
ವರದಿ: ಕೆ.ಎಂ.ಹರೀಶ್, ಏಷ್ಯಾನೆಟ್ ಸುವರ್ಣ ನ್ಯೂಸ್, ಹಾಸನ
ಹಾಸನ (ಜೂ.03): ನಗರಸಭೆ ಸದಸ್ಯ ಪ್ರಶಾಂತ್ ನಾಗರಾಜ್ ಕೊಲೆ ಪ್ರಕರಣ ಹಾಸನ ಜಿಲ್ಲಾ ಪೊಲೀಸರಿಗೆ ಸಾಕಷ್ಟು ಟೆನ್ಷನ್ ತಂದೊಡ್ಡಿದೆ. ಜನಪ್ರತಿನಿಧಿ, ಜೆಡಿಎಸ್ ಘನಾಟುಘಟಿ ನಾಯಕರ ಆಪ್ತರಾಗಿದ್ದ ಪ್ರಶಾಂತ್‌ರನ್ನೆ ನಡುರಸ್ತೆಯಲ್ಲಿ ಕೊಚ್ಚಿ ಹಾಕಿದ್ದಾರೆ. ರೌಡಿಗಳ ಅಟ್ಟಹಾಸ ಹಾಸನದಲ್ಲಿ ಮತ್ತೆ ಚಿಗುರಿದೆ ಅಂತ ಜನರು ಚರ್ಚಿಸುತ್ತಿದ್ದಾರೆ. ಜೆಡಿಎಸ್ ನಗರಸಭಾ ಸದಸ್ಯರಾಗಿದ್ದ ಪ್ರಶಾಂತ್ ಕೊಲೆಗೆ ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ರೇಣುಕಾ ಪ್ರಸಾದ್ ರೌಡಿಗಳ ಜೊತೆ ಬಾಂಧವ್ಯ ಹೊಂದಿರುವುದೇ ಕಾರಣ. ರೌಡಿಗಳಿಗೆ ಭಯ ಇಲ್ಲ ಅಂತ ಹೆಚ್ ಡಿ ರೇವಣ್ಣ ಗಂಭೀರವಾಗಿ ಆರೋಪಿಸಿ ಸಸ್ಪೆಂಡ್ ಮಾಡುವಂತೆಯೂ ಮನವಿ ಮಾಡಿದ್ದರು.
ಈಗ ಜೆಡಿಎಸ್ ಗೆ ಟಾಂಗ್ ಕೊಡಲು ವಿರೋಧ ಪಕ್ಷದ ಕಾರ್ಯಕರ್ತರು ಮುಂದಾಗಿದ್ದು, ಪ್ರಶಾಂತ್ ಕೊಲೆ ಆರೋಪಿ ಎನ್ನಲಾಗುತ್ತಿರುವ ಪೂರ್ಣ ಚಂದ್ರ ಜೆಡಿಎಸ್ ಸದಸ್ಯ ಅಂತ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವೈರಲ್ ಮಾಡಿದ್ದಾರೆ. ಹೆಚ್ ಡಿ ರೇವಣ್ಣ ನವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿರುವ ಫ್ಲೆಕ್ಸ್ ನಲ್ಲಿ ಪೂರ್ಣಚಂದ್ರ ಫೋಟೊ ಇದ್ದು, ಆ ಫೋಟೋಗಳ ಈಗ ವೈರಲ್ ಮಾಡಿದ್ದಾರೆ. ನಗರಸಭೆ ಮಾಜಿ ಅಧ್ಯಕ್ಷ ,ಜೆಡಿಎಸ್ ಮುಖಂಡ ಅನಿಲ್ ಕುಮಾರ್ ಜೊತೆ ಪೂರ್ಣಚಂದ್ರ ಪೋಟೊ ತೆಗೆಸಿಕೊಂಡಿದ್ದು, ಆ ಪೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೀಗಾಗಿ ಪ್ರಕರಣದ ಪ್ರಮುಖ ಆರೋಪಿ ಪೂರ್ಣಚಂದ್ರ ಜೆಡಿಎಸ್ ಪಕ್ಷದ ಕಾರ್ಯಕರ್ತನಾ...?
