ಹೊಸಪೇಟೆಯಲ್ಲೊಂದು ಹನಿಟ್ರ್ಯಾಪ್: ಉದ್ಯಮಿಗೆ ಬೆದರಿಸಿ 15 ಲಕ್ಷ ವಂಚನೆ| ಪ್ರಕರಣ ಬಯಲಿಗೆ| ಆರೋಪಿಗಳ ವಿರುದ್ಧ ನಗರದ ವಂಚನೆ ಪ್ರಕರಣ ಹಾಗೂ ಗಾಂಜಾ ಪ್ರಕರಣ ದಾಖಲು| ಆರೋಪಿಗಳನ್ನ ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು|
ಹೊಸಪೇಟೆ(ಮಾ.07): ರಾಜ್ಯದಲ್ಲಿ ಸಿಡಿಗಳು ಸದ್ದು ಮಾಡುತ್ತಿರುವ ಹೊತ್ತಿನಲ್ಲೇ ನಗರದಲ್ಲೊಂದು ಹನಿಟ್ರ್ಯಾಪ್ ಪ್ರಕರಣ ಬಯಲಿಗೆ ಬಂದಿದೆ.
ಆಂಧ್ರಪ್ರದೇಶ ಮೂಲದ ಹಾಗೂ ಇಲ್ಲಿನ ರಾಜೀವ್ ನಗರದ ನಿವಾಸಿ 60 ವರ್ಷದ ಉದ್ಯಮಿ ಸುಬ್ಬಾರೆಡ್ಡಿ ಖೆಡ್ಡಾಗೆ ಕೆಡವಿದ ಮಹಿಳೆ, ಆತನಿಂದ 15 ಲಕ್ಷದ 25 ಸಾವಿರ ಹಾಗೂ 4 ಚಿನ್ನದ ಬಳೆ ಪಡೆದಿದ್ದಾಳೆ. ಕೊಪ್ಪಳದ ಹಿರೇಬಗನಾಳ ಬಳಿ ಉದ್ಯಮಿ ಸ್ಪಾಂಜ್‌ಐರನ್ ಕಂಪನಿ ಹೊಂದಿದ್ದಾರೆ.
ನಗರದ ಎಂ.ಜೆ. ನಗರ ನಿವಾಸಿ ಗೀತಾ (38) ಹಾಗೂ ಆಕೆಯ ಪುತ್ರ ವಿಷ್ಣು (19) ಬಂಧಿತ ಆರೋಪಿಗಳು. ಆರೋಪಿಗಳ ಮನೆ ಪರಿಶೀಲನೆ ಮಾಡುತ್ತಿದ್ದಾಗ ಪೊಲೀಸರಿಗೆ 2 ಕೆಜಿ 750 ಗ್ರಾಂ. ಗಾಂಜಾ ಕೂಡ ದೊರೆತಿದೆ.
ವೇಶ್ಯಾವಾಟಿಕೆ ಸೋಗಲ್ಲಿ ಹನಿಟ್ರ್ಯಾಪ್: ಚಾಲಾಕಿ ದಂಪತಿ ಅರೆಸ್ಟ್
ಪ್ರಕರಣದ ವಿವರ:
ಹೊಸಪೇಟೆಯ ಎಂಜೆ ನಗರದಲ್ಲಿ ಉದ್ಯಮಿ ಕಚೇರಿ ಹೊಂದಿದ್ದು, 2019ರ ಮಾರ್ಚ್‌ನಲ್ಲಿ ಮೊಬೈಲ್ ರಿಪೇರಿ ನೆಪದಲ್ಲಿ ಆತನ ಪುತ್ರನ ಮೂಲಕ ಮಹಿಳೆಯು ಉದ್ಯಮಿಯ ಮೊಬೈಲ್ ನಂಬರ್ ತೆಗೆದುಕೊಂಡು ಪರಿಚಯ ಮಾಡಿಕೊಂಡಿದ್ದಾಳೆ. ಅದೇ ದಿನ ಕರೆ ಮಾಡಿ ಮನೆಗೆ ಕರೆದು ಚಹಾ ಕುಡಿಸಿದ್ದು, ಪ್ರಜ್ಞೆ ತಪ್ಪಿದೆ. ಆ ವೇಳೆ ಅಶ್ಲೀಲ ಫೋಟೋ, ವಿಡಿಯೋಗಳನ್ನು ಮಹಿಳೆ ಮಾಡಿಕೊಂಡಿದ್ದಾಳೆ. ಬಳಿಕ 30 ಲಕ್ಷ ಹಣ ಬೇಡಿಕೆ ಇಟ್ಟಿದ್ದಾಳೆ. ಬಳಿಕ ಉದ್ಯಮಿ ಮನೆ ಬಳಿಯೂ ತೆರಳಿ ಮಹಿಳೆ ಮತ್ತು ಆತನ ಪುತ್ರ ಗಲಾಟೆ ಮಾಡಿ ಉದ್ಯಮಿ ಪತ್ನಿಯಿಂದ 4 ಚಿನ್ನದ ಬಳೆ ಕಿತ್ತುಕೊಂಡಿದ್ದಾರೆ. ಆರೋಪಿಗಳ ವಿರುದ್ಧ ನಗರದ ಬಡಾವಣೆ ಪೊಲೀಸರು ವಂಚನೆ ಪ್ರಕರಣ ಹಾಗೂ ಗಾಂಜಾ ಪ್ರಕರಣ ದಾಖಲಿಸಿ ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.