ಬೆಳಗ್ಗೆ ಸ್ನೇಹಿತರೊಂದಿಗೆ ಆಟವಾಡುವಾಗ ಹಾವು ಕಚ್ಚಿದರೂ ಅದನ್ನು ಮನೆಯಲ್ಲಿ ಹೇಳದೇ ಸುಮ್ಮನಿದ್ದ ಬಾಲಕ, ಮಧ್ಯಾಹ್ನದ ನಂತರ ಬಾಯಲ್ಲಿ ನೊರೆ ಬಂದು ಸಾವನ್ನಪ್ಪಿದ್ದಾನೆ.
ತುಮಕೂರು (ಏ.09): ಬೆಳಗ್ಗೆ ತನ್ನ ಸ್ನೇಹಿತರೊಂದಿಗೆ ಆಟವಾಡಲು ಹೋದಾಗ ಬಾಲಕನಿಗೆ ನಾಗರ ಹಾವು ಕಚ್ಚಿದೆ. ಆದರೆ, ಹಾವು ಕಚ್ಚಿದರೂ ವಿಷಯವನ್ನು ಮುಚ್ಚಿಟ್ಟು ಮನೆಗೆ ಬಂದು ಸುಸ್ತಾಗಿ ಮಲಗಿದ ಬಾಲಕ ಸಂಜೆ ವೇಳೆಗೆ ಬಾಯಲ್ಲಿ ನೊರೆ ಬಂದು ಸಾವನ್ನಪ್ಪಿದ ದುರ್ಘಟನೆ ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಪಡಸಲಾಹಟ್ಟಿ ಗ್ರಾಮದಲ್ಲಿ ನಡೆದಿದೆ.
ಪಡಸಲಾಹಟ್ಟಿ ಗ್ರಾಮದ ಯಶವಂತ್ (12) ಮೃತ ಬಾಲಕನಾಗಿದ್ದಾನೆ. ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಮಕ್ಕಳನ್ನು ನೋಡಿಕೊಳ್ಳುವುದು ಪೋಷಕರಿಗೆ ಸವಾಲಾಗಿದೆ. ಹೀಗಾಗಿ ಮಕ್ಕಳು ಆಟವಾಡಲು ಹೋದರೆ ಸಾಕು ಎಂದುಕೊಳ್ಳುವ ಪೋಷಕರ ಸಂಖ್ಯೆಯೇ ಅಧಿಕವಾಗಿರುತ್ತದೆ. ಇನ್ನು ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಪಡಸಲಾಹಟ್ಟಿ ಗ್ರಾಮದಲ್ಲಿಯೂ ಕೂಡ ತಂದೆ ತಾಯಿ ಕೆಲಸಕ್ಕೆ ಹೋಗುವಾಗ ಮಗ ತನ್ನ ಸ್ನೇಹಿತರೊಂದಿಗೆ ಆಟವಾಡಲು ಹೋದಾಗ ಹಾವು ಕಚ್ಚಿದೆ.
ಗೋ ಸಾಗಣೆ ವ್ಯಕ್ತಿ ಸಾವು: ಪುನೀತ್ ಕೆರೆಹಳ್ಳಿ ಅಂಡ್ ಟೀಮ್‌ಗೆ 7 ದಿನ ಪೊಲೀಸ್ ಕಸ್ಟಡಿ
ಬಾಯಲ್ಲಿ ನೊರೆ ಬಂದ ನಂತರ ಆಸ್ಪತ್ರೆಗೆ ದಾಖಲು: ಇನ್ನು ಬೆಳಗ್ಗೆ ಆಟವಾಡಲು ಹೋದಾಗ ಹಾವು ಕಚ್ಚಿದರೂ ಕೂಡ ಅದನ್ನು ಮನೆಯಲ್ಲಿ ಹೇಳಿಕೊಂಡಿಲ್ಲ. ಇನ್ನು ಆಟವಾಡುವಾಗ ಹಾವು ಕಚ್ಚಿದೆ ಎಂದು ಹೇಳಿದರೆ ಪೋಷಕರು ಹೊಡೆಯುತ್ತಾರೆ ಎನ್ನುವ ಭಯದಿಂದ ವಿಷಯವನ್ನು ಮುಚ್ಚಿಟ್ಟಿದ್ದಾನೆ. ನಂತರ ಮಧ್ಯಾಹ್ನದ ವೇಳೆಗೆ ಮನೆಗೆ ಬಂದು ಸುಸ್ತಾಗಿದೆ ಎಂದು ಮಲಗಿದ್ದಾನೆ. ಇನ್ನು ಮನೆಯಲ್ಲಿ ಮಲಗಿದ್ದ ವೇಳೆ ಬಾಲಕನ ಬಾಯಲ್ಲಿ ನೊರೆ ಬರಲು ಆರಂಭವಾಗಿದೆ. ಇದರಿಂದ ಗಾಬರಿಗೊಂಡ ಪೋಷಕರು ಕೂಡಲೇ ಬಾಲಕನನ್ನು