ಬೆಂಗಳೂರು: 6 ಕಾರು ಖರೀದಿಗೆ ಸಾಲ ಪಡೆದು ಟೋಪಿ..!

By Kannadaprabha News  |  First Published Mar 28, 2023, 5:27 AM IST

ನಕಲಿ ದಾಖಲೆ ಸೃಷ್ಟಿಸಿ ಫೈನಾನ್ಸ್‌ಗೆ ಟೋಪಿ, ಬಳಿಕ ಕಂತು ಕಟ್ಟದೆ ನಕಲಿ ದಾಖಲೆ ಸೃಷ್ಟಿಸಿ ಬೇರೆಯವರಿಗೆ ಮಾರಾಟ, ಇಬ್ಬರು ಖತರ್ನಾಕ್‌ ವಂಚಕರ ಬಂಧನ. 


ಬೆಂಗಳೂರು(ಮಾ.28):  ನಕಲಿ ದಾಖಲೆ ಸೃಷ್ಟಿಸಿ ಫೈನಾನ್ಸ್‌ ಕಂಪನಿಗಳಲ್ಲಿ ಸಾಲ ಪಡೆದು ಕಾರುಗಳನ್ನು ಖರೀದಿಸಿ ಬಳಿಕ ಸಾಲ ತೀರಿಸದೆ ನಕಲಿ ನಿರಾಪೇಕ್ಷಣಾ ಪತ್ರ (ಎನ್‌ಓಸಿ) ಸೃಷ್ಟಿಸಿ ಕಾರುಗಳನ್ನು ಮಾರಾಟ ಮಾಡಿ ವಂಚಿಸುತ್ತಿದ್ದ ಇಬ್ಬರು ಖತರ್ನಾಕ್‌ ವಂಚಕರನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಪೊಲೀಸರು ಬಂಧಿಸಿದ್ದಾರೆ.

ಜೋಗುಪಾಳ್ಯ ನಿವಾಸಿ ಪ್ರದೀಪ್‌ ಕುಮಾರ್‌(38) ಮತ್ತು ಯಾಸೀನ್‌ ನಗರದ ಮನ್ಸೂರ್‌ ಮಿರ್ಜಾ(38) ಬಂಧಿತರು. ಆರೋಪಿಗಳಿಂದ .80 ಲಕ್ಷ ಮೌಲ್ಯದ ಏಳು ಕಾರುಗಳನ್ನು ಜಪ್ತಿ ಮಾಡಲಾಗಿದೆ. ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಫೈನಾನ್ಸ್‌ ಕಂಪನಿಯ ಮ್ಯಾನೇಜರ್‌ ಮೋಹನ್‌ಕುಮಾರ್‌ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tap to resize

Latest Videos

Suicide case: ಅನುಮಾನಾಸ್ಪದವಾಗಿ ಪತ್ನಿ ಆತ್ಮಹತ್ಯೆ: ಪತಿಯಿಂದ ದೂರು

ಪ್ರಕರಣದ ವಿವರ:

ಆರೋಪಿ ಪ್ರದೀಪ್‌ ಕುಮಾರ್‌ 2018ರಲ್ಲಿ ಮಹಿಂದ್ರಾ ಫೈನಾನ್ಸ್‌ ಕಚೇರಿಗೆ ತೆರಳಿ ‘ಬೆಂಗಳೂರು ಟ್ರಾನ್ಸ್‌ಪೋರ್ಚ್‌ ಸಲ್ಯೂಷನ್ಸ್‌’ ಹೆಸರಿನ ಕಂಪನಿ ತೆರೆದಿದ್ದಾನೆ. ಈ ಕಂಪನಿಗೆ ವಾಹನಗಳನ್ನು ಖರೀದಿಸಲು ಸಾಲ ನೀಡುವಂತೆ ಮನವಿ ಮಾಡಿದ್ದ. ಈ ವೇಳೆ ಕಚೇರಿ ಹಾಗೂ ಮನೆಯ ದಾಖಲೆಗಳನ್ನು ಹಾಜರುಪಡಿಸಿದ್ದ. ಈ ದಾಖಲೆಗಳ ಪರಿಶೀಲನೆ ಬಳಿಕ ಫೈನಾನ್ಸ್‌ ಕಂಪನಿಯರು ಆರು ಮಹಿಂದ್ರಾ ಕ್ಸೈಲೋ ಕಾರುಗಳ ಖರೀದಿಗೆ ಸಾಲವನ್ನು ಮಂಜೂರು ಮಾಡಿದ್ದರು. ಸಾಲ ಪಡೆದು ವಾಹನ ಖರೀದಿಸಿದ್ದ ಆರೋಪಿಯು ಸಾಲದ ಕಂತು ಪಾವತಿಸಿಲ್ಲ. ಮೂರು ತಿಂಗಳ ಬಳಿಕ ಫೈನಾನ್ಸ್‌ನ ಸಿಬ್ಬಂದಿ ಈತನ ಕಚೇರಿ ವಿಳಾಸಕ್ಕೆ ತೆರಳಿದಾಗ ಅಲ್ಲಿ ಯಾವುದೇ ಕಂಪನಿ ಇರಲಿಲ್ಲ. ಮನೆಯ ವಿಳಾಸಕ್ಕೆ ಭೇಟಿ ನೀಡಿದಾಗ ಆ ಹೆಸರಿನ ವ್ಯಕ್ತಿ ಇಲ್ಲದಿರುವುದು ಕಂಡು ಬಂದಿತ್ತು. ಬಳಿಕ ಫೈನಾನ್ಸ್‌ ಕಂಪನಿಯವರು ಆರೋಪಿಯ ವಿರುದ್ಧ ದೂರು ನೀಡಿ ಸುಮ್ಮನಾಗಿದ್ದರು.

