ಬೆಂಗಳೂರು: ಕಾವೇರಿ ವೆಬ್‌ಸೈಟ್‌ ಹ್ಯಾಕ್‌ ಮಾಡಿ ಬ್ಯಾಂಕ್‌ನಿಂದ ಹಣ ಲೂಟಿ..!

Published : Nov 01, 2023, 04:39 AM IST
ಬೆಂಗಳೂರು: ಕಾವೇರಿ ವೆಬ್‌ಸೈಟ್‌ ಹ್ಯಾಕ್‌ ಮಾಡಿ ಬ್ಯಾಂಕ್‌ನಿಂದ ಹಣ ಲೂಟಿ..!

ಸಾರಾಂಶ

ಬಿಹಾರ ಮೂಲದ ಅಬುಜರ್‌ ಹಾಗೂ ಪರ್ವೇಜ್‌ ಬಂಧಿತರಾಗಿದ್ದು, ಆರೋಪಿಗಳಿಂದ ₹1.05 ಲಕ್ಷ ನಗದು, ಕೃತ್ಯಕ್ಕೆ ಬಳಸಿದ್ದ 2 ಲ್ಯಾಪ್‌ಟಾಪ್, 2 ಮೊಬೈಲ್ ಹಾಗೂ 3 ಬೆರಳಚ್ಚು ಸ್ಕ್ಯಾನರ್‌ಗಳನ್ನು ವಶಕ್ಕೆ ಪಡೆಯಲಾಗಿದೆ. 

ಬೆಂಗಳೂರು(ನ.01): ರಾಜ್ಯ ನೋಂದಣಿ ಮತ್ತು ಮುಂದ್ರಾಂಕ ಇಲಾಖೆಯ ಅಧಿಕೃತ ವೆಬ್‌ಸೈಟ್ ‘ಕಾವೇರಿ 2.0’ನಲ್ಲಿ ಸಾರ್ವಜನಿಕರ ಆಧಾರ್ ಕಾರ್ಡ್ ಸಂಖ್ಯೆ ಕದ್ದು ಬಳಿಕ ಎಇಪಿಎಸ್‌ ಸಾಧನವನ್ನು ಬಳಸಿ ಜನರ ಬ್ಯಾಂಕ್‌ ಖಾತೆಗಳಿಂದ ಹಣ ದೋಚುತ್ತಿದ್ದ ಇಬ್ಬರು ಕಿಡಿಗೇಡಿಗಳು ಈಶಾನ್ಯ ವಿಭಾಗದ ಸಿಇಎನ್‌ ಠಾಣೆ ಪೊಲೀಸರ ಬಲೆ ಬಿದ್ದಿದ್ದಾರೆ.

ಬಿಹಾರ ಮೂಲದ ಅಬುಜರ್‌ ಹಾಗೂ ಪರ್ವೇಜ್‌ ಬಂಧಿತರಾಗಿದ್ದು, ಆರೋಪಿಗಳಿಂದ ₹1.05 ಲಕ್ಷ ನಗದು, ಕೃತ್ಯಕ್ಕೆ ಬಳಸಿದ್ದ 2 ಲ್ಯಾಪ್‌ಟಾಪ್, 2 ಮೊಬೈಲ್ ಹಾಗೂ 3 ಬೆರಳಚ್ಚು ಸ್ಕ್ಯಾನರ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಇತ್ತೀಚೆಗೆ ತಮ್ಮ ಬ್ಯಾಂಕ್ ಖಾತೆಯಿಂದ ಎರಡು ಹಂತದಲ್ಲಿ ₹48 ಸಾವಿರ ದೋಚಿರುವ ಬಗ್ಗೆ ಸಂತ್ರಸ್ತರು ದೂರು ನೀಡಿದ್ದರು. ಅದರನ್ವಯ ತನಿಖೆಗಿಳಿದ ಇನ್‌ಸ್ಪೆಕ್ಟರ್‌ ಎಂ.ಮಲ್ಲಿಕಾರ್ಜುನ್ ನೇತೃತ್ವದ ತಂಡವು, ದೂರುದಾರನ ಖಾತೆಯಿಂದ ಹಣ ವರ್ಗವಾಗಿದ್ದ ಬ್ಯಾಂಕ್‌ ಖಾತೆಯ ಬೆನ್ನತ್ತಿದ್ದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹೆತ್ತ ತಾಯಿ ಮೇಲೆಯೇ ಅತ್ಯಾಚಾರಕ್ಕೆ ಯತ್ನಿಸಿದ ಮಗ: ವಿರೋಧಿಸಿದ ತಾಯಿಯನ್ನು ಕತ್ತು ಹಿಸುಕಿ ಕೊಂದ

ಹೇಗೆ ವಂಚನೆ?

