
ವರದಿ- ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಪ್ರಸಿದ್ಸ ಚಿನ್ಮಯ ಆಸ್ಪತ್ರೆಯ ಮಾಲಕ ಗೋಪಾಲಕೃಷ್ಣರಾವ್ ( 80) ಯಾನೇ ಕಟ್ಟೆ ಬೋಜಣ್ಣ ಕುತ್ತಿಗೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳ್ಳಂಬೆಳಗ್ಗೆ ಸ್ನೇಹಿತನ ಮನೆಯ ಆವರಣಕ್ಕೆ ಬಂದು, ಸಿಟೌಟ್ ನಲ್ಲಿ ಕುಳಿತು ಗುಂಡುಹಾರಿಸಿ ಕೊಂಡಿದ್ದಾರೆ. ಪ್ರತಿಷ್ಠಿತ ವ್ಯಕ್ತಿಯೊಬ್ಬರ ಆತ್ಮಹತ್ಯೆ ಕುಂದಾಪುರದ ನಾಗರಿಕರನ್ನು ತಲ್ಲಣಗೊಳಿಸಿದೆ. ಸಾವಿಗೆ ಕಾರಣ ಏನು ಎಂಬ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದು, ವ್ಯಾವಹಾರಿಕ ವಿಚಾರದಲ್ಲಿ ಬೇಸರಗೊಂಡಿದ್ದರು ಎಂದು ತಿಳಿದುಬಂದಿದೆ.
ಶ್ರೀಮಂತ ಉದ್ಯಮಿಯ ನಿಗೂಢ ನಿರ್ಧಾರ?:
ಕಟ್ಟೆ ಬೋಜಣ್ಣ ಓರ್ವ ಶ್ರೀಮಂತ ಉದ್ಯಮಿ. ಜಿಲ್ಲೆಯಲ್ಲಿ ಪ್ರತಿಷ್ಠಿತ ವೆನಿಸಿದ ಚಿನ್ಮಯ ಆಸ್ಪತ್ರೆಯನ್ನು ಕಟ್ಟಿದವರು. ಹೋಟೆಲ್ ಉದ್ಯಮ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬಂಡವಾಳ ಹೂಡಿದವರು. ಇಂತಹ ಪ್ರತಿಷ್ಠಿತ ವ್ಯಕ್ತಿ ತನ್ನ ಎಂಬತ್ತರ ಇಳಿ ವಯಸ್ಸಿನಲ್ಲಿ ಆತ್ಮಹತ್ಯೆಯ ನಿರ್ಧಾರ ಮಾಡಿದ್ಯಾಕೆ?, ಎಂಬುದು ಚರ್ಚೆಯ ವಿಷಯವಾಗಿದೆ.
ತನ್ನ ಮನೆಯಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿರುವ ಮೊಳಹಳ್ಳಿ ಗಣೇಶ್ ಶೆಟ್ಟಿ ಎಂಬವರ ಮನೆಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋಟೇಶ್ವರ ಸಮೀಪದ ಪುರಾಣಿಕರ ರಸ್ತೆಯ ಪ್ರತಿಷ್ಠಿತ ಬಡಾವಣೆಯಲ್ಲಿ ಗಣೇಶ ಶೆಟ್ಟಿ ಮನೆ ಇದೆ. ಬೆಳಗಿನ ಜಾವ ಆರು ಗಂಟೆ ಸುಮಾರಿಗೆ ಸ್ವಂತ ಕಾರಿನಲ್ಲಿ ತಾನೇ ಡ್ರೈವ್ ಮಾಡಿಕೊಂಡು ಬಂದ ಭೋಜಣ್ಣ, ಕಾರನ್ನು ಹೊರಗಡೆ ನಿಲ್ಲಿಸಿ, ಸಿಟೌಟ್ ನಲ್ಲಿದ್ದ ಕುರ್ಚಿಯಲ್ಲಿ ಕುಳಿತು, ಕುತ್ತಿಗೆಗೆ ಗುಂಡು ಹಾರಿಸಿ ಕೊಂಡಿದ್ದಾರೆ.
