ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಆತ್ಮಹತ್ಯೆಗೆ ಶರಣಾದ ಸಹೋದರಿಯರು| ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಐನಾಪುರ ಗ್ರಾಮದಲ್ಲಿ ನಡೆದ ಘಟನೆ| ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ| ಈ ಸಂಬಂಧ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು|
ಕಲಬುರಗಿ(ಡಿ.09): ಒಂದೇ ಮನೆಯಲ್ಲಿ ಅಕ್ಕ ತಂಗಿ ಇಬ್ಬರೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಂಚೋಳಿ ತಾಲೂಕಿನ ಐನಾಪುರ ಗ್ರಾಮದಲ್ಲಿ ನಡೆದಿದೆ. ಐಶ್ವರ್ಯ ಸುತಾರ (20) ಹಾಗೂ ಸಾರಿಕಾ ಸುತಾರ (17) ಆತ್ಮಹತ್ಯೆಗೆ ಶರಣಾದ ಸಹೋದರಿಯರು.
ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವರ ತಂದೆ ವಿಶ್ವನಾಥ ಸುತಾರ ಐನಾಪುರ ಗ್ರಾಮದಲ್ಲಿ ಪೆಟ್ಟಿಗೆ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ಇವರಿಗೆ ಐವರು ಮಕ್ಕಳಿದ್ದು ಮೂವರ ಮದುವೆಯಾಗಿದೆ. ಐದನೆಯವಳಾದ ಸಾರಿಕಾಗೆ ತಿಂಗಳ ಹಿಂದಷ್ಟೆಮದುವೆ ನಿಶ್ಚಯವಾಗಿತ್ತು. ನಾಲ್ಕನೆಯವಳಾದ ಐಶ್ವರ್ಯಗೆ ಗಂಡು ಹುಡುಕಲಾಗುತಿತ್ತು ಎನ್ನಲಾಗಿದೆ.
ಅಂಕೋಲಾ: ನೇಣು ಬಿಗಿದುಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ
ವಿಶ್ವನಾಥ ಎಂದಿನಂತೆ ಮಧ್ಯಾಹ್ನ ಊಟಕ್ಕೆಂದು ಅಂಗಡಿಯಿಂದ ಮನೆಗೆ ಬಂದಾಗ ಇವರೇ ಊಟ ಬಡಿಸಿದ್ದಾರೆ. ನಂತರ ತಂದೆ ಮರಳಿ ಅಂಗಡಿಗೆ ತೆರಳಿದಾಗ ಇಬ್ಬರು ಯುವತಿಯರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಜೆ ತಾಯಿ ಹೊಲದಿಂದ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಪಿಎಸ್‌ಐ ರಾಜಶೇಖರ ರಾಠೋಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಂತರವಷ್ಟೇ ಈ ಸಹೋದರಿಯರ ಸಾವಿಗೆ ಕಾರಣ ತಿಳಿದು ಬರಬೇಕಿದೆ.