
ಬೆಂಗಳೂರು (ಆ.29): ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನಗರದಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿ ನೇಣು ಬಿಗಿದ ಸ್ಥಿತಿಯಲ್ಲಿ ಬಿಟ್ಟು ಪರಾರಿಯಾಗಿದ್ದ ಘಟನೆ ವರದಿಯಾಗಿದೆ. ವರ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿದಂತೆ ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮೃತ ಮಹಿಳೆಯನ್ನು 30 ವರ್ಷದ ಪೂನಂ ಸಿಂಗ್ ಎಂದು ಗುರುತಿಸಲಾಗಿದ್ದು, ಆರೋಪಿ ಪತಿಯನ್ನು ರವೀಂದ್ರ ಸಿಂಗ್ ಎಂದು ಗುರುತಿಸಲಾಗಿದೆ. ಇಬ್ಬರೂ ಮೂಲತಃ ಉತ್ತರ ಪ್ರದೇಶದ ಗೋರಖ್‌ಪುರದವರಾಗಿದ್ದು, ಕೆಲಸ ಅರಸಿ ಬೆಂಗಳೂರಿಗೆ ಬಂದು ದೊಮ್ಮಸಂದ್ರ ಸಮೀಪದ ಬಾಲಾಜಿ ಲೇಔಟ್‌ನ ಬಾಡಿಗೆ ಮನೆಯಲ್ಲಿ ಕಳೆದ ಒಂದು ವರ್ಷದಿಂದ ವಾಸವಾಗಿದ್ದರು.
ಆರೋಪಿ ರವೀಂದ್ರ ಸಿಂಗ್ ವೃತ್ತಿಯಲ್ಲಿ ಕಾರ್ಪೆಂಟರ್ ಆಗಿದ್ದು, ಮದ್ಯ ವ್ಯಸನಿಯಾಗಿದ್ದ ಎನ್ನಲಾಗಿದೆ. ಈ ಕಾರಣಕ್ಕಾಗಿ ದಂಪತಿಗಳ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಮದ್ಯ ಸೇವಿಸಿ ಬಂದಾಗ ಪತ್ನಿಯ ಮೇಲೆ ಹಲ್ಲೆ ನಡೆಸುತ್ತಿದ್ದನೆಂದು ತಿಳಿದುಬಂದಿದೆ.
ನಿನ್ನೆ ಮಧ್ಯಾಹ್ನ ಈ ಘಟನೆ ಬೆಳಕಿಗೆ ಬಂದಿದೆ. ಪೂನಂ ಸಿಂಗ್ ಅವರ ಚಿಕ್ಕಪ್ಪ ಮನೆಗೆ ಬಂದಾಗ, ಆಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಯಿತು. ತನಿಖೆ ಆರಂಭಿಸಿದ ಪೊಲೀಸರು, ಪ್ರಾಥಮಿಕವಾಗಿ ಇದು ಕೊಲೆ ಎಂದು ಶಂಕಿಸಿದ್ದಾರೆ. ಮೃತಳ ಸಹೋದರ ನೀಡಿದ ದೂರಿನ ಮೇರೆಗೆ ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿ ಪತಿ ರವೀಂದ್ರ ಸಿಂಗ್ ನನ್ನು ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಘಟನೆಗೆ ನಿಖರ ಕಾರಣ ಮತ್ತು ಕೊಲೆಯ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮದ್ಯಪಾನ ವ್ಯಸನ ಮತ್ತು ಕೌಟುಂಬಿಕ ಕಲಹವು ಈ ದುರಂತಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