ಇದನ್ನೂ ಓದಿ: Tumakuru; ಇಂಗ್ಲಿಷ್ ಓದಲು ಕಷ್ಟವೆಂದು ಆತ್ಮಹತ್ಯೆಗೆ ಯತ್ನಿಸಿದ ಬಾಲಕ!
ವಂಚಿಸಿದವನ ಮನೆ ಮುಂದೆ ಸಾವು?:
ಭೋಜಣ್ಣ ಮತ್ತು ಮೊಳಹಳ್ಳಿ ಗಣೇಶ್ ಶೆಟ್ಟಿ ನಡುವೆ ಆರ್ಥಿಕ ವ್ಯವಹಾರ ನಡೆದಿದ್ದು, ಗಣೇಶ ಶೆಟ್ಟಿ ಇವರಿಗೆ ಹಣ ನೀಡಲು ಬಾಕಿ ಇತ್ತು ಎನ್ನಲಾಗಿದೆ. ಆರ್ಥಿಕ ಕಲಹದ ಕಾರಣಕ್ಕೆ, ಮನನೊಂದು ಆತನ ಮನೆ ಎದುರಲ್ಲೇ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಕೈಗೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಘಟನಾ ಸ್ಥಳದಲ್ಲಿ ಡೆತ್ನೋಟ್ ಸಿಕ್ಕಿದ್ದು ಪೊಲೀಸರು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಹರಿದು ಬಂದ ಜನ ಸಾಗರ ಆಸ್ಪತ್ರೆಗೆ ಹಸ್ತಾಂತರ:
ತಾಲೂಕಿನ ಪ್ರಸಿದ್ಧ ವ್ಯಕ್ತಿಯೊಬ್ಬರು ಈ ರೀತಿ ಸಾರ್ವಜನಿಕವಾಗಿ ಆತ್ಮಹತ್ಯೆ ಮಾಡಿಕೊಂಡ ವಿಚಾರ ತಿಳಿಯುತ್ತಿದ್ದಂತೆ ಕುಂದಾಪುರದ ನಾಗರಿಕರು ಘಟನಾಸ್ಥಳಕ್ಕೆ ಓಡೋಡಿ ಬಂದರು. ಸಾವಿರಾರು ಜನ ಮನೆಮುಂದ ಜಮಾಯಿಸಿದರು. ಎಫ್ ಎಸ್ಎಲ್ ತಂಡ ಸ್ಥಳಕ್ಕೆ ಬಂದು ದಾಖಲೆಗಳನ್ನು ಕಲೆಹಾಕಿದ್ದು. ಘಟನೆಗೆ ಬಳಕೆಯಾದ ರಿವಾಲ್ವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: MBBS ಸೀಟು ಕೊಡಿಸೋದಾಗಿ ವೈದ್ಯನಿಗೆ ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸಿದ ವಂಚಕರ ಬಂಧನ
ಮೃತ ಭೋಜಣ್ಣ ನವರ ಅಂತಿಮ ಆಸೆಯಂತೆ, ಅವರ ಶವವನ್ನು ಆಸ್ಪತ್ರೆಗೆ ಹಸ್ತಾಂತರಿಸಲಾಗುವುದು ಎಂದು ಬಂಧುಗಳು ತಿಳಿಸಿದ್ದಾರೆ. ಸ್ವತಹ ಆಸ್ಪತ್ರೆ ಕಟ್ಟಿ ಸಾವಿರಾರು ಜೀವಗಳನ್ನು ಉಳಿಸಿರುವ ಭೋಜಣ್ಣ, ವೈದ್ಯಕೀಯ ವಿದ್ಯಾರ್ಥಿಗಳ ಅನುಕೂಲಕ್ಕೆ ಎಂದು ದೇಹದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಒಟ್ಟಿನಲ್ಲಿ ಉದ್ಯಮಿ ಕಟ್ಟೆ ಬೋಜಣ್ಣ ಅವರ ಸಾವಿನಿಂದ ಕುಂದಾಪುರ ಜನತೆ ಬೇಸರಗೊಂಡಿದ್ದಾರೆ ಮತ್ತು ಸಾವಿಗೆ ನಿಖರ ಕಾರಣವನ್ನೂ ಹುಡುಕುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