ಮದ್ಯ ಸೇವನೆಗೆ ಹಣ ನೀಡಲು ಒಪ್ಪದ ಸ್ನೇಹಿತನ ಹತ್ಯೆಗೈದರು| ಇದನ್ನು ನೋಡಿದ್ದ ಮತ್ತೊಬ್ಬ ಗೆಳೆಯ|ಸಾಕ್ಷಿ ಹೇಳಬಹುದು ಎಂದು ಆತನ ಕೊಂದ ಸ್ನೇಹಿತರು| ಅವಳಿ ಕೊಲೆ ರಹಸ್ಯ ಬಯಲು, ಇಬ್ಬರ ಸೆರೆ|ಮತ್ತಿಬ್ಬರು ಆರೋಪಿಗಳಿಗಾಗಿ ಬಲೆ ಬೀಸಿದ ಪೊಲೀಸರು|
ಬೆಂಗಳೂರು(ಮೇ.29): ಮದ್ಯ ಸೇವನೆಗೆ ಹಣ ಕೊಡದ ಕಾರಣಕ್ಕೆ ಗೆಳೆಯನ ಹತ್ಯೆಗೈದು ಅನಂತರ ಆ ಕೃತ್ಯಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದ್ದ ಮತ್ತೊಬ್ಬ ಸ್ನೇಹಿತನನ್ನು ಕೊಂದು ಪರಾರಿಯಾಗಿದ್ದ ಚಿಂದಿ ಆಯುವ ತಂಡದ ಇಬ್ಬರು ಯಲಹಂಕ ಪೊಲೀಸರಿಗೆ ಸೆರೆಯಾಗಿದ್ದಾರೆ.
ಆಂಧ್ರಪ್ರದೇಶದ ಹಿಂದೂಪುರ ಮೂಲದ ಬಾಲಾಜಿ (44) ಹಾಗೂ ಚಿಂತಾಮಣಿ ಮೂಲದ ರಮೇಶ್ (33) ಕೊಲೆಗೀಡಾದ ದುರ್ದೈವಿಗಳು. ಈ ಅವಳಿ ಕೊಲೆ ಪ್ರಕರಣ ಸಂಬಂಧ ವೈಯಾಲಿಕಾವಲ್‌ನ ಶಂಕರ್ ಹಾಗೂ ಹೆಬ್ಬಾಳದ ಮಂಜುನಾಥ್ ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವ ಕುಂಟ ಹಾಗೂ ಸೋಮ ಎಂಬ ಆರೋಪಿಗಳಿಗೆ ತನಿಖೆ ನಡೆದಿದೆ.
ಮದುವೆಗೆ ನಿರಾಕರಣೆ: ಯುವತಿಯ ಮೇಲೆ ಪಾಗಲ್ ಪ್ರೇಮಿಯಿಂದ ಮಚ್ಚಿನಿಂದ ಹಲ್ಲೆ
ಕೆಲ ದಿನಗಳ ಹಿಂದೆ ಕೋಗಿಲು ಕ್ರಾಸ್ ಸಮೀಪ ಮದ್ಯ ಸೇವನೆ ವಿಚಾರದಲ್ಲಿ ಸ್ನೇಹಿತರ ಮಧ್ಯೆ ಗಲಾಟೆ ನಡೆದು ಕೊಲೆಯಲ್ಲಿ ಅಂತ್ಯವಾಗಿತ್ತು. ಈ ಘಟನಾ ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾಗಳ ಸೆರೆಯಾಗಿದ್ದ ದೃಶ್ಯಾವಳಿ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಚಿಂದಿ ಆಯುವ ಗ್ಯಾಂಗ್:
ಹಲವು ದಿನಗಳಿಂದ ಮೃತರಾದ ಬಾಲಾಜಿ, ರಮೇಶ್, ಆರೋಪಿಗಳಾದ ಶಂಕರ್, ಮಂಜುನಾಥ್, ಕುಂಟ ಮತ್ತು ಸೋಮ ಗೆಳೆಯರಾಗಿದ್ದು, ಈ ಸ್ನೇಹದಲ್ಲಿ ಯಲಹಂಕ ಸುತ್ತಮುತ್ತ ಒಟ್ಟಿಗೆ ಅವರು ಚಿಂದಿ ಆಯುತ್ತಿದ್ದರು. ಲಾಕ್‌ಡೌನ್ ವೇಳೆ ಚಿಂದಿ ವಸ್ತುಗಳ ಮಾರಾಟಕ್ಕೆ ಅಡ್ಡಿಯಾಗಿ ಈ ಗೆಳೆಯರು ಸಂಕಷ್ಟಕ್ಕೆ ತುತ್ತಾಗಿದ್ದರು. ಕೋಗಿಲು ಕ್ರಾಸ್ ಸಮೀಪ ಮೇಲ್ಸೇತುವೆ ಕೆಳಗೆ ತಾತ್ಕಾಲಿಕವಾಗಿ ಅವರು ನೆಲೆಸಿದ್ದರು.
