ಆತ ತಾಯಿಗೆ ಮೆಚ್ಚಿನ ಮಗ, ಬಡತನವಿದ್ದರೂ ಪ್ರತಿನಿತ್ಯ ಕೂಲಿ ಮಾಡಿ ತಾಯಿ ಸಹೋದರನ್ನು ಸಾಕುತ್ತಿದ್ದ. ತನ್ನ ಸಂಬಂಧಿಕರ ಜಮೀನಿನಲ್ಲೇ ಕೆಲಸ ಮಾಡಿ ಎಲ್ಲರಿಗೂ ಪ್ರೀತಿಪಾತ್ರರಾಗಿದ್ದ. ಆತನ ಮುಗ್ದ ಮನಸ್ಸಿಗೆ ಇಡೀ ಗ್ರಾಮದ ಜನರೇ ಮನಸೋತಿತ್ತು. ಆದರೆ ದುರದೃಷ್ಟ ಬೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಯುವಕ ಪ್ರಾಣಪಕ್ಷಿ ಹಾರಿಹೋಗಿದೆ.
ವರದಿ: ವರದರಾಜ್, ದಾವಣಗೆರೆ
ದಾವಣಗೆರೆ (ಮೇ.29): ಆತ ತಾಯಿಗೆ ಮೆಚ್ಚಿನ ಮಗ, ಬಡತನವಿದ್ದರೂ ಪ್ರತಿನಿತ್ಯ ಕೂಲಿ ಮಾಡಿ ತಾಯಿ ಸಹೋದರನ್ನು ಸಾಕುತ್ತಿದ್ದ. ತನ್ನ ಸಂಬಂಧಿಕರ ಜಮೀನಿನಲ್ಲೇ ಕೆಲಸ ಮಾಡಿ ಎಲ್ಲರಿಗೂ ಪ್ರೀತಿಪಾತ್ರರಾಗಿದ್ದ. ಆತನ ಮುಗ್ದ ಮನಸ್ಸಿಗೆ ಇಡೀ ಗ್ರಾಮದ ಜನರೇ ಮನಸೋತಿತ್ತು. ಆದರೆ ದುರದೃಷ್ಟ ಬೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಯುವಕ ಪ್ರಾಣಪಕ್ಷಿ ಹಾರಿಹೋಗಿದೆ. ದಾವಣಗೆರೆ ತಾಲ್ಲೂಕಿನ ಮಾಗನಹಳ್ಳಿ ಗ್ರಾಮದಲ್ಲಿ ನಡೆದ ಹೃದಯ ವಿದ್ರಾವಕ ಘಟನೆ ಕುರಿತ ಒಂದು ವರದಿ ಇಲ್ಲಿದೆ.
ಭತ್ತ ಕೊಯ್ಯುವ ಜಮೀನಿನಲ್ಲಿ ತುಂಡರಿಸಿ ಬಿದ್ದಿದ್ದ ವಿದ್ಯುತ್ ತಂತಿ: ಮಾಗನಹಳ್ಳಿ ಸಮೀಪದ ಭತ್ತದ ಹೊಲದಲ್ಲಿ ಇಂದು ನಡೆಯಬಾರದ್ದು ನಡೆದುಹೋಗಿದೆ. ಕಳೆದ ನಾಲ್ಕು ದಿನಗಳ ಹಿಂದೆ ತುಂಡರಿಸಿ ಬಿದ್ದಿದ್ದ ವಿದ್ಯುತ್ ತಂತಿ ಮಾಗನಹಳ್ಳಿಯ ಗಣೇಶ್ ಎಂಬ ಯುವಕನನ್ನು ಬಲಿ ಪಡೆದಿದೆ. ಬೆಳಿಗ್ಗೆ 10.30ರ ಸುಮಾರಿಗೆ ಮಾಗನಹಳ್ಳಿ ಗ್ರಾಮಕ್ಕೆ ವಿಷ್ಯ ತಿಳಿಯುತ್ತಿದ್ದಂತೆ ಆಕ್ರೋಶ ದುಃಖದ ಕಟ್ಟೆ ಹೊಡೆದಿದೆ. ಪರುಶರಾಮಣ್ಣನ ಗದ್ದೆಯಲ್ಲಿ ಗಣೇಶ್‌ಗೆ ವಿದ್ಯುತ್ ಶಾಕ್ ಆಗಿದೆ ಎಂಬುದು ಗೊತ್ತಾಗುತ್ತಿದ್ದಂತೆ ಇಡೀ ಗ್ರಾಮವೇ ಹೊಲದ ಬಳಿ ಬಂದಿದೆ. ಗಣೇಶ್‌ನ ತಾಯಿ ಅಣ್ಣತಮ್ಮಂದಿರ ಗೋಳಂತು ಹೇಳತೀರಾದಾಗಿದೆ. ಕೆಇಬಿ ಅಧಿಕಾರಿಗಳು, ಲೈನ್ ಮ್ಯಾನ್ ಗಳು ನಮ್ಮ ಹುಡುಗನನ್ನು ಬಲಿ ತೆಗೆದುಕೊಂಡಿತು ಎಂದು ಸಿಬ್ಬಂದಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Davanagere: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ರೇಣುಕಾಚಾರ್ಯ ಚಾಲನೆ
ಗಣೇಶ್‌ಗೆ ಇನ್ನು ಕೇವಲ 22 ವರ್ಷ, ಸಾಕಷ್ಟು ಕನಸನ್ನು ಕಟ್ಟಿಕೊಂಡು ಬಡತನದಲ್ಲಿದ್ದರು, ತನ್ನ ಸಂಬಂಧಿಕರ ಜಮೀನಿನಲ್ಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಾ ಸಹೋದರನನ್ನು ಹಾಗೂ ತಾಯಿಯನ್ನು ಸಾಕುತ್ತಿದ್ದ. ಆದರೆ ದುರದೃಷ್ಟವ ತುಂಡಾಗಿ ಬಿದ್ದಿರುವ ವಿದ್ಯುತ್ ತಂತಿಯೇ ಆತನಿಗೆ ಯಮಪಾಶವಾಗಿದೆ. ಬೆಳೆದು ನಿಂತಿದ್ದ ಭತ್ತ ಕಟಾವು ಮಾಡುವುದಕ್ಕು ಮುನ್ನ ಮಿಷನ್ ನಲ್ಲಿ ಕಟಾವು ಮಾಡಲು ಗದ್ದೆಯ ಬದುವನ್ನು ಗಣೇಶ್ ಹಸನು ಮಾಡುತ್ತಿದ್ದ. ಭತ್ತದ ಗದ್ದೆಯ ಬದುವಿನಲ್ಲಿ ಹುಲ್ಲು ಕಟಾವು ಮಾಡುವಾಗ ತುಂಡಾಗಿ ಬಿದ್ದಿರುವ ವಿದ್ಯುತ್ ತಂತಿ ಸ್ಪರ್ಶಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಆತನ ಜೊತೆಗಿದ್ದ ಮಹಿಳೆಗೆ ಗಂಭೀರ ಗಾಯಗಳಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ನಾಲ್ಕು ದಿನಗಳ ಹಿಂದೆಷ್ಟೇ ವಿದ್ಯುತ್ ಸ್ಪರ್ಶಕ್ಕೆ ನಾಲ್ಕು ಎಮ್ಮೆ, ಒಂದು ಹಸು ಬಲಿ: ಕಳೆದ ನಾಲ್ಕೈದು ದಿನಗಳ ಹಿಂದೆ ಸುರಿದ ಮಳೆಗೆ ವಿದ್ಯುತ್ ಕಂಬಗಳು ಹಾಗೂ ತಂತಿಗಳು ಕಟ್ ಆಗಿ ಬಿದ್ದಿವೆ. ಮೂರು ದಿನಗಳ ಹಿಂದೆ ಮಾಗನಹಳ್ಳಿ ಗ್ರಾಮದಲ್ಲಿ ಇದೇ ರೀತಿಯಾಗಿ ವಿದ್ಯುತ್ ತಂತಿ ತುಂಡಾಗಿ ಬಿದ್ದು ನಾಲ್ಕು ಹಸುಗಳು ಒಂದು ಎಮ್ಮೆ ಸಾವನ್ನಪ್ಪಿದೆ. ಈ ಬಗ್ಗೆ ಗ್ರಾಮಸ್ಥರು ಬೆಸ್ಕಾಂ ಸಿಬ್ಬಂದಿಗೆ ಎಚ್ಚರಿಸಿದ್ದರು.