ಮಕ್ಕಳು ಆಟವಾಡುತ್ತಿದ್ದ ವೇಳೆ ಜವರಾಯನಂತೆ ಬಂದ ಕಾರು, ಮೂವರ ದುರ್ಮರಣ

By Suvarna News  |  First Published Feb 15, 2022, 7:14 PM IST

* ಆಟವಾಡುತ್ತಿದ್ದ ಮಕ್ಕಳ ಮೇಲೆ ಹರಿದ ಕಾರು
* ಚಾಲಕನ ನಿಯಂತ್ರಣ ತಪ್ಪಿ ಮಕ್ಕಳಿಗೆ ಡಿಕ್ಕಿ ಹೊಡೆದ ಕಾರು
* ಚಾಲಕ, ಇಬ್ಬರು ಮಕ್ಕಳು ಸೇರಿ ಮೂವರ ದುರ್ಮರಣ


ಹಾವೇರಿ, (ಫೆ.15):ರಸ್ತೆಬದಿಯ ಜಮೀನೊಂದರಲ್ಲಿ ಮಕ್ಕಳು ತಮ್ಮ ಪಾಡಿಗೆ ತಾವು ಆಟವಾಡುತ್ತಾ ಕೂತಿದ್ದರು. ಆದ್ರೆ, ಜವರಾಯನಂತೆ ಬಂದ ಕಾರು, ಏನೂ ಅರಿಯದ ಮಕ್ಕಳ ಮೇಲೆ ಹರಿದು ಪ್ರಾಣ ತೆಗೆದಿದೆ.

ಹೌದು..ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಸುತ್ತಕೋಟಿ ಗ್ರಾಮದ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಶಿಕ್ಷಕ ಹಾಗೂ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ.

Tap to resize

Latest Videos

undefined

ರಾಣೇಬೆನ್ನೂರು ನಗರದ ನಿವಾಸಿ, ಶಿಕ್ಷಕ ಜಯಪ್ರಕಾಶ್​(48) ಹಾಗೂ ಹಿರೇಕೆರೂರು ತಾಲೂಕಿನ ಸುತ್ತಕೋಟಿ ಗ್ರಾಮದ ಶಾಲಿನಿ(10) ಮತ್ತು ಯಶೋದಾ(8) ಮೃತ ದುರ್ದೈವಿಗಳು.

ತಾಯಿಯಾಗೋ ಕನಸು ಕಂಡಿದ್ದ ಮಹಿಳೆ ಜೀವನದಲ್ಲಿ ವಿಧಿಯಾಟ: ಒಂದೇ ದಿನ ತಾಯಿ-ಮಗು ಸಾವು

ಜಯಪ್ರಕಾಶ್​ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದರು. ಮಕ್ಕಳಾದ ಶಾಲಿನಿ ಮತ್ತು ಯಶೋದಾ ಇಬ್ಬರೂ ಸುತ್ತಕೋಟಿ ಗ್ರಾಮದ ರಸ್ತೆಬದಿಯ ಜಮೀನೊಂದರಲ್ಲಿ ಆಟವಾಡುತ್ತಾ ಕೂತಿದ್ದರು. ಜವರಾಯನಂತೆ ಬಂದ ಕಾರು, ಮಕ್ಕಳ ಮೇಲೆ ಹರಿದಿದೆ. ಕಾರಿನಲ್ಲಿದ್ದ ಶಿಕ್ಷಕರೂ ಸಹ ಮೃತಪಟ್ಟಿದ್ದಾನೆ

ಸುತ್ತಕೋಟಿ ಗ್ರಾಮದ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಜಮೀನಿನತ್ತ ನುಗ್ಗಿದೆ, ಅಲ್ಲೇ ಆಟವಾಡುತ್ತಿದ್ದ ಮಕ್ಕಳ ಮೇಲೆ ಹರಿದು, ಮರಕ್ಕೆ ಹೋಗಿ ಡಿಕ್ಕಿ ಹೊಡೆದಿದೆ. ಮರಕ್ಕೆ ಕಾರು ಡಿಕ್ಕಿಯಾದ ರಭಸಕ್ಕೆ ಗಂಭೀರ ಗಾಯಗೊಂಡ ಶಿಕ್ಷಕ ಸ್ಥಳದಲ್ಲೇ ಮೃತಪಟ್ಟರು. ಅತ್ತ ಗಂಭೀರ ಗಾಯಗೊಂಡು ಸಾವು-ಬದುಕಿನ ನಡುವೆ ನರಳಾಡುತ್ತಿದ್ದ ಮಕ್ಕಳನ್ನು ಗ್ರಾಮಸ್ಥರು ತಕ್ಷಣ ಹಿರೇಕೆರೂರು ತಾಲೂಕು ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದರಾದರೂ ಮಕ್ಕಳು ಬದುಕಲಿಲ್ಲ.

ಸ್ಥಳಕ್ಕೆ ಭೇಟಿ ನೀಡಿದ ಹಂಸಭಾವಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. 

