• ಅಕ್ರಮದ ಮಾಹಿತಿ ನೀಡಿದ್ದಕ್ಕೆ ಸವದತ್ತಿ ಪೊಲೀಸ್ ಠಾಣೆಯಲ್ಲಿ ಕೂಡಿಹಾಕಿ ಕರೆಂಟ್ ಶಾಕ್ ಆರೋಪ.
• ಕಂದಾಯ, ಪೊಲೀಸ್, ಗಣಿ & ಭೂವಿಜ್ಞಾನ ಇಲಾಖೆ ಅಧಿಕಾರಿಗಳ ವಿರುದ್ಧ ವಿದ್ಯಾರ್ಥಿ ಗಂಭೀರ ಆರೋಪ.
• ಪರಿಶೀಲಿಸಿ ಕ್ರಮ ಕೈಗೊಳ್ತೀವಿ ಅಂದ್ರು ಬೆಳಗಾವಿ ಡಿಸಿ ನಿತೇಶ್ ಪಾಟೀಲ್.
ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ
ಬೆಳಗಾವಿ (ಜು.17): ರಾಜ್ಯದ ಅತಿದೊಡ್ಡ ಜಿಲ್ಲೆಗಳಲ್ಲಿ ಬೆಳಗಾವಿಯೂ ಒಂದು. ನೈಸರ್ಗಿಕವಾಗಿ ಸಂಪದ್ಭರಿತವಾಗಿರುವ ಇಲ್ಲಿ ಸಪ್ತನದಿಗಳು ಹರಿಯುತ್ತಿವೆ. ಆದ್ರೆ ಈ ನದಿಗಳು ದಂಧೆಕೋರರಿಗೆ ವರವಾಗಿ ಪರಿಣಮಿಸಿವೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇದಕ್ಕೆ ಕಾರಣ ಮಲಪ್ರಭಾ ನದಿಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮರಳು ದಂಧೆ. ಸವದತ್ತಿ ತಾಲೂಕಿನ ತೆಗ್ಗಿಹಳ್ಳಿ ಗ್ರಾಮದಲ್ಲಿ ಅಕ್ರಮ ಮರಳು ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಬಿಎ ಎರಡನೇ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ಸಿದ್ದಪ್ಪ ಹಿರೂರ್ ಎಂಬ ವಿದ್ಯಾರ್ಥಿ ಕಂದಾಯ, ಪೊಲೀಸ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿದ್ದಾನೆ. ಸವದತ್ತಿಯ ಹಿಂದಿನ ತಹಶಿಲ್ದಾರ್, ಹಾಲಿ ಸಿಪಿಐ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಕಳೆದ ಕೆಲ ತಿಂಗಳಿಂದ ಮಾಹಿತಿ ನೀಡಿದ್ದನಂತೆ. ಆದ್ರೆ ಮಾಹಿತಿ ನೀಡುವಾಗ ನನ್ನ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆಂದು ಈ ಹಿಂದಿನ ಸವದತ್ತಿ ತಹಶಿಲ್ದಾರ್ ಆಗಿದ್ದ ಪ್ರಶಾಂತ ಪಾಟೀಲ್ ಅಕ್ರಮ ಮರಳು ದಂಧೆ ಬಗ್ಗೆ ಆರೋಪಿಸಿದ್ದ ವಿದ್ಯಾರ್ಥಿ ಸಿದ್ದಪ್ಪ ವಿರುದ್ಧವೇ ದೂರು ನೀಡಿದ್ದಾರಂತೆ.
ಬೆಳಗಾವಿ; ಕೊಯ್ನಾ ಸೇರಿ ಇತರೆ ಡ್ಯಾಂಗಳ ಮೇಲೆ ನಿಗಾ ಇಡಿ, ಅಣ್ಣಾಸಾಹೇಬ ಜೊಲ್ಲೆ
ಅಷ್ಟೇ ಅಲ್ಲದೇ ಜೂನ್ 6ರಂದು ವಿದ್ಯಾರ್ಥಿ ಸಿದ್ದಪ್ಪ ಹಿರೂರನನ್ನು ಬಂಧಿಸಿ ಸವದತ್ತಿ ಠಾಣೆಯ ಸಿಪಿಐ ಮಂಜುನಾಥ ನಡುವಿನಮನಿ ಹಾಗೂ ಕೆಲ ಸಿಬ್ಬಂದಿ ವಿದ್ಯಾರ್ಥಿಗೆ ಶಾಕ್ ಕೊಟ್ಟು ಚಿತ್ರಹಿಂಸೆ ನೀಡಿದ್ದಾರೆ ಎಂದು ಸಿದ್ದಪ್ಪ ಆರೋಪಿಸಿದ್ದಾನೆ. ಪ್ರಶಾಂತ ಪಾಟೀಲ್ ಸದ್ಯ ಸವದತ್ತಿ ತಹಶಿಲ್ದಾರ್ ಸ್ಥಾನದಿಂದ ವರ್ಗಾವಣೆಗೊಂಡಿದ್ದಾರೆ. ಆದ್ರೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕುವಂತೆ ವಿದ್ಯಾರ್ಥಿ ಸಿದ್ದಪ್ಪ ಶಿರೂರ್ ಮನವಿ ಮಾಡಿದ್ದಾನೆ.
