ಕುಂದಾಪುರ: ಎರಡು ಪ್ರತ್ಯೇಕ ಕಳ್ಳತನ ಕೇಸ್‌, ಇಬ್ಬರು ಖದೀಮರ ಬಂಧನ

By Girish Goudar  |  First Published Aug 12, 2022, 2:27 PM IST

ಎರಡು ಮಹತ್ವದ ಪ್ರಕರಣಗಳ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು


ಉಡುಪಿ(ಆ.12):  ಕುಟುಂಬದ ಸದಸ್ಯರೆಲ್ಲರೂ ತೀರ್ಥ ಯಾತ್ರೆಗೆ ತೆರಳಿದ್ದ ಸಂದರ್ಭದಲ್ಲಿ ಮನೆಗೆ ನುಗ್ಗಿ ಚಿನ್ನಾಭರಣ ಕದ್ದ ಕಳ್ಳನನ್ನು ಕುಂದಾಪುರ ಪೊಲೀಸರು ಸೆರೆಹಿಡಿದಿದ್ದಾರೆ. ಕುಂಭಾಶಿ ವಿನಾಯಕ ನಗರ ನಿವಾಸಿ ಸುಭಾಷ್ ಚಂದ್ರ ಆಚಾರ್ಯ ಬಂಧಿತ ಆರೋಪಿ. ಕುಂದಾಪುರ ತಾಲೂಕಿನ ಕುಂಭಾಶಿ ವಿನಾಯಕ ನಗರದಲ್ಲಿ ಆ.5ರಂದು ಪ್ರಕರಣ ಬೆಳಕಿಗೆ ಬಂದಿತ್ತು. ಮನೆಯ ಸದಸ್ಯರೆಲ್ಲರೂ ತೀರ್ಥಯಾತ್ರೆಗೆ ಹೋಗಿದ್ದರು. ಇದೇ ಸಂದರ್ಭದ ಲಾಭ ಪಡೆದು ಮನೆಗೆ ನುಗ್ಗಿದ್ದ ಕಳ್ಳ ಚಿನ್ನಾಭರಣ ನಗದು ಲೂಟಿ ಮಾಡಿ ತಲೆಮರೆಸಿಕೊಂಡಿದ್ದ. 

ಸ್ಥಳೀಯ ನಿವಾಸಿ ಮಂಜುನಾಥ ಜೋಗಿ ಎಂಬವರು ಜು. 29ರಂದು ಕುಟುಂಬ ಸಮೇತರಾಗಿ ಪಂಡರಾಪುರ ಮತ್ತು ಶಿರಡಿ ದೇವಸ್ಥಾನಕ್ಕೆ ತೀರ್ಥ ಯಾತ್ರೆಗೆ ತೆರಳಿದ್ದರು. ಆ. 5 ರಂದು ಅವರು ವಾಪಸ್ ಬಂದಾಗ ಮನೆಯಿಂದ ಚಿನ್ನಾಭರಣ ಕಳುವಾಗಿರುವ ಘಟನೆ ಬೆಳಕಿಗೆ ಬಂದಿತ್ತು. 

