
ಮುಂಡಗೋಡ (ಡಿ.29): ಬಾಚಣಕಿ ಜಲಾಶಯದಲ್ಲಿ ಈಜಲು ಹೋಗಿದ್ದ ಇಬ್ಬರು ಟಿಬೇಟಿಯನ್ ಬೌದ್ಧ ಸನ್ಯಾಸಿಗಳು ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಮುಂಡಗೋಡ ತಾಲೂಕಿನ ಟಿಬೇಟಿಯನ್ ಲಾಮಾ ಕ್ಯಾಂಪ್ ನಂ.2ರ ಲೋಸಲಿಂಗ್ ಬೌದ್ಧ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾದ ತಿನ್ಲೆ ನಾಮಗೆಲ್ (22), ಸಾಂಗೈ ವಾಂಜು (23) ಎಂಬವರು ಸಾವನ್ನಪ್ಪಿದವರಾಗಿದ್ದಾರೆ. ಮೂರು ಜನ ಸ್ನೇಹಿತರು ಸೇರಿ ಬಾಚಣಕಿ ಜಲಾಶಯಕ್ಕೆ ಪಿಕ್‌ನಿಕ್‌ಗೆ ತೆರಳಿದ್ದರು.
ಈ ವೇಳೆ ಜಲಾಶಯದಲ್ಲಿ ಮೂರು ಜನರು ಈಜಲು ಇಳಿದಿದ್ದು, ಜಲಾಶಯ ತುಂಬಾ ಆಳವಿರುವ ಕಾರಣ ಈಜು ಬಾರದೆ ಇಬ್ಬರು ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮತ್ತೋರ್ವ ಈಜಿ ದಡ ಸೇರಿ ನಂತರ ತಮ್ಮ ಸ್ನೇಹಿತರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸಿಪಿಐ ಸಿದ್ದಪ್ಪ ಸಿಮಾನಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮೀಸಲಾತಿ ಪ್ರಮಾಣ ತಿಳಿದ ಬಳಿಕ ಮುಂದಿನ ತೀರ್ಮಾನ: ಬಸವಜಯ ಮೃತ್ಯುಂಜಯ ಸ್ವಾಮೀಜಿ
ಈಜಲು ತೆರಳಿದ್ದ ಇಬ್ಬರು ಬಾಲಕಿಯರು ಸಾವು: ಮಧುಗಿರಿ ತಾಲೂಕಿನಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಎಲ್ಲ ಕೆರೆ, ಕಟ್ಟೆ, ಬಾವಿ, ಹಳ್ಳ ಕೊಳ್ಳಗಳು ತುಂಬಿ ತುಳುಕುತ್ತಿದ್ದು, ನೀರಿನಲ್ಲಿ ಈಜಲು ಹೋಗಿದ್ದ ಐದು ಜನ ಮಕ್ಕಳ ಪೈಕಿ ಇಬ್ಬರು ಹೆಣ್ಣು ಮಕ್ಕಳು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಧಾರುಣ ಘಟನೆ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಪೋಲಿಸ್ ಠಾಣೆ ಸರಹದ್ದಿನ ಕೆಂಪಾಪುರ ಗ್ರಾಮದಲ್ಲಿ ಬುಧವಾರ ನಡೆದಿದೆ.
