಡ ಆಗಿದ್ದ ಚಂದ್ರಶೇಖರ್ ಗುರೂಜಿ 2016ರಲ್ಲಿ ಸರಳ ಜೀವನ ಎನ್ನುವ ಇನ್ಫೋ ಎಂಟರ್‌ಟೇನ್‌ಮೆಂಟ್ ಟಿವಿ ಚಾನೆಲ್ ಅನ್ನೂ ಆರಂಭ ಮಾಡಿದ್ದರು. ಚಂದ್ರಶೇಖರ ಗುರೂಜಿಯವರು 2002 ರಲ್ಲಿ ಸಿಜಿ ಪರಿವಾರ್ ಎನ್ನುವ ಎಂಬ ಖಾಸಗಿ ಲಿಮಿಟೆಡ್ ಕಂಪನಿಯನ್ನು ಆರಂಭಿಸಿದ್ದರು. ಆ ಮೂಲಕ 350 ಕ್ಕೂ ಹೆಚ್ಚು ಶಿಷ್ಯರು ಮತ್ತು ಅನುಯಾಯಿಗಳೊಂದಿಗೆ ಸರಳ ವಾಸ್ತು ವಿಚಾರವನ್ನು ಹಂಚಿಕೊಳ್ಳಲು ಪ್ರಾರಂಭಿಸಿದರು.