ದಾಬಸ್‌ಪೇಟೆ: ವನಕಲ್ಲು ಮಲ್ಲೇಶ್ವರ ಮಠದ ಹಾಸ್ಟೆಲ್‌ನಲ್ಲಿದ್ದ ವಿದ್ಯಾರ್ಥಿ ಆತ್ಮಹತ್ಯೆ

By Kannadaprabha News  |  First Published Nov 4, 2023, 11:00 PM IST

ಸೋಂಪುರ ಹೋಬಳಿಯ ವನಕಲ್ಲು ಮಲ್ಲೇಶ್ವರ ಮಠದಲ್ಲಿದ್ದ ಅಜಯ್ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿ. ಈತ 6 ವರ್ಷಗಳಿಂದ ಮಠದಲ್ಲಿದ್ದು ಸರ್ಕಾರಿ ಶಾಲೆಯಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ಮೂಲತಃ ತುಮಕೂರು ಜಿಲ್ಲೆಯ ಕಾಳೇನಹಳ್ಳಿ ಗ್ರಾಮದವನು. 


ದಾಬಸ್‌ಪೇಟೆ(ನ.04):  ಮಠದ ಹಾಸ್ಟೆಲ್‌ನಲ್ಲಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಅನುಮಾನಸ್ಪಾದವಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾಬಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸೋಂಪುರ ಹೋಬಳಿಯ ವನಕಲ್ಲು ಮಲ್ಲೇಶ್ವರ ಮಠದಲ್ಲಿದ್ದ ಅಜಯ್(12) ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿ. ಈತ 6 ವರ್ಷಗಳಿಂದ ಮಠದಲ್ಲಿದ್ದು ಸರ್ಕಾರಿ ಶಾಲೆಯಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ಮೂಲತಃ ತುಮಕೂರು ಜಿಲ್ಲೆಯ ಕಾಳೇನಹಳ್ಳಿ ಗ್ರಾಮದವನು. ಈತನ ಅಣ್ಣನೂ ಮಠದಲ್ಲೇ ಇದ್ದು 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ.

ನ.2ರಂದು ಎಂದಿನಂತೆ ಅಣ್ಣತಮ್ಮ ಜೊತೆಗಿದ್ದು ಮಧ್ಯಾಹ್ನ ಒಂದು ಗಂಟೆಯಲ್ಲಿ ನನಗೆ ನಿದ್ದೆ ಬರುತ್ತಿದೆ ಮಲಗುತ್ತೇನೆ ಎಂದು ಅಣ್ಣನ ಬಳಿ ಹೇಳಿ ರೂಮಿಗೆ ಬಂದಿದ್ದಾನೆ. ಆದರೆ ಆತ ರೂಮಿಗೆ ಹೋಗದೆ ಮಠದ ಸಮೀಪದಲ್ಲೇ ಇರುವ ಮರಕ್ಕೆ ತನ್ನ ಪಂಚೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಠದ ಜಮೀನಿನ ಅಕ್ಕಪಕ್ಕ ಜಾನುವಾರುಗಳನ್ನು ಮೇಯಿಸುತ್ತಿದ್ದ ರೈತರು ನೋಡಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

Latest Videos

undefined

ಚಾಮರಾಜನಗರ: ಸಾಲಕ್ಕೆ ಹೆದರಿ ಕಾರ್ಪೆಂಟರ್‌ ಆತ್ಮಹತ್ಯೆ

ಕತ್ತಿನ ಮೇಲೆ ಪರಚಿದ ಗುರುತು:

ಮೃತನ ತಾಯಿ ನಾಗರತ್ನಮ್ಮ ಪ್ರತಿಕ್ರಿಯಿಸಿ ಸ್ವಾಮೀಜಿಯವರು ನನ್ನ ಮಗನನ್ನು ಸರಿಯಾಗಿ ಶಾಲೆಗೆ ಕಳುಹಿಸುತ್ತಿರಲಿಲ್ಲ. ಮೂರು ದಿನದಿಂದ ಶಾಲೆಗೆ ಕಳುಹಿಸದೆ ಮೇವು ಕೊಯ್ಯಲು, ದನ ಮೇಯಿಸಲು ಕಳುಹಿಸುತ್ತಿದ್ದರಂತೆ, ಈ ಬಗ್ಗೆ ಹಿರಿಯ ಮಗ ಪೋನ್ ಮಾಡಿ ಹೇಳಿದ್ದ. ನನ್ನ ಮಗ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಸ್ವಾಮೀಜಿಯವರಾಗಲಿ, ಮಠದ ಸಿಬ್ಬಂದಿಯವರಾಗಲಿ ಕರೆ ಮಾಡಿ ತಿಳಿಸಲಿಲ್ಲ. ನನ್ನ ಮಗನ ಕುತ್ತಿಗೆಯ ಭಾಗದಲ್ಲಿ ಉಗುರಿನಿಂದ ಚರ್ಮ ಪರಚಿರುವ ಗುರುತು ಇದೆ. ಕುತ್ತಿಗೆ ಊದುಕೊಂಡಿದ್ದು ಕತ್ತು ಹಿಸುಕಿ ಸಾಯಿಸಿರದ್ದಾರೆ. ನನ್ನ ಮಗ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ಆರೋಪಿಸಿದರು.

ನಿಖರ ಕಾರಣ ಗೊತ್ತಿಲ್ಲ:

ಘಟನೆಗೆ ಸಂಬಂಧಸಿದಂತೆ ವನಕಲ್ಲು ಮಠದ ಶ್ರೀ ಬಸವರಮಾನಂದ ಸ್ವಾಮೀಜಿ ಪ್ರತಿಕ್ರಿಯಿಸಿ, ಮೃತಪಟ್ಟಿರುವ ಹುಡುಗ ನಮ್ಮ ಮಠದಲ್ಲೇ ಬಹಳ ಚಟುವಟಿಕೆಯಿಂದ ಇರುತ್ತಿದ್ದನು. ಈತ ಆತ್ಮಹತ್ಯೆ ಮಾಡಿಕೊಂಡಿರುವುದು ನಮಗೆ ಆಘಾತವನ್ನುಂಟು ಮಾಡಿದೆ. ಘಟನೆ ನಡೆದ ಸಂದರ್ಭದಲ್ಲಿ ನಾನು ಮಠದಲ್ಲಿ ಇರಲಿಲ್ಲ. ಆತ್ಮಹತ್ಯೆ ಮಾಡಿಕೊಂಡಿರುವುದು ಯಾವ ವಿಷಯಕ್ಕೆ ಎಂದು ಗೊತ್ತಿಲ್ಲ. ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ ಎಂದರು.
ಘಟನೆಗೆ ಸಂಬಂಧಿಸಿಂತೆ ಘಟನಾ ಸ್ಥಳಕ್ಕೆ ದಾಬಸ್‌ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತದೇಹವನ್ನು ತುಮಕೂರಿನ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷಿಗೆ ಕಳುಹಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

click me!