ಬುಧವಾರ ಷಷ್ಟಿ ಹಬ್ಬದ ಪ್ರಯುಕ್ತ ಶಾಲೆಗೆ ರಜೆ ಕೊಟ್ಟಿದ್ದರು. ರಜೆ ಇದ್ದ ಕಾರಣ ಕೆಂಪಾಪುರ ಗ್ರಾಮದ 5 ಜನ ಮಕ್ಕಳು ವೀರಾಪುರ ಮತ್ತು ಇಮ್ಮಡಗೊಂಡನಹಳ್ಳಿ ನಡುವೆ ಜಯಮಂಗಲಿ ನದಿಗೆ ಅಡ್ಡಲಾಗಿ ಕಟ್ಟಿದ್ದ ಚೆಕ್ ಡ್ಯಾಂ ಬಳಿ ಈಜಲು ಹೋಗಿದ್ದಾರೆ. ಕೆಂಪಾಪುರ ಗ್ರಾಮದ ಲಕ್ಷ್ಮೇನಾರಾಯಣ ಮಗಳು ಬಿಂದು (9) ಹಾಗೂ ಬಾಬುರವರ ಮಗಳು ಪ್ರಿಯಾಂಕ (8) ನೀರು ಆಳ, ಅಗಲ ಅರಿಯದೆ ಏಕಾಏಕಿ ನೀರಿನಲ್ಲಿ ಧುಮುಕಿದ್ದರಿಂದ ಆ ಮಕ್ಕಳಿಬ್ಬರು ಮೇಲೆ ಬರಲು ಸಾಧ್ಯವಾಗದೆ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ಈ ಮೃತ ಮಕ್ಕಳಿಬ್ಬರು ಅಣ್ಣ -ತಮ್ಮಂದಿರ ಮಕ್ಕಳಾಗಿದ್ದು ಸಹೋದರಿಯರು. ಇನ್ನೂ 3 ಜನ ಮಕ್ಕಳು ತೆಳುವಾದ ನೀರಿನಲ್ಲಿ ಈಜಾಡಿ ಹೊರ ಬಂದಿದ್ದಾರೆ. ಈ ಇಬ್ಬರು ಬಾಲಕಿಯರು ಮುಳುಗಿದ್ದನ್ನು ಮನಗಂಡು ಇವರಿಬ್ಬರು ಹೊರಗೆ ಬಾರದಿದ್ದಾಗ ನದಿ ದಡದಲ್ಲಿ ಬಟ್ಟೆ ತೊಳೆಯುತ್ತಿದ್ದ ಮಹಿಳೆಯಿಂದ ಈ ಮೂವರ ರಕ್ಷಣೆಯಾಗಿದೆ ಎನ್ನಲಾಗಿದೆ. ಹೆತ್ತವರ ಮತ್ತು ಪೋಷಕರ ಆಕ್ರಂದನ ಮುಗಿಲು ಮಟ್ಟಿತ್ತು. ಕೊಡಿಗೇನಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Ramanagara: ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಕುರಿತು ಚುನಾವಣಾ ಸಮಿತಿ ಸಭೆ
ಹರಿಯುವ ನೀರಲ್ಲಿ ಹುಚ್ಚಾಟ: ನದಿಯಲ್ಲಿ ಈಜಲು ಹೋದ ವ್ಯಕ್ತಿಯೊಬ್ಬ ನೀರಿನ ರಭಸಕ್ಕೆ ಕೊಚ್ಚಿ ಹೋದ ಘಟನೆ ರಾಜ್ಯದ ಗಡಿ ಭಾಗದ ತಮಿಳುನಾಡಿನ ಸಿಂಗಾರಪೇಟೆ ಬಳಿ ನಡೆದಿದೆ. ಗೋವಿಂದನ್ (32) ನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿ. ಅಂಗುತ್ತಿ ನದಿಯಲ್ಲಿ ಹರಿಯುವ ನೀರಿನಲ್ಲಿ ಸ್ನೇಹಿತರ ಜೊತೆ ನೀರಿಗಿಳಿದಿದ್ದ. ಈ ವೇಳೆ ಸ್ನೇಹಿತರು ಬೇಜವಾಬ್ದಾರಿಯಿಂದ ಹುಚ್ಚಾಟ ಪ್ರಾರಂಭಿಸಿದರು. ಗೋವಿಂದನ್ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದ್ದು ದೃಶ್ಯ ವಿಡಿಯೋ ಸೆರೆ ಆಗಿದೆ. ಮೃತದೇಹಕ್ಕಾಗಿ ಅಗ್ನಿಶಾಮಕ ದಳ ಸಿಬ್ಬಂದಿಯ ಹುಡುಕಾಟ ನಡೆಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