ಕರೆದುಕೊಂಡು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಚಿಕಿತ್ಸೆ ಫಲಿಸದೇ ಸಾವು: ಇನ್ನು ಹಾವು ಕಚ್ಚಿ ತುಂಬಾ ಸಮಯವಾಗಿದ್ದರಿಂದ ಹಾವಿನ ವಿಷ ಬಾಲಕನ ದೇಹದ ತುಂಬೆಲ್ಲಾ ಆವರಸಿಕೊಂಡಿದೆ. ನಂತರ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದು, ವೈದ್ಯರು ಚಿಕಿತ್ಸೆಯನ್ನು ಆರಂಭಿಸಿದ್ದಾರೆ. ಆದರೆ, ವಿಷ ಹೆಚ್ಚಿನ ಪ್ರಮಾಣದಲ್ಲಿ ದೇಹ ಆವರಿಸಿಕೊಂಡಿದ್ದು, ಚಿಕಿತ್ಸೆಗೆ ಸ್ಪಂದಿಸದೇ ಬಾಲಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಆದರೆ, ಬಾಲಕ ಹಾವು ಕಚ್ಚಿರುವ ವಿಚಾರವನ್ನು ಮನೆಯವರ ಬಳಿ ಹೇಳಿಕೊಂಡು ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರೆ ಬದುಕಿಸಬಹುದಿತ್ತು ಎಂದು ವೈದ್ಯರು ತಿಳಿಸಿದರು. ಇನ್ನು ಈ ಘಟನೆಯಿಂದ ಬಾಲಕನ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಮಿಡಿಗೇಶಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹಾವಿನಿಂದ ಕಚ್ಚಿಸಿಕೊಂಡರೂ ಪರೀಕ್ಷೆ ಬರೆದ ಪಿಯು ವಿದ್ಯಾರ್ಥಿನಿ : ಸ್ಥಿತಿ ಗಂಭೀರ
ಹಾವು ಕಚ್ಚಿದರೂ ಪರೀಕ್ಷೆ ಬರೆದ ವಿದ್ಯಾರ್ಥಿನಿಗೆ ಪ್ರಾಣ ಕಂಟಕ: ಭುವನೇಶ್ವರ್: ಹಾವಿನಿಂದ ಕಚ್ಚಿಸಿಕೊಂಡ ಬಳಿಕವೂ ವಿದ್ಯಾರ್ಥಿಯೋರ್ವಳು ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದು, ನಂತರ ಅಸ್ವಸ್ಥಳಾದ ಘಟನೆ ಒಡಿಶಾದ ಕಿಯೋಂಜರ್‌ನಲ್ಲಿ ನಡೆದಿದೆ. ದ್ವಿತೀಯ ಪಿಯುಸಿ ಪರೀಕ್ಷೆಗೆ ಹೊರಟಿದ್ದ ವಿದ್ಯಾರ್ಥಿನಿಗೆ ಹಾವು ಕಚ್ಚಿದೆ. ಆದರೂ ವಿದ್ಯಾರ್ಥಿನಿ ಆಸ್ಪತ್ರೆಗೆ ಹೋಗದೇ ಪರೀಕ್ಷೆ ಬರೆಯಲು ತೆರಳಿದ್ದು, ಪರೀಕ್ಷೆ ಬರೆಯುತ್ತಿದ್ದಾಗಲೇ ಸ್ವಲ್ಪ ಹೊತ್ತಿನಲ್ಲಿ ಆಕೆ ಅಸ್ವಸ್ಥಳಾಗಿದ್ದಾಳೆ. ನಂತರ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಲಿಪ್ಸಾ ರಾಣಿ ಸಾಹೂ (Lipsa Rani Sahoo) ಎಂಬಾಕೆಯೇ ಹೀಗೆ ಹಾವು ಕಚ್ಚಿದರೂ ಆಸ್ಪತ್ರೆಗೆ ಹೋಗದೇ ಪರೀಕ್ಷೆ ಬರೆಯಲು ಹೋದ ವಿದ್ಯಾರ್ಥಿನಿ.