ಪ್ರೇಮಿಗಳ ದಿನಾಚರಣೆ ಹಿನ್ನೆಲೆಯಲ್ಲಿ ಸ್ನೇಹಿತೆ ಹಾಗೂ ಸ್ನೇಹಿತರೊಂದಿಗೆ ಪಬ್‌ಗೆ ತೆರಳಿದ ಯುವಕ ಕುಡಿದ ಮತ್ತಿನಲ್ಲಿ ಡ್ಯಾನ್ಸ್ ಮಾಡುತ್ತಲೇ ಏಕಾಏಕಿ 3ನೇ ಮಹಡಿಯ ಕಿಟಕಿಯಿಂದ ಜಿಗಿದು ಸಾವನ್ನಪ್ಪಿದ್ದಾನೆ.
ಬೆಳಗಾವಿ (ಫೆ.13): ಕುಡಿದ ಮತ್ತಿನಲ್ಲಿ ಬೈಯುವುದು, ಹೊಡೆಯುವುದು, ಹಲ್ಲೆ ಮಾಡುವುದನ್ನು ನೋಡಿದ್ದೇವೆ. ಆದರೆ, ಇಲ್ಲೊಬ್ಬ ಯುವಕ ಕುಡಿದ ಮತ್ತಿನಲ್ಲಿ ಪಬ್‌ನಲ್ಲಿ ಸ್ನೇಹಿತರೊಂದಿಗೆ ಡ್ಯಾನ್ಸ್ ಮಾಡುತ್ತಿರುವಾಗಲೇ 3ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ.
ನಾಳೆ ಬೆಳಗಾದರೆ ಪ್ರೇಮಿಗಳ ದಿನಾಚರಣೆ ಇದೆ. ಯುವಕರು ಪ್ರೀತಿ- ಪ್ರೇಮ ಎಂದು ತುಂಬಾ ಬ್ಯುಸಿ ಆಗಿರುತ್ತಾರೆ. ಇದನ್ನು ನಾವು ತಪ್ಪು ಎಂದು ಹೇಳಲೂ ಆಗುವುದಿಲ್ಲ. ಇದೆಲ್ಲವೂ ವಯೋಸಹಜವಾಗಿ ಒಂದು ಹಂತದಲ್ಲಿ ಕಂಡುಬರುವ ಸಾಮಾನ್ಯ ದೃಶ್ಯಗಳಾಗಿವೆ. ಇನ್ನು ಪ್ರೇಮಿಗಳ ದಿನಾಚರಣೆಯ ಹಿನ್ನೆಲೆಯಲ್ಲಿ ಇಂದು ಮದ್ಯಾಹ್ನದಿಂದಲೇ ಪ್ರೇಮಿಗಳು ಹಾಗೂ ಸ್ನೇಹಿತರೊಂದಿಗೆ ಸೇರಿಕೊಂಡು ಪಾರ್ಟಿ, ಪಬ್, ಶಾಫಿಂಗ್ ಎಂದು ಸುತ್ತಾಡುವುದು ಹೆಚ್ಚಾಗಿರುತ್ತದೆ. ಇದೇ ರೀತಿ ಸ್ನೇಹಿತೆ ಹಾಗೂ ಸ್ನೇಹಿತರೊಂದಿಗೆ ಪಬ್‌ಗೆ ಬಂದು ಕುಡಿದು ಡ್ಯಾನ್ಸ್ ಮಾಡುತ್ತಲೇ ಕಿಟಕಿಯಿಂದ ಜಿಗಿದು ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಬೆಳಗಾವಿ ಕೆಎಎಸ್ ಅಧಿಕಾರಿಯ ಗಂಡನ ಶವ ಪತ್ತೆ: ಬಾಡಿಬಿಲ್ಡರ್ ಜೀವನ ದುರಂತ ಅಂತ್ಯ
ಬ್ರೂ-59 ಪಬ್‌ನ ಕಿಟಕಿಯಿಂದ ಯುವಕ ಜಂಪ್: ಬೆಳಗಾವಿಯ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯ ತಮ್ಮಣ್ಣ ಆರ್ಕೇಡ್‌ನಲ್ಲಿ ಘಟನೆ ನಡೆದಿದೆ. ತಮ್ಮಣ್ಣ ಆರ್ಕೇಡ್‌ನ 3ನೇ ಮಹಡಿಯಲ್ಲಿ ಇರುವ ಬ್ರೂ-59 ಪಬ್‌ನ ಕಿಟಕಿಯಿಂದ ಯುವಕ ಜಂಪ್ ಮಾಡಿದ್ದಾನೆ. ಹೀಗೆ ಅಲ್ಲಿಂದ ಹಾರಿದ ಯುವಕ ಸೀದಾ ರಸ್ತೆಯಲ್ಲಿ ಬಿದ್ದಿದ್ದು, ತಲೆ ಹಾಘೂ ದೇಹದ ಇತರೆ ಭಾಗಗಳಿಗೆ ತೀವ್ರ ಗಾಯ ಉಂಟಾಗಿದೆ. ಮೇಲಿಂದ ಬಿದ್ದ ರಭಸಕ್ಕೆ ರಕ್ತಸ್ರಾವ ಉಂಟಾಗಿ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾನೆ. ಪಬ್‌ನಲ್ಲಿ ಈತನೊಂದಿಗೆ ಡ್ಯಾನ್ಸ್ ಮಾಡುತ್ತಿದ್ದ ಸ್ನೇಹಿತರು ಕೆಳಗೆ ಬಂದು ನೋಡುವಷ್ಟರಲ್ಲಿ ಪ್ರಾಣಪಕ್ಷಿ ಹಾರಿಹೋಗಿತ್ತು.
