ಬೆಂಗಳೂರು: ಸಂಬಳ ನೀಡದ್ದಕ್ಕೆ ಆತ್ಮಹತ್ಯೆ, ಶವ ರಹಸ್ಯವಾಗಿ ಸಮಾಧಿ..!

By Kannadaprabha News  |  First Published Feb 8, 2023, 6:47 AM IST

ಪಶ್ಚಿಮ ಬಂಗಾಳ ಮೂಲದ ವ್ಯಕ್ತಿ ಬೆಂಗಳೂರು ನಗರದಲ್ಲಿ ಚಿಂದಿ ಆಯುವ ವೃತ್ತಿ, ಹೆಂಡತಿಗೆ ಹಣ ಕಳುಹಿಸಲಾಗದೆ ಸಾವಿಗೆ ಶರಣು, ಇಬ್ಬರ ಬಂಧನ. 


ಬೆಂಗಳೂರು(ಫೆ.08):  ಸಂಬಳ ನೀಡದ್ದಕ್ಕೆ ಮನನೊಂದು ನೇಣು ಬಿಗಿದುಕೊಂಡು ಮೃತಪಟ್ಟಿದ್ದ ವ್ಯಕ್ತಿಯ ಮೃತದೇಹವನ್ನು ಯಾರಿಗೂ ತಿಳಿಯದಂತೆ ಸಮಾಧಿ ಮಾಡಿ ಸಾಕ್ಷ್ಯ ನಾಶ ಮಾಡಿದ್ದ ಇಬ್ಬರು ಆರೋಪಿಗಳನ್ನು ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳ ಮೂಲದ ಮೊಹಮ್ಮದ್‌ ರಂಜಾನ್‌(40) ಮತ್ತು ರಸೆಲ್‌(24) ಬಂಧಿತರು.

ಜ.14ರಂದು ಸೀಗೇಹಳ್ಳಿ ಎಚ್‌ಪಿ ಪೆಟ್ರೋಲ್‌ ಬಂಕ್‌ ಹಿಂಭಾಗದ ಕಾರ್ಮಿಕರ ಶೆಡ್‌ನಲ್ಲಿ ಪಶ್ಚಿಮ ಬಂಗಾಳ ಮೂಲದ ಎಂ.ಡಿ.ರಸೂಲ್‌ ಹವಾಲ್ದಾರ್‌(30) ಆತ್ಮಹತ್ಯೆ ಮಾಡಿಕೊಂಡಿದ್ದ. ಆರೋಪಿಗಳು ಈ ವಿಚಾರವನ್ನು ಯಾರಿಗೂ ಹೇಳದಂತೆ ಇತರೆ ಕಾರ್ಮಿಕರಿಗೆ ಬೆದರಿಸಿ, ಮೃತದೇಹವನ್ನು ಖಾಜಿಸೊನ್ನೇನಹಳ್ಳಿಯ ಖಬರಸ್ತಾನದಲ್ಲಿ ಹೂತಿದ್ದರು. ಈ ಸಂಬಂಧ ಮೃತ ಎಂ.ಡಿ.ರಸೂಲ್‌ ಸಂಬಂಧಿ ಅಚಿಮನ್‌ ಶೇಖ್‌ ನೀಡಿದ ದೂರಿನ ಮೇರೆಗೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tap to resize

Latest Videos

Mangaluru: ಹಾಡಹಗಲೇ ಜ್ಯುವೆಲ್ಲರಿ ಶಾಪ್ ಗೆ ನುಗ್ಗಿ ಸಿಬ್ಬಂದಿಯ ಬರ್ಬರ ಹತ್ಯೆ!