ರಾಜ್ಯ ನೋಂದಣಿ ಮತ್ತು ಮುಂದ್ರಾಕ ಇಲಾಖೆಯ ಕಾವೇರಿ ವೆಬ್‌ಸೈಟ್‌ನಲ್ಲಿ ನಿವೇಶನ ಸೇರಿದಂತೆ ಭೂಮಿ ನೋಂದಣಿಯಾದ ಕೂಡಲೇ ಖರೀದಿದಾರ ಹಾಗೂ ಮಾರಾಟಗಾರನ ಆಧಾರ್ ಕಾರ್ಡ್‌ ಸಮೇತ ದಾಖಲೆಗಳನ್ನು ಅಪ್‌ಲೋಡ್‌ ಮಾಡಲಾಗುತ್ತದೆ. ಈ ವೆಬ್‌ಸೈಟ್‌ನಲ್ಲಿ ಭೂ ದಾಖಲೆಗಳಲ್ಲಿದ್ದ ಸಾರ್ವಜನಿಕರ ಆಧಾರ್ ಸಂಖ್ಯೆಗಳನ್ನು ಆರೋಪಿಗಳು ಸಂಗ್ರಹಿಸಿದ್ದರು. ಬಳಿಕ ಆಧಾರ್‌ ಕಾರ್ಡ್ ಸಂಖ್ಯೆ ಬಳಸಿ ಜನರ ಬ್ಯಾಂಕ್ ಖಾತೆಗಳಿಗೆ ಆರೋಪಿಗಳು ಕನ್ನ ಹಾಕಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಕಾವೇರಿ 2.0 ತಂತ್ರಾಂಶವನ್ನು ಅಳವಡಿಸಿಕೊಂಡು ಆನ್‌ಲೈನ್‌ನಲ್ಲಿ ಭೂ ನೋಂದಣಿ ಪ್ರಕ್ರಿಯೆ ನಡೆಸಲು ಸಾರ್ವಜನಿಕರಿಗೆ ನೋಂದಣಿ ಇಲಾಖೆ ಅವಕಾಶ ಕಲ್ಪಿಸಿದೆ. ಅಂತೆಯೇ ಈ ವೆಬ್‌ಸೈಟ್‌ನಲ್ಲಿ ಲಾಗಿನ್ ಐಡಿ ತೆಗೆದು ಕ್ರಯ, ದಾನ, ಕರಾರು ಒಪ್ಪಂದ ಸೇರಿದಂತೆ ತಮ್ಮ ದಸ್ತಾವೇಜುಗಳನ್ನು ಅಪ್‌ಲೋಡ್ ಮಾಡಿ ಜನರು ನೋಂದಣಿ ಪ್ರಕ್ರಿಯೆ ಮುಗಿಸಿಕೊಳ್ಳಬಹುದು. ಈ ಭೂ ದಾಖಲೆಗಳಲ್ಲಿ ಆಸ್ತಿ ಮಾರಾಟಗಾರ ಮತ್ತು ಖರೀದಿದಾರನ ಆಧಾರ್ ನಂಬರ್ ಉಲ್ಲೇಖ ಮಾಡಲಾಗುತ್ತಿದೆ. ಈ ಮಾಹಿತಿ ತಿಳಿದ ಸೈಬರ್ ವಂಚಕರು, ಕಾವೇರಿ ವೆಬ್‌ಸೈಟ್‌ಗೆ ಕನ್ನ ಹಾಕಿ ಅದರಿಂದ ನೋಂದಣಿಯಾಗಿರುವ ಭೂ ದಾಖಲೆಗಳನ್ನು ಡೌನ್‌ಲೋಡ್ ಮಾಡಿಕೊಂಡು ಅದರಲ್ಲಿನ ಆಧಾರ್ ನಂಬರ್ ಮತ್ತು ಬೆರಳಚ್ಚು ಸಂಗ್ರಹಿಸುತ್ತಿದ್ದರು. ಆನಂತರ ಎಇಪಿಎಸ್‌ನಲ್ಲಿ ಆಧಾರ್ ನಂಬರ್ ಮತ್ತು ಬೆರಳಚ್ಚು ಬಳಸಿ ಸಾರ್ವಜನಿಕರ ಬ್ಯಾಂಕ್ ಖಾತೆಯಲ್ಲಿ ಹಣ ದೋಚುತ್ತಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇನ್ನು ಖಾತೆದಾರನ ಆಧಾರ್ ಕಾರ್ಡ್ ಲಿಂಕ್ ಆಗಿದ್ದರೆ ಸಾಕು. ಖಾತೆ ನಂಬರ್ ಅಥವಾ ಒಟಿಪಿ, ಕೋಡ್ ನಂಬರ್ ಇಲ್ಲದೆ ಕೇವಲ ಆಧಾರ್ ಸಂಖ್ಯೆ ಹಾಗೂ ಬೆರಳಚ್ಚು ಬಳಸಿ ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಮ್‌ನಲ್ಲಿ (ಎಇಪಿಎಸ್) ಗರಿಷ್ಠ ₹೧೦ ಸಾವಿರದವರೆಗೆ ಜನರು ಹಣ ಪಡೆಯಲು ಸರ್ಕಾರ ಅವಕಾಶ ಕಲ್ಪಿಸಿದೆ. ಇದಕ್ಕಾಗಿ ಗ್ರಾಮ ಮಟ್ಟದಲ್ಲಿ ಬ್ಯಾಂಕ್‌ಗಳ ಸಮೀಪದಲ್ಲಿ ಮಿನಿ ಎಟಿಎಂ ಯಂತ್ರಗಳನ್ನು ಕೇಂದ್ರ ಸರ್ಕಾರ ವಿತರಿಸಿದೆ. ಈ ವ್ಯವಸ್ಥೆಯನ್ನು ಸೈಬರ್ ವಂಚಕರಿಗೆ ವರದಾನವಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಬ್ಯೂಟಿ ಪಾರ್ಲರ್‌ನಲ್ಲಿ ಐಬ್ರೋ ಮಾಡಿಸಿಕೊಂಡಿದ್ದಕ್ಕೆ ತ್ರಿವಳಿ ತಲಾಕ್‌ ನೀಡಿದ ಪತಿ!

