ಪರಪ್ಪನ ಅಗ್ರಹಾರದಲ್ಲಿರುವ ಪ್ರಿಯಕರನಿಗೆ ಗುಪ್ತಾಂಗದಲ್ಲಿ ಗಾಂಜಾ ಎಣ್ಣೆ ಇಟ್ಟು ಸಪ್ಲೈ!

Published : Jul 15, 2022, 09:36 AM IST
 ಪರಪ್ಪನ ಅಗ್ರಹಾರದಲ್ಲಿರುವ ಪ್ರಿಯಕರನಿಗೆ ಗುಪ್ತಾಂಗದಲ್ಲಿ ಗಾಂಜಾ ಎಣ್ಣೆ ಇಟ್ಟು ಸಪ್ಲೈ!

ಸಾರಾಂಶ

ಸೆರೆಮನೆಯಲ್ಲಿರುವ ವಿಚಾರಣಾಧೀನ ಕೈದಿಗಳಿಗೆ ನೀಡಲು ಗುಪ್ತಾಂಗದಲ್ಲಿ ಬಚ್ಚಿಟ್ಟು ಡ್ರಗ್ಸ್ ತಂದ ಕೈದಿಗಳ ಇಬ್ಬರು ಗೆಳತಿಯರು ಕಾರಾಗೃಹದ ಭದ್ರತಾ ಸಿಬ್ಬಂದಿ ಕೈಗೆ ಸಿಕ್ಕಿದ್ದಿರುವ ಘಟನೆ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ. 

 ಬೆಂಗಳೂರು (ಜು.15): ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದೊಳಗಿನ ‘ಸೆರೆಹಕ್ಕಿ’ಗಳಿಗೆ ಪುಟ್ಬಾಲ್‌, ಚಪ್ಪಲಿ, ಆಹಾರ ಪೊಟ್ಟಣ ಹೀಗೆ ತರಹೇವಾರಿ ರೀತಿ ಡ್ರಗ್ಸ್ ಪೂರೈಕೆ ನೋಡಿದ್ದಾಯ್ತು. ಈಗ ಸೆರೆಮನೆಯಲ್ಲಿರುವ ವಿಚಾರಣಾಧೀನ ಕೈದಿಗಳಿಗೆ ನೀಡಲು ಗುಪ್ತಾಂಗದಲ್ಲಿ ಬಚ್ಚಿಟ್ಟು ಡ್ರಗ್ಸ್ ತಂದ ಕೈದಿಗಳ ಇಬ್ಬರು ಗೆಳತಿಯರು ಕಾರಾಗೃಹದ ಭದ್ರತಾ ಸಿಬ್ಬಂದಿ ಕೈಗೆ ಸಿಕ್ಕಿದ್ದಿದ್ದಾರೆ. ಚಾಮರಾಜಪೇಟೆಯ ಸಂಗೀತಾ ಹಾಗೂ ಶಿವಮೊಗ್ಗದ ಛಾಯಾ ಬಂಧಿತರಾಗಿದ್ದು, ಆರೋಪಿಗಳಿಂದ ಸುಮಾರು .20 ಲಕ್ಷಕ್ಕೂ ಅಧಿಕ ಮೌಲ್ಯದ 270 ಗ್ರಾಂ ಹಶೀಶ್‌ ಆಯಿಲ್‌ (ಗಾಂಜಾ) ಅನ್ನು ಪ್ರತ್ಯೇಕವಾಗಿ ಜಪ್ತಿ ಮಾಡಲಾಗಿದೆ. ನಾಲ್ಕೈದು ತಿಂಗಳಿಂದ ಜೈಲಿನಲ್ಲಿದ್ದ ತಮ್ಮ ಸ್ನೇಹಿತರ ಭೇಟಿಗೆ ಬುಧವಾರ ಈ ಇಬ್ಬರು ಆರೋಪಿಗಳು ಬಂದಿದ್ದರು. ಆಗ ಪ್ರವೇಶ ದ್ವಾರದಲ್ಲಿ ಕೈದಿಗಳ ಗೆಳತಿಯರ ನಡಿಗೆ ಶೈಲಿ ಕಂಡು ಶಂಕಿತರಾದ ಭದ್ರತಾ ಸಿಬ್ಬಂದಿ, ತಕ್ಷಣವೇ ಸಂಗೀತಾ ಹಾಗೂ ಛಾಯಳನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಡ್ರಗ್ಸ್ ಪತ್ತೆಯಾಯಿತು. ಕೂಡಲೇ ಇಬ್ಬರ ಮೇಲೆ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಹೇಳಿದ್ದಾರೆ.