ಅಧಿಕಾರಿಗಳು, ಗುತ್ತಿಗೆದಾರರ ನಿರ್ಲಕ್ಷ್ಯಕ್ಕೆ ಕೂಲಿಕಾರ್ಮಿಕ ಬಲಿ
ಹಾಸನ: ಕೂಲಿಕಾರ್ಮಿಕರೊಬ್ಬರು ನಿರ್ಮಾಣ ಹಂತದ ಅಣೆಕಟ್ಟು ಮೇಲಿಂದ ಬಿದ್ದು ಸಾವನ್ನಪ್ಪಿದ ಘಟನೆ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಕಟ್ಟೆಬೆಳಗುಲಿ ಗ್ರಾಮದ ಬಳಿ ನಡೆದಿದೆ.

ಮಂಜೇಗೌಡ (45) ಮೃತ ಕೂಲಿಕಾರ್ಮಿಕ. ಕಟ್ಟೆಬೆಳಗುಲಿ ಗ್ರಾಮದ ಸಮೀಪ ಹರಿಯುತ್ತಿರುವ ಹೇಮಾವತಿ ನದಿಗೆ ಅಣೆಕಟ್ಟು ಕಟ್ಟುವ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದೆ ಸುಮಾರು 20 ಅಡಿ ಎತ್ತರಕ್ಕೆ ಕೂಲಿ ಕಾರ್ಮಿಕನನ್ನು ಕಬ್ಬಿಣದ ಕಂಬಿಗಳನ್ನು ಹಿಡಿದು ಮೇಲಕ್ಕೆ ಹತ್ತಿಸಿದ್ದರು. ಈ ವೇಳೆ ತಲೆಗೆ ಅವರಿಗೆ ಹೆಲ್ಮೆಟ್ ನೀಡಿರಲಿಲ್ಲ. ಸುರಕ್ಷತಾ ಬಲೆಯನ್ನು ಕೂಡಾ ಅಳವಡಿಸಿರಲಿಲ್ಲ.

ಮಂಜೇಗೌಡರವರು ಕೆಲಸ ಮಾಡುವ ವೇಳೆ ಆಯತಪ್ಪಿ ಮೇಲಿನಿಂದ ಕೆಳಗೆ ಬಿದ್ದಿದ್ದಾರೆ. ಕೂಲಿಕಾರ್ಮಿಕನ ಸಾವಿಗೆ ಅಧಿಕಾರಿಗಳು, ಗುತ್ತಿಗೆದಾರರ ನಿರ್ಲಕ್ಷ್ಯವೇ ಕಾರಣವಾಗಿದ್ದು, ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸಂಬಂಧಿಕರು ಆಗ್ರಹಿಸಿದ್ದಾರೆ.

ಉದ್ಯೋಗ ಖಾತ್ರಿ ಕೆಲಸದ ವೇಳೆ ಕುಸಿದು ಬಿದ್ದು ಕಾರ್ಮಿಕ ಸಾವು
ಕಲಬುರಗಿ: ಉದ್ಯೋಗ ಖಾತ್ರಿ ಕೆಲಸ ಮಾಡುವ ವೇಳೆ ಕುಸಿದು ಬಿದ್ದು ವೃದ್ದ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆದಿದೆ.

ಹಲಕರ್ಟಿ ಗ್ರಾಮದ ನಿವಾಸಿ ಮಲ್ಲಪ್ಪ ಇಸಬಾ(68)ಮೃತ ದುರ್ದೈವಿ. ಇಂದು(ಮಂಗಳವಾರ) ಬೆಳಗ್ಗೆ ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳದಲ್ಲಿ ಹೊಳೆತ್ತುವ ಕೆಲಸ ನಡೆಯುತ್ತಿತ್ತು.

ಈ ವೇಳೆ ಮಲ್ಲಪ್ಪ ಇಸಬಾ ಕುಸಿದು ಬಿದ್ದಿದ್ದಾರೆ. ಸ್ಥಳದಲ್ಲಿದ್ದ ಅಧಿಕಾರಿಗಳು ಹಾಗೂ ಸಹ ಕಾರ್ಮಿಕರು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆದರೆ ದುರಾದೃಷ್ಟವಶಾತ್​ ಮಲ್ಲಪ್ಪ ಇಸಬಾ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

ಸ್ನೇಹಿತರ ಜಗಳ ಕೊಲೆಯಲ್ಲಿ ಅಂತ್ಯ
ಬೆಂಗಳೂರು: ಕುಡಿದ ಮತ್ತಿನಲ್ಲಿ ನಡೆದ ಗಲಾಟೆಯಲ್ಲಿ ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ಕೋಣನಕುಂಟೆಯಲ್ಲಿ ನಡೆದಿದೆ. ಮಂಜುನಾಥ್ ಮೃತ ದುರ್ದೈವಿ.

ಮೃತ ಮಂಜುನಾಥ್​ ನೆನ್ನೆ ರಾತ್ರಿ ಸ್ನೇಹಿತ ಶರತ್ ಕುಮಾರ್ ಜೊತೆ ಪಾರ್ಟಿ ಮಾಡಿದ್ದಾನೆ. ಈ ವೇಳೆ ಮೊಬೈಲ್​ ವಿಚಾರಕ್ಕೆ ಇಬ್ಬರ ಮಧ್ಯೆ ಗಲಾಟೆ ಆರಂಭವಾಗಿದ್ದು, ಶರತ್ ಕುಮಾರ್ ಸ್ನೇಹಿತನ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ತೀವ್ರ ರಕ್ತಸ್ರಾವದಿಂದ ನರಳಾಡಿದ್ದ ಮಂಜುನಾಥ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!