Latest Videos

undefined

ಡ್ರಗ್‌ ಪೆಡ್ಲರ್‌ಗಳನ್ನು ಚೇಸ್ ಮಾಡಿ ಹಿಡಿದ ಪೊಲೀಸರು... ವಿಡಿಯೋ ವೈರಲ್

ಮನೆಯ ಹಿಂಬದಿಯಿಂದ ಬಂದು ಅಡುಗೆ ಮನೆಯ ಬಾಗಿಲನ್ನು ಒಡೆದು ಕಪಾಟಿನಲ್ಲಿ ಇರಿಸಿದ್ದ 1.20 ಲಕ್ಷ ರೂಪಾಯಿ ಮೌಲ್ಯದ ಒಟ್ಟು 27 ಗ್ರಾಂ ಚಿನ್ನಾಭರಣ 13,500 ನಗದು ಕಳುವು ಮಾಡಲಾಗಿತ್ತು. ಕುಂದಾಪುರ ಉಪ ವಿಭಾಗದ ಡಿವೈಎಸ್ಪಿ ಶ್ರೀಕಾಂತ ಕೆ ಮತ್ತು ವೃತ್ತ ನಿರೀಕ್ಷಕ ಗೋಪಿಕೃಷ್ಣ.ಕೆ  ಅವರ ನಿರ್ದೇಶನದಲ್ಲಿ ಕಾರ್ಯಾಚರಣೆ ನಡೆಸಿದ ಕುಂದಾಪುರ ಪೊಲೀಸ್ ಠಾಣೆಯ ತನಿಕಾ ವಿಭಾಗದ ಉಪನಿರೀಕ್ಷಕ ಪ್ರಸಾದ್ ಕುಮಾರ್ ಕೆ ಹಾಗೂ ಕಾನೂನು ಸುವ್ಯವಸ್ಥೆ ಪಿಎಸ್ಐ ಸದಾಶಿವ ಆರ್. ಗವರೋಜಿ ಕಾರ್ಯಾಚರಣೆ ನಡೆಸಿದ್ದರು.

ಸುಭಾಷ್ ಚಂದ್ರ ಆಚಾರ್, ಮನೆ ಕಟ್ಟುತ್ತಿದ್ದು ಈ ಹಿಂದೆಯೂ ಹಣಕ್ಕಾಗಿ ಕಳ್ಳತನ ನಡೆಸಿದ್ದ ಎಂದು ತನಿಖೆಯ ವೇಳೆ ತಿಳಿದು ಬಂದಿದೆ. ಈತ ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದ, ಆದರೆ ಕಳ್ಳತನ ಮಾಡಿದ ನಂತರ ಇವನು ಕೆಲಸಕ್ಕೆ ಹೋಗಿರಲಿಲ್ಲ. ಆರೋಪಿಯ ಬ್ಯಾಂಕ್ ಖಾತೆಗೆ 20,000 ಹಣ ವರ್ಗಾವಣೆ ಕೂಡ ಆಗಿತ್ತು. ಕಳ್ಳತನ ನಡೆಸಿದ ಮನೆಯಲ್ಲಿ ಪಕ್ಕದ ಮನೆಯ ಯುವಕನ ಚಪ್ಪಲಿಯನ್ನಿಟ್ಟು ಆತನ ಮೇಲೆ ಸಂಶಯ ಬರುವಂತೆ ಆರೋಪಿ ಸುಭಾಷ್ ಚಂದ್ರ ಆಚಾರ್ಯ ಸಂಚು ಮಾಡಿದ್ದ.

ತನಿಖೆ ನಡೆಸುವ ವೇಳೆ ಪಕ್ಕದ ಮನೆಯ ಯುವಕನ ಮೇಲೆ ಸಂಶಯ ಮೂಡುವಂತೆ ಈ ಮೂಲಕ ಕಾರ್ಯತಂತ್ರ ರೂಪಿಸಿದ್ದ. ಇದೀಗ ಬಂಧಿತ ಅರೋಪಿಯಿಂದ 8 ಗ್ರಾಂ ಚಿನ್ನದ ಬ್ರೇಸ್ಲೇಟು, 12 ಗ್ರಾಂ ಪೆಂಡೆಂಟ್ ರೋಪ್ ಚೈನ್, ನಾಲ್ಕು ಗ್ರಾಂ ಮತ್ತು ಮೂರು ಗ್ರಾಂ ತೂಕದ ಚಿನ್ನದ ಉಂಗುರಗಳು ಹಾಗೂ ನಗದನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ.