ಆಸ್ಪತ್ರೆಗೆ ದಾಖಲಿಸಿದರೂ ಬದುಕದ ಜೀವ: ಪಬ್‌ನ ಕಿಟಕಿಯಿಂದ ಕೆಳಗೆ ಜಿಗಿದು ಸಾವನ್ನಪ್ಪಿದ ಯುವಕನನ್ನು ಯೋಗೇಶ್ ಶಾನಬಾಗ್(28) ಎಂದು ಗುರುತಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆ ಹಳಿಯಾಳ ಮೂಲದ ಯೋಗೇಶ್ ಶಾನಬಾಗ್ ಇಂದು ಸಂಜೆ ವೇಳೆ 6 ಗಂಟೆಗೆ ಸ್ನೇಹಿತೆ, ಸ್ನೇಹಿತನ ಜೊತೆ ಪಬ್‌ಗೆ ಬಂದಿದ್ದನು. ಈ ವೇಳೆ ಪಬ್‌ನಲ್ಲಿ ಡ್ಯಾನ್ಸ್ ಮಾಡುತ್ತಲೇ ಕಿಟಕಿ ಬಳಿ ಬಂದ ಯೋಗೇಶ್ ಏಕಾಏಕಿ ಕೆಳಗೆ ಜಿಗಿದಿದ್ದಾನೆ. ಮೂರನೇ ಮಹಡಿಯಿಂದ ಜಿಗಿದ ಪರಿಣಾಮ ಗಂಭೀರ ಗಾಯಗೊಂಡಿರಬಹುದು ಎಂದು ಆತನ ಸ್ನೇಹಿತರು ಯೋಗೇಶ್‌ನನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ, ಆಸ್ಪತ್ರೆಗೆ ಬರುವ ಮುನ್ನವೇ ಜೀವ ಹೋಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ತುಮಕೂರಿನಲ್ಲಿ ಚಿಕಿತ್ಸೆಗಾಗಿ ಪರದಾಡಿದ ಗರ್ಭಿಣಿ, ಬೆಂಗಳೂರಿಗೆ ಬರುವಾಗ ಮಾರ್ಗಮಧ್ಯೆ ಹೆರಿಗೆ, ಮಗು ಸಾವು
ಪೊಲೀಸರಿಂದ ಸ್ನೇಹಿತರ ವಿಚಾರಣೆ: ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳ ಪರಿಶೀಲನೆ ಮಾಡಿದ್ದಾರೆ. ನಂತರ ಪ್ರಕರಣ ದಾಖಲಿಸಿಕೊಂಡು ಆತನ ಸ್ನೇಹಿತರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಇನ್ನು ಬ್ರೂ-59 ಪಬ್‌ನ ಎಲ್ಲ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾದ ಎಲ್ಲ ದೃಶ್ಯಗಳನ್ನು ಪರಿಶೀಲನೆ ಮಾಡುತ್ತಿದ್ದು, ಪಬ್‌ನ ಮಾಲೀಕರು ಹಾಗೂ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಸ್ನೇಹಿತರ ನಡುವೆ ಗಲಾಟೆ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಜೊತೆಗೆ, ಇದು ಪ್ರೀತಿ - ಪ್ರೇಮದ ಕುರಿತಾದ ಪ್ರಕರಣ ಇರಬಹುದು ಎಂದು ಪೊಲೀಸರು ಹೇಳಿದ್ದಾರೆ. ಆದರೆ, ಸ್ನೇಹಿತರ ವಿಚಾರಣೆಯ ನಂತರ ಯುವಕ ಯೋಗೇಶ್ ಶಾನಬಾಗ್‌ನ ಸಾವಿಗೆ ನಿಖರ ಕಾರಣ ಏನೆಂಬುದು ತಿಳಿಯಲಿದೆ.