ಹಾಸನ ನಗರಸಭೆ ಜೆಡಿಎಸ್ ಸದಸ್ಯನ ಬರ್ಬರ ಹತ್ಯೆ: ಬೆಚ್ಚಿಬಿದ್ದ ಜನತೆ
ಈ ಪ್ರಶ್ನೆ ಚರ್ಚೆಗೆ ಬರುವಂತೆ ಮಾಡಿದ್ದಾರೆ. ಸಂಸದ ಪ್ರಜ್ವಲ್, ರೇವಣ್ಣ ಅವರ ಫ್ಲೆಕ್ಸ್‌ಗಳಲ್ಲಿ ಪೂರ್ಣಚಂದ್ರ ಫೋಟೋ ಇದೆ. ಜೆಡಿಎಸ್ ನ ಹಲವು ಕಾರ್ಯಕ್ರಮ ಗಳ ಫ್ಲೆಕ್ಸ್ ನಲ್ಲಿ ಪೂರ್ಣಚಂದ್ರ ಫೋಟೋಗಳಿವೆ. ಜೆಡಿಎಸ್‌ನಿಂದಲೇ ನಗರಸಭೆ ಸದಸ್ಯನಾಗಿ ಕೊಲೆಯಾದ ಪ್ರಶಾಂತ್ ಆಯ್ಕೆ ಆಗಿದ್ದರು. ಒಂದೇ ಪಕ್ಷದ ಇಬ್ಬರು ಪ್ರಮುಖ ಕಾರ್ಯಕರ್ತರ ನಡುವೆ ನಡೆದಿತ್ತಾ ಗಲಾಟೆ ಎಂದು ವೈರಲ್ ಫೋಟೋ ನೋಡಿ ಜನರು ಚರ್ಚಿಸುತ್ತಿದ್ದಾರೆ. ಪ್ರಶಾಂತ್ ಕೊಲೆ ಕೇಸ್‌ನಲ್ಲಿ ಪೂರ್ಣಚಂದ್ರ ವಿರುದ್ದವೇ ಎಫ್‌ಐಆರ್ ಮೊದಲಿಗೆ ದಾಖಲಾಗಿತ್ತು. ನಂತರ ಮರು ಹೇಳಿಕೆಯಲ್ಲಿ ದುಷ್ಕರ್ಮಿಗಳು ಎಂದು ಬರೆಸಲಾಗಿದೆ.
ಶಿಷ್ಯನಿಂದಲೇ ಅಂತ್ಯಕಂಡ ಗುರು, ಹಾಸನ ನಗರಸಭೆ ಸದಸ್ಯ ಕೊಲೆಯ ಕಥೆ
ಮೊದಲ ದೂರಿನಲ್ಲಿ ಆಟೋದಲ್ಲಿ ಬಂದ ದುಷ್ಕರ್ಮಿಗಳು ಎಂದು ಪ್ರಶಾಂತ್ ಪತ್ನಿ ದೂರು ನೀಡಿದ್ದರೂ, ಆ ದೂರನ್ನು ಡಿವೈಎಸ್ಪಿ ತಿರುಚಿ ಪೂರ್ಣಚಂದ್ರ ಹೆಸರು ಸೇರಿಸಿ ಎಫ್ಐಆರ್ ಮಾಡಿಸಿದ್ದರೆಂದು ಸಹ ರೇವಣ್ಣ ಆರೋಪಿಸಿ ಮತ್ತೆ ಮರು ಹೇಳಿಕೆ ಕೊಡಿಸಿದ್ದರು. ಈ ಪ್ರಕರಣ ಗಂಭೀರವಾಗಿ ಪೊಲೀಸ್ ಇಲಾಖೆ ತೆಗೆದುಕೊಂಡಿದೆ. ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಪವಾರ್ ಹಾಸನ ಎಸ್ಪಿ ಕಚೇರಿಗೆ ಬಂದು ಪ್ರಕರಣ ಸಂಬಂಧ ತನಿಖೆಯ ಬಗ್ಗೆ ಪರಿಶೀಲನೆ ನಡೆಸಿದರು. ಇದುವರೆಗೂ ಯಾವೊಬ್ಬ ಆರೋಪಿಯ ಬಂಧನವಾಗಿಲ್ಲ, ಆರೋಪಿಗಳ ಸುಳಿವು ಸಿಕ್ಕಿದೆ. ಶೀಘ್ರ ಬಂಧಿಸುತ್ತೇವೆ. ಸಿಪಿಐ ರೇಣುಕಾ ಪ್ರಸಾದ್ ಮೇಲೆ ರೌಡಿಗಳಿಗೆ ಸಹಕಾರ ನೀಡಿದ ಆರೋಪ ಇರುವುದರಿಂದ ರಜೆ ಮೇಲೆ ಎಸ್ಪಿ ಕಳಿಸಿದ್ದಾರೆಂದು ಐಜಿಪಿ ಪ್ರವೀಣ್ ಮಧುಕರ್ ಪವಾರ್ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