Murder Cases: ದಿವಾನ್‌ ಕಾಟ್‌ ಮೇಲೆ ಮಲಗಲು ಜಗಳ: ಜಗಳ ಬಿಡಿಸಲು ಬಂದವನ ಕೊಲೆ

Kannadaprabha News   | Asianet News
Published : Jan 30, 2022, 05:42 AM IST
Murder Cases: ದಿವಾನ್‌ ಕಾಟ್‌ ಮೇಲೆ ಮಲಗಲು ಜಗಳ: ಜಗಳ ಬಿಡಿಸಲು ಬಂದವನ ಕೊಲೆ

ಸಾರಾಂಶ

*  ಸಹೋದರರ ದಿವಾನ್‌ ಕಾಟ್‌ ಜಗಳಕ್ಕೆ ದೊಡ್ಡಮ್ಮನ ಮಗ ಬಲಿ *  ಜಗಳದ ವೇಳೆ ಬೈದು ಬುದ್ಧಿ ಹೇಳಿದ್ದಕ್ಕೆ ಆಕ್ರೋಶ *  ಸ್ನೇಹಿತನ ಜತೆ ಸೇರಿ ಕೊಲೆ  

ಬೆಂಗಳೂರು(ಜ.30):  ದಿವಾನ್‌ ಕಾಟ್‌ ಮೇಲೆ ಮಲಗುವ ವಿಚಾರವಾಗಿ ನಡೆಯುತ್ತಿದ್ದ ಜಗಳ ಬಿಡಿಸಲು ಬಂದ ಸಂಬಂಧಿಕನ ಮೇಲೆ ಹಲ್ಲೆಗೈದು ಕೊಲೆ(Murder) ಮಾಡಿ ಪರಾರಿಯಾಗಿದ್ದ ಇಬ್ಬರನ್ನು ಜೀವನ್‌ ಭೀಮಾನಗರ ಠಾಣೆ ಪೊಲೀಸರು(Police) ಬಂಧಿಸಿದ್ದಾರೆ.

ನ್ಯೂ ತಿಪ್ಪಸಂದ್ರದ ಹನುಮಾನ್‌ ನಗರದ ನಿವಾಸಿ ವಿನಯ್‌ (19) ಮತ್ತು ನ್ಯೂ ತಿಪ್ಪಸಂದ್ರದ ಅಂಬೇಡ್ಕರ್‌ ಸ್ಲಂ ನಿವಾಸಿ ಮೋಹನ್‌(19) ಬಂಧಿತರು(Arrest). ಶುಕ್ರವಾರ ಕ್ಷುಲ್ಲಕ ಕಾರಣಕ್ಕೆ ನೆರೆ ಮನೆಯ ಸಂಬಂಧಿ ವೆಂಕಟೇಶ್‌(21) ಎಂಬಾತನನ್ನು ಕೊಲೆಗೈದು ಪರಾರಿಯಾಗಿದ್ದರು. ಈ ಸಂಬಂಧ ದಾಖಲಾಗಿದ್ದ ದೂರಿನ ಮೇರೆಗೆ ಘಟನೆ ನಡೆದ 24 ತಾಸಿನೊಳಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Crime News ವಾಟ್ಸಪ್‌ನಲ್ಲಿ ಪತ್ನಿಗೆ ಕಿರಿಕಿರಿ ಕೊಡುತ್ತಿದ್ದ ಸ್ನೇಹಿತನನ್ನು ಬಾರದ ಲೋಕಕ್ಕೆ ಕಳುಹಿಸಿದ ಪತಿ