ಕೆಲಸ ಬಿಡುತ್ತೇನೆ ಎಂದ ಪತ್ನಿಯನ್ನು ಚಾಕುವಿನಿಂದ ಕೊಚ್ಚಿ ಕೊಂದ ಪತಿ

ರಾಡ್‍ನಿಂದ ಹಲ್ಲೆಗೈದು ಗೃಹಿಣಿಯ ಚಿನ್ನಾಭರಣ ಎಗರಿಸಿದ ಪ್ರಕರಣ: ಆರೋಪಿ ಬಂಧನ

ವಾರದ ಹಿಂದೆ ಮಹಿಳೆಯ ತಲೆಗೆ ರಾಡ್‍ನಿಂದ ಹಲ್ಲೆ ನಡೆಸಿ ಬಳಿಕ ಚಿನ್ನಾಭರಣಗಳನ್ನು ಎಗರಿಸಿದ ಆರೋಪಿಯನ್ನು ಬುಧವಾರ ತ್ರಾಸಿಯ ಬಳಿ ಕುಂದಾಪುರ ಗ್ರಾಮಾಂತರ ಪೊಲೀಸರು ಸೆರೆ ಹಿಡಿದಿದ್ದಾರೆ. ಬಂಧಿತ ಆರೋಪಿಯನ್ನು ತ್ರಾಸಿಯ ಭರತ್‍ನಗರ ನಿವಾಸಿ ಪ್ರವೀಣ್ (24) ಎಂದು ಗುರುತಿಸಲಾಗಿದೆ. ಆರೋಪಿಯಿಂದ ಕೃತ್ಯಕ್ಕೆ ಬಳಸಿರುವ ಬೈಕ್, ಚಿನ್ನದ ಉಂಗುರ ಮತ್ತು ಗುಜ್ಜಾಡಿ ಸೊಸೈಟಿಯೊಂದರಲ್ಲಿ ಚಿನ್ನದ ಕರಿಮಣಿ ಸರ ಅಡವಿರಿಸಿ ಪಡೆದುಕೊಂಡ ನಗದು ಹಣ ಒಟ್ಟು ರೂ. 41,000 ನಗದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗುರುವಾರ ಸಂಜೆ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆ. 25ರವರೆಗೂ ನ್ಯಾಯಾಂಗ ಬಂಧನ ವಿಧಿಸಿದೆ.

ಪ್ರಕರಣದ ಹಿನ್ನೆಲೆ:  

ಶಾಲಾ ಬಸ್ಸಿನಲ್ಲಿ ಬರುವ ತನ್ನ ಮಗನನ್ನು ಕರೆದುಕೊಂಡು ಹೋಗಲು ಅಗಸ್ಟ್ 5 ರಂದು ಸಂಜೆ ಕಾಡಿನಬೆಟ್ಟು ನಿವಾಸಿ ದೇವಕಿ ಪೂಜಾರಿ (32) ಅವರು ಕುಂದಾಪುರ ತಾಲೂಕಿನ ಕೊರ್ಗಿ ಗ್ರಾಮದ ಕೊರ್ಗಿ ಕ್ರಾಸ್ ಸಮೀಪ ಕಾಡಿನಬೆಟ್ಟು ಕಡೆಗೆ ಹೋಗುವ ರಸ್ತೆಯ ಬಳಿಯಲಿ ರಸ್ತೆಯ ಬದಿಯಲ್ಲಿ ಬಂದು ನಿಂತಿದ್ದ ವೇಳೆ ಆರೋಪಿ ದೇವಕಿಯವರ ತಲೆಗೆ ಕಬ್ಬಿಣದ ರಾಡ್‍ನಿಂದ ಗಂಭೀರವಾಗಿ ಹಲ್ಲೆ ಮಾಡಿ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರ, ಬಳೆ ಹಾಗೂ ಉಂಗುರವನ್ನು ಎಗರಿಸಿ ಪರಾರಿಯಾಗಿದ್ದನು. ಹಾಡಹಗಲೇ ಈ ಪ್ರಕರಣ ನಡೆದಿದ್ದು, ಸ್ಥಳೀಯರನ್ನು ಭಯಭೀತರನ್ನಾಗಿ ಮಾಡಿತ್ತು. 
 

click me!