ಒಂಟಿ ಮಹಿಳಾ ವ್ಯಾಪಾರಿಗಳ ಸರ ಪಡೆದು ಪರಾರಿಯಾಗ್ತಿದ್ದ ಖತರ್ನಾಕ್‌ ಕಳ್ಳರ ಬಂಧನ

By Kannadaprabha News  |  First Published Jun 18, 2022, 5:45 AM IST

*   ಮರುಳು ಮಾತನಾಡಿ ವಂಚಿಸುತ್ತಿದ್ದ ಖತರ್ನಾಕ್‌, ಆತನ ಗೆಳತಿ ಬಂಧನ
*   ಸಜ್ಜದ್‌ ಮಹಮ್ಮದ್‌ ಆಲಿ ಹಾಗೂ ಲಿಂಗರಾಜಪುರ ವೈದೇಹಿ ಬಂಧಿತ ಆರೋಪಿಗಳು
*  ಎಂಟು ಕಡೆ ವಂಚನೆ ಕೃತ್ಯಗಳನ್ನು ಸಜ್ಜದ್‌ ಎಸಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ


ಬೆಂಗಳೂರು(ಜೂ.18):  ಅಂಗಡಿಗಳಲ್ಲಿನ ಒಂಟಿ ಮಹಿಳಾ ವ್ಯಾಪಾರಿಗಳ ಜತೆ ಗ್ರಾಹಕನ ಸೋಗಿನಲ್ಲಿ ಮರಳು ಮಾತನಾಡಿ ಚಿನ್ನದ ಸರ ದೋಚುತ್ತಿದ್ದ ಕಿಡಿಗೇಡಿ ಹಾಗೂ ಆತನ ಗೆಳತಿಯನ್ನು ಬಸವೇಶ್ವರ ನಗರ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.

ಡಿ.ಜೆ.ಹಳ್ಳಿ ಸಜ್ಜದ್‌ ಮಹಮ್ಮದ್‌ ಆಲಿ ಹಾಗೂ ಲಿಂಗರಾಜಪುರ ವೈದೇಹಿ ಬಂಧಿತರಾಗಿದ್ದು, ಆರೋಪಿಗಳಿಂದ .7.55 ಲಕ್ಷ ಬೆಲೆ ಬಾಳುವ 202 ಗ್ರಾಂ ತೂಕದ ಚಿನ್ನಾಭರಣ ಹಾಗೂ ಎರಡು ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಮಂಜುನಾಥ ನಗರದಲ್ಲಿ ಡ್ರೈ ಫ್ರೂಟ್ಸ್‌ ವ್ಯಾಪಾರಿ ಸುನೀತಾ ಅವರಿಗೆ ಆರೋಪಿಗಳು ವಂಚಿಸಿ ಚಿನ್ನದ ಸರ ದೋಚಿದ್ದರು.

Tap to resize

Latest Videos

Chikkamagaluru: ತಮಿಳುನಾಡು ಮೂಲದ ಎಟಿಎಂ ವಂಚಕನ ಬಂಧಿಸಿದ ಮೂಡಿಗೆರೆ ಪೋಲೀಸರು

ಕಲ್ಯಾಣ ಮಂಟಪಗಳಲ್ಲಿ ಕ್ಯಾಟರಿಂಗ್‌ ಸೇವೆಯಲ್ಲಿ ಸಜ್ಜದ್‌ ಹಾಗೂ ಸ್ವಚ್ಛತಾ ವಿಭಾಗದಲ್ಲಿ ವೈದೇಹಿ ಕೆಲಸಗಾರರಾಗಿದ್ದು, ಹಲವು ದಿನಗಳಿಂದ ಇಬ್ಬರು ಸ್ನೇಹಿತರು. ಹಣದಾಸೆಗೆ ಬಿದ್ದ ಸಜ್ಜದ್‌, ಮಹಿಳೆಯರನ್ನು ವಂಚಿಸಿ ಸುಲಭವಾಗಿ ಹಣ ಸಂಪಾದನೆಗೆ ಮುಂದಾದ. ಅಂತೆಯೇ ಅಂಗಡಿಗಳಲ್ಲಿ ಒಂಟಿಯಾಗಿರುವ ಮಹಿಳಾ ವ್ಯಾಪಾರಿಗಳಿರುವ ವೇಳೆ ತೆರಳಿ ಅವರಿಗೆ ‘ಚಿನ್ನದ ಸರ ಚೆನ್ನಾಗಿದೆ. ಫೋಟೋ ತೆಗೆದುಕೊಳ್ಳುತ್ತೇನೆ’ ಎಂದು ಹೇಳಿ ಸರ ಪಡೆದು ಸಜ್ಜದ್‌ ಪರಾರಿಯಾಗುತ್ತಿದ್ದ. ಹೀಗೆ ದೋಚಿದ ಚಿನ್ನದ ಸರಗಳನ್ನು ಗೆಳತಿ ವೈದೇಹಿ ಮೂಲಕ ಖಾಸಗಿ ಫೈನಾನ್ಸ್‌ ಕಂಪನಿಗಳಲ್ಲಿ ಅಡಮಾನ ಮಾಡಿಸಿ ಹಣ ಪಡೆದು ಮೋಜಿನ ಜೀವನ ಸಾಗಿಸುತ್ತಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.

ಅಂತೆಯೇ ಮೇ 21ರಂದು ಮಂಜುನಾಥ ನಗರದ ಸುನೀತಾ ಅವರ ಡ್ರೈ ಪ್ರೂಟ್ಸ್‌ ಅಂಗಡಿಗೆ ತೆರಳಿದ ಸಜ್ಜದ್‌, ಒಣ ಹಣ್ಣು ಖರೀದಿಸಿದ ಬಳಿಕ ಕತ್ತಿನಲ್ಲಿದ್ದ ಚಿನ್ನದ ಸರ ಗಮನಿಸಿ. ಸುನೀತಾ ಅವರಿಂದ ಚಿನ್ನದ ಸರ ಪಡೆದಿದ್ದ. ಬಳಿಕ ‘ನಿಮ್ಮ ಅಂಗಡಿ ಪಕ್ಕದಲ್ಲೇ ನನ್ನ ಸ್ನೇಹಿತನ ಜ್ಯುವೆಲ​ರ್‍ಸ್ ಮಳಿಗೆ ಇದೆ. ಅಲ್ಲಿ ಕೆಲಸದವನಿಗೆ ತೋರಿಸಿಕೊಂಡು ಬರುತ್ತೇನೆ’ ಎಂದು ಸರ ಪಡೆದು ಪರಾರಿಯಾಗಿದ್ದ. ಈ ವಂಚನೆ ಬಗ್ಗೆ ಸುನೀತಾ ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಇದೇ ರೀತಿ ಬಸವೇಶ್ವರ ನಗರ, ನಂದಿನಿ ಲೇಔಟ್‌, ವಿಜಯ ನಗರ, ಜಾಲಹಳ್ಳಿ ಹಾಗೂ ಸದ್ದುಗುಂಟೆಪಾಳ್ಯ ಸೇರಿದಂತೆ ಎಂಟು ಕಡೆ ವಂಚನೆ ಕೃತ್ಯಗಳನ್ನು ಸಜ್ಜದ್‌ ಎಸಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಅಂತ ಅಧಿಕಾರಿಗಳು ಹೇಳಿದ್ದಾರೆ.
 

click me!