ವೇಗವಾಗಿ ಕಾರು ಚಲಾಯಿಸಿ ಒಬ್ಬರ ಸಾವಿಗೆ ಕಾರಣನಾದ ತುಳುವಿನ ಪ್ರಖ್ಯಾತ ಸ್ಟ್ಯಾಂಡ್ ಅಪ್ ಕಾಮಿಡಿ ಯೂಟ್ಯೂಬರ್ನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು
ಮಂಗಳೂರು (ಫೆ.04): ವೇಗವಾಗಿ ಕಾರು ಚಲಾಯಿಸಿ ಒಬ್ಬರ ಸಾವಿಗೆ ಕಾರಣನಾದ ತುಳುವಿನ ಪ್ರಖ್ಯಾತ ಸ್ಟ್ಯಾಂಡ್ ಅಪ್ ಕಾಮಿಡಿ ಯೂಟ್ಯೂಬರ್ನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಹೊರವಲಯದ ಪಡುಪಣಂಬೂರು ಪೆಟ್ರೋಲ್ ಬಂಕ್ ಬಳಿ ಕಳೆದ ಮಂಗಳವಾರ ರಾತ್ರಿ ಕಾರು ಢಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಓರ್ವ ಗಂಭೀರ ಗಾಯಗೊಂಡಿದ್ದ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪರಾರಿಯಾಗಿದ್ದ ಆರೋಪಿ ಕಾರು ಚಾಲಕನನ್ನು ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಕಾರು ಸಮೇತ ಬಂಧಿಸಿದ್ದಾರೆ.
ಬಂಧಿತ ಆರೋಪಿ ಕಾರು ಚಾಲಕನನ್ನು ಹಳೆಯಂಗಡಿ ಇಂದ್ರನಗರ ನಿವಾಸಿ ಅರ್ಪಿತ್ ಎಂದು ಗುರುತಿಸಲಾಗಿದ್ದು, ಈತ ತುಳು ಸ್ಟ್ಯಾಂಡ್ ಆಫ್ ಕಾಮಿಡಿ ಯೂಟ್ಯೂಬರ್ ಎಂದು ತಿಳಿದು ಬಂದಿದೆ. ಮಧ್ಯಪ್ರದೇಶದ ಇಂದೋರ್‌ನಿಂದ ಕೇರಳ ಕಡೆಗೆ ಹೋಗುತ್ತಿದ್ದ ಲಾರಿ ಪಡುಪಣಂಬೂರು ಬಳಿ ಟಯರ್ ಪಂಚರ್ ಆಗಿದ್ದು, ಲಾರಿಯಲ್ಲಿದ್ದ ಮಧ್ಯಪ್ರದೇಶ ನಿವಾಸಿಗಳಾದ ಬಬುಲು (23), ಆಚಲ್ ಸಿಂಗ್ (30) ಹಾಗೂ ಕೇರಳ ನಿವಾಸಿ ಅನೀಶ್ (42) ಎಂಬವರು ಕೆಳಗಿಳಿದು ಹೆದ್ದಾರಿ ಬದಿಯಲ್ಲಿ ಟಯರ್ ತೆಗೆದು ದುರಸ್ತಿ ಮಾಡುತ್ತಿದ್ದರು.
ಫೇಸ್‌ಬುಕ್‌ನಲ್ಲಿ ನೌಕರಿ ಆಸೆ ತೋರಿಸಿ ನಿರುದ್ಯೋಗಿಗಳಿಗೆ ಟೋಪಿ: ನಾಲ್ವರ ಬಂಧನ
ಈ ವೇಳೆ ಹೆದ್ದಾರಿಯಲ್ಲಿ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಅತೀ ವೇಗದಿಂದ ಚಲಿಸಿದ ಕಾರು ಲಾರಿಯ ಟಯರ್ ದುರಸ್ತಿ ಮಾಡುತ್ತಿದ್ದ ಮೂವರಿಗೆ ಢಿಕ್ಕಿ ಹೊಡೆದು ಪರಾರಿಯಾಗಿತ್ತು. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ತನಿಖೆ ನಡೆಸಿ ಆರೋಪಿ ಅರ್ಪಿತ್ ವಶಕ್ಕೆ ಪಡೆದಿದ್ದಾರೆ.