ಬೆಂಗಳೂರು ನಗರದಲ್ಲಿ ಸಿಕ್ಕಿಬಿದ್ದ ಶ್ರೀಲಂಕಾ ಕ್ರಿಮಿನಲ್‌ಗಳು, ಅವರನ್ನು ವಿದೇಶಕ್ಕೆ ಕಳುಹಿಸಲು ಶ್ರೀಲಂಕಾ ಡ್ರಗ್ಸ್ ಪೆಡ್ಲರ್ ಸೂಚನೆ, ಇದಕ್ಕಾಗಿ ಆಸ್ತಿ ಮಾರಿ 57 ಲಕ್ಷ ಹೊಂದಿಸಿದ ಚೆನ್ನೈ ಮೂಲದ ವ್ಯಕ್ತಿ, ನಕಲಿ ಪಾಸ್‌ಪೋರ್ಚ್ ತಯಾರಕನೂ ಬಲೆಗೆ.
ಬೆಂಗಳೂರು(ಆ.26): ಎರಡು ದಿನಗಳ ಹಿಂದೆ ನಗರದಲ್ಲಿ ಬಂಧಿತರಾಗಿದ್ದ ಶ್ರೀಲಂಕಾ ದೇಶದ ಕುಖ್ಯಾತ ಮೂವರು ಪಾತಕಿಗಳಿಗೆ ವಿದೇಶಕ್ಕೆ ಪರಾರಿಯಾಗಲು ನಕಲಿ ಪಾಸ್‌ಪೋರ್ಟ್ ಹಾಗೂ ಹಣಕಾಸು ನೆರವು ಕಲ್ಪಿಸಿದ್ದ ಇಬ್ಬರು ದುಷ್ಕರ್ಮಿಗಳು ಸಿಸಿಬಿ ಬಲೆಗೆ ಬಿದ್ದಿದ್ದಾರೆ.
ತಮಿಳುನಾಡು ಚೆನ್ನೈ ನಗರದ ಎ.ಎಸ್.ಕೆ.ಮನ್ಸೂರ್ ಅಲಿ ಹಾಗೂ ಬೆಂಗಳೂರಿನ ವಿವೇಕನಗರದ ಎಂ.ಅನ್ಬಳಗನ್ ಬಂಧಿತರಾಗಿದ್ದು, ಆರೋಪಿಗಳಿಂದ .57 ಲಕ್ಷ ನಗದು ಹಾಗೂ ಒಂದೂವರೆ ಕೋಟಿ ರುಪಾಯಿ ಮೌಲ್ಯದ ಡಿಡಿ ಜಪ್ತಿ ಮಾಡಲಾಗಿದೆ. ಬಂಧಿತ ಶ್ರೀಲಂಕಾ ದೇಶದ ಪ್ರಜೆಗಳ ವಿಚಾರಣೆ ವೇಳೆ ಅವರ ಸಂಪರ್ಕದಲ್ಲಿ ಮನ್ಸೂರ್ ಹಾಗೂ ಅನ್ಬಳಗನ್ ಇರುವುದು ಗೊತ್ತಾಯಿತು. ಅದರನ್ವಯ ಚೆನ್ನೈಗೆ ತೆರಳಿ ಮನ್ಸೂರ್‌ನನ್ನು ಬಂಧಿಸಿ ಕರೆತರಲಾಗಿದೆ ಎಂದು ಜಂಟಿ ಆಯುಕ್ತ (ಅಪರಾಧ) ಡಾ. ಎಸ್.ಡಿ.ಶರಣಪ್ಪ ಹೇಳಿದ್ದಾರೆ.
ಬಂಧನಕ್ಕೆ ಹೆದರಿ ಕ್ರಿಮಿನಾಶಕ ಸೇವಿಸಿದ ಆರೋಪಿ; ಮಂಗಳೂರು ಜಿಲ್ಲಾಸ್ಪತ್ರೆಗೆ ದಾಖಲು!