ಆರ್‌ಟಿಒ ಕಚೇರಿಯಲ್ಲಿ ನಕಲಿ ದಾಖಲೆ ಪತ್ತೆ

ಎರಡು ವರ್ಷದ ಹಿಂದೆ ಎಲೆಕ್ಟ್ರಾನಿಕ್‌ ಸಿಟಿ ಆರ್‌ಟಿಒ ಕಚೇರಿಯಿಂದ ಮ್ಯಾನೇಜರ್‌ ಮೋಹನ್‌ಕುಮಾರ್‌ಗೆ ಕರೆ ಮಾಡಿ, ಹೈದರಾಬಾದ್‌ ಆರ್‌ಟಿಒ ಕಚೇರಿಯಿಂದ ಒಂದು ಮಹಿಂದ್ರಾ ಕ್ಸೈಲೋ ಕಾರು ವರ್ಗಾವಣೆಗೆ ಮನವಿ ಬಂದಿದೆ. ಮನವಿಯಲ್ಲಿ ಫೈನಾನ್ಸ್‌ ಸಾಲ ತೀರಿಸಿರುವುದಾಗಿ ದಾಖಲಾತಿಗಳು ಹಾಗೂ ಮಾರಾಟಕ್ಕೆ ಎನ್‌ಒಸಿ ನೀಡಿದ್ದಾರೆ. ಈ ದಾಖಲೆಗಳು ಅನುಮಾನಾಸ್ಪದವಾಗಿದ್ದು, ಒಮ್ಮೆ ಪರಿಶೀಲಿಸುವಂತೆ ಹೇಳಿದ್ದಾರೆ. ಅದರಂತೆ ಮೋಹನ್‌ ಕುಮಾರ್‌ ಆರ್‌ಟಿಒ ಕಚೇರಿಗೆ ತೆರಳಿ ದಾಖಲೆಗಳನ್ನು ಪರೀಲಿಸಿದಾಗ ಅವು ನಕಲಿ ದಾಖಲೆಗಳು ಎಂಬುದು ಬೆಳಕಿಗೆ ಬಂದಿದೆ.

82 ವರ್ಷದ ತಂದೆ​ಯನ್ನೇ ಮನೆ​ಯಿಂದ ಹೊರ ಹಾಕಿದ ಮಗ - ಸೊಸೆ!

ಸಹಿ ಹಾಗೂ ಕಂಪನಿಯ ಸೀಲ್‌ ಫೋರ್ಜರಿ ಮಾಡಿ ನಕಲಿ ದಾಖಲೆ ಸೃಷ್ಟಿಸಿರುವುದು ಪತ್ತೆಯಾಗಿದೆ. ಉಳಿದ ಐದು ಕಾರುಗಳ ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ಇದೇ ರೀತಿ ಹೈದರಾಬಾದ್‌ಗೆ ಒಂದು ಕಾರು ಮಾರಾಟ ಮಾಡಿರುವುದು ಗೊತ್ತಾಗಿದೆ. ಬಳಿಕ ಸಿಸಿಬಿ ಪೊಲೀಸರು ಈ ಪ್ರಕರಣದ ತನಿಖೆ ಆರಂಭಿಸಿದ್ದರು. ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಕಲಿ ನಂ. ಪ್ಲೇಟ್‌ ಅಳವಡಿಸಿ ಮಾರಾಟ

ಆರೋಪಿ ಪ್ರದೀಪ್‌ ಫೈನಾನ್ಸ್‌ನಲ್ಲಿ ಸಾಲ ಪಡೆದು ಖರೀದಿಸಿದ ಕಾರುಗಳಿಗೆ ನಕಲಿ ನಂಬರ್‌ ಪ್ಲೇಟ್‌ ಅಳವಡಿಸಿ ಹೈದರಾಬಾದ್‌ಗೆ ತೆಗೆದುಕೊಂಡು ಹೋಗುತ್ತಿದ್ದ. ಅಲ್ಲಿ ಆರೋಪಿ ಮನ್ಸೂರ್‌ ಮಿರ್ಜಾ ಹಾಗೂ ಇತರ ಆರೋಪಿಗಳು ಸೇರಿಕೊಂಡು ಫೈನಾನ್ಸ್‌ ಹೆಸರಿನಲ್ಲಿ ನಕಲಿ ದಾಖಲೆ, ಎನ್‌ಒಸಿ ಸಿದ್ಧಪಡಿಸಿ ಗಿರಾಕಿಗಳನ್ನು ಹಿಡಿದು ಆ ಕಾರುಗಳನ್ನು ಮಾರಾಟ ಮಾಡುತ್ತಿದ್ದರು. ಆರೋಪಿಗಳು ಮಹಿಂದ್ರಾ ಫೈನಾನ್ಸ್‌ ಮಾತ್ರವಲ್ಲದೆ, ಎಚ್‌ಡಿಎಫ್‌ಸಿ ಫೈನಾನ್ಸ್‌ ಕಂಪನಿಗೂ ವಂಚನೆ ಮಾಡಿರುವುದು ಗೊತ್ತಾಗಿದೆ. ಹೆಚ್ಚಿನ ವಿಚಾರಣೆ ಬಳಿಕ ಮತ್ತಷ್ಟುಮಾಹಿತಿ ಲಭ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

click me!