Roberrt ಸಿನಿಮಾ ನಿರ್ಮಾಪಕ ಉಮಾಪತಿ ಹತ್ಯೆಗೆ ಸಂಚು ಪ್ರಕರಣ: ಮತ್ತಿಬ್ಬರ ಬಂಧನ

By Kannadaprabha News  |  First Published Jan 24, 2022, 8:32 AM IST

‘ರಾಬರ್ಟ್‌’ ಸಿನಿಮಾ ನಿರ್ಮಾಪಕ ಉಮಾಪತಿ ಕೊಲೆಗೆ ಸಂಚು ರೂಪಿಸಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರ ಬಲೆಗೆ ಬಿದ್ದಿದ್ದಾರೆ.


ಬೆಂಗಳೂರು: ‘ರಾಬರ್ಟ್‌’ (Roberrt) ಸಿನಿಮಾ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ (Umapathy Srinivasa Gowda) ಕೊಲೆಗೆ ಸಂಚು ರೂಪಿಸಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರ ಬಲೆಗೆ ಬಿದ್ದಿದ್ದಾರೆ. ದರ್ಶನ್‌ ಅಲಿಯಾಸ್‌ ರಾಬರಿ ಮತ್ತು ಸಂಜು ಬಂಧಿತರು. ಆರೋಪಿಗಳು ಕಳೆದ ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದರು.

ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದರು. ಇತ್ತೀಚೆಗೆ ಸುಂಕದಕಟ್ಟೆಯ ಚೈತ್ರಾ ಬಾರ್‌ ಬಳಿ ಈ ಇಬ್ಬರು ಆರೋಪಿಗಳು ಇರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ (Arrest). ಮುಂದಿನ ತನಿಖೆಗಾಗಿ ಜಯನಗರ ಪೊಲೀಸರ (Police) ವಶಕ್ಕೆ ಒಪ್ಪಿಸಿದ್ದಾರೆ.

Tap to resize

Latest Videos

ಆರೋಪಿಗಳು ಅಪರಾಧ ಹಿನ್ನೆಲೆ ಹೊಂದಿದ್ದು, ರಾಬರಿ, ಕಳವು, ಕೊಲೆಗೆ ಯತ್ನ, ಸುಲಿಗೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಆರೋಪಿಗಳ ವಿರುದ್ಧ ನಗರದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ. ನಿರ್ಮಾಪಕ ಉಮಾಪತಿ ಹತ್ಯೆಗೆ ಸಂಚು ಪ್ರಕರಣದಲ್ಲಿ 16 ಮತ್ತು 17ನೇ ಆರೋಪಿಗಳಾಗಿದ್ದಾರೆ. ಹೆಚ್ಚಿನ ವಿಚಾರಣೆಗೆ ಒಳಪಡಿಸಿ ಮತ್ತಷ್ಟುಮಾಹಿತಿ ಕಲೆ ಹಾಕುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಉಮಾಪತಿ ಫಿಲಂ ಸಿಟಿ ನಿರ್ಮಾಣಕ್ಕೆ ಭೂಮಿ ಪೂಜೆ; 25 ಎಕರೆಯಲ್ಲಿ 175 ಕೋಟಿ ವೆಚ್ಚದ ಯೋಜನೆ!

ಹೊಂಚು ಹಾಕಿ ಕುಳಿತ್ತಿದ್ದಾಗ ಸೆರೆ: ಭೂಗತ ಪಾತಕಿ ಬಾಂಬೆ ರವಿ (Bombay Ravi) ಸೂಚನೆ ಮೇರೆಗೆ ಅರೋಪಿಗಳು ನಿರ್ಮಾಪಕ ಉಮಾಪತಿ, ಸಹೋದರ ದೀಪಕ್‌, ಕುಖ್ಯಾತ ರೌಡಿ ಶೀಟರ್‌ಗಳಾದ ಸೈಕಲ್‌ ರವಿ ಹಾಗೂ ಬೇಕರಿ ರಘು ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು. ಅದರಂತೆ 10ಕ್ಕೂ ಹೆಚ್ಚು ಆರೋಪಿಗಳು 2020ರ ಡಿ.20ರ ಮುಂಜಾನೆ ಐದು ಗಂಟೆ ಸುಮಾರಿಗೆ ಜಯನಗರ 7ನೇ ಬ್ಲಾಕ್‌ನ ನ್ಯಾಷನಲ್‌ ಕಾಲೇಜು ಮೈದಾನದ ಬಳಿ ಟೆಂಪೋ ಟ್ರಾವೆಲರ್‌ ವಾಹನದಲ್ಲಿ ಮಾರಕಾಸ್ತ್ರ ಹಿಡಿದು ಹೊಂಚು ಹಾಕಿ ಕುಳಿತ್ತಿದ್ದರು. 

