
ಚಿಕ್ಕೋಡಿ (ಜು.15): ಬೆಳಗಾವಿ ಜಿಲ್ಲೆ ಚಿಕ್ಕೋಡಿ ಪೊಲೀಸರು ನಕಲಿ ಪಾನ್ ಮಸಾಲ ಜಾಲವನ್ನು ಭೇದಿಸಿ ಏಳು ಮಂದಿಯನ್ನು ಬಂಧಿಸಿದ್ದಾರೆ. ಕರ್ನಾಟಕದ ಇಬ್ಬರು, ತೆಲಂಗಾಣದ ಇಬ್ಬರು ಹಾಗೂ ದೆಹಲಿಯ ಮೂವರು ಬಂಧಿತರಾಗಿದ್ದು, ಅವರಿಂದ ಯಂತ್ರೋಪಕರಣಗಳು (ದಿಲ್ಲಿಯಲ್ಲಿ ವಶಕ್ಕೆ), ಲಕ್ಷಾಂತರ ರು. ಮೌಲ್ಯದ ಕಚ್ಚಾ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಪೈಕಿ ಐವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಂಧಿತರು ಆರ್‌ಎಂಡಿ, ವಿಮಲ್ ಸೇರಿದಂತೆ ದೇಶಾದ್ಯಂತ ಚಲಾವಣೆಯಲ್ಲಿರುವ ನಾನಾ ಕಂಪನಿಗಳ ಬ್ರ್ಯಾಂಡ್ ಬಳಸಿ ನಕಲಿ ಪಾನ್ ಮಸಾಲ ತಯಾರಿಸಿ ಮಾರಾಟ ಮಾಡುತ್ತಿದ್ದರು. ಈ ತಂಡ ದೆಹಲಿಯಲ್ಲಿ ಘಟಕಗಳನ್ನು ಹೊಂದಿದ್ದು, ದೇಶದ ಹಲವೆಡೆ ನಕಲಿ ಪಾನ್ ಮಸಾಲ ಪೂರೈಕೆ ಮಾಡುತ್ತಿದ್ದುದು ತನಿಖೆ ವೇಳೆ ತಿಳಿದುಬಂದಿದೆ.
ಕ್ರೂರಿ ತಾಯಿ: ಆರು ವರ್ಷದ ಮಗಳ ಮೇಲೆ ಬಿಸಿ ಎಣ್ಣೆ ಸುರಿದ ಮಲತಾಯಿ
ಬೆಳಕಿಗೆ ಬಂದಿದ್ದು ಹೇಗೆ?: 2012ರ ಮೇ 17ರಂದು ಯಕ್ಸಂಬಾ ಪಟ್ಟಣದ ಬಸವೇಶ್ವರ ಸರ್ಕಲ್‌ನಲ್ಲಿರುವ ರಾಜಲಕ್ಷ್ಮೀ ಕಿರಾಣಿ ಅಂಗಡಿಯವರಿಗೆ ಚಿಕ್ಕೋಡಿ ಮುಲ್ಲಾಗಲ್ಲಿ ನಿವಾಸಿ ನೌಶಾದ್ ಮುಲ್ಲಾ ಎಂಬುವವನು, 14 ಬಾಕ್ಸ್ ನಕಲಿ ಆರ್‌ಎಂಡಿ ಪಾನ್ ಮಸಾಲ ಪೌಚ್ ಮಾರಾಟ ಮಾಡುತ್ತಿದ್ದ ವೇಳೆ, ಧಾರಿವಾಲ್ ಇಂಡಸ್ಟ್ರೀಸ್ ಪ್ರೈ.ಲಿಮಿಟೆಡ್‌ನ ಸೇಲ್ಸ್ ಮ್ಯಾನೇಜರ್ ಶೀತಲ ಬಾಲೇಶ ಆರೋಪಿಯನ್ನು ಹಿಡಿದು ಪಾನ್ ಮಸಾಲ ಪೌಚ್‌ಗಳೊಂದಿಗೆ ಸದಲಗಾ ಪೊಲೀಸ್ ಠಾಣೆಗೆ ಹಾಜರುಪಡಿಸಿದ್ದರು.
ಆರೋಪಿ ವಿರುದ್ಧ ಐಪಿಸಿ ಕಲಂ 420ರಡಿ ಪ್ರಕರಣ ದಾಖಲಿಸಲಾಗಿತ್ತು. ಬಂಧಿತ ವ್ಯಕ್ತಿಯು ತನಿಖೆ ವೇಳೆ ನೀಡಿದ ಮಾಹಿತಿಯನ್ನಾಧರಿಸಿ ಜನರ ಆರೋಗ್ಯಕ್ಕೆ ಹಾನಿಕರವಾಗಿರುವ ಪಾನ್ ಮಸಾಲಾ ತಯಾರಿಸಿ ಸರ್ಕಾರಕ್ಕೆ ಕೋಟ್ಯಂತರ ರು. ತೆರಿಗೆ ವಂಚನೆ ನಡೆಯುತ್ತಿರುವ ಶಂಕೆ ಮೇಲೆ ತನಿಖೆ ತೀವ್ರಗೊಳಿಸಲಾಗಿತ್ತು. ಈ ವೇಳೆ ಆರ್‌ಎಂಡಿ ಅಷ್ಟೇ ಅಲ್ಲದೇ ವಿಮಲ್ ಪಾನ್ ಮಸಾಲಾ ಸೇರಿದಂತೆ ದೇಶಾದ್ಯಂತ ಚಲಾವಣೆಯಲ್ಲಿರುವ ನಾನಾ ಕಂಪನಿಗಳ ಬ್ರ್ಯಾಂಡ್ ಬಳಸಿ ನಕಲಿ ಪಾನ್ ಮಸಾಲಾ ತಯಾರಿಸಿ ಮಾರಾಟ ಮಾಡುವ ಜಾಲ ಪತ್ತೆಯಾಗಿದೆ.
ಉಡುಪಿ: ಸುಟ್ಟು ಕರಕಲಾದ ಕಾರಿನಲ್ಲಿ ಮೃತದೇಹ ಪತ್ತೆ
ಬೆಳಗಾವಿ ಪೊಲೀಸ್ ಅಧೀಕ್ಷಕರು, ಹೆಚ್ಚುವರಿ ಅಧೀಕ್ಷಕರು, ಚಿಕ್ಕೋಡಿ ಉಪಾಧೀಕ್ಷಕರ ಮಾರ್ಗದರ್ಶನದಲ್ಲಿ ಚಿಕ್ಕೋಡಿ ಸಿಪಿಐ ಆರ್.ಆರ್. ಪಾಟೀಲ, ಸದಲಗಾ ಪಿಎಸ್‌ಐ ರವೀಂದ್ರ ಅಜ್ಜನ್ನವರ, ಅಂಕಲಿ ಪಿಎಸ್‌ಐ ಭರತ, ಹಾಗೂ ಸಿಬ್ಬಂದಿ ವಿಠ್ಠಲ ನಾಯ್ಕ, ಎಸ್.ಎಲ್.ಗಳತಗಿ, ಎಸ್.ಪಿ.ಗಲಗಲಿ, ಎಸ್.ಎಚ್.ದೇವರ, ಆರ್.ಎನ್.ಮುಂದಿನಮನಿ, ಅವರನ್ನೊಳಗೊಂಡ ತಂಡ ರಚಿಸಿ ತನಿಖೆ ಆರಂಭಿಸಿದಾಗ ಈ ಜಾಲಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