ವಿನಯ್‌ ಮನೆಯಲ್ಲಿ ದಿವಾನ್‌ ಕಾಟ್‌ವೊಂದಿದ್ದು, ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ವಿನಯ್‌ ಮಲಗಲು ಮುಂದಾಗಿದ್ದಾನೆ. ಈ ವೇಳೆ ಆತನ ತಮ್ಮ ಮನು ತಾನು ಆ ದಿವಾನ್‌ ಕಾಟ್‌ ಮೇಲೆ ಮಲಗಬೇಕು ಎಂದಿದ್ದಾನೆ. ಈ ವೇಳೆ ಸಹೋದರರ ನಡುವೆ ಮಾತಿಗೆ ಮಾತು ಬೆಳೆದು ಜಗಳ ಆರಂಭವಾಗಿದೆ. ಇಬ್ಬರು ಜೋರಾಗಿ ಚೀರಾಡುತ್ತಿದ್ದರಿಂದ ನೆರೆಮನೆಯಲ್ಲಿ ನೆಲೆಸಿರುವ ಸಹೋದರರ ದೊಡ್ಡಮ್ಮನ ಮಗ ವೆಂಕಟೇಶ್‌ ಮಧ್ಯಪ್ರವೇಶಿಸಿ, ಮನುನನ್ನು ವಹಿಸಿಕೊಂಡು ವಿನಯ್‌ಗೆ ಬೈದು ಬುದ್ಧಿ ಹೇಳಿದ್ದಾನೆ.

ಇದರಿಂದ ವೆಂಕಟೇಶ್‌ ವಿರುದ್ಧ ಆಕ್ರೋಶಗೊಂಡ ವಿನಯ್‌, ಆತನೊಂದಿಗೆ ಜಗಳಕ್ಕೆ ಮುಂದಾಗಿದ್ದಾನೆ. ಅಷ್ಟೇ ಅಲ್ಲದೆ, ತನ್ನ ಸ್ನೇಹಿತ ಮೋಹನ್‌ಗೆ ಕರೆ ಮಾಡಿ ಮನೆ ಬಳಿ ಕರೆಸಿಕೊಂಡಿದ್ದಾನೆ. ಈ ವೇಳೆ ಆರೋಪಿಗಳು(Accused) ಇಬ್ಬರು ಸೇರಿಕೊಂಡು ದೊಣ್ಣೆಯಿಂದ ವೆಂಕಟೇಶ್‌ ಮೇಲೆ ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಗಾಜಿನ ಚೂರಿನಿಂದ ವೆಂಕಟೇಶ್‌ ಎದೆಗೆ ಇರಿದು ಪರಾರಿಯಾಗಿದ್ದಾರೆ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ವೆಂಕಟೇಶ್‌ನನ್ನು ಆಸ್ಪತ್ರೆಗೆ ಕರೆದೊಯ್ದಿದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಲಾಗಿದೆ(Jail) ಎಂದು ಪೊಲೀಸರು ತಿಳಿಸಿದ್ದಾರೆ.

ಸ್ನೇಹಿತನನ್ನು ಕೊಲೆಗೈದ ಇಬ್ಬರ ಬಂಧನ

ದಾವಣಗೆರೆ: ಕೆಲಸ ಮಾಡಿ ಬಂದು ಮನೆಯಲ್ಲಿ ಊಟ ಮಾಡಿ ಮಲಗಿದ್ದ ಯುವಕನನ್ನು ಮೇಲಕ್ಕೆ ಎತ್ತಿ, ನೆಲಕ್ಕೆ ಕುಕ್ಕಿ ಕೊಲೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಗಾಂಧಿ ನಗರ ಪೊಲೀಸರು ಬಂಧಿಸಿದ್ದಾರೆ.

