ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸ್, ಪೊಲೀಸರ ಕೈಸೇರಿದ ಪ್ರಾಥಮಿಕ ವರದಿ

By Suvarna NewsFirst Published Apr 20, 2022, 4:36 PM IST
Highlights

* ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸ್
* ಪೊಲೀಸರ ಕೈಸೇರಿದ ಪ್ರಾಥಮಿಕ ಮರಣೋತ್ತರ ವರದಿ
* ತನಿಖೆಯಲ್ಲಿ ಹಲವು ಮಹತ್ವದ ಅಂಶಗಳು ಬೆಳಕಿಗೆ

ವರದಿ ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್ 

ಉಡುಪಿ, (ಏ.20):
ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವಿನ ಪ್ರಕರಣ ಬಹುತೇಕ ಆತ್ಮಹತ್ಯೆ ಎಂಬುದು ಖಚಿತವಾಗುವ ದಾಖಲೆಗಳು ದೊರಕಿವೆ. ಆತ್ಮಹತ್ಯೆಗೆ ಹೊರತಾದ ಸಾಧ್ಯತೆಗಳೇನು ಅನ್ನುವ ಬಗ್ಗೆ ಪೊಲೀಸ್ ತನಿಖೆ ಮುಂದುವರೆದಿದೆ. ಈ ನಡುವೆ ಮಣಿಪಾಲ ಕೆಎಂಸಿ ಆಸ್ಪತ್ರೆಯಿಂದ ಪ್ರಾಥಮಿಕ ಮರಣೋತ್ತರ ಪರೀಕ್ಷಾ ವರದಿ ಪೊಲೀಸರ ಕೈಸೇರಿದೆ.

ಈಶ್ವರಪ್ಪ ಅವರ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದ್ದ ಸಂತೋಷ್ ಪಾಟೀಲ್ ಉಡುಪಿಗೆ ಬಂದು ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದರು.‌ ಮೇಲ್ನೋಟಕ್ಕೆ ಇದೊಂದು ಸಾಮಾನ್ಯ ಆತ್ಮಹತ್ಯೆ ಪ್ರಕರಣದಂತೆ ಕಂಡರೂ, ರಾಜಕೀಯ ಕಾರಣಗಳಿಗೆ ಈ ಸಾವಿನ ಬಗ್ಗೆ ಅನೇಕ ಸಂಶಯಗಳು ಹುಟ್ಟಿದ್ದವು. ಒಟ್ಟು ಏಳು ತಂಡಗಳಾಗಿ ಪೊಲೀಸರು ರಾಜ್ಯದ ವಿವಿಧ ಭಾಗಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಇದೀಗ ತನಿಖೆಯಲ್ಲಿ ಹಲವು ಮಹತ್ವದ ಅಂಶಗಳು ಬೆಳಕಿಗೆ ಬಂದಿವೆ.

Latest Videos

Santosh Patil Suicide Case ಆತ್ಮಹತ್ಯೆ ಮಾಡಿಕೊಂಡ ಲಾಡ್ಜಿನಲ್ಲಿ 2ನೇ ಸುತ್ತಿನ ತನಿಖೆ

ಘಟನಾ ಸ್ಥಳದಲ್ಲಿ ಸಿಕ್ಕಿರುವ ಪುರಾವೆಗಳ ಆಧಾರದಲ್ಲಿ ಇದೊಂದು ಆತ್ಮಹತ್ಯೆ ಪ್ರಕರಣ ಅನ್ನೋದು ಬಹುತೇಕ ಖಚಿತವಾಗಿದೆ. ಕೀಟನಾಶಕವಾಗಿ ಬಳಸುವ ವಿಷವನ್ನು ಸಂತೋಷ್ ಪಾಟೀಲ್ ಸೇವಿಸಿದ್ದರು. ಸ್ನೇಹಿತರ ಜೊತೆಗೆ ಹೋಗಿ ತೆಗೆದುಕೊಂಡು ಬಂದ ಜ್ಯೂಸ್ ಗೆ ವಿಷ ಬೆರೆಸಿ ಕುಡಿದಿದ್ದರು. ಸದ್ಯ ತನಿಖೆಯಲ್ಲಿ ಗೊತ್ತಾಗಿರುವ ವಿಚಾರ ಏನಪ್ಪಾ ಅಂದ್ರೆ, ವಿಷವನ್ನು ಯಾರೂ ಒತ್ತಾಯಪೂರ್ವಕವಾಗಿ ಕೊಡಿಸಿಲ್ಲ ಅನ್ನುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಘಟನಾ ಸ್ಥಳದಲ್ಲಿ ಎರಡು ಪೇಪರ್ ಕಪ್ ಗಳು ದೊರಕಿವೆ. ಜೊತೆಗೆ ಎರಡು ಸ್ಟ್ರಾ ಸಿಕ್ಕಿದೆ. ಇದೇ ಪೇಪರ್ಕಪ್ ಗೆ ಜ್ಯೂಸ್ ಮತ್ತು ವಿಷ ಬೆರೆಸಿ ಸ್ಟ್ರಾ ಮೂಲಕ ಕುಡಿದಿದ್ದಾಗಿ ಕಂಡುಬರುತ್ತಿದೆ. ಯಾರಾದರೂ ಒತ್ತಾಯಪೂರ್ವಕವಾಗಿ ವಿಷ ಕುಡಿಸಿದ್ದರೆ, ಪೇಪರ್ ಕಪ್ ಮುದ್ದೆಯಾದ ಬೇಕಿತ್ತು. ಸ್ಥಳದಲ್ಲಿ ಬಿದ್ದಿದ್ದ ಸ್ಟ್ರಾಗಳಿಗೂ ಹಾನಿಯಾಗಬೇಕಿತ್ತು. ಆದರೆ ಅಂತಹ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಒಂದು ವೇಳೆ ಒತ್ತಾಯಪೂರ್ವಕವಾಗಿ ಯಾರಾದ್ರು ವಿಷ ಕುಡಿಸಿದರೆ ತುಟಿ ಮತ್ತು ಬಾಯಿಯ ಭಾಗದಲ್ಲಿ ಹೆಚ್ಚು ವಿಷದ ಅಂಶ ಕಾಣಬೇಕಿತ್ತು. ಆದರೆ ಸ್ಟ್ರಾ ಮೂಲಕ ಜ್ಯೂಸ್ ಕುಡಿದ ಕಾರಣ ವಿಷ ನೇರವಾಗಿ ಹೊಟ್ಟೆಯನ್ನು ಸೇರಿದೆ. ಸದ್ಯ ಘಟನಾಸ್ಥಳದಲ್ಲಿ ದೊರಕಿರುವ ಎಲ್ಲಾ ವಸ್ತುಗಳು ಎಫ್ ಎಸ್ಎಲ್ ತಂಡದ ವಶದಲ್ಲಿದೆ.