ನೇಪಾಳಕ್ಕೆ ಪರಾರಿಯಾಗಲು ಸಿದ್ಧತೆ:
ಇತ್ತೀಚೆಗೆ ತಮ್ಮ ದೇಶದಿಂದ ಅಕ್ರಮವಾಗಿ ಬೆಂಗಳೂರಿಗೆ ಬಂದು ನೆಲೆಸಿದ್ದ ಶ್ರೀಲಂಕಾದ ಮೋಸ್ಟ್ ವಾಂಟೆಡ್ ಕ್ರಿಮಿನಲ್‌ಗಳಾದ ಕಸನ್ ಕುಮಾರ್ ಸಂಕ, ಅಮಿಲ್ ನುವಾನ್ ಅಸಂಕ ಅಲಿಯಾಸ್ ಗೋತಾ ಸಿಲ್ವಾ ಹಾಗೂ ರಂಗಪ್ರಸಾದ್ ಅಲಿಯಾಸ್ ಚುಟ್ಟಾಮತ್ತು ಇವರಿಗೆ ಆಶ್ರಯ ಕಲ್ಪಿಸಿದ್ದ ಜಕ್ಕೂರಿನ ಜೈ ಪರಮೇಶ್‌ನನ್ನು ಸಿಸಿಬಿ ಬಂಧಿಸಿತ್ತು. ಶ್ರೀಲಂಕಾ ದೇಶದ ಅಂತಾರಾಷ್ಟ್ರೀಯ ಮಟ್ಟದ ಕುಖ್ಯಾತ ಕ್ರಿಮಿನಲ್ ಹಾಗೂ ಡ್ರಗ್‌್ಸ ಪೆಡ್ಲರ್ ಜಲಾಲ್ ಅಲಿಯಾಸ್ ಸಿದ್ಧಿಕಿ ತಂಡದಲ್ಲಿ ಸಂಕ, ಅಸಂಕ ಹಾಗೂ ರಂಗ ಸದಸ್ಯರಾಗಿದ್ದು, ಶ್ರೀಲಂಕಾದ ಕೊಲಂಬೋ ಹಾಗೂ ಜಾಫ್ನಾ ಸೇರಿದಂತೆ ಇತರೆ ನಗರಗಳಲ್ಲಿ ಕೊಲೆ ಹಾಗೂ ಗ್ಯಾಂಗ್ ವಾರ್‌ಗಳಲ್ಲಿ ಇವರು ಪಾತ್ರವಹಿಸಿದ್ದರು.
ಕೆಲ ದಿನಗಳ ಹಿಂದೆ ತನ್ನ ಸೂಚನೆ ಮೇರೆಗೆ ಶ್ರೀಲಂಕಾದಲ್ಲಿ ಅಪರಾಧ ಕೃತ್ಯ ಎಸಗಿದ್ದ ಮೂವರು ನಂಬಿಕಸ್ಥ ಭಂಟರ ರಕ್ಷಣೆಗೆ ಧಾವಿಸಿದ ಜಲಾಲ್, ಆ ಮೂವರನ್ನು ಹಡಗಿನ ಮೂಲಕ ತಮಿಳುನಾಡಿನ ರಾಮೇಶ್ವರಂಗೆ ಕರೆಸಿಕೊಂಡಿದ್ದ. ಬಳಿಕ ಮನ್ಸೂರ್ ನೆರವಿನಿಂದ ಬೆಂಗಳೂರಿಗೆ ತೆರಳಿ ಜೈ ಪ್ರಕಾಶ್ ಫ್ಲ್ಯಾಟ್‌ನಲ್ಲಿ ಶ್ರೀಲಂಕಾ ಪಾತಕಿಗಳು ಆಶ್ರಯ ಪಡೆದಿದ್ದರು. ಬೆಂಗಳೂರಿನಲ್ಲಿ ಸ್ಪಲ್ಪ ದಿನಗಳ ಮಟ್ಟಿಗೆ ತಾತ್ಕಾಲಿಕವಾಗಿ ತಲೆಮರೆಸಿಕೊಂಡು ಬಳಿಕ ನೇಪಾಳದಲ್ಲಿರುವ ಜಲಾಲ್ ತಂಡದ ಸಂಜೀವ್ ಬಳಿಗೆ ತೆರಳಲು ಆರೋಪಿಗಳು ಸಂಚು ರೂಪಿಸಿದ್ದರು.
ಆಸ್ತಿ ಮಾರಿ ಹಣ ವ್ಯವಸ್ಥೆ
ಸಂಜೀವ್ ಹಾಗೂ ಬಂಧಿತರ ನಡುವಿನ ಸಿಂಹಳೀಯ ಭಾಷೆಯಲ್ಲಿ ನಡೆಸಿರುವ ಮಾತುಕತೆಯ ಆಡಿಯೋ ತುಣುಕು ಸಹ ದಾಳಿ ವೇಳೆ ಪತ್ತೆಯಾಗಿದೆ. ಈ ಮೂವರಿಗೆ ಭಾರತೀಯ ಹೆಸರಿನಲ್ಲಿ ನಕಲಿ ಪಾಸ್‌ಪೋರ್ಚ್ ಹಾಗೂ ಆರ್ಥಿಕ ನೆರವು ಕಲ್ಪಿಸುವ ಜವಾಬ್ದಾರಿ ಮನ್ಸೂರ್‌ಗೆ ಜಲಾಲ್ ವಹಿಸಿದ್ದ. ಅಂತೆಯೇ ಶ್ರೀಲಂಕಾ ಪಾತಕಿಗಳಿಗೆ ನೀಡುವ ಸಲುವಾಗಿ ತನ್ನ ಆಸ್ತಿ ಮಾರಾಟ ಮಾಡಿ .57 ಲಕ್ಷವನ್ನು ಮನ್ಸೂರ್ ಹೊಂದಿಸಿದ್ದ ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ.
