* ಹಾವೇರಿಯ ಶಿಗ್ಗಾಂವಿ ತಾಲೂಕಿನ ಹುಲಗೂರ ಗ್ರಾಮದಲ್ಲಿ ನಡೆದ ಶೂಟೌಟ್ ಪ್ರಕರಣ
* ಮುಂಡಗೋಡ ತಾಲೂಕಿನ ಇಬ್ಬರನ್ನು ಬಂಧಿಸಿದ ಪೊಲೀಸರು
* ಇಮಾಮಸಾಬ ಸೈದಲಿ, ಮನ್ಸೂರ್ ಅಹ್ಮದ ಶೇಖ್ ಬಂಧಿತ ಆರೋಪಿಗಳು
ಮುಂಡಗೋಡ(ಮೇ.29): ಗಡಿ ಜಿಲ್ಲೆ ಹಾವೇರಿಯ ಶಿಗ್ಗಾಂವಿ ತಾಲೂಕಿನ ಹುಲಗೂರ ಗ್ರಾಮದಲ್ಲಿ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಡಗೋಡ ತಾಲೂಕಿನ ಇಬ್ಬರನ್ನು ಕಾರವಾರ ಜಿಲ್ಲಾ ವಿಶೇಷ ಪೊಲೀಸ್ ತಂಡ ಶನಿವಾರ ಬಂಧಿಸಿದೆ.
ತಾಲೂಕಿನ ಇಂದೂರ ಗ್ರಾಮದ ದಾವಲಸಾಬ ಇಮಾಮಸಾಬ ಸೈದಲಿ ಹಾಗೂ ಮುಂಡಗೋಡ ಪಟ್ಟಣದ ಬಸವನಬೀದಿ ಬಡಾವಣೆಯ ಸೈಕಲ್ ಶಾಪ್ ಮಾಲೀಕ ಮನ್ಸೂರ್ ಅಹ್ಮದ ಶೇಖ್ ಬಂಧಿತ ಆರೋಪಿಗಳು.
ಆರೋಪಿ ದಾವಲಸಾಬನಿಂದ ನಳಿಕೆಯ ಬಂದೂಕು, ಬಂದೂಕನ್ನು ಬಿಗಿ ಮಾಡುವ ಕಬ್ಬಿಣದ 2 ಕ್ಲಿಪ್‌ಗಳು, ಗನ್ ಪೌಡರ್, 7 ಮಗ್ಗಿನ ಕೇಫ್ಸ್ ಸಣ್ಣ ರಟ್ಟಿನ ಬಾಕ್ಸ್‌ಗಳು, 2ಸೀಸದ ಗುಂಡುಗಳು, ಸಣ್ಣ ಗಾತ್ರದ 22 ಸೀಸದ ಗುಂಡುಗಳು, 4 ಕೇಫ್ಸ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಶಿಗ್ಗಾವಿಯಲ್ಲಿ ಮತ್ತೆ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಮಹಿಳೆ..!
ತಾಲೂಕಿನಲ್ಲಿ ಅನಧಿಕೃತವಾಗಿ ಬಂದೂಕನ್ನು ಇಟ್ಟಿಕೊಂಡಿರುವ ಮಾಹಿತಿಯ ಮೇರೆಗೆ ಜಿಲ್ಲಾ ವರಿಷ್ಠಾಧಿಕಾರಿ ಡಾ. ಸುಮನ್ ಪೆನ್ನೇಕರ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಿದ್ದರು. ದಾವಲಸಾಬನಿಗೆ ಗುಂಡು ತಯಾರಿಸಲು ಕಚ್ಚಾ ವಸ್ತು ಪೂರೈಸಿದ ಆರೋಪದ ಮೇಲೆ ಮುಂಡಗೋಡ ಪೊಲೀಸರು ಶನಿವಾರ ಸಂಜೆ ಮನ್ಸೂರ ಅಹ್ಮದ ಶೇಖ್ ಎಂಬಾತನನ್ನು ಬಂಧಿಸಿದ್ದಾರೆ.
ಇದೇ ವೇಳೆ ಪ್ರಕರಣ ಬೆನ್ನತ್ತಿದ ಹಾವೇರಿ ಪೋಲಿಸರು ಮುಂಡಗೋಡ ತಾಲೂಕಿನ ಇಂದೂರ, ಹುನಗುಂದ ಗ್ರಾಮಗಳ ವ್ಯಾಪ್ತಿಯಲ್ಲಿ ಎರಡು ಮೂರು ದಿನಗಳಿಂದ ಸಂಚಾರ ಮಾಡಿದ್ದು, ಅನಧಿಕೃತವಾಗಿ ಬಂದೂಕು ದೊರೆತಿರುವುದು ಶೂಟೌಟ್ ಪ್ರಕರಣ ಭೇದಿಸಲು ಸಹಾಯವಾಗಲಿದೆ ಎಂದು ಪೋಲಿಸ್ ಮೂಲಗಳಿಂದ ತಿಳಿದು ಬಂದಿದೆ.