ಮೇ 6ರಂದು ರಾತ್ರಿ ಮದ್ಯ ಸೇವನೆಗೆ ಹಣ ನೀಡುವಂತೆ ಬಾಲಾಜಿಯನ್ನು ಗೆಳೆಯರು ಕೇಳಿದ್ದರು. ಆಗ ಬಾಲಾಜಿ ತನ್ನ ಬಳಿ ಹಣವಿಲ್ಲವೆಂದಿದ್ದ. ಇದೇ ವಿಷಯಕ್ಕೆ ಸ್ನೇಹಿತರ ಮಧ್ಯೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಕೆರಳಿದ ಆರೋಪಿಗಳು, ಬಾಲಾಜಿ ಮೇಲೆ ಹಲ್ಲೆ ನಡೆಸಿ ಕೊಂದಿದ್ದಾರೆ. ಆನಂತರ ರಮೇಶ್ ಪೊಲೀಸರಿಗೆ ಹೇಳಿ ಬಿಡುತ್ತಾನೆ ಎಂದು ಬೆದರಿದ ಆರೋಪಿಗಳು, ಆತನನ್ನು ಕೊಂದು ಬಳಿಕ ಮೃತದೇಹವನ್ನು ನೀಲಗಿರಿ ತೋಪಿನಲ್ಲಿ ಸುಟ್ಟು ಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ವಿವಾಹಿತ ಮಹಿಳೆ ಜೊತೆ ಲವ್: ಬಾವಿಯಲ್ಲಿ 9 ಶವ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್!
ಮರು ದಿನ ಕೋಗಿಲು ಕ್ರಾಸ್ ಸಮೀಪದ ಮೇಲ್ಸೇತುವೆ ಕೆಳಗೆ ಅಪರಿಚಿತ ಮೃತದೇಹ ನೋಡಿದ ಸ್ಥಳೀಯರು, ಪೊಲೀಸರಿಗೆ ದೂರು ನೀಡಿದ್ದರು. ಘಟನಾ ಸ್ಥಳಕ್ಕಾಗಮಿಸಿ ಪೊಲೀಸರು, ಪರಿಶೀಲಿಸಿದಾಗ ರಕ್ತಸಿಕ್ತ ಚೂರಿ, ಬಟ್ಟೆಗಳು, ಚಪ್ಪಲಿ ಸೇರಿದಂತೆ ಕೆಲವು ಪುರಾವೆಗಳು ಪತ್ತೆಯಾಗಿವೆ. ಅಲ್ಲದೆ, ರಾತ್ರಿ ನಡೆದ ಗಲಾಟೆಯಲ್ಲಿ ಹತ್ಯೆಯಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಮೇ 8 ರಂದು ಯಲಹಂಕ ರೈಲ್ವೆ ಸಮೀಪದ ನೀಲಗಿರಿ ತೋಪಿನಲ್ಲಿ ಬೆಂಕಿಯಲ್ಲಿ ಸುಟ್ಟಿರುವ ಮತ್ತೊಂದು ಅಪರಿಚಿತ ಮೃತದೇಹ ಪತ್ತೆಯಾಗಿತ್ತು. ಈ ಎರಡು ಕೊಲೆಗಳ ನಡುವೆ ನಂಟಿರುವ ಬಗ್ಗೆ ಶಂಕಿಸಿದ ಪೊಲೀಸರು, ಆರೋಪಿಗಳು ಪತ್ತೆಗೆ ಕಾರ್ಯಾಚರಣೆ ಆರಂಭಿಸಿದರು.
ಚಪ್ಪಲಿ ನೀಡಿದ ಸುಳಿವು!
ಈ ಅವಳಿ ಕೊಲೆ ಕೃತ್ಯಗಳ ಹಂತಕರಿಗೆ ಶೋಧನೆಗಿಳಿದ ಪೊಲೀಸರು, ಕೋಗಿಲು ಕ್ರಾಸ್ ಸಮೀಪದ ಸುತ್ತಮುತ್ತಲಿನ ರಸ್ತೆಗಳ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದರು. ಆಗ ಘಟನಾ ಸ್ಥಳದಲ್ಲಿ ಸಿಕ್ಕಿದ್ದ ಚಪ್ಪಲಿಗಳಿಗೂ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ವ್ಯಕ್ತಿ ಧರಿಸಿದ್ದ ಚಪ್ಪಲಿಗಳಿಗೂ ಸಾಮ್ಯತೆ ಕಂಡು ಬಂದಿದೆ. ಕೂಡಲೇ ಚುರುಕಾದ ಪೊಲೀಸರು, ಆ ಸುಳಿವು ಆಧರಿಸಿ ತನಿಖೆ ಮುಂದುವರೆಸಿದಾಗ ಆರೋಪಿಗಳು ಬಲೆಗೆ ಬಿದ್ದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.