 ಗುಪ್ತಾಂಗದಲ್ಲಿ ಕೊಬ್ಬರಿ  ಎಣ್ಣೆ ಡಬ್ಬಿಯಲ್ಲಿ ಡ್ರಗ್ಸ್: ನಾಲ್ಕು ತಿಂಗಳಿಂದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕಳ್ಳತನ ಪ್ರಕರಣದಲ್ಲಿ ಬಂಧಿತನಾಗಿ ಚಾಮರಾಜಪೇಟೆಯ ಲೋಹಿತ್‌ ಮುದ್ದೆ ಮುರಿಯುತ್ತಿದ್ದು, ಆತನ ಸಂದರ್ಶನಕ್ಕೆ ಸ್ನೇಹಿತೆ ಸಂಗೀತಾ ಬಂದಿದ್ದಳು. ಆಗ ಲೋಹಿತ್‌ಗೆ ನೀಡುವ ಸಲುವಾಗಿ ತನ್ನ ಗುಪ್ತಾಂಗದಲ್ಲಿ 220 ಗ್ರಾಂ ಹಶೀಶ್‌ ಎಣ್ಣೆ (ಗಾಂಜಾ ಎಣ್ಣೆ) ಪ್ಯಾಕೆಟನ್ನು ಇಟ್ಟು ಸಂಗೀತಾ ಬಂದಿದ್ದಳು. ಪ್ರವೇಶ ದ್ವಾರದಲ್ಲಿ ಭದ್ರತಾ ಸಿಬ್ಬಂದಿ ನೋಡಿದ ಕೂಡಲೇ ಆಕೆ, ನಿಧಾನವಾಗಿ ನಡೆಯಲಾರಂಭಿಸಿದಳು. ಇದರಿಂದ ಅನುಮಾನಗೊಂಡ ಮಹಿಳಾ ಸಿಬ್ಬಂದಿ, ಆಕೆಯನ್ನು ವಶಕ್ಕೆ ಪಡೆದು ತಪಾಸಣೆಗೆ ಒಳಪಡಿಸಿದಾಗ ಡ್ರಗ್ಸ್ ಸಿಕ್ಕಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೊಬ್ಬಳು 50 ಎಂಎಲ್‌ನ ಕೊಬ್ಬರಿ ಎಣ್ಣೆ ಬಾಟಲಿನಲ್ಲಿ ಹಶೀಶ್‌ ಆಯಿಲ್‌ ತುಂಬಿ ಗೆಳೆಯನಿಗೆ ಕೊಡಲು ಬಂದು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಛಾಯಾ ಕಾರಾಗೃಹದ ಭದ್ರತಾ ಸಿಬ್ಬಂದಿಗೆ ಬಲೆಗೆ ಬಿದ್ದಿದ್ದಾಳೆ. ಆರು ತಿಂಗಳಿಂದ ಮನೆಗಳ್ಳತನ ಪ್ರಕರಣದಲ್ಲಿ ಬಂಧಿತನಾಗಿ ಕಾಳಪ್ಪ ಜೈಲಿನಲ್ಲಿದ್ದಾನೆ. ಈತನ ಭೇಟಿಗೆ ಛಾಯಾ ಬಂದಿದ್ದಳು. ಕಾರಾಗೃಹದ ಪ್ರವೇಶ ದ್ವಾರದಲ್ಲಿ ಆಕೆ ಸಹ ಅನುಮಾನಾಸ್ಪದ ನಡಿಗೆಯಿಂದಲೇ ಸಿಕ್ಕಿಬಿದ್ದಿದ್ದಾಳೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆರ್‌ಎಂಡಿ, ವಿಮಲ್‌ ಹೆಸರಲ್ಲಿ ನಕಲಿ ಪಾನ್‌ ಮಸಾಲ ಮಾರುತ್ತಿದ್ದವರ ಬಂಧನ