ಆದ್ರೆ ಕೆಇಬಿ ಸಿಬ್ಬಂದಿಗಳು ತಲೆಕೆಡಿಸಿಕೊಳ್ಳದೇ ನಿರ್ಲಕ್ಷ್ಯ ವಹಿಸಿದ್ದಾರೆ. ಬೆಸ್ಕಾಂ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಬೆಸ್ಕಾಂ ಸಿಬ್ಬಂದಿಗಳು ಸ್ವಲ್ಪ ಮುಂಜಾಗ್ರತೆ ವಹಿಸಿ ಕೆಲಸ ಮಾಡಿದ್ದರೆ ಈ ರೀತಿಯಾದ ಅವಘಡ ಆಗುತ್ತಿರಲ್ಲಿಲ್ಲ ಎಂದು ಗ್ರಾಮಸ್ಥರು ಆಕ್ರೋಶವ್ಯಕ್ತಪಡಿಸಿದ್ದಾರೆ.
ದಾವಣಗೆರೆ: ದೇವರ ಮಗ ಮರ್ಡರ್ ಕೇಸ್, 48 ಗಂಟೆಯಲ್ಲೇ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು
ರಸ್ತೆ ತಡೆ ಮಾಡಿದ ಗ್ರಾಮಸ್ಥರು ಸಾವಿಗೆ ನ್ಯಾಯಬೇಕೆಂದು ಪ್ರತಿಭಟನೆ: ಬೆಳಗ್ಗೆ 10.30 ವಿದ್ಯುತ್ ಅವಘಡ ಸಂಭವಿಸಿದ ಸ್ಥಳಕ್ಕೆ ಸಂಜೆ 4 ಗಂಟೆಯಾದ್ರು ಬೆಸ್ಕಾಂ ಹಿರಿಯ ಅಧಿಕಾರಿಗಳು ಬರಲೇ ಇಲ್ಲ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಹರಪನಹಳ್ಳಿ - ದಾವಣಗೆರೆ ರಸ್ತೆ ತಡೆ ಮಾಡಿ ಸಾರಿಗೆ ಸಂಚಾರ ವ್ಯತ್ಯಯವುಂಟು ಮಾಡಿದ್ದಾರೆ. ನಂತರ ಸರ್ಕಾರದ ಇಂಧನ ಸಚಿವರಿಗೆ ಪೋನ್ ಮಾಡಿ ಅಧಿಕಾರಿಗಳ ಬೇಜಬ್ಧಾರಿ ಬಗ್ಗೆ ತಿಳಿಸಿದ್ದಾರೆ. ನಂತರ ದಾವಣಗೆರೆ ಬೆಸ್ಕಾಂ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಸ್ಥಳಕ್ಕೆ ಆಗಮಿಸಿ ಅಹವಾಲು ಆಲಿಸಿದ್ದಾರೆ. ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ದ ಪ್ರಕರಣ ದಾಖಲಾಗಬೇಕು. ಬಡ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಬಾಳಿ ಬದುಕಬೇಕಿದ್ದ, ನೂರಾರು ಕನಸುಗಳನ್ನು ಕಂಡಿದ್ದ ಯುವಕ ಮಾತ್ರ ಬಾರದೂರಿಗೆ ಪ್ರಯಾಣ ಬೆಳೆಸಿದ್ದು ಇಡೀ ಮಾಗನಹಳ್ಳಿ ಗ್ರಾಮವೇ ಯುವಕನ ಸಾವಿಗೆ ಕಂಬನಿ ಮಿಡಿದಿದೆ.