ಈ ವೇಳೆ ಗಸ್ತಿನಲ್ಲಿದ್ದ ಜಯನಗರ ಠಾಣೆ ಇನ್ಸ್‌ಪೆಕ್ಟರ್‌ ಸುದರ್ಶನ್‌ ಅನುಮಾನಗೊಂಡು ವಶಕ್ಕೆ ಪಡೆಯಲು ಮುಂದಾದಾಗ, ಪೊಲೀಸರ ಮೇಲೆಯೇ ಟೆಂಪೋ ಟ್ರಾವೆಲರ್‌ ಹತ್ತಿಸಲು ಯತ್ನಿಸಿ ಮತ್ತು ಲಾಂಗ್‌ನಿಂದ ಹಲ್ಲೆಗೆ ಮುಂದಾಗಿ ಪರಾರಿಯಾಗಿದ್ದರು. ಈ ವೇಳೆ ಪೊಲೀಸರು ಕೆಲವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ನಿರ್ಮಾಪಕ ಉಮಾಪತಿ ಸೇರಿದಂತೆ ಕೆಲವರ ಹತ್ಯೆಗೆ ಹೊಂಚು ಹಾಕಿ ಕುಳಿತ್ತಿದ್ದಾಗಿ ಬಾಯ್ಬಿಟ್ಟಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಜಯನಗರ ಠಾಣೆ ಪೊಲೀಸರು, ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ಹಿನ್ನೆಲೆ: ಕುಖ್ಯಾತ ರೌಡಿಶೀಟರ್‌ ಬಾಂಬೆ ರವಿ ಆ್ಯಂಡ್‌ ಗ್ಯಾಂಗ್‌ ಸ್ಕೆಚ್‌ ಹಾಕಿದ್ದು ನಟ ದರ್ಶನ್‌ ಅಭಿನಯದ ‘ರಾಬರ್ಟ್‌’ ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ ಅವರಿಗೆ ಅಲ್ಲ, ಬದಲಿಗೆ ಸ್ಕೆಚ್‌ ನಡೆದಿದ್ದು, ನಿರ್ಮಾಪಕರ ಸಹೋದರನಿಗೆ ಎಂಬ ವಿಷಯ ಜಯನಗರ ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿತ್ತು. ನಿರ್ಮಾಪಕನ ಸಹೋದರ ದೀಪಕ್‌ ಹತ್ಯೆಗೆ ಬಾಂಬೆ ರವಿ ಸಂಚು ರೂಪಿಸಿದ್ದ. ಬಂಧಿತ ಆರೋಪಿಗಳು ಗೊಂದಲ ಹೇಳಿಕೆ ನೀಡುವ ಮೂಲಕ ನಿರ್ಮಾಪಕರ ಹೆಸರನ್ನು ಮೊದಲಿಗೆ ಹೇಳಿದ್ದರು. ತನಿಖೆ ವೇಳೆ ದೀಪಕ್‌ ಹತ್ಯೆಗೆ ಸ್ಕೆಚ್‌ ನಡೆದಿತ್ತು ಎಂದು ಬಾಯ್ಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಬರ್ಟ್ ನಿರ್ಮಾಪಕ ಉಮಾಪತಿ ಕರ್ನಾಟಕದಲ್ಲಿ ಸಿನಿಮಾ ಸಿಟಿ ಸೃಷ್ಟಿಸುವ ಕನಸು ಕಂಡಿದ್ದೇಕೆ?

ದೀಪಕ್‌, ನಿರ್ಮಾಪಕ ಉಮಾಪತಿ ಅವರ ದೊಡ್ಡಪ್ಪನ ಪುತ್ರ. ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ವ್ಯವಹಾರ ಹೊಂದಿದ್ದಾರೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಆರೋಪಿಗಳು ದೀಪಕ್‌ ಅವರ ಹತ್ಯೆಗೆ ಸಂಚು ರೂಪಿಸಿದ್ದರು ಎನ್ನಲಾಗಿತ್ತು. ಆದರೆ ಆರೋಪಿಗಳು ಗೊಂದಲದ ಹೇಳಿಕೆಯಿಂದ ಪ್ರಕರಣದ ತನಿಖೆಗೆ ಅಡ್ಡಿಯಾಗಿತ್ತು. ಇದೀಗ ಪ್ರಕರಣದ ಪ್ರಮುಖ ಆರೋಪಿ, ಬಾಂಬೆ ರವಿ ತಂಡದಲ್ಲಿ ಗುರುತಿಸಿಕೊಂಡಿದ್ದ ರಾಜೇಶ್ ಬಲೆಗೆ ಬಿದ್ದಿದ್ದು, ಪ್ರಕರಣದ ಮತ್ತಷ್ಟು ವಿವರಗಳು ಬಯಲಾಗುವ ಸಾಧ್ಯತೆ ಇದೆ. 

click me!