ಗಾಂಜಾ ಮಾರಾಟ ಮಾಡುತ್ತಿದ್ದ ಕೇರಳ ರಾಜ್ಯದ ಡ್ರಗ್ಸ್ ಪೆಡ್ಲರ್‌ ಬಂಧನ: ಕೇರಳದ ಕಾಸರಗೋಡು ಜಿಲ್ಲೆ ಮೂಲದ ಮೊಹಮದ್‌ ಮಸೂಕ್‌(22) ಬಂಧಿತ. ಈತನಿಂದ .10.15 ಲಕ್ಷ ಮೌಲ್ಯದ 22 ಕೆ.ಜಿ. 810 ಗ್ರಾಂ ಗಾಂಜಾ ಜಪ್ತಿ ಮಾಡಲಾಗಿದೆ. ಗುರುವಾರ ಹಾಡಹಗಲೇ ಕಲಾಸಿಪಾಳ್ಯದ ಜಲಕಂಠೇಶ್ವರ ದೇವಸ್ಥಾನ ರಸ್ತೆಯ ಬಿ.ಸ್ಟ್ರೀಟ್‌ನ ಹತ್ತಿರ ಅಪರಿಚಿತ ವ್ಯಕ್ತಿ ಗಿರಾಕಿಗಳಿಗೆ ಮಾದಕವಸ್ತು ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಯನ್ನು ಮಾಲು ಸಹಿತ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿ ಮಸೂಕ್‌ ಡ್ರಗ್ಸ್ ಪೆಡ್ಲಿಂಗ್‌ ದಂಧೆಯಲ್ಲಿ ತೊಡಗಿದ್ದು, ಕೇರಳದಿಂದ ಕಡಿಮೆ ದರಕ್ಕೆ ಗಾಂಜಾ ಖರೀದಿಸಿ ನಗರಕ್ಕೆ ತಂದು ಗಿರಾಕಿಗಳಿಂದ ದುಬಾರಿ ಹಣಕ್ಕೆ ಗಾಂಜಾ ಮಾರಾಟ ಮಾಡುತ್ತಿದ್ದ. ಹೆಚ್ಚಿನ ವಿಚಾರಣೆಯಿಂದ ಈ ದಂಧೆಯಲ್ಲಿ ಯಾರೆಲ್ಲಾ ಕೈ ಜೋಡಿಸಿದ್ದಾರೆ ಎಂಬುದು ಗೊತ್ತಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಲಾಸಿಪಾಳ್ಯ ಪೊಲೀಸ್‌ ಠಾಣೆಯಲ್ಲಿ ಎನ್‌ಡಿಪಿಎಸ್‌ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ನಗರದಲ್ಲಿ 16 ಅಕ್ರಮ ಬಾಂಗ್ಲಾದೇಶದ ನಿವಾಸಿಗಳ ಬಂಧನ
ಶಿವಮೊಗ್ಗ ಲವ್ ಮ್ಯಾರೇಜ್: 2ನೇ ಮದುವೆಗೆ ಒಪ್ಪದ ಮೊದಲ ಹೆಂಡತಿಯನ್ನ ಯಮಲೋಕಕ್ಕೆ ಕಳಿಸಿದ ಗೋಪಿ!