
ಬೆಂಗಳೂರು(ಫೆ.07): ಎಟಿಎಂ ಯಂತ್ರದ ಸೆನ್ಸರ್ ಸಂಪರ್ಕ ಕಡಿತಗೊಳಿಸಿ ಹಣ ಕಳವು ಮಾಡುತ್ತಿದ್ದ ಇಬ್ಬರು ಚಾಲಾಕಿ ಖದೀಮರು ಸದ್ದುಗುಂಟೆಪಾಳ್ಯ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಉತ್ತರ ಪ್ರದೇಶ ಮೂಲದ ವಿಪಿನ್ ಪಾಲ್ ಹಾಗೂ ಜ್ಞಾನಸಿಂಗ್ ಬಂಧಿತರು. ಬಿಟಿಎಂ ಲೇಔಟ್ ಸಮೀಪದ ಜಯದೇವ ಮೇಲ್ಸೇತುವೆಯ ಬಳಿ ಎಸ್‌ಬಿಐ ಬ್ಯಾಂಕ್‌ನ ಎಟಿಎಂ ಘಟಕದಲ್ಲಿ ಹಣ ದೋಚಲು ಯತ್ನಿಸಿದ್ದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಯೂಟ್ಯೂಬ್ ನೋಡಿ ಕಲಿತರು:
ವಿಪಿನ್ ಪಾಲ್ ಹಾಗೂ ಜ್ಞಾನ ಸಿಂಗ್, ಉದ್ಯೋಗ ಅರಸಿ ಇತ್ತೀಚೆಗೆ ನಗರಕ್ಕೆ ಬಂದಿದ್ದರು. ಬಳಿಕ ಸದ್ದುಗುಂಟೆಪಾಳ್ಯ ಸಮೀಪ ನೆಲೆಸಿದ್ದರು. ಯೂ ಟ್ಯೂಬ್ ನೋಡಿ ಎಟಿಎಂ ಘಟಕಗಳಲ್ಲಿ ಹಣ ದೋಚುವ ವಿದ್ಯೆ ಕಲಿತಿದ್ದರು. ಎಟಿಎಂ ಘಟಕಕ್ಕೆ ಹಣ ಡ್ರಾ ಮಾಡಲು ತೆರಳುತ್ತಿದ್ದ ಆರೋಪಿಗಳು, ತಮ್ಮ ಎಟಿಎಂ ಕಾರ್ಡನ್ನು ಸ್ವೈಪ್ ಮಾಡುತ್ತಿದ್ದರು. ಯಂತ್ರದಿಂದ ಹಣ ಹೊರಬಂದ ಕೂಡಲೇ ತಕ್ಷಣವೇ ಕೈ ಅಡ್ಡಹಿಡಿದು ಸೆನ್ಸರ್ ಸಂಪರ್ಕ ಕಡಿತಗೊಳಿಸುತ್ತಿದ್ದರು. ಇದರಿಂದ ಹಣ ಡ್ರಾ ಮಾಡಿದರೂ ಖಾತೆಯಲ್ಲಿ ಹಣ ಕಡಿತವಾಗುತ್ತಿರಲಿಲ್ಲ ಎಂದು ಪೊಲೀಸರು ವಿವರಿಸಿದ್ದಾರೆ.
ಎಟಿಎಂಗೆ ತುಂಬಬೇಕಿದ್ದ 64 ಲಕ್ಷ ರೂ. ಕದ್ದು ಪರಾರಿ..!
ಇದೇ ರೀತಿ ಜಯದೇವ ಮೇಲ್ಸೇತುವೆ ಹತ್ತಿರದ ಎಸ್‌ಬಿಐ ಎಟಿಎಂನಲ್ಲಿ ಎರಡು ಬಾರಿ ತಲಾ .10 ಸಾವಿರ ದೋಚಿದ್ದರು. ಇದರಿಂದ ಎಚ್ಚೆತ್ತ ಎಸ್‌ಬಿಐ ಬ್ಯಾಂಕ್ ಸಿಬ್ಬಂದಿ, ಆರೋಪಿಗಳ ಮೇಲೆ ನಿಗಾವಹಿಸಿದ್ದರು. ಅಂತೆಯೇ ಎಟಿಎಂ ಕೇಂದ್ರದಲ್ಲಿ ಮತ್ತೆ ಕಳವು ಮಾಡಲು ಬಂದಾಗ ಸಿಕ್ಕಿಬಿದ್ದಿದ್ದಾರೆ. ಶಂಕಾಸ್ಪದ ನಡವಳಿಕೆ ಹಿನ್ನೆಲೆಯಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದು ಬ್ಯಾಂಕ್ ಸಿಬ್ಬಂದಿ ವಿಚಾರಿಸಿದ್ದಾರೆ. ಮೊದಲು ತಾವು ವಿದ್ಯಾರ್ಥಿಗಳು ಎಂದೂ ಹೇಳಿ ಜಾರಿಕೊಳ್ಳಲು ಯತ್ನಿಸಿದ್ದಾರೆ. ಬಳಿಕ ಈ ಇಬ್ಬರನ್ನು ಪೊಲೀಸರಿಗೆ ಒಪ್ಪಿಸಿದ್ದು, ವಶಕ್ಕೆ ಪಡೆದ ಸದ್ದುಗುಂಟೆಪಾಳ್ಯ ಠಾಣೆ ಪೊಲೀಸರು, ಠಾಣೆಗೆ ಕರೆತಂದು ತೀವ್ರ ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