ಬ್ಯಾಂಕ್ ಖಾತೆಯಿಂದ ಒಟಿಪಿ ಅಥವಾ ಮತ್ಯಾವುದೇ ಮಾಹಿತಿ ಇಲ್ಲದೆ ಹಣ ವರ್ಗಾವಣೆ ಮಾಡಲಾಗಿತ್ತು. ಹೀಗಾಗಿ ಬ್ಯಾಂಕ್ ಖಾತೆದಾರನಿಗೆ ಹಣ ವರ್ಗಾವಣೆ ಬಗ್ಗೆ ಬ್ಯಾಂಕ್‌ನಿಂದ ಸಂದೇಶ ಸಹ ರವಾನೆಯಾಗುತ್ತಿರಲಿಲ್ಲ. ಇತ್ತೀಚೆಗೆ ಯಲಹಂಕದ ನಿವಾಸಿಯೊಬ್ಬರಿಂದ ಎರಡು ಹಂತದಲ್ಲಿ ₹48 ಸಾವಿರ ದೋಚಲಾಗಿತ್ತು. ಈ ಬಗ್ಗೆ ಸಂತ್ರಸ್ತರು ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದಾಗ ಕಾವೇರಿ ವೆಬ್‌ಸೈಟ್‌ ವಂಚನೆ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಎಸ್ಸೆಸ್ಸೆಲ್ಸಿ ಫೇಲ್‌, ವಂಚನೆಯಲ್ಲಿ ಪಂಟರ್‌

ಎಸ್ಸೆಸ್ಸೆಲ್ಸಿ ಓದಿಗೆ ಸಲಾಂ ಹೊಡೆದಿದ್ದ ಆರೋಪಿಗಳು, ಸೈಬರ್‌ ಕೃತ್ಯದಲ್ಲಿ ಪಂಟರ್‌ಗಳಾಗಿದ್ದರು. ಬಿಹಾರ ರಾಜ್ಯದ ನೇಪಾಳ ದೇಶದ ಗಡಿಭಾಗದ ಕುಗ್ರಾಮದಲ್ಲಿ ಕುಳಿತೇ ಬೆಂಗಳೂರಿನ ಬ್ಯಾಂಕ್ ಖಾತೆಗಳಿಗೆ ಆರೋಪಿಗಳು ಕನ್ನ ಹಾಕುತ್ತಿದ್ದರು. ತಾಂತ್ರಿಕವಾಗಿ ಇಬ್ಬರು ನಿಪುಣರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!
ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!