Chikkamagaluru News: ಪತ್ನಿಯ ಕಾಟಕ್ಕೆ ಬೇಸತ್ತು ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಪ್ಪ ತಾಲೂಕಿನ ಜಯಪುರದಲ್ಲಿ ನಡೆದಿದೆ.
ವರದಿ: ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು.
ಚಿಕ್ಕಮಗಳೂರು (ಸೆ. 06): ಪತ್ನಿಯ ಕಾಟಕ್ಕೆ ಬೇಸತ್ತು ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆ ಕೊಪ್ಪ (Koppa) ತಾಲೂಕಿನ ಜಯಪುರದಲ್ಲಿ ನಡೆದಿದೆ. ತೋಟದ ಬಾವಿಗೆ ಹಾರಿ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 42 ವರ್ಷದ ಅರವಿಂದ್ ಆತ್ಮಹತ್ಯೆ ಶರಣಾಗಿರುವ ಪತಿ. ಅರವಿಂದ್ ಡೆತ್ ನೋಟಿನಲ್ಲಿ ಪತ್ನಿ ಹಾಗೂ ಪೊಲೀಸ್ ಠಾಣಾಧಿಕಾರಿ ಹೆಸರು ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. 12 ವರ್ಷದ ಹಿಂದೆ ರೇಖಾ ಎಂಬುವರೊಂದಿಗೆ ಅರವಿಂದ್ ಮದುವೆಯಾಗಿದ್ದರು. ಹೆಂಡತಿ ಕಿರುಕುಳದಿಂದಲೇ ಆತ್ನಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್‌ನೋಟ್ ಬರೆದು ಅರವಿಂದ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಜಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೃತ ಅರವಿಂದ ಹಾಗೂ ರೇಖಾ ಅವರಿಗೆ 12 ವರ್ಷಗಳ ಹಿಂದೆ ವಿವಾಹವಾಗಿದ್ದು ಈ ಜೋಡಿಗೆ ಓರ್ವ ಪುತ್ರ ಹಾಗೂ ಪುತ್ರಿಯಿದ್ದಾರೆ. ದಂಪತಿಗಳ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದ್ದು, ಕಳೆದ 2ನೇ ತಾರೀಕು ಅರವಿಂದ್ ಪತ್ನಿ ರೇಖಾ ಜಯಪುರ ಪೊಲೀಸ್ ಠಾಣೆಗೆ ಪತಿ ಅರವಿಂದ ಹಾಗೂ ಅತ್ತೆ, ಮಾವನ ವಿರುದ್ದ ದೂರು ನೀಡಿದ್ದರು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್ ನೋಟ್ ನಲ್ಲಿ ಮೃತ ಅರವಿಂದ ಬರೆದಿದ್ದಾರೆ.
ಡೆತ್ ನೋಟ್ ನಲ್ಲಿ ಜಯಪುರ ಠಾಣಾಧಿಕಾರಿ ಹೆಸರು?: ಜಯಪುರ ಪೊಲೀಸ್ ಠಾಣೆಯ ಠಾಣಾಧಿಕಾರಿ ಜ್ಯೋತಿ ಸರಿಯಾದ ತನಿಖೆ ನಡೆಸದೆ, ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಜಯಪುರದಲ್ಲಿ ಮನೆಮಾಡುವಂತೆ ನನಗೆ ಸೂಚಿಸಿದ್ದು, ಇದರಿಂದಾಗಿ ವಯಸ್ಸಾದ ತಂದೆ ತಾಯಿಯನ್ನು ನೋಡಿಕೊಳ್ಳಲು ಸಾದ್ಯವಾಗದು ಎಂಬ ಅಳಲನ್ನು ಡೆತ್ ನೋಟ್ ನಲ್ಲಿ ಬರೆದಿದ್ದು, ಸಾಕಿ ಸಲಹಿದ ತಂದೆ ತಾಯಿಯನ್ನು ನೋಡಿಕೊಳ್ಳಲು ಸಾದ್ಯವಾಗದ ನಾನು ಬದುಕಿ ಪ್ರತೀ ದಿನ ಸಾಯುವ ಬದಲು ಒಮ್ಮೆಗೆ ಸಾಯುತ್ತೇನೆ ಎಂದು ಡೆತ್ ನೋಟ್ ನಲ್ಲಿ ಮೃತ ಅರವಿಂದ್ ಉಲ್ಲೇಖಿಸಿದ್ದಾರೆ.
ಒಲ್ಲದ ಮದುವೆ; ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ನವವಿವಾಹಿತೆ!
ನನ್ನ ಸಾವಿಗೆ ಪತ್ನಿ ರೇಖಾ, ಮಾವ ದತ್ತಾತ್ರೇಯ, ರೇಖಾಳ ಅಕ್ಕ ರಶ್ಮಿ ಮತ್ತು ರಶ್ಮಿಯ ಗಂಡ ಅರುಣ ಮತ್ತು ವೆಂಕಟೇಶ, ಬರಗೋಡು ರಮಣ ಹಾಗೂ ರಾಜು ಕಾರಣರಾಗಿದ್ದು ಇವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಡೆತ್ ನೋಟ್ ನಲ್ಲಿ ಕೋರಿದ್ದು, ಗೋಳಿಹಕ್ಲು ವಾಟ್ಸಪ್ ಗ್ರೂಪ್ ಗೆ ಡೆತ್ ನೋಟ್ ಫೋಟೋವನ್ನು ಕಳೆದ ರಾತ್ರಿ 11 ಗಂಟೆ ಸುಮಾರಿಗೆ ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಸಂಬಂಧಿ ಅರುಣ್ ಅಪ್ಪುಕೋಡಿಗೆ ತಿಳಿಸಿದ್ದಾರೆ.
ಈ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ಮೃತರ ತಂದೆ ಸದಾನಂದ ರಾವ್ ದೂರು ದಾಖಲಿಸಿದ್ದು, ಸ್ಥಳಕ್ಕೆ ಡಿವೈಎಸ್ಪಿ ಗುಂಜನ್ ಆರ್ಯ, ಸಿಪಿಐ ಮಂಜುನಾಥ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಪ್ರಕರಣದ ತನಿಖೆ ಹಾಗೂ ಅಗತ್ಯ ಮಾಹಿತಿಗಳನ್ನು ಕಲೆಹಾಕುವ ನಿಟ್ಟಿನಲ್ಲಿ ಕಾರ್ಯವನ್ನು ಮುಂದುವರೆಸಿದ್ದಾರೆ.ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಉಮಾಪ್ರಶಾಂತ್ ತನಿಖೆ ನಡೆಯುತ್ತಿದ್ದು ಠಾಣಾಧಿಕಾರಿ ಹೆಸರು ಉಲ್ಲೇಖದ ಬಗ್ಗೆ ಇಲಾಖೆಯಿಂದ ಆಂತರಿಕ ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.