ರೈಲಿನಲ್ಲಿ ಗಾಂಜಾ ತಂದು ಮಾರುತ್ತಿದ್ದ ಮೂವರು ಅರೆಸ್ಟ್‌

By Kannadaprabha NewsFirst Published Sep 2, 2020, 8:12 AM IST
Highlights

ಪಶ್ಚಿಮ ಬಂಗಾಳ, ಒಡಿಶಾದಿಂದ ಡ್ರಗ್ಸ್‌ ತರಿಸುತ್ತಿದ್ದ ಆರೋಪಿಗಳು|ಏರ್‌ಲೈನ್ಸ್‌ ಡಾಬಾ ಬಳಿ ಪೊಲೀಸರ ಬಲೆಗೆ ಬಿದ್ದ ಪೆಡ್ಲರ್‌ಗಳು| ಖಚಿತ ಮಾಹಿತಿ ಮೇರೆಗೆ ದಾಳಿ| 

ಬೆಂಗಳೂರು(ಸೆ.02): ಮಾದಕ ವಸ್ತು ಜಾಲದ ವಿರುದ್ಧ ರಾಜಧಾನಿಯ ಖಾಕಿ ಪಡೆ ಕಾರ್ಯಾಚರಣೆ ಮುಂದುವರೆದಿದ್ದು, ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಐವರು ವೃತ್ತಿಪರ ಪೆಡ್ಲರ್‌ಗಳನ್ನು ಬೇಗೂರು ಹಾಗೂ ದೇವನಹಳ್ಳಿ ಪೊಲೀಸರು ಸೆರೆ ಹಿಡಿದಿದ್ದಾರೆ. ಪಶ್ಚಿಮ ಬಂಗಾಳದಿಂದ ರೈಲಿನಲ್ಲಿ ಗಾಂಜಾ ತಂದು ಮಾರುತ್ತಿದ್ದ ಮೂವರನ್ನು ಸೆರೆ ಹಿಡಿದಿರುವ ಬೇಗೂರು ಠಾಣೆ ಪೊಲೀಸರು, ಆರೋಪಿಗಳಿಂದ 4.40 ಲಕ್ಷ ಮೌಲ್ಯದ 11 ಕೆ.ಜಿ.ಗಾಂಜಾ ಜಪ್ತಿ ಮಾಡಿದ್ದಾರೆ.

ಬೇಗೂರು 11ನೇ ಕ್ರಾಸ್‌ ನಿವಾಸಿಗಳಾದ ಮೊಹಮ್ಮದ್‌ ಆಲಂಗೀರ್‌, ಮೊಹಮ್ಮದ್‌ ರಿಪುನ್‌ ಹಾಗೂ ಮೋಹರ್‌ ಬಂಧಿತರಾಗಿದ್ದು, ಆ.27 ರಂದು ವಿಶ್ವಪ್ರಿಯ ಲೇಔಟ್‌ನಲ್ಲಿ ದೇವಾಲಯದ ಬಳಿ ಗಾಂಜಾ ಮಾರಾಟಕ್ಕೆ ಯತ್ನಿಸಿದ್ದಾಗ ಸಿಕ್ಕಿಬಿದ್ದಿದ್ದಾರೆ. ಹಲವು ದಿನಗಳಿಂದ ಉದ್ಯೋಗ ನೆಪದಲ್ಲಿ ನಗರಕ್ಕೆ ಬಂದಿದ್ದ ಆರೋಪಿಗಳು, ಪಶ್ಚಿಮ ಬಂಗಾಳ ಹಾಗೂ ಒಡಿಶಾ ರಾಜ್ಯಗಳಿಂದ ರೈಲಿನಲ್ಲಿ ಗಾಂಜಾ ತರುತ್ತಿದ್ದರು. ಬಳಿಕ ಕಾಲೇಜು ವಿದ್ಯಾರ್ಥಿಗಳು ಹಾಗೂ ಐಟಿ-ಬಿಟಿ ಉದ್ಯೋಗಿಗಳು ಸೇರಿದಂತೆ ಸಾರ್ವಜನಿಕರಿಗೆ ಗಾಂಜಾ ಪೂರೈಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

'ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್‌ ಕಾಮನ್, ಆಫರ್‌ಗಳಿಗಾಗಿ ಡ್ರಗ್ಸ್‌ ಪಾರ್ಟಿಗೆ ಹೋಗ್ತಾರೆ'

3 ಕೆ.ಜಿ. ಗಾಂಜಾ ವಶ:

ದೇವನಹಳ್ಳಿ-ಸೂಲಿಬೆಲೆ ರಸ್ತೆಯ ಏರ್‌ಲೈನ್ಸ್‌ ಡಾಬಾ ಬಳಿ ಮತ್ತಿಬ್ಬರು ಪೆಡ್ಲರ್‌ಗಳು ದೇವನಹಳ್ಳಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಹೊಸಕೋಟೆಯ ಮುನಿರಾಜು ಹಾಗೂ ದೇವನಹಳ್ಳಿಯ ನಾಗೇಶ್‌ ಬಂಧಿತರಾಗಿದ್ದು, ಆರೋಪಿಗಳಿಂದ 1.75 ಲಕ್ಷ ಮೌಲ್ಯದ 3 ಕೆ.ಜಿ.ಗಾಂಜಾ ವಶಪಡಿಸಿಕೊಳ್ಳಲಾಗಿದೆ. ದೇವನಹಳ್ಳಿ-ಸೂಲಿಬೆಲೆ ರಸ್ತೆಯ ಏರ್‌ಲೈನ್ಸ್‌ ಡಾಬಾ ಬಳಿ ಸೋಮವಾರ ಗಾಂಜಾವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
 

click me!