ನಗರದ(Davanagere) ವಾಸಿಗಳಾದ ವಿನೋದ ಅಲಿಯಾಸ್‌ ವಿನೋದ ರಾಜ್‌ ಮತ್ತು ರಾಕಿ ಅಲಿಯಾಸ್‌ ರಾಕೇಶ ಬಂಧಿತ ಆರೋಪಿಗಳು. ಇಲ್ಲಿನ ಶಿವಾಜಿ ನಗರದ ಕಳಸಪ್ಪನ ಗಲ್ಲಿ ವಾಸಿ ಪುಟ್ಟಮ್ಮ ಪರಶುರಾಮಪ್ಪ ಅಲಿಯಾಸ್‌ ಪರಸಪ್ಪ ಎಂಬುವರ ಮಗ ಪುನೀತ(22 ವರ್ಷ)ನ ಕೊಲೆಗೆ ಸಂಬಂಧಿಸಿದಂತೆ ಇಬ್ಬರೂ ಆರೋಪಿಗಳನ್ನು ಪೊಲೀಸರು ಬಂಧಿಸಿ, ತನಿಖೆ(Investigation) ಕೈಗೊಂಡಿದ್ದಾರೆ.

ಎಂದಿನಂತೆ ಜ.25ರ ರಾತ್ರಿ 9ರ ವೇಳೆ ಪುನೀತ ಕೆಲಸ ಮುಗಿಸಿಕೊಂಡು ಬಂದು, ಮನೆಯಲ್ಲಿ ಊಟ ಮಾಡಿ ತನ್ನ ಕೋಣೆಯ ಬಾಗಿಲು ಹಾಕಿಕೊಂಡು ಮಲಗಿದ್ದ. ಅದೇ ವೇಳೆ ಪುನೀತನ ಸ್ನೇಹಿತರಾದ ವಿನೋದ, ರಾಕಿ ಎಂಬುವರು ಬಂದು, ಪುನೀತನ ತಾಯಿ ಪುಟ್ಟಮ್ಮ ಪರಸಪ್ಪ, ಸಹೋದರಿ ಶಿಲ್ಪಾಗೆ ಪುನೀತ ಎಲ್ಲಿದ್ದಾನೆಂದು ಪ್ರಶ್ನಿಸಿ, ಅವಾಚ್ಯವಾಗಿ ನಿಂದಿಸಿದ್ದಾರೆ. ಮನೆಯಿಂದ ಹೊರಗೆ ಬಾರೋ ಅಂತೆಲ್ಲಾ ಕೂಗಿದ್ದಾರೆ. ತಾಯಿ, ಮಗಳಿಬ್ಬರೂ ಮನೆಯ ಬಳಿ ಹೀಗೇಕೆ ಕೂಗಾಡುತ್ತಿದ್ದೀರೆಂದು ಪ್ರಶ್ನಿಸಿದ್ದಾರೆ. ಅದಕ್ಕೆ ಪುನೀತ ಇದ್ದರೆ ಕಳಿಸಿ ಎಂಬುದಾಗಿ ಆರೋಪಿಗಳು ಹೇಳಿದ್ದಾರೆ. ಅವನು ಕೆಲಸ ಮಾಡಿಕೊಂಡು, ಬಂದು ಈಗಷ್ಟೇ ಊಟ ಮಾಡಿ, ಮನೆಯಲ್ಲಿ ಮಲಗಿದ್ದಾನೆಂದು ಹೇಳುತ್ತಿದ್ದಂತೆ ವಿನೋದ, ರಾಕಿ ಇಬ್ಬರೂ ಮನೆಯೊಳಗೆ ಹೋಗಿ, ಕೋಣೆಯ ಬಾಗಿಲನ್ನು ಕಾಲಿನಿಂದ ಒದ್ದು, ಮಲಗಿದ್ದ ಪುನೀತನನ್ನು ಎಳೆದಾಡಿ, ಅವಾಚ್ಯವಾಗಿ ನಿಂದಿಸಿ, ನಿನ್ನನ್ನು ಜೀವ ಸಹಿತ ಉಳಿಸುವುದಿಲ್ಲವೆಂದು ಹೇಳಿ, ತೀವ್ರ ಹಲ್ಲೆ ಮಾಡಿದ್ದಾರೆ.