ಸಿಂಹಳೀಯ ಭಾಷೆ ತರ್ಜುಮೆ
ಬಂಧಿತ ಶ್ರೀಲಂಕಾ ಪ್ರಜೆಗಳಿಗೆ ಸಿಂಹಳೀಯ ಭಾಷೆ ಹೊರತುಪಡಿಸಿದರೆ ಬೇರೆ ಭಾಷೆ ಗೊತ್ತಿಲ್ಲ. ಹೀಗಾಗಿ ಆರೋಪಿಗಳ ವಿಚಾರಣೆಗೆ ಭಾಷಾಂತರಕಾರರ ನೆರವು ಪಡೆಯಲಾಗಿದ್ದು, ಆರೋಪಿಗಳ ಹೇಳಿಕೆಗಳನ್ನು ಕೂಡಾ ತರ್ಜುಮೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Mangaluru crime: ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ!
ನಕಲಿ ಪಾಸ್‌ಪೋರ್ಟ್ ದಂಧೆಕೋರ ಅನ್ಬಳಗನ್
ನಗರದಲ್ಲಿ ಶ್ರೀಲಂಕಾ ಪ್ರಜೆಗಳಿಗೆ ಆಶ್ರಯದಾತ ಜೈಪರಮೇಶ್ ಮೂಲಕವೇ ವಿವೇಕನಗರದ ಪಾಸ್‌ಪೋರ್ಚ್ ಏಜೆಂಟ್ ಅನ್ಬಳಗನ್ ಸಹ ಜಲಾಲ್ ಸಂಪರ್ಕಕ್ಕೆ ಬಂದಿದ್ದ. ಜಕ್ಕೂರಿಗೆ ವಾಸ್ತವ್ಯ ಬದಲಾಯಿಸುವ ಮುನ್ನ ವಿವೇಕನಗರದಲ್ಲೇ ಜೈಪರಮೇಶ್ ನೆಲೆಸಿದ್ದ. ಅಂದಿನಿಂದ ಆತನಿಗೆ ಅನ್ಬಳಗನ್ ಜತೆ ಸ್ನೇಹವಿತ್ತು. ಈ ಗೆಳೆತನದಲ್ಲೇ ಶ್ರೀಲಂಕಾ ಪಾತಕಿ ಜಲಾಲ್‌ಗೆ ಅನ್ಬಳಗನ್‌ನನ್ನು ಆತ ಪರಿಚಯಿಸಿದ್ದ. ಮೊದಲಿನಿಂದ ಪಾಸ್‌ಪೋರ್ಚ್ ದಂಧೆಯಲ್ಲಿ ಸಕ್ರಿಯವಾಗಿದ್ದ ಅನ್ಬಳಗನ್, ಹಣದಾಸೆಗೆ ಜಲಾಲ್‌ಗೆ ನಕಲಿ ವೀಸಾ ಹಾಗೂ ಪಾಸ್‌ಪೋರ್ಚ್ ಮಾಡಿದ್ದ. ಈಗ ಆತನ ಶಿಷ್ಯರಿಗೂ ಹಣಕ್ಕಾಗಿ ನಕಲಿ ಪಾಸ್‌ಪೋರ್ಚ್ ತಯಾರಿಸಲು ಅನ್ಬಳಗನ್ ಮುಂದಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಯಾರಿದು ಜಲಾಲ್?
ಶ್ರೀಲಂಕಾ ದೇಶದ ಕುಖ್ಯಾತ ಪಾತಕಿ ಜಲಾಲ್ ಅಲಿಯಾಸ್ ಸಿದ್ಧಿಕಿ, ಅಂತಾರಾಷ್ಟ್ರೀಯ ಮಟ್ಟದ ಡ್ರಗ್‌್ಸ ಜಾಲದ ಪ್ರಮುಖ ಪೆಡ್ಲರ್ ಆಗಿದ್ದಾನೆ. 20 ವರ್ಷಗಳ ಹಿಂದೆ ಚೆನ್ನೈ ನಗರದಲ್ಲಿ ಆತನ ಮೇಲೆ ಒಂದು ಅಪರಾಧ ಪ್ರಕರಣವಿದೆ. ಇದು ಹೊರತುಪಡಿಸಿದರೆ ಆತನ ಮೇಲೆ ಭಾರತದಲ್ಲಿ ಪ್ರಕರಣಗಳಿಲ್ಲ. ಆದರೆ ಚೆನ್ನೈ ನಗರದ ಮನ್ಸೂರ್ ಜಲಾಲ್‌ನ ಬೇನಾಮಿದಾರರನಾಗಿದ್ದು, ಮನ್ಸೂರ್ ಮೂಲಕ ಭಾರತದಲ್ಲಿ ಜಲಾಲ್ ಹಣಕಾಸು ವ್ಯವಹಾರ ನಡೆಸಿದ್ದಾನೆ. ಎಲ್‌ಇಡಿ ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟದಲ್ಲಿ ಆತ ಹಣ ಹೂಡಿಕೆ ಮಾಡಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.