ಆರೋಪಿಗಳಾದ ಮೊಹಮ್ಮದ್‌ ರಂಜಾನ್‌, ರಸೆಲ್‌ ಹಾಗೂ ಮೃತ ಎಂ.ಡಿ.ರಸೂಲ್‌ ಒಂದೇ ರಾಜ್ಯದವರು. ಆರೋಪಿಗಳು ನಗರದ ಸೀಗೇಹಳ್ಳಿಯ ಎಚ್‌ಪಿ ಪೆಟ್ರೋಲ್‌ ಬಂಕ್‌ ಹಿಂಭಾಗ ನಾಗರಾಜ್‌ ಎಂಬುವವರಿಗೆ ಸೇರಿದ ಬಾಡಿಗೆ ಶೆಡ್‌ನಲ್ಲಿ ನೆಲೆಸಿದ್ದರು. ರಸ್ತೆ ಬಿದಿ ಚಿಂದಿ ಆಯ್ದುಕೊಂಡು ಮಾರಾಟ ಮಾಡಿ ಜೀವನ ಮಾಡುತ್ತಿದ್ದರು. ಮೃತ ಎಂ.ಡಿ.ರಸೂಲ್‌ ಕಳೆದ ನಾಲ್ಕು ತಿಂಗಳಿಂದ ಆರೋಪಿಗಳ ಬಳಿ ಸೈಕಲ್‌ನಲ್ಲಿ ಪ್ಲಾಸ್ಟಿಕ್‌ ಚಿಂದಿ ಹೆಕ್ಕುವ ಕೆಲಸ ಮಾಡುತ್ತಿದ್ದ. ಸಂಬಳ ಕೊಡದೆ ಸತಾಯಿಸುತ್ತಿದ್ದ ಆರೋಪಿಗಳು, ಸಂಬಳ ಕೇಳಿದಾಗಲೆಲ್ಲಾ ಗಲಾಟೆ ಮಾಡುತ್ತಿದ್ದರು.

ಸಂಬಳ ಕೇಳಿದ್ದಕ್ಕೆ ಹಲ್ಲೆ

ಮತ್ತೊಂದೆಡೆ ಪಶ್ಚಿಮ ಬಂಗಾಳದಲ್ಲಿರುವ ಪತ್ನಿಗೆ ಹಣ ಕಳುಹಿಸಲು ಸಾಧ್ಯವಾಗದೆ ಎಂ.ಡಿ.ರಸೂಲ್‌ ಮನನೊಂದಿದ್ದ. ಜ.14ರಂದು ಎಂ.ಡಿ.ರಸೂಲ್‌ ಮತ್ತೊಮ್ಮೆ ಸಂಬಳ ಕೇಳಲು ಆರೋಪಿಗಳ ಬಳಿ ತೆರಳಿದ್ದಾನೆ. ಈ ವೇಳೆ ಆರೋಪಿಗಳು ಹಲ್ಲೆಗೈದು, ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ‘ನಿನಗೆ ಕೆಲಸ ನೀಡಿರುವುದೇ ಹೆಚ್ಚಾಗಿದ್ದು, ಯಾವುದೇ ಸಂಬಳ ಕೊಡುವುದಿಲ್ಲ’ ಎಂದು ಹೀಯಾಳಿಸಿ ಬೈದಿದ್ದಾರೆ. ಇದರಿಂದ ಮನನೊಂದ ಎಂ.ಡಿ.ರಸೂಲ್‌ ತೊಟ್ಟಿದ್ದ ಲುಂಗಿಯಿಂದ ಬಾಡಿಗೆ ಶೆಡ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ವಿಚಾರ ತಿಳಿದು ಆರೋಪಿಗಳು, ಆತ್ಮಹತ್ಯೆ ವಿಚಾರವನ್ನು ಯಾರಿಗೂ ತಿಳಿಸಬಾರದು. ಒಂದು ವೇಳೆ ತಿಳಿಸಿದರೆ ಈ ಜಾಗದಿಂದ ಎಲ್ಲರನ್ನೂ ಓಡಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಬಳಿಕ ಮೃತದೇಹವನ್ನು ಸೊನ್ನೇನಹಳ್ಳಿಯ ಜಮೀಯಾ ಮಸೀದಿಗೆ ಸೇರಿ ಖಬರಸ್ತಾನದಲ್ಲಿ ಮಣ್ಣು ಮಾಡಿದ್ದರು.

ಈ ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಕೂಡಲೇ ಇಬ್ಬರು ಆರೋಪಿಗಳನ್ನು ಬಂಧಿಸಿ, ವಿಚಾರಣೆ ಮಾಡಿದಾಗ ಮೃತದೇಹ ಮಣ್ಣು ಮಾಡಿದ ಜಾಗ ತೋರಿಸಿದ್ದಾರೆ. ಬಳಿಕ ನ್ಯಾಯಾಲಯ ಅನುಮತಿ ಪಡೆದು ಮೃತದೇಹವನ್ನು ಗುಂಡಿಯಿಂದ ಹೊರಕ್ಕೆ ತೆಗೆಸಿ ಮರಣೋತ್ತರ ಪರೀಕ್ಷೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಕಾಡುಗೋಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!