ಹೆಬ್ಬಾಲೆಯಲ್ಲಿ ಮಕ್ಕಳ ದಿನದಂದೆ ನಡೆದ ದಾರುಣ ಘಟನೆ| ಮೃತದೇಹಗಳು ಪತ್ತೆ| ಕೌಟುಂಬಿಕ ಕಲಹ ಶಂಕೆ| ಈ ಸಂಬಂಧ ಪತಿ ದೇವರಾಜ್ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಕೊಣನೂರು ಪೊಲೀಸರು|
ಕುಶಾಲನಗರ(ನ.15): ಮನೆಯಲ್ಲಿ ಉಂಟಾದ ಕಲಹ ಅತಿರೇಕಕ್ಕೆ ಹೋಗಿ ಮಹಿಳೆಯೊಬ್ಬಳು ತನ್ನ ಮೂವರು ಮಕ್ಕಳನ್ನು ಹಾರಂಗಿ ನಾಲೆಗೆ ತಳ್ಳಿ, ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಶಾಲನಗರ ಸಮೀಪದ ಹೆಬ್ಬಾಲೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ. ಮೂವರು ಮಕ್ಕಳ ಮೃತದೇಹ ಬೆಳಗ್ಗೆ ಹಾಗೂ ಮಹಿಳೆ ಮೃತದೇಹ ಸಂಜೆ ವೇಳೆಗೆ ಪತ್ತೆಯಾಗಿದೆ. ಮೂಲತಃ ಚಿತ್ರದುರ್ಗ ಜಿಲ್ಲೆ ನಿವಾಸಿ ಚೆನ್ನಮ್ಮ (28) ಹಾಗೂ ಮಕ್ಕಳಾದ ವಿಜಯ್ (6), ವಿನಯ್ (3.5) ಹಾಗೂ ದೀಕ್ಷಾ (2.5) ಮೃತ ದುರ್ದೈವಿಗಳು.
ಕೊಡಗು-ಹಾಸನ ಜಿಲ್ಲೆಗಳ ಗಡಿಭಾಗ ಅರಕಲಗೂಡು ತಾಲೂಕಿನ ಬನ್ನೂರು ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ಅರಗಲ್ಲು ವ್ಯಾಪ್ತಿಯ ಹಾರಂಗಿ ಎಡದಂಡೆ ನಾಲೆಯಲ್ಲಿ ಮೂವರು ಪುಟ್ಟಮಕ್ಕಳ ಶವ ನೀರಿನಲ್ಲಿ ತೇಲಿ ಹೋಗುತ್ತಿದ್ದುದನ್ನು ಕಂಡ ಸ್ಥಳೀಯರು, ಕುಶಾಲನಗರ ಪೊಲೀಸರಿಗೆ ಮಾಹಿತಿ ನೀಡಿ ಮೃತದೇಹವನ್ನು ಹೊರತೆಗೆದಿದ್ದಾರೆ. ಮಹಿಳೆಯ ಮೃತದೇಹ ಸಂಜೆ ವೇಳೆಗೆ ಪತ್ತೆಯಾಗಿದ್ದು, ಆಕೆಯ ಸಂಬಂಧಿಕರು ಗುರುತಿಸಿ ಹೊರತೆಗೆದಿದ್ದಾರೆ.
ಮೂವರು ಮಕ್ಕಳಿಗೆ ನೇಣು ಬಿಗಿದು ತಂದೆಯೂ ಆತ್ಮಹತ್ಯೆ
ಮಾಹಿತಿ ದೊರೆತ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಶಿವಶಂಕರ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮೃತದೇಹಗಳನ್ನು ಪರಿಶೀಲಿಸಿ ಮಾಹಿತಿ ಕಲೆ ಹಾಕಿದ್ದು, ಕೊಣನೂರು ಠಾಣೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿ ಮೊಕದ್ದಮೆ ದಾಖಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮಹಿಳೆಯ ಪತಿ ದೇವರಾಜ್ ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಪ್ರಾಥಮಿಕ ತನಿಖೆಯಲ್ಲಿ ಪತಿಯೊಂದಿಗೆ ಜಗಳವಾಡಿದ ಹಿನ್ನೆಲೆಯಲ್ಲಿ ಪತ್ನಿ ತನ್ನ ಪುಟ್ಟಮಕ್ಕಳೊಂದಿಗೆ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.
ಈ ಕುಟುಂಬ ಚಿತ್ರದುರ್ಗದಿಂದ ಹೆಬ್ಬಾಲೆ ಗ್ರಾ.ಪಂ. ವ್ಯಾಪ್ತಿಗೆ ವಲಸೆ ಬಂದು ವಾಸ್ತವ್ಯ ಹೂಡಿದ್ದು, ಅಕ್ಕಪಕ್ಕದ ಜಮೀನುಗಳಲ್ಲಿ ಶುಂಠಿ ಕೃಷಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಚೆನ್ನಮ್ಮ ಸಹೋದರ ಎಲ್ಲಪ್ಪ ಎಂಬಾತ ನೀಡಿದ ದೂರಿನ ಮೇರೆಗೆ ದೇವರಾಜ್ ವಿರುದ್ಧ ಕೊಣನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.