
ಬೆಂಗಳೂರು(ಜು.02): ರೈಲಿನಲ್ಲಿ ಶೌಚಕ್ಕೆ ಹೋಗುವ ನೆಪದಲ್ಲಿ ನಲ್ಲಿಯ ಕೊಳಾಯಿ ಕದ್ದೊಯ್ದು ಮಾರುತ್ತಿದ್ದವರನ್ನು ಬಂಧಿಸಿರುವ ಆರ್‌ಪಿಎಫ್ ಸಿಬ್ಬಂದಿ ಇಬ್ಬರು ಆರೋಪಿಗಳಿಂದ 60ಕ್ಕೂ ಹೆಚ್ಚು ಟ್ಯಾಪ್ ಹಾಗೂ ಇತರೆ ಪರಿಕರ ವಶಪಡಿಸಿಕೊಂಡಿದ್ದಾರೆ.
ಕೆಎಸ್‌ಆರ್ ನಿಲ್ದಾಣದಲ್ಲಿ ನಗರದ ಶ್ರೀರಾಮಪುರ ಮೂಲದ ಷಣ್ಮುಕನ್ ರಂಗಸ್ವಾಮಿ (47) ಮತ್ತು ಗಾಂಧಿ (29) ಎಂಬುವರನ್ನು ಬಂಧಿಸಲಾಗಿದೆ. ಇವರ ಬಳಿಯಿದ್ದ 56 ಜಾಯ್ಸನ್ ಟ್ಯಾಪ್, 3 ಜಾಗ್ವಾರ್ ಟ್ಯಾಪ್, 1 ಜಾಗ್ವಾರ್ ಪ್ರೆಸ್ ಟ್ಯಾಪ್ ಮತ್ತು 6 ಬ್ರಾಸ್ ಫಟ್‌ವಾಲ್ವ ಜಪ್ತಿ ಮಾಡಲಾಗಿದೆ.
ಬೆಂಗಳೂರು: ವಕೀಲನ ಕಿಡ್ನಾಪ್ ಮಾಡಿ ಸುಲಿಗೆ, ಆಟೋ ಚಾಲಕ ಸೇರಿ ಇಬ್ಬರ ಬಂಧನ
ಬೆಂಗಳೂರು-ಚೆನ್ನೈ ಮತ್ತು ಬೆಂಗಳೂರು-ಧರ್ಮಾವರಂ ಸೆಕ್ಷನ್‌ಗಳಲ್ಲಿ ಚಲಿಸುತ್ತಿದ್ದ ರೈಲುಗಳ ಶೌಚಾಲಯದಲ್ಲಿ ಟ್ಯಾಪ್‌ಗಳು ಇಲ್ಲದಿರುವ ಬಗ್ಗೆ ಪ್ರಯಾಣಿಕರಿಂದ ನಿರಂತರವಾಗಿ ದೂರು ಬರುತ್ತಿತ್ತು. ಇವು ಕಳುವಾಗುತ್ತಿರುವ ಬಗ್ಗೆ ಅನುಮಾನದಿಂದ ತನಿಖೆಗಾಗಿ ಆರ್‌ಪಿಎಫ್ ತಂಡ ರಚಿಸಲಾಗಿತ್ತು. ಆರೋಪಿ ಷಣ್ಮುಗಂ ಟ್ಯಾಪ್ ಕಳಚಿ ಶೌಚಾಲಯದಿಂದ ಹೊರಬರುತ್ತಿದ್ದಾಗ ಆರ್‌ಪಿಎಫ್ ಬಲೆಗೆ ಬಿದ್ದಿದ್ದಾನೆ. ಈತನ ಹೇಳಿಕೆ ಮೇರೆಗೆ ಗಾಂಧಿ ಎಂಬಾತನನ್ನು ಬಂಧಿಸಲಾಗಿದೆ ಎಂದು ನೈಋುತ್ಯ ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳು ಶೌಚಕ್ಕೆ ಹೋಗುವ ನೆಪದಲ್ಲಿ ನಲ್ಲಿಯ ಟ್ಯಾಪ್‌ಗಳನ್ನು ಬಿಚ್ಚುತ್ತಿದ್ದರು. ಜೊತೆಗೆ ಕ್ಯಾರೇಜ್ ಮತ್ತು ವ್ಯಾಗನ್ (ಸಿ ಡಬ್ಲ್ಯೂ) ಪರಿಕರಗಳ ಕಳ್ಳತನದಲ್ಲಿ ತೊಡಗಿದ್ದರು. ಬಳಿಕ ಗುಜರಿ ಅಥವಾ ಪ್ಲಂಬರ್‌ಗಳಿಗೆ ಮಾರಿ ಹಣ ಮಾಡಿಕೊಳ್ಳುತ್ತಿದ್ದರು. ಜಾಗ್ವಾರ್ ಬ್ರಾಸ್, ಪ್ರೆಸ್ ಟ್ಯಾಪ್‌ಗೆ ಸಾವಿರ ರು. ವರೆಗೆ ಬೆಲೆಯಿದೆ. ಇದನ್ನು ಪ್ಲಂಬರ್‌ಗೆ ಕಡಿಮೆ ಬೆಲೆಗೆ ಮಾರುತ್ತಿದ್ದರು ಎಂದು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾರೆ.
ವಿಚಾರಣೆ ಮುಂದುವರಿಸಿರುವ ಆರ್‌ಪಿಎಫ್ ಆರೋಪಿಗಳ ತಂಡದಲ್ಲಿ ಇನ್ನೂ ಕೆಲವರಿದ್ದಾರೆ. ಅಲ್ಲದೆ ಇದಕ್ಕೂ ಮೊದಲು ಇವರು ಸಾಕಷ್ಟುಕೊಳಾಯಿಗಳನ್ನು ಕದ್ದಿದ್ದಾರೆ. ಆರೋಪಿಗಳಿಂದ ಸದ್ಯ 12960 ಮೌಲ್ಯದ ನಲ್ಲಿ ಮತ್ತು ಇತರೆ ಫಿಟ್ಟಿಂಗ್‌ಗಳನ್ನು ಜಪ್ತಿ ಮಾಡಲಾಗಿದೆ ಅಧಿಕಾರಿಗಳು ತಿಳಿಸಿದರು. ಮಂಡ್ಯದ ಆರ್‌ಪಿಎಫ್ ನಿರೀಕ್ಷಕ ಎ.ಕೆ. ತಿವಾರಿ, ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದ್ದು, ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶ್ಯಾಮ್ ಸಿಂಗ್ ಶ್ಲಾಘಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