ಜೂನ್ 6ರಂದು ಸವದತ್ತಿ ಪೊಲೀಸ್ ಠಾಣೆಯಲ್ಲಿ ನಡೆದಿದ್ದೇನು?: ವಿದ್ಯಾರ್ಥಿ ಸಿದ್ದಪ್ಪ ಹೇಳುವ ಪ್ರಕಾರ ಜೂನ್ 6 ರಂದು ತನ್ನನ್ನು ಸವದತ್ತಿ ಪೊಲೀಸ್ ಠಾಣೆಗೆ ಕರೆದೊಯ್ದು ಚಿತ್ರಹಿಂಸೆ ನೀಡಿದ್ದಾರೆ. ಈ ದಿನಾಂಕದ ಸಿಸಿ ಕ್ಯಾಮರಾ ಪರಿಶೀಲಿಸಿದ್ರೆ ಎಲ್ಲಾ ಗೊತ್ತಾಗುತ್ತೆ ಅಂತಾ ಹೇಳಿದ್ದಾನೆ. ಪೋಲಿಸ್ ಠಾಣೆಯಲ್ಲಿ ಕೂಡಿ ಹಾಕಿ ಕರೆಂಟ್ ಶಾಕ್ ನೀಡಿ ಚಿತ್ರಹಿಂಸೆ ನೀಡಿದ್ದಾರೆ ಎಂದು ಸವದತ್ತಿ ಠಾಣೆ ಸಿಪಿಐ ಮಂಜುನಾಥ ನಡುವಿನಮನಿ ಹಾಗೂ ಕೆಲ ಸಿಬ್ಬಂದಿ ವಿರುದ್ಧ ಸಿದ್ದಪ್ಪ ಆರೋಪ ಮಾಡಿದ್ದಾನೆ. ಬಳಿಕ ಮೂರು ದಿನ ಸಿದ್ದಪ್ಪನನ್ನು ಬೈಲಹೊಂಗಲ ಸಬ್ ಜೈಲಿನಲ್ಲಿ ಇರಿಸಲಾಗಿತ್ತಂತೆ.
ಬಳಿಕ ನಾನು ಜಾಮೀನು ಪಡೆದು ಹೊರಬಂದಿದ್ದಾಗಿ ತಿಳಿಸಿದ್ದಾನೆ. ಇನ್ನು ಈ ಸಂಬಂಧ ಕೆಲ ದಿನಗಳ ಹಿಂದೆಯಷ್ಟೇ ಕೆಆರ್‌ಎಸ್ ಪಕ್ಷದ ಸ್ಥಳೀಯ ಮುಖಂಡರು ಕಾರ್ಯಕರ್ತರ ಜೊತೆಗೂಡಿ ಬೆಳಗಾವಿ ಡಿಸಿ ಕಚೇರಿ ಬಳಿ ಪ್ರತಿಭಟನೆ ನಡೆಸಿ ಡಿಸಿ ನಿತೇಶ ಪಾಟೀಲ್‌ರಿಗೆ ಮನವಿ ಸಹ ಸಲ್ಲಿಸಿದ್ದ. ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಬೆಳಗಾವಿ ಡಿಸಿ ನಿತೇಶ ಪಾಟೀಲ್, ಸದ್ಯ ಸವದತ್ತಿ ತಹಶಿಲ್ದಾರ್ ವರ್ಗಾವಣೆಗೊಂಡಿದ್ದಾರೆ. ತನಿಖೆ ನಡೆಸಿ, ಸೂಕ್ತ ಕ್ರಮ ಜರುಗಿಸುತ್ತೇವೆ. ಜಿಲ್ಲೆಯಲ್ಲಿ ಎಲ್ಲಿಯೂ ಅಕ್ರಮ ಮರಳು ದಂಧೆಗೆ ಅವಕಾಶ ನೀಡಲ್ಲ ಎಂದಿದ್ದಾರೆ.
ಸೋರುತ್ತಿರುವ ಶಾಲೆ : ಆತಂಕದಲ್ಲೇ ಮಕ್ಕಳಿಗೆ ಪಾಠ ಹೇಳುತ್ತಿರುವ ಶಿಕ್ಷಕರು
ಅಧಿಕಾರಿಗಳಿಗೆ ಸಚಿವ ಹಾಲಪ್ಪ ಆಚಾರ್ ವಾರ್ನಿಂಗ್: ಇನ್ನು ಅಕ್ರಮ ಮರಳು ದಂಧೆ ತಡೆಯುವಂತೆ ಗಣಿ ಮತ್ತು ಭೂವಿಜ್ಞಾನ ಸಚಿವ ಹಾಲಪ್ಪ ಆಚಾರ ಕೂಡ ಶನಿವಾರ ಬೆಳಗಾವಿಯ ಸುವರ್ಣಸೌಧದಲ್ಲಿ ಸಭೆ ಮಾಡಿ ಜಿಲ್ಲೆಯ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಶನಿವಾರ ಬೆಳಗಾವಿ ಸುವರ್ಣಸೌಧದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಸಚಿವ ಆಚಾರ್ ಅಕ್ರಮ ದಂಧೆಗೆ ಕಡಿವಾಣ ಹಾಕುವಂತೆ ಸೂಚಿಸಿದ್ದಾರೆ. ಅದೇನೆ ಆಗಲಿ ವಿದ್ಯಾರ್ಥಿ ಸಿದ್ದಪ್ಪ ಮಾಡುತ್ತಿರುವ ಆರೋಪದ ಬಗ್ಗೆ ಸೂಕ್ತ ತನಿಖೆ ಆಗಿ ಒಂದು ವೇಳೆ ಅಧಿಕಾರಿಗಳು ತಪ್ಪೆಸಗಿದ್ದಲ್ಲಿ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿ. ಅಕ್ರಮ ಮರಳು ದಂಧೆ ತಡೆಯುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲಿ ಎಂಬುದು ಸಾರ್ವಜನಿಕರ ಆಗ್ರಹ.