ಫುಡ್‌ ಡೆಲಿವರಿ ನೆಪದಲ್ಲಿ ಡ್ರಗ್ಸ್‌ ಡೆಲಿವರಿ: 24 ಲಕ್ಷ ಮೌಲ್ಯದ ಮಾದಕ ವಸ್ತು ವಶ

By Kannadaprabha NewsFirst Published Nov 15, 2020, 8:23 AM IST
Highlights

ಮೈಕೋ ಲೇಔಟ್‌ ಠಾಣೆ ಪೊಲೀಸರ ಕಾರ್ಯಾಚರಣೆ| ಮೂವರು ಫುಡ್‌ ಡೆಲಿವರಿ ಬಾಯ್‌ಗಳ ಸೆರೆ| ಲಾಕ್‌ಡೌನ್‌ ಅವಧಿಯಲ್ಲಿ ಆಹಾರ ಪೂರೈಕೆಗೆ ಪೊಲೀಸರು ನಿರ್ಬಂಧ ವಿಧಿಸಿರಲಿಲ್ಲ. ಇದನ್ನೇ ಬಳಸಿಕೊಂಡ ಡ್ರಗ್ಸ್‌ ದಂಧೆಕೋರರು| 

ಬೆಂಗಳೂರು(ನ.15): ಆಹಾರ ನೆಪದಲ್ಲಿ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ಡೆಲಿವರಿ ಬಾಯ್‌ ಸೇರಿದಂತೆ ಮೂವರು ಮೈಕೋ ಲೇಔಟ್‌ ಠಾಣೆ ಪೊಲೀಸರು ಬಲೆಗೆ ಬಿದ್ದಿದ್ದಾರೆ.

ಚಿಕ್ಕ ಬೇಗೂರು ಎರಡನೇ ಹಂತದ ಎಇಸಿಎಸ್‌ ಲೇಔಟ್‌ನ ಆಯೂಷ್‌ ಪಾಂಡೆ, ರೋಹಿತ್‌ ರಾಮ್‌ ಹಾಗೂ ಅಸ್ಸಾಂ ಮೂಲದ ನೂರ್‌ ಅಲಿ ಬಂಧಿತರಾಗಿದ್ದು, ಆರೋಪಿಗಳಿಂದ 23.8 ಲಕ್ಷ ಮೌಲ್ಯದ 8 ಕೆ.ಜಿ. ಗಾಂಜಾ, 4.33 ಕೆ.ಜಿ. ಚರಸ್‌, 120 ಗ್ರಾಂ ಹಶಿಶ್‌, 8 ಗ್ರಾಂ ಬ್ರೌನ್‌ ಶುಗರ್‌, 9 ಗ್ರಾಂ ಎಂಡಿಎಂಎ, 100 ಎಲ್‌ಎಸ್‌ಡಿ ಸ್ಟ್ರಿಫ್ಸ್‌ ಹಾಗೂ 2 ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಡ್ರಗ್ಸ್‌ ಪೂರೈಕೆಯಲ್ಲಿ ‘ಡುಂಜೊ’ ಡೆಲಿವರಿ ಬಾಯ್‌ ನೂರ್‌ ಆಲಿ ನಿರತನಾಗಿರುವ ಬಗ್ಗೆ ಇನ್ಸ್‌ಪೆಕ್ಟರ್‌ ಘೋರ್ಪಡೆ ಯಲ್ಲಪ್ಪ ಅವರಿಗೆ ಬಾತ್ಮೀದಾರರ ಮೂಲಕ ಸುಳಿವು ಸಿಕ್ಕಿತು. ಬಿಟಿಎಂ ಲೇಔಟ್‌ನ ಸಮೀಪ ಗುರುವಾರ ಸಂಜೆ 6 ಗಂಟೆಯಲ್ಲಿ ಆತನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಿಸಿದಾಗ ಮಾದಕ ಜಾಲ ಬಯಲಾಗಿದೆ.

ಮೆಡಿಕಲ್‌ ಕಿಟ್‌ನಲ್ಲಿ ಡ್ರಗ್ಸ್‌ ಸಾಗಾಣಿಕೆ:

ಕೆಲ ತಿಂಗಳ ಹಿಂದೆ ಉದ್ಯೋಗ ಅರಸಿ ನಗರಕ್ಕೆ ಜಾರ್ಖಂಡ್‌ ಮೂಲದ ಆಯೂಷ್‌ ಪಾಂಡೆ ಮತ್ತು ರೋಹಿತ್‌ ರಾಮ್‌ ಬಂದಿದ್ದರು. ಕೆಲಸಕ್ಕೆ ಹುಡುಕಾಟ ನಡೆಸುವಾಗ ಅವರಿಗೆ ಮಾದಕ ವಸ್ತು ಜಾಲದ ಸದಸ್ಯರ ಪರಿಚಯವಾಗಿದೆ. ಮೊದಲು ವ್ಯಸನಿಗಳಾದ ಈ ಇಬ್ಬರು ಗೆಳೆಯರು, ತರುವಾಯ ದಂಧೆಕೋರರ ಬಲೆಗೆ ಬಿದ್ದು ಪೆಡ್ಲರ್‌ಗಳಾಗಿದ್ದಾರೆ. ಹಣದ ಆಮಿಷವೊಡ್ಡಿ ಡೆಲಿವರಿ ಬಾಯ್‌ನನ್ನು ಡ್ರಗ್ಸ್‌ ಪೂರೈಕೆಗೆ ಆಯೂಷ್‌ ಪಾಂಡೆ ಹಾಗೂ ರೋಹಿತ್‌ ರಾಮ್‌ ಬಳಸಿಕೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು; ಮನೆಯಲ್ಲೇ ಸಿಕ್ಕಿದ್ದು ಮೂಟೆಗಟ್ಟಲೇ ಗಾಂಜಾ! ಯಾವ್ ಏರಿಯಾ?

ರಾಜಸ್ಥಾನ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ ಸೇರಿದಂತೆ ಹೊರ ರಾಜ್ಯದ ಡ್ರಗ್ಸ್‌ ಜಾಲದ ಸಂಪರ್ಕದಲ್ಲಿದ್ದ ದಂಧೆಕೋರರು ಕಂಪ್ಯೂಟರ್‌, ಸ್ಪೀಕರ್‌ ಬಾಕ್ಸ್‌, ಮೆಡಿಕಲ್‌ ಕಿಟ್‌ ಹಾಗೂ ಬೊಂಬೆಗಳಲ್ಲಿ ಡ್ರಗ್ಸ್‌ ಅನ್ನು ಸಾಗಿಸುತ್ತಿದ್ದರು. ಕೊರಿಯರ್‌ ಮೂಲಕ ಪೆಡ್ಲರ್‌ಗಳಿಗೆ ಡ್ರಗ್ಸ್‌ ತಲುಪುತ್ತಿತ್ತು. ಐಟಿ-ಬಿಟಿ ಉದ್ಯೋಗಿಗಳು ಹಾಗೂ ಕಾಲೇಜು ವಿದ್ಯಾರ್ಥಿಗಳೇ ಆರೋಪಿಗಳು ಗ್ರಾಹಕರಾಗಿದ್ದರು. ವಾಟ್ಸಾಪ್‌ ಹಾಗೂ ಪೋನ್‌ ಮೂಲಕ ಗ್ರಾಹಕರೊಂದಿಗೆ ಅವರು ವ್ಯವಹರಿಸುತ್ತಿದ್ದರು. ಗ್ರಾಹಕರು ವ್ಯಾಟ್ಸಾಪ್‌ನಲ್ಲಿ ಲೋಕೇಷನ್‌ ಕಳುಹಿಸಿದರೆ ಅವರ ಮನೆ ಬಾಗಿಲಿಗೆ ಡೆಲಿವರಿ ಬಾಯ್‌ ನೂರ್‌ ಅಲಿ ಮೂಲಕ ಆರೋಪಿಗಳು ಡ್ರಗ್ಸ್‌ ಕಳುಹಿಸುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಲಾಕ್‌ಡೌನ್‌ನಲ್ಲಿ ದಂಧೆ:

ಲಾಕ್‌ಡೌನ್‌ ಅವಧಿಯಲ್ಲಿ ಆಹಾರ ಪೂರೈಕೆಗೆ ಪೊಲೀಸರು ನಿರ್ಬಂಧ ವಿಧಿಸಿರಲಿಲ್ಲ. ಇದನ್ನೇ ಬಳಸಿಕೊಂಡ ಡ್ರಗ್ಸ್‌ ದಂಧೆಕೋರರು, ಮಾದಕ ವಸ್ತು ಪೂರೈಕೆಗೆ ಡೆಲಿವರಿ ಬಾಯ್‌ಗಳನ್ನು ಬಳಸಿಕೊಂಡಿದ್ದರು. ಅದೇ ರೀತಿ ಅಸ್ಸಾಂ ಮೂಲದ ನೂರ್‌ ಅಲಿಗೆ ಪೆಡ್ಲರ್‌ಗಳ ನಂಟು ಬೆಳೆದಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ನ್ಯೂ ಪಾರ್ಟಿಗೆಂದು ಡ್ರಗ್ಸ್‌ ಸಂಗ್ರಹ

ಇನ್ನೇನು ಹೊಸ ವರ್ಷ ಆಗಮಿಸುತ್ತಿದ್ದು, ಈ ವೇಳೆ ಆಯೋಜನೆಗೊಳ್ಳುವ ಪಾರ್ಟಿಗಳಿಗೆ ಪೂರೈಕೆ ಮಾಡಲೆಂದು ಆರೋಪಿಗಳು ಇಷ್ಟೊಂದು ಪ್ರಮಾಣದ ಡ್ರಗ್ಸ್‌ ಸಂಗ್ರಹಿಸಿ ಇಟ್ಟಿದ್ದರು ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.
 

click me!