ಸಂತೋಷ್ ಪಾಟೀಲ್ ಶವದ ಮರಣೋತ್ತರ ಪರೀಕ್ಷೆಯನ್ನು ಮಣಿಪಾಲದ ವಿಧಿವಿಜ್ಞಾನ ಪ್ರಯೋಗಾಲಯ ದಲ್ಲಿ  ನಡೆಸಲಾಗಿತ್ತು. ಇದೀಗ ಶವದ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ಉಡುಪಿ ನಗರ ಪೊಲೀಸರು ಕೈಸೇರಿದೆ. ಮರಣೋತ್ತರ ಪರೀಕ್ಷೆಯಲ್ಲಿ ಸಾವಿಗೆ ನಿಖರವಾದ ಕಾರಣವನ್ನು ಕೆಎಂಸಿ ವೈದ್ಯರು ಬಹಿರಂಗಪಡಿಸಿಲ್ಲ. Cause of death ವಿಭಾಗದಲ್ಲಿ reserved ಅಂದರೆ ಕಾಯ್ದಿರಿಸಲಾಗಿದೆ ಎಂದು ತಿಳಿಸಲಾಗಿದೆ. ರಕ್ತ, ಶಾಸಕೋಶ, ಕಿಡ್ನಿ ಇತ್ಯಾದಿ ಒಳ ಅಂಗಾಂಗಗಳ ಪರೀಕ್ಷಾ ವರದಿ ಬಾಕಿಯಿದೆ. ಎಸ್ಎಸ್ಎಲ್ ವರದಿಗಾಗಿ ಕಾಯುತ್ತಿರುವ ಮಣಿಪಾಲದ ತಜ್ಞರು, ಅಲ್ಲಿಂದ ವರದಿ ಬಂದ ನಂತರ ಅಂತಿಮ ಮರಣೋತ್ತರ ಪರೀಕ್ಷಾ ವರದಿ ಸಿದ್ಧಪಡಿಸುವುದು ಹೇಳಿದ್ದಾರೆ. ಮರಣೋತ್ತರ ಪರೀಕ್ಷೆ ಮತ್ತು ಆರ್ ಎಫ್ ಎಸ್ ಎಲ್ ವರದಿಯ ಜೊತೆಗೆ ಹೋಲಿಕೆ ಮಾಡಿ ಅಂತಿಮ ತೀರ್ಮಾನಕ್ಕೆ ಬರುವುದಾಗಿ ತಿಳಿಸಿದ್ದಾರೆ.

ರಾಜ್ಯದ್ಯಂತ ತನಿಖಾ ನಿರತರಾಗಿರುವ ಪೊಲೀಸ್ ತಂಡಗಳು ಅನೇಕ ಆಸಕ್ತಿದಾಯಕ ಮಾಹಿತಿಗಳನ್ನು ಕಲೆಹಾಕಿವೆ. ಎಲ್ಲಾ ತಂಡಗಳು ಉಡುಪಿಗೆ ವಾಪಾಸಾದ ಬಳಿಕ ಮಾಹಿತಿಗಳನ್ನು ಕ್ರೋಢೀಕರಿಸಿ, ಪ್ರಕರಣದಲ್ಲಿನ ಸಾಧ್ಯತೆಗಳನ್ನು ವಿಶ್ಲೇಷಿಸಲಾಗುವುದು ಎಂದು ವರಿಷ್ಠಾಧಿಕಾರಿ ವಿಷ್ಣುವರ್ಧನ್ ತಿಳಿಸಿದ್ದಾರೆ.

click me!