Illicit Relationship: ಮೇಸ್ತ್ರಿ ಜತೆ ಲವ್ವಿ-ಡವ್ವಿ, ಪತ್ನಿಯನ್ನು ಕೊಂದು ಪೊಲೀಸ್‌ ಠಾಣೆಗೆ ಹೋದ ಪತಿ

ಮಲಗಿದ್ದ ಪುನೀತನ ಮೇಲೆ ಹಲ್ಲೆ(Assault) ಮಾಡಿ, ಆತನನ್ನು ರಾಕಿ, ವಿನೋದ ಇಬ್ಬರೂ ಸೇರಿಕೊಂಡು, ಮೇಲಕ್ಕೆ ಎತ್ತಿ, ನೆಲಕ್ಕೆ ಕುಕ್ಕಿದ್ದರಿಂದ ಪುನೀತನ ತಲೆಯ ಹಿಂಭಾಗದಲ್ಲಿ ರಕ್ತಗಾಯವಾಯಿತು. ತಕ್ಷಣವೇ ಪುನೀತನನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದು, ವೈದ್ಯರ ಸಲಹೆಯಂತೆ ಎಸ್ಸೆಸ್‌ ಹೈಟೆಕ್‌ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು. ನಂತರ ಅಲ್ಲಿಂದ ಮತ್ತೆ ಜಿಲ್ಲಾಸ್ಪತ್ರೆಗೆ ಕರೆ ತಂದು ದಾಖಲಿಸಲಾಗಿತ್ತು. ಆದರೆ, ಜೋರಾಗಿ ನೆಲಕ್ಕೆ ಕುಕ್ಕಿದ್ದರಿಂದ ಪುನೀತನ ತೀವ್ರ ಗಾಯಗೊಂಡಿದ್ದವನು ಶುಕ್ರವಾರ ಬೆಳಿಗ್ಗೆ ಸಾವನ್ನಪ್ಪಿದ್ದಾನೆಂದು ಗಾಂಧಿ ನಗರ ಪೊಲೀಸ್‌ ಠಾಣೆಯಲ್ಲಿ ಮೃತನ ತಾಯಿ ಪುಟ್ಟಮ್ಮ ದೂರು ದಾಖಲಿಸಿದ್ದರು.

ಡಿವೈಎಸ್ಪಿ ನರಸಿಂಹ ತಾಮ್ರಧ್ವಜ ನೇತೃತ್ವದಲ್ಲಿ ಕೆಟಿಜೆ ನಗರ ಠಾಣೆ ಪಿಎಸ್‌ಎ ಪ್ರಭು ವಿ.ಕೆಳಗಿನಮನಿ, ಸಿಬ್ಬಂದಿ ಒಳಗೊಂಡ ತಂಡವನ್ನು ಆರೋಪಿಗಳ ಪತ್ತೆಗಾಗಿ ಎಸ್ಪಿ ಸಿ.ಬಿ.ರಿಷ್ಯಂತ್‌ ರಚಿಸಿದ್ದರು. ಪುಟ್ಟಮ್ಮನ ದೂರಿನಲ್ಲಿ ಹೆಸರಿಸಿದ್ದ ಆರೋಪಿಗಳಾದ ವಿನೋದ ಅಲಿಯಾಸ್‌ ವಿನೋದರಾಜ್‌, ರಾಕಿ ಅಲಿಯಾಸ್‌ ರಾಕೇಶ್‌ ಇಬ್ಬರನ್ನೂ ಶುಕ್ರವಾರ ಪೊಲೀಸರು ಬಂಧಿಸಿದರು. ಸಿಬ್ಬಂದಿಯಾದ ಪ್ರಕಾಶ, ಗಿರೀಶ ಗೌಡ, ಎ.ಪಿ.ನರೇಶ, ಆಸ್ಗರ್‌ ಲಿ, ನಿಜಲಿಂಗಪ್ಪ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಸಫಲರಾಗಿದ್ದಾರೆ. ಹಣಕಾಸಿನ ವಿಚಾರದ ಹಿನ್ನೆಲೆ ಈ ಕೊಲೆಯಾಗಿದೆ ಎಂದು ತಿಳಿದು ಬಂದಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು